Kourava News

ಗ್ರಾಮಗಳಲ್ಲಿ ಕೋವಿಡ್ ವೈರಾಣು ಹರಡದಂತೆ ಜಾಗೃತಿ ವಹಿಸಿ ಅಧಿಕಾರಿಗಳಿಗೆ ಶಾಸಕ ನೆಹರು ಓಲೇಕಾರ ಸೂಚನೆ

ಮಾಸ್ಕ್ ಧಾರಣೆ - ಗುಂಪುಗೂಡದಂತೆ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ

ಗ್ರಾಮಗಳಲ್ಲಿ ಕೋವಿಡ್ ವೈರಾಣು ಹರಡದಂತೆ ಜಾಗೃತಿ ವಹಿಸಿ
ಅಧಿಕಾರಿಗಳಿಗೆ ಶಾಸಕ ನೆಹರು ಓಲೇಕಾರ ಸೂಚನೆ

ಹಾವೇರಿ: ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡದಂತೆ ತಡೆಯಲು ಅಧಿಕಾರಿಗಳು ಜಾಗೃತಿಯಿಂದ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಅಧ್ಯಕ್ಷರು ಹಾಗೂ ಶಾಸಕರಾದ ನೆಹರು ಓಲೇಕಾರ ಅವರು ಸೂಚನೆ ನೀಡಿದರು.
ತಾಲೂಕು ಪಂಚಾಯತ್ ಸಭಾಭವನದಲ್ಲಿ ಮಂಗಳವಾರ ಜರುಗಿದ ಹಾವೇರಿ ತಾಲೂಕು ಮಟ್ಟದ ಅಧಿಕಾರಿಗಳ ಹಾಗೂ ಎಲ್ಲ ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ಅಧಿಕಾರಿಗಳಿಗೆ ಕೋವಿಡ್-೧೯ ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ಗ್ರಾಮಗಳಲ್ಲೂ ಪರಿಣಾಮಕಾರಿಯಾಗಿ ಲಾಕ್‌ಡೌನ್ ಅನುಷ್ಠಾನಗೊಳ್ಳಬೇಕು. ಗ್ರಾಮದಿಂದ ಗ್ರಾಮಕ್ಕೆ ಅನಗತ್ಯವಾಗಿ ಓಡಾಟ ನಿರ್ಭಂದಿಸಬೇಕು. ಗ್ರಾಮದ ಕಟ್ಟೆಗಳಲ್ಲಿ ಗುಂಪುಗೂಡಿ ಹರಟೆಹೊಡೆಯುವುದನ್ನು ತಡೆಯಬೇಕು. ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆಯಿಂದ ಗ್ರಾಮಗಳಿಗೆ ಬರುವ ವ್ಯಕ್ತಿಗಳ ಬಗ್ಗೆ ನಿಗಾವಹಿಸಬೇಕು. ಕೋವಿಡ್ ತಪಾಸಣೆಗೊಳಪಡಿಸಬೇಕು. ಒಂದೊಮ್ಮೆ ಲಕ್ಷಣಗಳು ಕಂಡುಬಂದರೆ ಆಸ್ಪತ್ರೆಗೆ ದಾಖಲಿಸಲು ಕ್ರಮವಹಿಸಬೇಕು. ಪಾಸಿಟಿವ್ ವ್ಯಕ್ತಿಗಳ ಸಂಪರ್ಕವನ್ನು ೨೪ ತಾಸಿನಗೊಳಗೆ ಪತ್ತೆಹಚ್ಚಿ ತಪಾಸಣೆಗೊಳಪಡಿಸಲು ಅಧಿಕಾರಿಗಳಿಗೆ ಕಠಿಣ ನಿರ್ದೇಶನ ನೀಡಿದರು.
ಜಾಗೃತಿ ಮೂಡಿಸಿ: ಪ್ರತಿ ಗ್ರಾಮದಲ್ಲೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಆರೋಗ್ಯಾಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಗ್ರಾಮಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಮಾಸ್ಕಧರಿಸಲು ಅರಿವು ಮೂಡಿಸಬೇಕು. ಗುಂಪುಗೂಡದಂತೆ ಡಂಗೂರ ಸಾರಿಸಿ ರೋಗ ನಿರೋಧ ಶಕ್ತಿ ಹೆಚ್ಚಿಸುವ ಕಷಾಯ ಹಾಗೂ ಬಿಸಿನೀರು ಕುಡಿಯಲು ಅರಿವು ಮೂಡಿಸಿ ಎಂದು ಸಲಹೆ ನೀಡಿದರು.
ಯಾರಿಗಾದರು ಜ್ವರ, ತಲೆನೋವು ಕಾಣಿಸಿಕೊಂಡರೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ತಪಾಸಣೆ ಮಾಡಿಸಿಕೊಳ್ಳಲು ಗ್ರಾಮಸ್ಥರಿಗೆ ತಿಳಿಹೇಳುವ ಕೆಲಸವನ್ನು ಗ್ರಾಮ ಪಂಚಾಯತಿ ಅಧಿಕಾರಿಗಳು ಮಾಡಬೇಕು. ಗ್ರಾಮದಲ್ಲಿನ ಕೋವಿಡ್ ಸೋಂಕಿತರನ್ನು ಪತ್ತೆಹಚ್ಚಿ ಸೂಕ್ತ ಕ್ರಮಕೈಗೊಳ್ಳಬೇಕು. ಸೋಂಕಿತರ ಮನೆ, ಓಣಿಯನ್ನು ಸ್ಯಾನಿಟೈಸ್ ಮಾಡಿಸಬೇಕು. ಮಾರ್ಗಸೂಚಿಯಂತೆ ಮೈಕ್ರೋ ಕಂಟೈನ್ ಮೆಂಟ್ ವಲಯವಾಗಿ ಘೋಷಿಸಿ ನಿಗಾವಹಿಸಬೇಕು ಎಂದು ಸೂಚನೆ ನೀಡಿದರು.
ಬಸಾಪೂರ ಸೇರಿದಂತೆ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಸ್ವಚ್ಛತೆ, ರೋಗಿಗಳ ಆರೈಕೆ ಹಾಗೂ ಊಟದ ವ್ಯವಸ್ಥೆ ಮತ್ತು ತ್ಯಾಜ್ಯಗಳ ನಿರ್ವಹಣೆಯನ್ನು ಪ್ರೊಟೋಕಾಲ್ ಪ್ರಕಾರಕೈಗೊಳ್ಳಬೇಕು. ಅಧಿಕಾರಿಗಳು ತಮಗೆ ವಹಿಸಿದ ಕೆಲಸವನ್ನು ಲೋಪವಿಲ್ಲದಂತೆ ನಿರ್ವಹಿಸಬೇಕೆಂದು ಸೂಚನೆ ನೀಡಿದರು.
ನೀರಿನ ಸಮಸ್ಯೆ ಪರಿಹರಿಸಿ: ಬೇಸಿಗೆ ಇರುವುದರಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾದಲ್ಲಿ ತಕ್ಷಣ ಅಧಿಕಾರಿಗಳು ಸ್ಪಂದಿಸಬೇಕು. ಜನರ ಸಮಸ್ಯೆಯನ್ನು ನಿವಾರಿಸುವಂತೆ ಸೂಚನೆ ನೀಡಿದರು.
ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಅವರು ಮಾತನಾಡಿ, ತಾಲೂಕಿನ ಕೋವಿಡ್ ಪಾಸಿಟಿವ್ ಪ್ರಕರಣಗಳು, ಸಂಪರ್ಕಿತರ ಪತ್ತೆ, ವ್ಯಾಕ್ಸಿನ್ ನೀಡಿಕೆ, ತಪಾಸಣೆ ಕುರಿತಂತೆ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ತಹಶೀಲ್ದಾರ ಗಿರೀಶ ಸ್ವಾದಿ ಅವರು ಮಾತನಾಡಿ, ಸರ್ಕಾರ ಘೋಷಣೆಮಾಡಿರುವ ಲಾಕ್‌ಡೌನ್ ಗ್ರಾಮೀಣ ಪ್ರದೇಶಕ್ಕೆ ಅನ್ವಯವಾಗುತ್ತದೆ. ಹಳ್ಳಿಯ ಜನರು ಅನಗ್ಯವಾಗಿ ಮನೆಯಿಂದ ಹೊರಬಂದು ಓಡಾಡುವುದನ್ನು ನಿಯಂತ್ರಿಸಲು ಎಲ್ಲ ಅಧಿಕಾರಿಗಳು ಕ್ರಮವಹಿಸಬೇಕು. ಮಂಗಳವಾರ ರಾತ್ರಿ ೯ ರಿಂದ ಮುಂದಿನ ೧೪ ದಿನ ಲಾಕಡೌನ್ ಇರಲಿದೆ. ಈ ಅವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅನಗತ್ಯವಾಗಿ ಮನೆಯಿಂದ ಹೊರಬದಂತೆ, ದೇವಸ್ಥಾನದ ಕಟ್ಟೆಗಳ ಮೇಲೆ ಗುಂಪುಗೂಡದಂತೆ ತಡೆಯಬೇಕು.
ಮಾಸ್ಕ ಇಲ್ಲದೆ ಹೊರಬಂದರೆ ದಂಡ ವಿಧಿಸಬೇಕು. ಪಿಡಿಒಗಳನ್ನು ಸೆಕ್ಟರ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಮನ್ವಯರಿಂದ ಕಾರ್ಯನಿರ್ವಹಿಸಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲಿ ರಚಿಸಲಾದ ಕೋವಿಡ್ ಟಾಸ್ಕ್‌ಫೋರ್ಸ್ ಸಮಿತಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಈಗಾಗಲೇ ಸಂತೆ-ಜಾತ್ರೆಗಳನ್ನು ನಿಷೇಧಿಸಲಾಗಿದೆ. ಮದುವೆ ಸಮಾರಂಭಕ್ಕೆ ೫೦ ಜನರನ್ನು ಮಿತಿಗೊಳಿಸಲಾಗಿದೆ. ಈ ನಿಯಮ ಪಾಲನೆಯಾಗಬೇಕು. ಲಾಕ್‌ಡೌನ್ ಅವಧಿಯಲ್ಲಿ ಅಂತರಾಜ್ಯ ಹಾಗೂ ಅಂತರಜಿಲ್ಲೆ ಪ್ರವಾಸ ನಿಷೇಧಿಸಲಾಗಿದೆ. ವೈದ್ಯಕೀಯ ತುರ್ತು ಬಿಟ್ಟು ಬೇರೆ ಯಾವುದಕ್ಕೂ ಅವಕಾಶವಿಲ್ಲ. ಮೇ ೧ ರಿಂದ ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡಲಾಗುತ್ತಿದೆ. ಈ ಎಲ್ಲ ವಿಷಯಗಳ ಕುರಿತು ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಕ ಅಧಿಕಾರಿ ಬಸವರಾಜಪ್ಪ ಅವರು ಮಾತನಾಡಿ, ಪಿಡಿಒಗಳಿಗೆ ಲಾಕ್‌ಡೌನ್ ಇರುವುದಿಲ್ಲ. ಐಡಿ ಕಾರ್ಡ್ ಧರಿಸಿ ಕರ್ತವ್ಯ ನಿರ್ವಹಿಸಬೇಕು. ಗ್ರಾಮೀಣ ಭಾಗದಲ್ಲಿ ಒಂದು ಸಣ್ಣ ಅಂಗಡಿಗಳು ತೆರೆಯದಂತೆ ನಿಗಾವಹಿಸಬೇಕು. ಬೆಳಿಗ್ಗೆ ೬ ರಿಂದ ೧೦ ಗಂಟೆವೆರೆಗೆ ದಿನನಿತ್ಯದ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶವಿದೆ. ಉಳಿದ ಸಮಯದಲ್ಲಿ ಸ್ತಬ್ದವಾಗಿರಬೇಕು. ಇದನ್ನು ಉಲ್ಲಂಘಿಸಿದರೆ ಕಡ್ಡಾಯವಾಗಿ ದಂಡಹಾಕಿ ಪರಿಣಾಮಕಾರಿ ಕೆಲಸ ನಿರ್ವಹಿಸಬೇಕು. ಕೋವಿಡ್ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಕನಿಷ್ಠ ೩೦ ಜನರ ಸ್ವಾಬ್ ಪರೀಕ್ಷೆ ಮಾಡಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.