Kourava News

ಜನರಮೇಲೆ ಲಾಠಿ ಪ್ರಯೋಗಿಸಬೇಡಿ; ಪೊಲೀಸ್‌ರಿಗೆ ಶಾಸಕ ನೆಹರು ಓಲೇಕಾರ ತಾಕೀತು

ಸೋಮವಾರ ನಗರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಕೋವಿಡ್ ೧೯ ನಿಯಂತ್ರಣ ಕುರಿತು ಕರೆಯಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಶಾಸಕ ನೆಹರು ಓಲೇಕಾರ, ಬ್ಯಾಡಗಿ ಕ್ಷೇತ್ರದ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಡಿವ್ಐಎಸ್ಪಿ ವಿಜಯಕುಮಾರ ಸಂತೋಷ, ತಹಶೀಲ್ದಾರ ಶಂಕರ ಭಾಗವಹಿಸಿದ್ದರು.

ಹಾವೇರಿ: ಕೊರೊನಾ ಸೊಂಕು ಹರಡದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರರ್ಕಾರ ಲಾಕ್‌ಡೌನ್ ಘೋಷಿಸಿದೆ. ಲಾಕ್‌ಡೌನ್ ವೇಳೆ ಓಡಾಡುವ ಜನರಮೇಲೆ ಯಾವುದೇ ಕಾರಣಕ್ಕೂ ಲಾಠಿ ಪ್ರಯೋಗಿಸಬೇಡಿ. ಈಗಾಗಲೇ ಲಾಠಿ ಏಟನ್ನು ತಿಂದವರು ಚೇತರಿಸಿಕೊಳ್ಳಲು ಹಲವಾರು ದಿನಗಳು ಬೇಕಾಗುತ್ತದೆ, ಅವರನ್ನೆ ನಂಬಿಕೊಂಡಿರುವ ತಾಯಿ-ತಂದೆ, ಪತ್ನಿ,ಮಕ್ಕಳು ಮನೆಯಲ್ಲಿ ಇರುತ್ತಾರೆ. ಪೊಲೀಸರು ಅಮಾನುಷವಾಗಿ ಜನರನ್ನು ಥಳಿಸುವುದನ್ನು ನಿಲ್ಲಿಸಿ ಎಂದು ಶಾಸಕ ನೆಹರು ಓಲೇಕಾರ ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮಾ. ೩೦ ರ ಸೋಮವಾರ ನಗರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಕೋವಿಡ್ ೧೯ ನಿಯಂತ್ರಣ ಕುರಿತು ಕರೆಯಲಾಗಿದ್ದ ಅಧಿಕಾರಿಗಳ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಜನತಾ ಕರ್ಫ್ಯೂವೇಳೆ ಅನಗತ್ಯವಾಗಿ ಓಡಾಡುವವರನ್ನು ದಂಡಿಸಿ ಕೈಗೆ ಎರಡೇಟು ಹಾಕಿ , ಅಂತವರಿಗೆ ತಿಳುವಳಿಕೆ ನೀಡಿ. ಅನಗತ್ಯವಾಗಿ ಓಡಾಡುವವರ ವಾಹನಗಳನ್ನು ಸೀಜ್ ಮಾಡಿ, ವಾಹನಗಳನ್ನು ವಶಕ್ಕೆ ತಗೆದುಕೊಳ್ಳಿ. ಅದನ್ನು ಬಿಟ್ಟು ಬೇಕಾ ಬಿಟ್ಟಿ ಜನರನ್ನು ಥಳಿಸುವದು ಸರಿಯಾದ ಕ್ರಮವಲ್ಲ. ಕೆಲವ ಜನರು ಏಟು ತಿಂದು ಈಗಾಗಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ನನ್ನ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಜನರ ಮೇಲೆ ದಂಡ ಪ್ರಯೋಗಮಾಡಬೇಡಿ ಎಂದು ಅವರು ಸಭೆಯಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.
ರೈತರು ತರಕಾರಿ ಮಾರಾಟ ಮಾಡಲು ಯಾವುದೇ ತೊಂದರೆಯಿಲ್ಲ.
ಕೃಷಿ ಚಟುವಟಿಕೆಗೆ ಯಾವುದೇ ನಿರ್ಭಂಧವಿರುವುದಿಲ್ಲ. ಕಟಾವು, ಒಕ್ಕಲುತನ, ಉಳಿಮೆ, ಇತರ ಚಟುವಟಿಕೆ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ರೈತ ಬೆಳೆದ ಹಣ್ಣು,ತರಕಾರಿ ಅಗತ್ಯ ಬೆಳೆಕಾಳುಗಳ ಮಾರಾಟಕ್ಕೆ ಯಾವುದೇ ನಿರ್ಭಂಧವಿರುವುದಿಲ್ಲ. ಕೃಷಿ ಯಂತ್ರಗಳ ಬಳಕೆಗೆ ಬೇಕಾದ ಇಂಧನವನ್ನು ಪೂರೈಸಲ ಕ್ರಮವಹಿಸುವಂತೆ ಶಾಸಕ ನೆಹರು ಓಲೆಕಾರ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಪಡಿತರ ಕಾರ್ಡ ಹೊಂದಿರದವರಿಗೆ ರೇಷನ್ ವಿತರಣೆಗೆ ಸೂಚಿಸಿದ ಶಾಸಕರು ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ತೊಂದರೆಯಾಗದಂತೆ ಕ್ರಮ ವಹಿಸಲು ಸೂಚಿಸಿದರು. ಪರಿಸ್ಥಿತಿ ಕೈಮೀರಿದರೆ ನಗರದ ಹೊರವಲಯದಲ್ಲಿರುವ ವಸತಿನಿಯಗಳನ್ನು ಗುರುತಿಸಿ ಅಲ್ಲಿ ಸೋಂಕಿತರ ಚಿಕಿತ್ಸೆಗೆ ಸನ್ನದ್ದ ಸ್ಥಿತಿಯಲ್ಲಿರುವಂತೆ ಸೂಚಿಸಲಾಗಿದೆ ಎಂದು ಶಾಸಕರು ತಿಳಿಸಿದರು.
 
ತರಕಾರಿ, ದಿನಸಿ ಹೆಚ್ಚಿದಕ್ಕೆ ಮಾರಾಟಮಾಡುವರರ ಮೇಲೆ ಕೇಸ್, ಲೈಸನ್ ರದ್ದು
ಹಾವೇರಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ದಿನಿನಿತ್ಯ ಬಳಕೆಗೆ ಬೇಕಾಗುವ ದಿನಸಿ ಹಾಗೂ ತರಕಾರಿಗಳನ್ನು ಕೆಲವು ವ್ಯಾಪಾರಿಗಳು ಡಬಲ್. ತ್ರಿಬಲ್ ದರಕ್ಕೆ ಮರಾಟಮಾಡುತ್ತಿದ್ದಾರೆ, ಇದು ಅಕ್ಷಮ್ಯ ಅಪರಾಧವಾಗಿದೆ. ಈರೀತಿಯ ಪರಿಸ್ಥಿತಿಯಲ್ಲಿ ವ್ಯಾಪಾರಿಗಳು ಜನರ ಬೆಂಬಲಕ್ಕೆ ನಿಲ್ಲಬೇಕು, ಅದನ್ನು ಬಿಟ್ಟು ದಿನಸಿ ಹಾಗೂ ತರಕಾರಿಗಳನ್ನು ಹೆಚ್ಚುವರಿ ದರಕ್ಕೆ ಮಾರಾಟ ಮಾಡುವುದ ಸರಿಯಲ್ಲ, ಈಬಗ್ಗೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಿರಾಣಿ ಅಂಗಡಿಯವರಿರಲಿ, ತರಕಾರಿ ವ್ಯಾಪಾರಿಗಳಿರಲಿ ಹೆಚ್ಚಿನ ದರಕ್ಕೆ ತರಕಾರಿ ಹಾಗೂ ದಿನಸಿಗಳನ್ನು ಮಾರುವಂತಿಲ್ಲ. ತರಕಾರಿ ವ್ಯಾಪಾರಿಗಳು, ದಿನಸಿ ವ್ಯಾಪಾರಿಗಳು ತಾವು ತಂದ ತರಕಾರಿ ಹಾಗೂ ದಿನಸಿಗಳ ಮೇಲೆ ೫ರೂಗಳಿಂದ ೧೦ರೂಗಳವರೆಗೆ ಲಾಭಾಂಶವಿಟ್ಟು ಮಾರಾಟ ಮಾಡಬೇಕು. ಕಿರಾಣಿ ಅಂಗಡಿಗಳಲ್ಲಿ ಯಾವುದೇ ವಸ್ತುಗಳಿರಲಿ ಎಂಆರ್‌ಪಿ ಬೋರ್ಡ ಹಾಕುವುದು ಕಡ್ಡಾಯ. ಹಾಗೇನೆ ತರಕಾರಿ ವ್ಯಾಪಾರಿಗಳು ಸಹ ತರಕಾರಿ ಬೆಲೆಗಳನ್ನು ಬರೆದು ತೂಗುಹಾಕಬೇಕು. ಈಬಗ್ಗೆ ಅಧಿಕಾರಿಗಳು ತಕ್ಷಣದಿಂದ ಕಾರ್ಯಪೃವೃತ್ತರಾಗಬೇಕೆಂದು ಶಾಸಕ ಓಲೇಕಾರ ಸೂಚಿಸಿದರು. ಈಬಗ್ಗೆ ಸಾರ್ವಜನರು ನಿಗಾವಹಿಸಬೇಕು, ಎಂಆರ್‌ಪಿದರಕ್ಕಿಂತ ಹೆಚ್ಚಿನ ದರಕ್ಕೆ ತರಕಾರಿ ಹಾಗೂ ದಿನಸಿಗಳನ್ನು ಮಾರಾಟಮಾಡುತ್ತಿರುವುದನ್ನು ಅಧಿಕಾರಿಗಳ ಗಮನಕ್ಕೆ , ತಮ್ಮ ಗಮನಕ್ಕೆ ತಂದರೆ ಅಂತವರಮೇಲೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.