ಬೆಂಗಳೂರು : ಆತ್ಮೀಯರನ್ನೂ ಸಹ ಹಸ್ತಲಾಘವ ಮಾಡಲೂ ಕರೋನಾ ಭೀತಿ ಆವರಿಸಿಬಿಟ್ಟಂತಾಗಿದೆ. ಹೀಗಾಗಿ ಹಸ್ತಲಾಘವದಿಂದ ಕರೋನಾ ಹರಡುವ ಸಾಧ್ಯಾಸಾಧ್ಯತೆಗಳ ಬಗ್ಗೆ ವೈದ್ಯಕೀಯ ಶಿಕ್ಷ ಇಲಾಖೆ ಸಚಿವರಿಗೆ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ವಿವರ ಕೇಳಿದ ಪ್ರಸಂಗ ಬುಧವಾರ ವಿಧಾನ ಪರಿಷತ್ತಿನಲ್ಲಿ ನಡೆಯಿತು.
ಬುಧವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಕೃಷಿ ಸಚಿವ
ಬಿ.ಸಿ.ಪಾಟೀಲ್ ಮಾತನಾಡಿ, ಕ್ಷೇತ್ರದ ಜನರು ಆತ್ಮೀಯರನ್ನು ಭೇಟಿಯಾದಾಗ ಹಸ್ತಲಾಘವ ಮಾಡುವುದು ಸಹಜ. ಆದರೆ ಕರೋನಾ ಸೋಂಕಿನ ಭೀತಿಯಿಂದಾಗಿ ಹಸ್ತಲಾಘವ ಮಾಡುವುದೋ ಬೇಡವೋ ಎಂಬ ಗೊಂದಲದಿಂದ ಕೈಮುಗಿದು ಬಿಡುತ್ತೇನೆ. ಆಗ ಕೆಲವರಿಗೆ ತಾವು ಸಚಿವನಾಗಿದ್ದರಿಂದ ಹಸ್ತಲಾಘವ ಮಾಡುತ್ತಿಲ್ಲ ಎಂಬ ಭಾವ ಬರುವುದು ಸಹಜ. ಹೀಗಾಗಿ ಸಚಿವರು ಹಸ್ತಲಾಘವದಿಂದ ಸೋಂಕು ಹರಡುವ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದರು.
ಆಗ ಉತ್ತರ ನೀಡಿದ ವೈದ್ಯಕೀಯ ಸಚಿವರಾದ ಡಾ. ಸುಧಾಕರ್ ಅವರು, ಆರೋಗ್ಯವಂತರಿಂದ ಸೋಂಕು ತಗಲುವುದಿಲ್ಲ.ಆದರೆ ಶೀತ,ಕೆಮ್ಮುಜ್ವರದ ಲಕ್ಷಣ ಬಂದವರು ಸೀನುವಾಗಾಗಲೀ ಕೆಮ್ಮುವಾಗಾಗಲಿ ಮಾಸ್ಕ್ ಧರಿಸುವುದು ಬರೀ ಕೈ ಅಡ್ಡ ಹಿಡಿದು ಸೀನದೇ ಕರವಸ್ತ್ರಬಳಸಬೇಕು. ಸೋಂಕಿತರ ಕೈಯಲ್ಲಿನ ಬೆವರಿನಿಂದ ಸಹ ಕರೋನಾ ಹರಡುವ ಸಾಧ್ಯತೆಯಿದೆ.ಹೀಗಾಗಿ ಹಸ್ತಲಾಘವಕ್ಕಿಂತ ಕೈಮುಗಿದು ನಮಸ್ಕರಿಸುವುದೇ ಒಳ್ಳೆಯದು.ಇದು ನಮ್ಮ ಸಂಸ್ಕೃತಿ ಸಹ ಎಂದು ಸಲಹೆ ನೀಡಿದರು.