Kourava News

ಎಮ್ಮೆಗೆ  ವಿಮಾ ಪರಿಹಾರಕ್ಕೆ ಕಂಪನಿ ತಿರಸ್ಕಾರ- ಪರಿಹಾರ ಪಾವತಿಗೆ ಗ್ರಾಹಕರ ವೇದಿಕೆ ಆದೇಶ

ಎಮ್ಮೆಗೆ  ವಿಮಾ ಪರಿಹಾರಕ್ಕೆ ಕಂಪನಿ ತಿರಸ್ಕಾರ- ಪರಿಹಾರ ಪಾವತಿಗೆ ಗ್ರಾಹಕರ ವೇದಿಕೆ ಆದೇಶ

ಹಾವೇರಿ: ವಿಮೆ ಪಾಲಿಸಿದ ಹೊಂದಿದ್ದ ಎಮ್ಮೆ ಯ ಆಕಸ್ಮಿಕ ಮರಣದ ತರುವಾಯು ವಿಮಾ ಪರಿಹಾರ ನೀಡಲು ನಿರಾಕರಿಸಿದ ಯುನಿಟೆಡ್ ಇನ್ಸೂರನ್ಸ್ ವಿಮಾ ಕಂಪನಿಗೆ ಮೃತ ಎಮ್ಮೆಯ ಮಾಲೀಕರಿಗೆ ವಿಮಾ ಪರಿಹಾರ ಪಾವತಿಸಲು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ಹೊರಡಿಸಿದೆ.
ಹಾವೇರಿ ತಾಲೂಕು ದೇವಗಿರಿಯಲ್ಲಾಪೂರದ ಶ್ರೀಮತಿ ಲಕ್ಷ್ಮೀ ಕೋಂ.ಮುತ್ತಪ್ಪ ಲಮಾಣಿ ಅವರು ಬ್ಯಾಂಕ್‌ನಲ್ಲಿ ೫೨ ಸಾವಿರ ಸಾಲ ಪಡೆದು ಜೂನ್ ೨೦೧೮ ರಲ್ಲಿ ಎಮ್ಮೆಯೊಂದನ್ನು ಖರೀದಿಸಿ ಸಾಕಾಣಿಕೆ ಮಾಡುತ್ತಿದ್ದರು. ಅಕ್ಟೋಬರ್-೨೦೧೮ ರಲ್ಲಿ ಯುನಿಟೆಡ್ ಇನ್ಸೂರನ್ಸ್ ವಿಮಾ ಕಂಪನಿಯಲ್ಲಿ ವಿಮೆ ಮಾಡಿಸಿ ನಿಯಮಿತ ವಿಮಾ ಕಂತುಗಳನ್ನು ಪಾವತಿಸಿಕೊಂಡು ಬರುತ್ತಿದ್ದರು. ಆರೋಗ್ಯವಾಗಿದ್ದ ಎಮ್ಮೆಯು ಎಪ್ರಿಲ್-೨೦೧೯ರಲ್ಲಿ ಅನಾರೋಗ್ಯ ಕಾರಣ ಮೃತಪಟ್ಟಿದ್ದು, ನಿಯಮಾನುಸಾರ ಪಶುವೈದ್ಯರಿಂದ ಪ್ರಮಾಣೀಕರಿಸಿ ಪರಿಹಾರಕ್ಕಾಗಿ ವಿಮಾ ಕಂಪನಿಗೆ ಎಮ್ಮೆಯ ಒಡತಿ ಸರ್ಜಿ ಸಲ್ಲಿಸಿದ್ದರು. ಆದರೆ ಸಕಾರಣ ನೀಡದೇ ವಿಮಾ ಕಂಪನಿ ಪರಿಹಾರ ಮೊತ್ತ ನೀಡಲು ನಿರಾಕರಿಸಿದ ಕಾರಣ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ವಿಮಾ ಕಂಪನಿ ವಿರುದ್ಧ ದೂರು ದಾಖಲಿಸಿ ಪರಿಹಾರ ಕೋರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷರಾದ ಶ್ರೀಮತಿ ಸುನಂದಾ ಹಾಗೂ ಮಹಿಳಾ ಸದಸ್ಯರಾದ ಶ್ರೀಮತಿ ಮಹೇಶ್ವರಿ ಬಿ.ಎಸ್. ಅವರು ಎಮ್ಮೆಯ ಮಾಲಕರಾದ ಶ್ರೀಮತಿ ಲಕ್ಷ್ಮೀ ಕೋಂ.ಮುತ್ತಪ್ಪ ಲಮಾಣಿ ಅವರಿಗೆ ವಿಮೆ ಪರಿಹಾರ ಮೊತ್ತವಾಗಿ ರೂ.ಐವತ್ತು ಸಾವಿರ, ಮಾನಸಿಕ ವ್ಯಥೆಗೆ ಮೂರುಸಾವಿರ ರೂ. ಹಾಗೂ ದಾವೆ ಖರ್ಚಾಗಿ ಎರಡು ಸಾವಿರ ರೂ. ಸೇರಿಸಿ ೫೫ ಸಾವಿರ ರೂ. ಪರಿಹಾರ ಒಂದು ತಿಂಗಳೊಳಗೆ ನೀಡಲು ವಿಮೆ ಕಂಪನಿಗೆ ಸೂಚಿಸಿ ಆದೇಶ ಹೊರಡಿಸಿದ್ದಾರೆ.
ನಿಗಧಿತ ಅವಧಿಯಲ್ಲಿ ಪರಿಹಾರ ನೀಡಲು ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ.೧೨ರ ಬಡ್ಡಿ ಸಮೇತ ಪಾವತಿಸಲು ಜನವರಿ ೩೦ ರಂದು ಪ್ರಕಟಿಸಿದ ತೀರ್ಪಿನಲ್ಲಿ ತಿಳಿಸಲಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರಿ ಸಹಾಯಕ ರಿಜಿಸ್ಟಾರ್ ಹಾಗೂ ಸಹಾಯಕ ಆಡಳಿತಧಿಕಾರಿ ಕರಿಯಪ್ಪ ಬಡಪ್ಪಳವರ ಅವರು ತಿಳಿಸಿದ್ದಾರೆ.

satta king gali