Kourava News

ಇಂಧನ ಬೆಲೆ ಏರಿಕೆ ವಿರುದ್ಧ ಬೀದಿಗಿಳಿದ  ಕಾಂಗ್ರೆಸ್,  ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ

ಬೆಲೆ ನಿಯಂತ್ರಿಸದಿದ್ದರೆ ಉಗ್ರ ಹೋರಾಟ: ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ ಎಚ್ಚರಿಕೆ

ಇಂಧನ ಬೆಲೆ ಏರಿಕೆ ವಿರುದ್ಧ ಬೀದಿಗಿಳಿದ  ಕಾಂಗ್ರೆಸ್,  ಕೇಂದ್ರ-ರಾಜ್ಯ ಸರ್ಕಾರಗಳ
ವಿರುದ್ಧ  ಆಕ್ರೋಶ
ಬೆಲೆ ನಿಯಂತ್ರಿಸದಿದ್ದರೆ ಉಗ್ರ ಹೋರಾಟ: ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ ಎಚ್ಚರಿಕೆ
ಹಾವೇರಿ: ನಿರಂತರವಾಗಿ  ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ದಿನಬಳಕೆಯ
ವಸ್ತುಗಳ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ
ಸರ್ಕಾರಗಳು ಕರಾಳ ಕೃಷಿ ಕಾಯಿದೆಗಳನ್ನು ಜಾರಿಗೆ ತರುವ ಮೂಲಕ ಅನ್ನದಾತರನ್ನು ಬೀದಿಗೆ
ತಳ್ಳಿದ್ದು, ಕೊರೋನಾದಿಂದ ಸಂಕಷ್ಟದಲ್ಲಿರುವ ಜನತಗೆ ಜೀವನ ನಿರ್ವಹಣೆ ಕಷ್ಟವಾಗಿದೆ.
ತಕ್ಷಣ ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸಬೇಕು, ಕರಾಳ ಕೃಷಿ ಕಾಯಿದೆಗಳನ್ನು
ವಾಪಾಸ ಪಡೆಯಲು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯವತಿಯಿಂದ ನೂರಾರು ಕಾಂಗ್ರೆಸ್
ಕಾರ್ಯಕರ್ತರು ಹಾಗೂ ಮುಖಂಡರು ನಗರದಲ್ಲಿ  ಶುಕ್ರವಾರ  ಪ್ರತಿಭಟನೆ ನಡೆಸಿ
ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಪುರಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ  ನೂರಾರು ಕೈ ಕಾರ್ಯಕರ್ತರು   ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು
ಕೂಗುತ್ತಾ ಮಹಾತ್ಮಗಾಂಧಿ ರಸ್ತೆಯ ಮೂಲಕ ಜೆಪಿ ವೃತ್ತ ಬಳಸಿ  ಹೊಸಮನಿ ಸಿದ್ದಪ್ಪ
ವೃತ್ತಕ್ಕೆ ಆಗಮಿಸಿ ಅರ್ಧಗಂಟೆಗೂ ಹೆಚ್ಚುಕಾಲ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ
ನಡೆಸಿ ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ
ನಡೆಸಿದರು.
ಈಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ
ಬಸವರಾಜ ಶಿವಣ್ಣನವರ ಮಾತನಾಡಿ, ಕೊರೊನಾದಿಂದ ಸಂಕಷ್ಟದಲ್ಲಿರುವ ಜನರು  ಬೆಲೆ ಏರಿಕೆ ಬಿಸಿಯಿಂದ ಬೆಂದುಹೋಗುತ್ತಿದ್ದಾರೆ. ದಿನಬಳಕೆಯ ಅಗತ್ಯವಸ್ತುಗಳ ಬೆಲೆ ಏರಿಕೆ
ದಿನದಿನದಿಂದ ಹೆಚ್ಚುತ್ತಿದೆ.  ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ
ದಿನಬಳಕೆಯ ವಸ್ತುಗಳ ಬೆಲೆ  ಗಗನಕ್ಕೇರುತ್ತಿದ್ದರು ಸಹ ಬಿಜೆಪಿ ಸರ್ಕಾರ ಜನರನ್ನು ಕಡೆಗಣಿಸಿ ಅಂಬಾನಿ, ಅದಾನಿ ಅಂತ ಶ್ರೀಮಂತರಪರವಾಗಿ ಕಾಯಿದೆಗಳನ್ನು ರೂಪಿಸುವ ಮೂಲಕ ಜನರನ್ನು ಬೀದಿಗೆ ತಳ್ಳಿದೆ. ಕರಾಳ ಕೃಷಿ ಕಾಯಿದೆಗಳನ್ನು ಜಾರಿಗೆ ತರುವ ಮೂಲಕ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದೆ, ತಕ್ಷಣ ಏರುತ್ತಿರುವ ಬೆಳೆಗಳನ್ನು
ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.
ದೆಹಲಿಯಲ್ಲಿ ರೈತರು ಕರಾಳ ಕೃಷಿ ಕಾಯಿದೆ ವಿರೋಧಿಸಿ ಕಳೆದ ೯೦ದಿನಗಳಿಂದ ಪ್ರತಿಭಟನೆ
ನಡೆಸುತ್ತಿದ್ದಾರೆ. ರೈತರ ಪಾಲಿಗೆ ಮುಳ್ಳಾಗಿರುವ ಕೇಂದ್ರ ಸರ್ಕಾರ ರೈತರದಾರಿಗೆ
ಅಡ್ಡವಾಗಿ ಮೊಳೆಗಳನ್ನು ಬಡಿಯುವ ಮೂಲಕ ತನ್ನ ರೈತವಿರೋಧಿ ಧೋರಣೆಯನ್ನು
ಪ್ರದರ್ಶಿಸಿದೆ. ಕೇಂದ್ರ ಸರ್ಕಾರ ತಕ್ಷಣ ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸಬೇಕು,
ಕರಾಳ ಕೃಷಿ ಕಾಯಿದೆಯನ್ನು ವಾಪಾಸ ಪಡೆಯಬೇಕು, ಇಲ್ಲದೇ ಹೋದರೆ ಕಾಂಗ್ರೆಸ್ ಪಕ್ಷದಿಂದ
ಉಗ್ರಹೋರಾಟ ನಡೆಸಬೇಕಾಗುತ್ತದೆ ಎಂದು ಶಿವಣ್ಣನವರ ಎಚ್ಚರಿಕೆ ನೀಡಿದರು.
ಮಾಜಿ ಸಚಿವ ಕಾಂಗ್ರೆಸ್ ಮುಖಂಡ ರುದ್ರಪ್ಪ ಲಮಾಣಿ ಮಾತನಾಡಿ, ಇಂಧನ ಬೆಲೆ ಏರಿಕೆ
ಜನಸಾಮಾನ್ಯರ ಜೀವನದ ಮೇಲೆ ದುಷ್ಪರಿಣಾಮ ಬೀರಿದೆ. ದಿನನಿತ್ಯ ವಸ್ತುಗಳ ಬೆಲೆ
ಗಗನಕ್ಕೇರುತ್ತಿದ್ದು,  ಬೆಲೆಗಳ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ
ವಿಫಲವಾಗಿದೆ. ಕೋವಿಡ್ ಲಾಕ್‌ಡೌನ್‌ನಿಂದ ಜನಸಾಮಾನ್ಯರ ಬದುಕು ತೀವ್ರ ಸಂಕಷ್ಟಕ್ಕೆ
ಸಿಲುಕಿದೆ. ಇಂಥ ಸಂದರ್ಭದಲ್ಲಿ ಇಂಧನ ದರಗಳನ್ನು ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ
ಜನವಿರೋಧಿ ನೀತಿ ಅನುಸರಿಸಿದೆ.
ಕೃಷಿ ಕಾರ್ಮಿಕರು, ಬಡವರು ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದೆ
ಪರಿತಪಿಸುತ್ತಿದ್ದಾರೆ. ರೈತರು ಕೃಷಿ ಚಟುವಟಿಕೆಗಳಿಗೆ ಹೆಚ್ಚಾಗಿ ಟ್ರ್ಯಾಕ್ಟರ್ ಬಳಕೆ
ಮಾಡುತ್ತಾರೆ. ಇಂಧನ ದರ ಏರಿಕೆಯಾಗಿರುವುದರಿಂದ ಕೃಷಿ ಪ್ರಗತಿಗೆ ದೊಡ್ಡ ಹೊಡೆತ ಬಿದ್ದಿದೆ, ಇಂಧನ ಬೆಲೆ ಏರಿಕೆಯಾಗುತ್ತಿರುವುದರಿಂದ ಸಹಜವಾಗಿ ವಾಹನಗಳ ಸಾಗಾಟದ
ಬೆಲೆಯು ಸಹ ಹೆಚ್ಚಾಗಿ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದೆ. ಈಹಿಂದೆ ಯುಪಿಎ
ಸರ್ಕಾರವಿದ್ದ ಸಂದರ್ಭದಲ್ಲಿ ಬೆಲೆಏರಿಕೆಯನ್ನು ಬಂಡವಾಳಮಾಡಿಕೊಂಡ ಬಿಜೆಪಿ
ಅಧಿಕಾರಕ್ಕೆ ಬಂದಿದ್ದು, ಇದೀಗ ಅಂಬಾನಿ-ಅದಾನಿ ಅಂತ ಉಳ್ಳವರಿಗೆ ಅನುಕೂಲ ಮಾಡಿಕೊಡುವ
ಉದ್ದೇಶದಿಂದ ಕರಾಳ ಕೃಷಿ ಕಾಯಿದೆಯನ್ನು ಜಾರಿಗೆ ತಂದಿದೆ.  ರೈತರು ಬೆಳೆದ
ಗೋವಿನಜೋಳಕ್ಕೆ ಎಮ್‌ಎಸ್‌ಪಿ ಘೋಷಿಶಿದಹಾಗೆ ದರ ನೀಡಿ ಗೋವಿನಜೋಳವನ್ನು ಖರೀದಿಸಬೇಕು,
ಜನವಿರೋಧಿ ಕಾಯಿದೆಗಳನ್ನು ವಾಪಾಸಪಡೆಯಬೇಕೆಂದು ಮಾಜಿ ಸಚಿವ ರುದ್ರಪ್ಪ ಲಮಾಣಿ
ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ.ಹಿರೇಮಠ ಮಾತನಾಡಿ, ಕೇಂದ್ರ ಸರ್ಕಾರ ಬೆಲೆ
ನಿಯಂತ್ರಿಸಬೇಕು,ದಿನಸಿ ವಸ್ತುಗಳ ಬೆಲೆಯನ್ನು ಇಳಿಕೆ ಮಾಡಬೇಕು. ಬಡವರು ನೆಮ್ಮದಿಯಾಗಿ
ಜೀವನ ಮಾಡುವುದಕ್ಕೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ದೆಹಲಿಯಲ್ಲಿ
ನಡೆದಿರುವ ರೈತ ಹೋರಾಟದಲ್ಲಿ ಇಲ್ಲಿಯವರೆಗೆ ೧೫೫ ರೈತರು ಸಾವನ್ನಪ್ಪಿದ್ದಾರೆ. ಇದನ್ನು
ಲೆಕ್ಕಿಸದೇ ರೈತರ ಮೇಲೆ ಸುಳ್ಳಮೊಖದ್ದಮೆಗಳನ್ನು ದಾಖಲಿಸುತ್ತಿದೆ. ಪೆಟ್ರೋಲ್,
ಡೀಸೆಲ್, ಅಡುಗೆ ಅನಿಲ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ  ನಿಯಂತ್ರಿಸುವಲ್ಲಿ
ವಿಫಲವಾಗಿರುವ ಕೇಂದ್ರ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪೊಳ್ಳು
ಭರವಸೆಗಳನ್ನು ನೀಡುತ್ತಿದೆ.  ಇಂಧನ ಹಾಗೂ ದಿನಸಿವಸ್ತುಗಳ ಬೆಲೆ ಏರಿಕೆಯನ್ನು
ಕಡಿಮೆಮಾಡದಿದ್ದರೇ ಕಾಂಗ್ರೆಸ್ ಪಕ್ಷದಿಂದ ರಾಜ್ಯಾದ್ಯಂತ ಉಗ್ರಹೋರಾಟ
ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಈಬಗ್ಗೆ ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷ  ಸಂಜೀವಕುಮಾರ ನೀರಲಗಿ,  ಪ್ರಮುಖರಾದ ಡಾ.ಸಂಜಯ
ಡಾಂಗೆ, ಈರಪ್ಪ ಲಮಾಣಿ,ಜಗದೀಶ ಬೆಟಗೇರಿ, ಪರಶುರಾಮ ಅಡಕಿ, ಎಂ.ಎಂ.ಮೈದೂರ,
ಪಿ.ಎಸ್.ಬಿಷ್ಟನಗೌಡ್ರ, ಶ್ರೀಧರ ದೊಡ್ಡಮನಿ,ಬಸವರಾಜ ಬಳ್ಳಾರಿ, ಶಾಮತಾಬಾಯಿ
ಶಿರೂರ,ದಾಸಪ್ಪ ಕರ್ಜಗಿ  ಸಿ.ಎಸ್.ಲಕ್ಷ್ಮೇಶ್ವರಮಠ, ಶ್ರೀಧರ ಆನವಟ್ಟಿ, ರವಿ
ದೊಡ್ಡಮನಿ, ಗಣೇಶ ಬಿಷ್ಟಣ್ಣನವರ, ಉಮೀದ ನದಾಫ, ರಾಜು ಮಧುರಕರ, ಯುವಕಾಂಗ್ರೆಸ್
ಜಿಲ್ಲಾಧ್ಯಕ್ಷ  ಪ್ರಸನ್ನ ಹಿರೇಮಠ, ಶಹರಯುವ ಘಟಕದ ಅಧ್ಯಕ್ಷ ಉಮರ ಇನಾಂದಾರ, ಗ್ರಾಮೀಣ ಯುವ ಘಟಕದ ಅಧ್ಯಕ್ಷ ಅಜೇಯ ಬಂಡಿವಡ್ಡರ, ಜಮೀರ ಜಿಗರಿ, ಮಲ್ಲಿಕಾರ್ಜುನ ಬೂದಗಟ್ಟಿ, ಜಾಪರ್ ಅತ್ತಾರ ಸೇರಿದಂತೆ ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯರು, ಕಾಂಗ್ರಸ್ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.