Kourava News

ಕೋವಿಡ್ ಹಿನ್ನೆಲೆ ಸಾಲ ನೀಡಿಕೆ ಪ್ರಮಾಣದಲ್ಲಿ ಕಡಿತ ಮಾಡದಂತೆ ಬ್ಯಾಂಕ್‌ಗಳಿಗೆ ಸಂಸದ ಶಿವಕುಮಾರ ಉದಾಸಿ ಸೂಚನೆ


ಹಾವೇರಿ: ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಲಾಕ್‌ಡೌನ್‌ಗೊಳಗಾಗಿ ರೈತರು, ಸ್ವ ಉದ್ಯೋಗಿಗಳು, ಸ್ವ ಸಹಾಯ ಸಂಘಗಳು, ಸಣ್ಣ ವಾಣಿಜ್ಯೋದ್ಯಮಿಗಳು ಸಂಕಷ್ಟದಲ್ಲಿದ್ದಾರೆ. ಸಾಲ ನೀಡಿಕೆ ಪ್ರಮಾಣದಲ್ಲಿ ಯಾವುದೇ ಕೊರತೆಯಾಗದಂತೆ ನಿಗಧಿಗಿಂತ ಗರಿಷ್ಠ ಪ್ರಮಾಣದಲ್ಲಿ ಅರ್ಹರಿಗೆ ಸಾಲ ನೀಡುವ ಕುರಿತು ತ್ವರಿತ ಕ್ರಮವಹಿಸುವಂತೆ ಬ್ಯಾಂಕರ್‌ಗಳಿಗೆ ಸೂಕ್ತ ನಿರ್ದೇಶನ ನೀಡಲು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸಂಸದರಾದ ಶಿವಕುಮಾರ ಉದಾಸಿ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೋವಿಡ್ ಹಿನ್ನೆಲೆಯಲ್ಲಿ ಹೊಸ ಸಾಲ ಯೋಜನೆ ಕುರಿತಂತೆ ಪರಿಶೀಲನೆ ನಡೆಸಿದ ಅವರು ಹೊಸ ಸಾಲ ಯೋಜನೆಯಡಿ ಕೃಷಿ, ಸಣ್ಣ ಉದ್ಯಮಿಗಳು, ವಯಕ್ತಿಕ ಸಾಲ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಬ್ಸಿಡಿ ಯೋಜನೆಗಳು, ಪ್ರೋತ್ಸಾಹದಾಯಕ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳ್ಳಬೇಕು. ಈ ಯೋಜನೆಗಳ ಬ್ಯಾಂಕ್ ವಹಿವಾಟು ಪ್ರಕ್ರಿಯೆಗೆ ಬಿಜನೆಸ್ ಕರೆಸ್ಪಾಂಡೆಂಟ್‌ಗಳು ಮನೆ ಬಾಗಿಲಿಗೆ ಚುರುಕಿನಿಂದ ಕಾರ್ಯನಿರ್ವಹಿಸುವಂತೆ ಕ್ರಮವಹಿಸಲು ಸೂಕ್ತ ನಿರ್ದೇಶನ ನೀಡುವಂತೆ ತಿಳಿಸಿದರು.
ಪ್ರಧಾನಮಂತ್ರಿ ಉದ್ಯೋಗ ಸೃಜನೆ ಯೋಜನೆಯಡಿ ಅರ್ಜಿ ಹಾಕಿದವರಿಗೆ ಗರಿಷ್ಠ ಪ್ರಮಾಣದಲ್ಲಿ ಮಂಜೂರಾತಿ ನೀಡಬೇಕು. ಸಾಲ ನೀಡುವ ಗುರಿ ಕಡಿಮೆ ಇದೆ ಎಂದು ನಿರಾಕರಿಸಬಾರದು. ವಿಶೇಷ ಸಂದರ್ಭವಾಗಿರುವುದರಿಂದ ನಿಯಮಗಳನ್ನು ಸಡಿಲಗೊಳಿಸಿ ಗರಿಷ್ಠ ಪ್ರಮಾಣದಲ್ಲಿ ಸ್ವ ಉದ್ಯೋಗಾಕಾಂಕ್ಷಿಗಳಿಗೆ ನೀಡಬೇಕು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ವರ್ಗಗಳಿಗೆ ವಿವಿಧ ಯೋಜನೆಗಯಡಿ ಸಾಲ ಸೌಲಭ್ಯಗಳನ್ನು ನೀಡುವಾಗ ಗರಿಷ್ಠ ಪ್ರಮಾಣದಲ್ಲಿ ನೆರವು ಒದಗಿಸಬೇಕು ಎಂದು ಸೂಚನೆ ನೀಡಿದರು.
ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಯ ರೈತರಿಗೆ ಕೋವಿಡ್ ಸಂಕಷ್ಟ ಕಾಲದಲ್ಲಿ ಹೆಚ್ಚು ಜನರಿಗೆ ಕೃಷಿ ಸಾಲ ನೀಡಬೇಕು. ರೈತರು ಸಾಲ ಪಡೆಯಲು ತೊಂದರೆ ಪಡಬಾರದು. ಸಿಬಿಲ್ ದರವನ್ನು ಕೃಷಿ ಕ್ಷೇತ್ರಕ್ಕೆ ಅನ್ವಯಿಸಬಾರದು. ಹೊಸ ಕೃಷಿ ಸಾಲವನ್ನು ತಕ್ಷಣವೇ ನೀಡಬೇಕು. ಎಲ್ಲ ಬ್ಯಾಂಕುಗಳು ಈ ಮಾನದಂಡವನ್ನು ಅನುಸರಿಸುವಂತೆ ಸೂಕ್ತ ನಿರ್ದೇಶನ ನೀಡಲು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
ಹೊಸ ಬ್ರಾಂಚ್: ಕೇಂದ್ರ ಸರ್ಕಾರದ ಜನ್‌ಧನ್ ಯೋಜನೆಯಡಿ ಬ್ಯಾಂಕ್ ಖಾತೆಗಳು ಹೆಚ್ಚಾಗಿವೆ. ಜನಸಂಖ್ಯೆ ಬೆಳವಣಿಗೆ, ಬ್ಯಾಂಕ್‌ಗಳಲ್ಲಿ ತೆರೆದಿರುವ ಖಾತೆಗಳ ಸಂಖ್ಯೆಗೆ ಅನುಸಾರ ಭಾರತೀಯ ರಿಜರ್ವ ಬ್ಯಾಂಕ್‌ನ ಮಾರ್ಗಸೂಚಿಯಂತೆ ಹೆಚ್ಚುವರಿ ಬ್ಯಾಂಕ್ ಶಾಖೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಆರಂಭಿಸುವುದು ಅಗತ್ಯವಿದೆ. ಕೆಲವೆಡೆ ಎ.ಟಿ.ಎಂ.ಗಳನ್ನು ಆರಂಭಿಸಬೇಕಾಗಿದೆ. ಈಗಿರುವ ವ್ಯವಸ್ಥೆಯಲ್ಲಿ ಬ್ಯಾಂಕ್‌ಗಳಿಗೆ ಒತ್ತಡ ಜಾಸ್ತಿಯಾಗಿದೆ. ಕೆಲವಡೆ ಬ್ಯಾಂಕ್‌ಗಳ ಮುಂದೆ ಸಾಲುಸಾಲು ಗ್ರಾಹಕರು ನಿಲ್ಲುವ ಪರಿಸ್ಥಿತಿ ಇದೆ. ಈ ಕಾರಣದಿಂದ ಅಗತ್ಯವಿದ್ದೆಡೆ ಬ್ಯಾಂಕ್‌ಗಳ ಹೊಸ ಶಾಖೆಗಳು ಹಾಗೂ ಎ.ಟಿ.ಎಂ.ಗಳನ್ನು ಆರಂಭಿಸಲು ಸಂಸದರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಸಿ.ಎಂ.ಉದಾಸಿ, ನೆಹರು ಓಲೇಕಾರ , ವಿರುಪಾಕ್ಷಪ್ಪ ಬಳ್ಳಾರಿ ಹಾಗೂ ಅರುಣಕುಮಾರ ಗುತ್ತೂರ ಅವರು ಮಾತನಾಡಿ, ಉದ್ಯೋಗಿನಿ ಯೋಜನೆ ಹಾಗೂ ಪ್ರಧಾನ ಮಂತ್ರಿ ಉದ್ಯೋಗ ಸೃಜನೆ ಯೋಜನೆಯಡಿ ಬ್ಯಾಂಕ್ ಆಫ್ ಬರೋಡಾ, ಕಾರ್ಪೋರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್‌ಗಳು ಸಾಲ ಮಂಜೂರಾತಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಂಬಂಧಿಸಿದ ಬ್ಯಾಂಕಿನ ವ್ಯವಸ್ಥಾಪಕರಿಗೆ ಸೂಕ್ತ ನಿರ್ದೇಶನ ನೀಡಲು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ತಿಳಿಸಿದರು.
ನೆರೆ ಪರಿಹಾರ : ಕಳೆದ ಆಗಸ್ಟ್ , ಅಕ್ಟೋಬರ್ ಮಾಹೆಯಲ್ಲಿ ಸುರಿದ ಮಳೆಯಿಂದ ಹಾನಿಗೊಳಗಾದ ಬೆಳೆ ಹಾಗೂ ಮನೆ ಹಾನಿ ಪರಿಹಾರ ಬಹಳ ಜನರಿಗೆ ದೊರೆತಿಲ್ಲ. ಈ ಸಮಸ್ಯೆಯನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ತಹಶೀಲ್ದಾರ ಹಂತದಲ್ಲೇ ಈ ಸಮಸ್ಯೆ ಬಗೆಹರಿಸುವ ಅಧಿಕಾರವಿದ್ದರೂ ಜಿಲ್ಲಾಧಿಕಾರಿಗಳ ನಿರ್ದೇಶನ ಇಲ್ಲ ಎಂದು ವಿಳಂಬಮಾಡುತ್ತಿದ್ದಾರೆ. ಬಾಕಿ ಉಳಿದಿರುವ ಪರಿಹಾರ ನೀಡುವ ಪ್ರಕರಣಗಳನ್ನು ಪರಿಶೀಲನೆ ನಡೆಸಿ ಅರ್ಹರಿಗೆ ಮನೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು ಹಾಗೂ ಬೆಳೆ ಪರಿಹಾರ ದೊರೆಯದವರಿಗೆ ಬೆಳೆ ಪರಿಹಾರ ನೀಡಬೇಕು. ಪರಿಹಾರ ವಿತರಣೆಯಲ್ಲಿ ಲೋಪ ಎಸಗಿದವರನ್ನು ಪತ್ತೆಹಚ್ಚಿ ಶಿಕ್ಷೆಗೆ ಒಳಪಡಿಸಬೇಕು ಎಂದು ಶಾಸಕರಾದ ಸಿ.ಎಂ.ಉದಾಸಿ, ನೆಹರು ಓಲೇಕಾರ, ಅರುಣಕುಮಾರ ಗುತ್ತೂರ, ವಿರುಪಾಕ್ಷಪ್ಪ ಬಳ್ಳಾರಿ ಸಭೆಯಲ್ಲಿ ಆಗ್ರಹಿಸಿದರು.
ಈ ಕುರಿತಂತೆ ಎಲ್ಲ ಶಾಸಕರು, ತಹಶೀಲ್ದಾರ ಹಾಗೂ ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಂಸದರು ತಿಳಿಸಿದರು.
ಬೆಳೆವಿಮೆ: ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ ಬೆಳೆವಿಮೆಗೆ ಒಳಪಡುವ ಆಯ್ಕೆಯನ್ನು ರೈತರಿಗೆ ಬಿಡಲಾಗಿದೆ, ಕಡ್ಡಾಯಗೊಳಿಸಲಾಗಿಲ್ಲ. ಆದರೆ ಬೆಳೆವಿಮೆ ನೊಂದಾಯಿಸಿದರೆ ರೈತರಿಗೆ ಅನುಕೂಲವಾಗಲಿದೆ. ಈ ಕುರಿತಂತೆ ರೈತರಿಗೆ ಮನವರಿಕೆಮಾಡಿಕೊಡಬೇಕು. ವಿಮೆ ಕಂತು ತುಂಬಲು ರೈತರ ಮನವೊಲಿಸಬೇಕು. ಈ ಕುರಿತಂತೆ ಸಾಕಷ್ಟು ಪ್ರಚಾರ ಕೈಗೊಳ್ಳಬೇಕು. ಪ್ರತಿ ತಾಲೂಕಿನ ಶಾಸಕರು ಮಾಧ್ಯಮಗೋಷ್ಠಿನಡೆಸಿ ಬೆಳೆವಿಮೆ ಕುರಿತಂತೆ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು. ಕೃಷಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ರೈತರ ಮನೆ ಮನೆಗೆ ತೆರಳಿ ಬೆಳೆವಿಮೆ ತುಂಬುವ ಕುರಿತಂತೆ ರೈತರಿಗೆ ಮೋಟಿವೇಷನ್ ಮಾಡಬೇಕೆಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸಂಸದರಾದ ಶಿವಕುಮಾರ ಉದಾಸಿ ಹಾಗೂ ಶಾಸಕರಾದ ಸಿ.ಎಂ.ಉದಾಸಿ ಅವರು ಸೂಚನೆ ನೀಡಿದರು.
ಬೀಜ-ಗೊಬ್ಬರ: ಮುಂಗಾರು ಬಿತ್ತನೆ ಬೀಜ ಹಾಗೂ ಗೊಬ್ಬರದ ದಾಸ್ತಾನು ಮಾಹಿತಿ ಪಡೆದ ಸಂಸದರು, ಮುಂಗಾರು ಬಿತ್ತನೆಗೆ ಯಾವುದೇ ಅಭಾವ ಆಗದಂತೆ ಬೀಜ ಗೊಬ್ಬರ ದಾಸ್ತಾನು ಮಾಡಿಕೊಳ್ಳಬೇಕು. ಎಲ್ಲ ತಾಲೂಕಾವಾರು ಮಾರಟಗಾರರ ಸಭೆನಡೆಸಿ ಸೂಕ್ತ ನಿರ್ದೇಶನ ನೀಡಬೇಕು ಎಂದು ಸಂಸದರು ಸೂಚಿಸಿದರು.
ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ ಅವರು ಮಾತನಾಡಿ, ಹತ್ತಿ ಬೀಜದ ಮಾದರಿಯಲ್ಲಿ ಮೆಕ್ಕೆ ಜೋಳ ಬಿತ್ತನೆ ಬೀಜಕ್ಕೂ ದರ ನಿಗಧಿಮಾಡಬೇಕು. ಖಾಸಗಿ ಕಂಪನಿಗಳು ರೈತರಿಂದ ಕಡಿಮೆ ದರದಲ್ಲಿ ಬೀಜ ಖರೀದಿಸಿ ಹೆಚ್ಚಿನ ದರದಲ್ಲಿ ಮೆಕ್ಕೆಜೋಳ ಬಿತ್ತನೆ ಬೀಜ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಹೊರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ದೇಸಾಯಿ, ಹಾವೇರಿ ಉಪ ವಿಭಾಗಾಧಿಕಾರಿ ಡಾ.ದಿಲೀಷ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ ಇತರರು ಉಪಸ್ಥಿತರಿದ್ದರು.