Kourava News

ಬ್ಯಾಡಗಿ ರೈಲ್ವೆ ಗೇಟ್ ಬಳಿ ಅವೈಜ್ಞಾನಿಕ ಹಂಪ್, ಹಂಪ್ ದಾಟಲು ಹರಸಾಹಸ ಪಡುತ್ತಿರುವ ವಾಹನ ಸವಾರರು..!

ನೂತನ ರೈಲ್ವೇ ಗೇಟಿನಲ್ಲಿ ಕಾರುಗಳು ಚಲಿಸದಂತೆ ರಸ್ತೆ ತಡೆ ನಿರ್ಮಾಣ ಮಾಡಿರುವದು.
ಬ್ಯಾಡಗಿ- ಬ್ಯಾಡಗಿ-ಮೋಟೆಬೆನ್ನೂರ ರಸ್ತೆಯಲ್ಲಿರುವ ನೂತನವಾಗಿ ನಿರ್ಮಿಸಿರುವ ರೈಲ್ವೇ ಗೇಟಿನ ರಸ್ತೆಯಲ್ಲಿ ಬಹಳ ದೊಡ್ಡ ದೊಡ್ಡ ರಸ್ತೆ ತಡೆ (ಹಂಪ್) ನಿರ್ಮಾಣ ಮಾಡಿರುವುದಕ್ಕೆ ವಾಹನ ಚಾಲಕರು ಹಾಗೂ ಸಾರ್ವಜನಿಕರು ಅಕ್ಷೇಪ ವ್ಯಕ್ತ ಪಡಿಸಿದ ಘಟನೆಯು ನಡೆಯಿತು.
ಮೊದಲಿದ್ದ ಗೇಟಿನ ಬಳಿ ರೈಲ್ವೇ ಹಳಿಯ ಪಕ್ಕದಲ್ಲಿ ರೈಲ್ವೇ ಇಲಾಖೆಯ ರವಿವಾರ ಕಾಮಗಾರಿ ನಡೆಸುತ್ತಿದ್ದ ಹಿನ್ನಲೆಯಲ್ಲಿ ಮೊದಲಿನ ಗೇಟನ್ನು ಬಂದ್ ಮಾಡಲಾಗಿತ್ತು.
ಮೇಲುಸೇತುವೆ ನಿರ್ಮಾಣಕ್ಕಾಗಿ ಮುಂದೆ ಉಪಯೋಗಕ್ಕೆ ಬರಲಿ ಎಂದು ನಿರ್ಮಿಸಿರುವ ಮತ್ತೊಂದು ಗೇಟಿನ ರಸ್ತೆಯಲ್ಲಿ ವಾಹನಗಳು ಚಲಿಸಲು ಅವಕಾಶ ಮಾಡಲಾಗಿತ್ತು. ಆದರೆ ಈ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ರಸ್ತೆ ತಡೆಗಳನ್ನು ಹಾಕಿದ್ದರಿಂದ ವಾಹನಗಳು ಸರಾಗವಾಗಿ ಚಲಿಸದೆ ಬಹಳ ಕಿರಿ ಕಿರಿ ಉಂಟಾಗಿತ್ತು. ಅದರಲ್ಲೂ ಕಾರುಗಳು ಸರಾಗವಾಗಿ ಚಲಿಸದೆ ಇರುವಂತಹ ರಸ್ತೆ ನಿರ್ಮಾಣ ಆಗಿರುವುದಕ್ಕೆ ಕಾರಿನ ಮಾಲಿಕರು ರೈಲ್ವೇ ಇಲಾಖೆಯ ಈ ಕಾರ್ಯಕ್ಕೆ ತಮ್ಮ ಅಸಹನೆಯನ್ನು ತೋರಿದರು.
ರಾಣೇಬೆನ್ನೂರಿನ ಕಾರಿನ ಮಾಲಿಕ ವಿರೇಶ ಹಿರೇಮಠ ಎಂಬವವರು ಮಾತನಾಡಿ ಲಕ್ಷಾಂತರ ರೂಪಾಯಿಗಳನ್ನು ಕೊಟ್ಟು ಬಹಳ ದುಬಾರಿ ಕಾರುಗಳನ್ನು ಕಾರಿನ ಮಾಲಿಕರು ತಂದಿರುತ್ತಾರೆ. ಆದರೆ ಈ ರಸ್ತೆಯಲ್ಲಿ ಬಹಳ ದೊಡ್ಡ ದೊಡ್ಡ ರಸ್ತೆ ತಡೆಗಳನ್ನು ನಿರ್ಮಿಸಿದ್ದಾರೆ. ಇದರಿಂದ ಕಾರುಗಳ ಇಂಜಿನ್ ಹಾಗೂ ಡಿಸಾಯಿಲ್ ಹಾಗೂ ಪೆಟ್ರೋಲ್ ಟ್ಯಾಂಕುಗಳಿಗೆ ಹಾನಿಯಾಗುತ್ತದೆ. ಇದರಿಂದ ಕಾರಿನ ಮಾಲಿಕರಾದ ತಮ್ಮಂತಹವರಿಗೆ ಕಾರಿಗೆ ನಷ್ಟ ಆಗುವದರೊಂದಿಗೆ ಮಾನಸಿಕ ಕಿರಿಕಿರಿ ಆಗುತ್ತಿದೆ ಎಂದರು. ರೈಲ್ವೇ ಇಲಾಖೆಯವರು ಬಹಳ ದೊಡ್ಡದಾಗಿ ಹಾಕಿರುವ ರಸ್ತೆ ತಡೆಗಳನ್ನು ತೆರವುಗೊಳಿಸಿ ಎಲ್ಲ ವಾಹನಗಳಿಗೆ ತೊಂದರೆ ಆಗದ ರೀತಿಯಲ್ಲಿ ರಸ್ತೆ ನಿರ್ಮಿಸಲು ಕೋರಿದರು.