Kourava News

ವಿಷ ವಿಶಾಖೆ…………..ಕವಿತೆ

ಕರುಣಾಳು ಬುದ್ಧ, ಬುದ್ಧ ಪೂರ್ಣೆಮೆಯ ದಿನ ಬೆಂದಿರಬಹುದು.

ವಿಷ ವಿಶಾಖೆ

ನನ್ನ
ಕರುಳನೆ
ಕೊಚ್ಚುತಿರುವೆ
ಎದೆಕೊಡ್ಡದ ಮೇಲೆ

ಅಂಗಳಾಡುವ
ಮರಿ ಕುಡಿಗಳು
ಉರುಳುರುಳಿ ಬೀಳುವಾಗ

ಕಕ್ಕುತಿದೆ, ವಿಷ ವಿಶಾಖೆ.

ಎದೆ
ರಣ ಹಲಗೆ ಢಮಗುಡುಗುತಿದೆ,
ಹೊತ್ತೊಯ್ಯುತಿದೆ
ಮಸಣದಾಹುತಿಗೆ
ಮಾಸದ ಮುದ್ದೆಗಳ.

ಕರುಣಾಳು
ಬುದ್ಧ,
ಬುದ್ಧ ಪೂರ್ಣೆಮೆಯ ದಿನ
ಬೆಂದಿರಬಹುದು.

ಸಾವಿಲ್ಲದ ಮನೆಯ
ಸಾಸಿವೆಯ
ತರಲು
ಹೊರಟಿರಬಹುದು

ಕರುಣೆಯಿಲ್ಲದ ಕಾಲ ಹಾದಿಯಲಿ

ಸತೀಶ ಕುಲಕರ್ಣಿ, ಹಿರಿಯ ಸಾಹಿತಿಗಳು, ಹಾವೇರಿ.