Kourava News

ಯುವಕರು ಹುತಾತ್ಮ ಭಗತ್ ಸಿಂಗ್ ಮತ್ತವರ ಸಂಗಾತಿಗಳ ಕನಸು ನನಸು ಮಾಡಲು ಮುಂದಾಗಬೇಕು : ಬಸವರಾಜ ಪೂಜಾರ

ಸವಣೂರು: ದೇಶದ ಸ್ವತಂತ್ರ್ಯಕ್ಕಾಗಿ ನಗುತ್ತಲೇ ಪ್ರಾಣಾರ್ಪಣೆಗೈದು ಅಮರವೀರರಾದ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರ ಕನಸುಗಳನ್ನು ನನಸು ಮಾಡಲು ಯುವಜನತೆ ಮುಂದಾಗಬೇಕೆಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಪೂಜಾರ ಕರೆ ನೀಡಿದರು.
ಸವಣೂರು ತಾಲೂಕಿನ ಚವಢಾಳದಲ್ಲಿ ಡಿವೈಎಫ್‌ಐ ಗ್ರಾಮ ಘಟಕವು ಸೋಮವಾರ ಸಂಜೆ ಹಮ್ಮಿಕೊಂಡ ಕ್ರಾಂತಿಕಾರಿಗಳ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹುತಾತ್ಮರ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಿ ಮಾತನಾಡಿದರು.
ಹಸಿವು, ಬಡತನ, ಮನುಷ್ಯರಿಂದ ಮನುಷ್ಯರ ಶೋಷಣೆ ಇಲ್ಲದ ಭಾರತಕ್ಕಾಗಿ ಹೋರಾಡಿ ಕಾಮ್ರೇಡ್ ಭಗತ್ ಸಿಂಗ್, ಸುಖದೇವ್, ರಾಜ್ ಗುರು ಸಾಮ್ರಾಜ್ಯ ಶಾಹಿ ಬ್ರಿಟಿಷರ ನೇಣು ಗಂಭದಲ್ಲಿ ನೇತಾಡಿ ಪ್ರಾಣ ತೆತ್ತ ದಿನ. ಅವರ ತ್ಯಾಗ, ಬಲಿದಾನಗಳನ್ನು ನೆನೆಯುವುದು, ಅವರ ವಿಚಾರ, ಕನಸುಗಳನ್ನು ಅರಿಯುವುದು ಈ ದಿನದ ತುರ್ತು ಕರ್ತವ್ಯವಾಗಿದ್ದು ಅದನ್ನು ಮಾಡಲು ಮುಂದಾಗಬೇಕು ಎಂದರು.
ಕೃತಕವಾಗಿ ಕಟ್ಟಲ್ಪಟ್ಟ ಹುಸಿ ವಿಸ್ಮೃತಿಗಳಿಂದ ಹೊರ ಬಂದು, ಭಗತ್ ಸಿಂಗ್ ರಂತಹ ಕ್ರಾಂತಿಕಾರಿಗಳು ತೋರಿದ ದಿಕ್ಕಿನಲ್ಲಿ ಮುನ್ನಡೆಯೋಣ. ಜಾತಿ, ಧರ್ಮ, ವರ್ಣ, ವರ್ಗ ತಾರತಮ್ಯಗಳಿಲ್ಲದ ಹೊಸ ಭಾರತ ಕಟ್ಟೋಣ, ಆ ಮೂಲಕ ಮುಂದಿನ ಪೀಳಿಗೆಗೆ ಸಮಾನ ಅವಕಾಶಗಳು ಸಿಗುವ ಭಾರತವನ್ನು ಉಳಿಸೋಣವೆಂದರು.
ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮರಣಾರ್ಥ ಮೇಣದ ಬತ್ತಿ ಬೆಳಗಿ, ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವನಮನಗಳನ್ನು ಸಲ್ಲಿಸಲಾಯ್ತು.
ಕಾರ್ಯಕ್ರಮದಲ್ಲಿ ಸಮುದಾಯ ಸಾಹಿತ್ಯ ಜಿಲ್ಲಾ ಮುಖಂಡರಾದ ಸುಭಾಸ್.ಎಂ, ಎಸ್‌ಎಫ್‌ಐ ಜಿಲ್ಲಾ ಉಪಾಧ್ಯಕ್ಷ ಬಸನಗೌಡ ಭರಮಗೌಡ, ಗ್ರಾಮ ಪಂಚಾಯತಿ ಸದಸ್ಯರಾದ ನಿಂಗಪ್ಪ ಗೌಳೇರ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮಂಜುನಾಥ ಸೂರಣಗಿ, ಗ್ರಾಮದ ಮುಖಂಡರಾದ ಕುಮಾರ ಯಲವಿಗಿ, ಮಲ್ಲಪ್ಪ ವಾಲೀಕಾರ, ಈಶ್ವರ ಬಡೀಗೇರ, ದೇವಪ್ಪ ಕಂಠಿ, ಡಿವೈಎಫ್‌ಐ ಚವಢಾಳ ಗ್ರಾಮ ಘಟಕದ ಅಧ್ಯಕ್ಷರಾದ ಚಂದ್ರು ಬಿದರಗಡ್ಡಿ, ಕಾರ್ಯದರ್ಶಿ ಸಚಿನ ಸೂರಣಗಿ, ನಾರಾಯಣ ಬಡಿಗೇರ, ಮೌನೇಶ ಕಮ್ಮಾರ, ನಾಗಪ್ಪ ವಾಲೀಕಾರ, ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮದ ಯುವಕರು, ಹಿರಿಯರು ಪಾಲ್ಗೊಂಡಿದ್ದರು.