ಹಾವೇರಿ: ಕೊರೊನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿಗ್ಗಾಂವ ತಾಲೂಕು ಅಂದಲಗಿ ಗ್ರಾಮದ ಮಾವಿನ ಹಣ್ಣಿನ ವ್ಯಾಪಾರಿ ಕೊರೊನಾ ಸೋಂಕಿನಿಂದ ಗುಣಹೊಂದಿ ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾನೆ.
ಜಿಲ್ಲೆಯಲ್ಲಿ ಆರು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈಆರು ಜನರ ಪೈಕಿ ಮೂವರು ಗುಣಮುಖರಾಗಿದ್ದಾರೆ. ಬಾಕಿ ಮೂರು ಜನರಿಗೆ ಚಿಕಿತ್ಸೆ ಮುಂದುವರೆದಿದೆ.
ಮೇ.೨೭ರಂದು ಬಿಡುಗಡೆಯಾದ P-೮೫೩ ವ್ಯಕ್ತಿಯು ಲಾರಿಯಲ್ಲಿ ಮಾವಿನಹಣ್ಣನ್ನು ತುಂಬಿಕೊಂಡು ಮುಂಬೈ ಮಾರುಕಟ್ಟೆಗೆ ಹೊಗಿ ಬಂದ ಪ್ರವಾಸದ ಹಿನ್ನೆಲೆ ಹೊಂದಿದ್ದು, ತಪಾಸಣೆ ಸಂದರ್ಭದಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು (ಮೇ ೧೧ ರಂದು). ೧೪ ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತನ ಅಂತಿಮ ವರದಿ ನೆಗಟಿವ್ ಬಂದ ಹಿನ್ನೆಲೆಯಲ್ಲಿ ಬುಧವಾರ ಬಿಡುಗಡೆಗೊಳಿಸಲಾಯಿತು.
ಸೋಂಕಿನಿಂದ ಗುಣಮುಖನಾದ ಈತನಿಗೆ ಆಸ್ಪತ್ರೆಯ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಗುಲಾಬಿ ಹೂ ನೀಡಿ ಚಪ್ಪಾಳೆ ಮೂಲಕ ಶುಭ ಹಾರೈಸಿ ಮನೆಗೆ ಕಳುಹಿಸಿದರು. ನಿಯಮದಂತೆ ಮುಂದಿನ ೧೪ ದಿವಸ ಗೃಹ ಪ್ರತ್ಯೇಕತೆಯಲ್ಲಿ ನಿಗಾವಹಿಸಲು ಸ್ಥಳೀಯ ವೈದ್ಯಕೀಯ ಸಿಬ್ಬಂದಿಗಳು ಕ್ರಮವಹಿಸಲಿದ್ದಾರೆ.
ಕೋವಿಡ್ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ.ವಿಶ್ವನಾಥ ಸಾಲಿಮಠ ಅವರು ಮಾಧ್ಯಮದವರಿಗೆ ಈ ಕುರಿತಂತೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಆರು ಜನರ ಪೈಕಿ ಮೂವರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇದು ಸಂತಸ ತಂದಿದೆ, ಶೀಘ್ರದಲ್ಲಿಯೇ ಇನ್ನುಳಿದ ಮೂರು ಜನ ಗುಣಮುಖರಾಗುವ ಲಕ್ಷಣಗಳಿವೆ. ಇತ್ತೀಚಿನ ಕೋವಿಡ್ ಸೋಂಕಿತರಿಗೆ ರೋಗದ ಲಕ್ಷಣಗಳು ಕಾಣುತ್ತಿಲ್ಲ ಎಂದು ತಿಳಿಸಿದರು.
ಆರ್.ಎಂ.ಓ ಡಾ. ಸುರೇಶ ಪೂಜಾರ ಅವರು ಮಾತನಾಡಿ, ಕೋವಿಡ್ ರೋಗ ಹರಡದಂತೆ ಪ್ರತಿಯೊಬ್ಬರು ಮುಂಜಾಗ್ರಾತ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಎಲ್ಲರು ಪಾಲಿಸಬೇಕು. ಕೋವಿಡ್ ಸೋಂಕು ಹರಡದಂತೆ ತಡೆಗಟ್ಟುವುದು ಎಲ್ಲರ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಭಾರ ಶೂಶ್ರುಷಾಧಿಕಾರಿ ರಾಜೇಶ್ವರಿ ಭಟ್, ದಾದಿಯರು ಆಸ್ಪತ್ರೆ ಸಿಬ್ಬಂದಿ ಮತ್ತಿತರರು ಹಾಜರಿದ್ದರು.