Kourava News

ಪೊಲೀಸ ಅಂತರಾಳದ ಕಾವ್ಯ – ರಾಗರತಿ

ಹಾರುತ್ತಲೇ ಇರಬೇಕು ರೆಕ್ಕೆ ಸೋಲುವ ತನಕ...... ಈಜುತ್ತಲೇ ಇರಬೇಕು ಶಕ್ತಿ ಕುಂದುವ ತನಕ.....

 

ಯಾವುದೆ ಸೃಜನಶೀಲ ಬರವಣಿಗೆ ಇಂತಹ ಕ್ಷೇತ್ರದವರೇ ಬರೆಯಬೇಕೆಂಬ ಕಟ್ಟಪ್ಪಣೆ ಇಲ್ಲ. ಅತ್ಯಂತ ಸೂಕ್ಷ್ಮ ಪ್ರಕಾರವಾದ ಕಾವ್ಯವಂತೂ ಎಲ್ಲರಿಗೂ ದಕ್ಕದ, ಯಾರಿಗಾದರೂ ದಕ್ಕಬಹುದಾದ ಬಲು ಕಷ್ಟದ ಪ್ರಕಾರ. ಅನುಭವಗಳನ್ನು ಜೀರ್ಣಿಸಿಕೊಂಡು, ಅದರ ಪಾಕವನ್ನು ವಿಶೇಷವಾದ ರೀತಿಯಲ್ಲಿ ಪ್ರಸ್ತುತ ಪಡಿಸುವ ಕಾವ್ಯಕಲೆ ಎಲ್ಲರಿಗೂ ಸಿಗುವುದು ಸುಲಭದ ಮಾತಲ್ಲ. ಅಂತರಂಗದ ತುಮಲುಗಳ ಅದಾವ ರೀತಿಯಲ್ಲಿ ರೂಪಕ ಪ್ರತಿಭೆಗಳ ಆಕೃತಿ ಪಡೆದು ಕಾವ್ಯವಾಗುವ ಪರಿ ತುಂಬ ಸೋಜಿಗ.
ರಾಗರತಿ ಎಂಬ ಕವನ ಸಂಕಲನವನ್ನು ಓದಿದಾಗ ನನ್ನೊಳಗೆ ಚರ್ಚೆಗೊಂಡ ವಿಚಾರಗಳಿವು. ಹಿರಿಯ ಪೊಲೀಸ ಅಧಿಕಾರಿ ( ಈಗ ವಿಶ್ರಾಂತರು ) ಪಿ. ಬಿ. ಯಲಿಗಾರರು ರಾಗರತಿ ಕಾವ್ಯದ ಕರ್ತೃ. ಯಾವಾಗಲು ಒತ್ತಡದಲ್ಲಿರುವ ಇಲಾಖೆಯಲ್ಲಿದ್ದು, ಕಾವ್ಯ ರಚನೆಗೆ ಇಳಿದಿದ್ದು ಅಚ್ಚರಿಯೇನಲ್ಲ. ಕಾವ್ಯ ಹುಟ್ಟುವುದೇ ಸಾಮಾಜಿಕ ಒತ್ತಡದಲ್ಲಿ. ಕವಿ ಯಲಿಗಾರವರು ಬಹಳ ಪ್ರ್ರಾಮಾಣಿಕವಾಗಿ ತಮ್ಮೆಲ್ಲ ಅನುಭವಗಳನ್ನು ಕಾವ್ಯ ರೂಪದಲ್ಲಿ ವ್ಯಕ್ತ ಮಾಡಿದ್ದಾರೆ.
ಪ್ರೇಮಲೋಕ – ಎಂಬ ಮೊದಲ ಭಾಗದಲ್ಲಿ ೨೫ ಕವಿತೆಗಳಿವೆ. ಎಲ್ಲವೂ ಪ್ರೀತಿಯ ಹಲವು ಲಯಗಳನ್ನು ಚಿಮ್ಮಿಸಿರುವಂತವು. ಕವಿಯ ತಳಮಳ ವಿಷಾದ, ಆತ್ಮತೃಪ್ತಿ ಹಳಹಳಿಗಳ ನಿರೂಪಿತವು. ಮುನ್ನುಡಿಯನ್ನು ಬರೆದ ಹಿರಿಯ ಕವಿ ಡಾ. ಸರ್ಜೂ ಕಾಟ್ಕರ್ ಹೇಳುವಂತೆ ಇದೊಂದು ಭಾವನಾ ಪ್ರಧಾನ ಕಾವ್ಯ.

ಯಾವ ಕಾಲ, ಯಾವ ಭಾಷೆ
ಯಾವ ರಾಗವಿರಲಿ
ಹೊಮ್ಮಿ ಬರುವ ಭಾವದಲ್ಲಿ
ನೀನು ನೀನೆ ಇರಲಿ

ಭಾವ ಬೆಸುಗೆ – ಎಂಬ ಕವಿತೆಯ ಈ ಚರಣಗಳು ಕವಿಯ ಒಟ್ಟು ಭಾವ ಕೇಂದ್ರ. ಪೂರಕವೆಂಬಂತೆ ಮಗು ನಗು, ನಿನ್ನ ಕಂಡ ದಿನ, ನೆನಪೆನ್ನ ಮನದಾಗ, ಅಮರ ಪ್ರೀತಿ, ಓ ಕಣ್ಣಿರ ಹನಿಗಳೆ ಹಾಗೂ ಮುಖ್ಯ ಕವಿತೆ ರಾಗರತಿ ಓದಬಹುದು.
ಸಂಕಲನದ ಸ್ವಗತ – ಎಂಬ ಎರಡನೆಯ ಭಾಗದಲ್ಲಿ ತಮ್ಮಂತರಂಗದಲ್ಲಿ ಮೂಡಿದ ಸ್ವಗತ ಭಾವಗಳನ್ನು ಕವಿತೆಯಾಗಿಸಿದ್ದಾರೆ.

ಇಂದು ಎಪ್ಪತ್ತಕ್ಕೆ ಮೊದಲಾಯ್ತು
ಆಯುವಿನ ಮುಕ್ಕಾಲು ಆವಿಯಾಯಿತು
ಈ ಸಾಲುಗಳು ಜೀವದಾರಿಯ ಮರು ಅವಲೋಕನ ಮಾಡಿಕೊಳ್ಳುತ್ತ ತನ್ನಂತರಂಗವನ್ನು ಬಿಚ್ಚಿಟ್ಟು ಬರೆದುದು.

ಒಂದು ಅಂತರಂಗ
ಇನ್ನೊಂದು ಬಹಿರಂಗ
ನಿತಂತರದ ಅಂತರವಿದು
ಇದನು ತುಂಬುವುದೆಂತು

ಅಂತರಂಗ ಬಹಿರಂಗಗಳ ನಡುವೆ ಇರುವ ಅಂತರ ಕಾವ್ಯ ತುಂಬುವುದೆ ? ಇದು ಕವಿಯ ತುಮುಲ. ಆತ್ಮಾವಲೋಕನ ಎಂಬ ಇನ್ನೊಂದು ಬಹುಮುಖ್ಯ ಕವಿತೆಯಲ್ಲಿ ಈ ತುಮುಲಕ್ಕೆ ಕವಿ ಉತ್ತರ ಕಂಡುಕೊಂಡಿದ್ದಾರೆ.

ನನ್ನ ಈ ಬದುಕಿನ ದಾರಿಯಿದ್ದರೂ
ದೈವ ತೋರಿದ ನೇರದಾರಿಗಳೆಷ್ಟು ?
ನಾ ಹಿಡಿದ ಕಳ್ಳದಾರಿಗಳೆಷ್ಟು
ವಿಧಿ ತೆರೆದ ಸೀಳ್ಗವಲು ದಾರಿಗಳೆಷ್ಟು ?

ತುಂಬ ಪ್ರಾಮಾಣಿಕವಾಗಿ ಕವಿ ತಾನು ನಡೆದ ದಾರಿಗಳನ್ನು ಅವಲೋಕಿಸಿಕೊಳ್ಳುತ್ತಾರೆ. ಯಾವ ಮುಚ್ಚು ಮರೆಯಿಲ್ಲದೆ ಅಂತರಂಗದ ಭಾವಗಳನ್ನು ತೆರೆದಿಡುವ ಕವಿಯ ಬಗ್ಗೆ ಗೌರವ ಹೆಚ್ಚುತ್ತದೆ. ಜೀವನದ ಅನೇಕ ಮುಖಗಳನ್ನು, ಅನುಭವಗಳನ್ನು ಕಂಡಿರುವ ಕವಿ, ಒಂದು ಸ್ಥಿಮಿಕ್ಕೆ ನಿಂತು ಆಲಯವು, ಬಯಲೊಳಗೋ ಎಂಬ ಕವಿತೆಯ ಮೂಲಕ ಪ್ರಶ್ನಿಸಿಕೊಳ್ಳುತ್ತಾರೆ. ಮಾಗಿದ ಮನಸ್ಸು ಒಂದು ಪ್ರತ್ಯುತ್ತರವನ್ನು ಈ ಕೆಳಗಿನಂತೆ ಕಾಣುತ್ತದೆ.

ಹಾರುತ್ತಲೇ ಇರಬೇಕು
ರೆಕ್ಕೆ ಸೋಲುವ ತನಕ
ಈಜುತ್ತಲೇ ಇರಬೇಕು
ಶಕ್ತಿ ಕುಂದುವ ತನಕ

ವಾಸ್ತವದ ಅರಿವಿನಲ್ಲಿ ಜೀವದರ್ಶನಕ್ಕೆ ಒಂದು ತಾರ್ಕಿಕ ಉತ್ತರಗಳನ್ನು ಕಂಡುಕೊಳ್ಳುವ ಸ್ವಗತ ಭಾಗದ ೧೦ ಕವಿತಗಳು ಪ್ರೇಮಲೋಕ ಭಾಗದ ಕವಿತೆಗಳಿಗಿಂತ ಹೆಚ್ಚು ಮನಸ್ಸಿಗೆ ತಟ್ಟುತ್ತವೆ.
ಪ್ರಾಸಂಗಿಕವೆಂಬ ಮೂರನೆಯ ಭಾಗದಲ್ಲಿರುವ ೮ ಕವಿತೆಗಳು ಬಹಿರ್ಮುಖ ಭಾವದವು. ಎಲ್ಲ ದುಗುಡ ತಳಮಳಗಳಿಂದ ಹೊರಬಂದಿರುವ ರಚಗಳಿವು. ಅನೇಕ ಸಾಮಾಜಿಕ ವಿದ್ಯಮಾನಗಳನ್ನು ಕಾವ್ಯದಲ್ಲಿ ಕಟ್ಟಿಕೊಡುವ ಪ್ರಯತ್ನವಿದೆ. ಸರ್ಜಿಕಲ್ ದಾಳಿ ಎಂಬ ಮೊದಲ ಕವಿತೆ ಸಿದ್ಧ ರೂಪದ ಅರ್ಥಸ್ಥರದಿಂದ ಮೇಲೆದ್ದು, ಅಪ್ಪಿಕೊಳ್ಳಮ್ಮೆ ನೆರೆಹೊರೆಯ ಜೀವಗಳ/ ಕೆಳೆಗಿಳಿಸಿರಿ ಕೈಲಿರುವ ಅಸ್ತ್ರಗಳ – ಎಂಬ ಶಾಂತ ಸಂದೇಶಕ್ಕೆ ಮುಟ್ಟುತ್ತದೆ. ಗುರುಸ್ಮರಣೆ, ಬೆಳಗಾಗು ನೀ, ಕವಿತೆಗಳು ಗಮನ ಸೆಳೆಯುತ್ತವೆ.
ಭಷ್ಪಾಂಜಲಿ – ಎಂಬ ಕೊನೆಯ ಭಾಗದ ೫ ಕವಿತೆಗಳು ತಮ್ಮ ಸಹಜತೆಯಲ್ಲಿಯೇ ಮನಸ್ಸನ್ನು ಕಲಿವಿಲಿಗೊಳಿಸುತ್ತವೆ. ಅಣ್ಣ ಅಕ್ಕ ಕುರಿತಾದ ಕವಿತೆಗಳು ಭಾವ ಪೂರ್ಣವಾಗಿ ಸೆಳೆಯುತ್ತವೆ.

ಹರಿವ ನೀರಿನ ಹರವು ಕಳೆದು
ನೀನಿರದೆ ನಿಂತ ನೀರಾಯ್ತು ಬದುಕು
ಗುರಿ ಇರದ ಬಾನಾಡಿ ಎನಿತು ಸುತ್ತಿದರೇನ
ರೆಕ್ಕೆ ಸೋಲುವ ತನ ಹಾರುತ್ತಲಿರಬೇಕು

ವಿಷಾದ, ವಿವೇಕ ಹಾಗೂ ಕಟುವಾಸ್ತವದಲ್ಲಿ ಸಂಗಾತಿಯ ಅಗಲುವಿಕೆಯನ್ನು ಕವಿ ದಾಖಲಿಸುತ್ತಾರೆ. ಕವಿಯಾದವನು ಬದಲಾದ ಕಾಲದ ಹೆಜ್ಜೆ ಗುರುತುಗಳನ್ನಿ ಅರಿತು, ಅದರ ಜೊತೆಗೆ ಹೆಜ್ಜೆಗಳ ಹಾಕಬೇಕು. ಕವಿ ಯಲಿಗಾರರು ಇದನ್ನರಿತವರು – ಎಂದು ಹೇಳುವ ಸರ್ಜೂ ಕಾಟ್ಕರರ ಮಾತು ಯಲಿಗಾರ ಕಾವ್ಯದ ನಾಡಿ ಬಡಿತಕ್ಕೆ ಸಾಕ್ಷಿಯಾಗಿದೆ.

ಸತೀಶ ಕುಲಕರ್ಣಿ
ಹಿರಿಯ ಸಾಹಿತಿಗಳು, ಹಾವೇರಿ
ಮೊ: ೯೮೪೫೪೦೮೯೩೪