Kourava News

ಸುಪ್ರೀಂ ತೀರ್ಪಿನ ಅನ್ವಯ ಎಸ್‌ಸಿ ಪಟ್ಟಿಯಿಂದ ಲಂಬಾಣಿ, ಭೋವಿ, ಕೊರಚ, ಕೊರಮ ಜಾತಿಗಳ ಕೈಬಿಡಲು ನ್ಯಾಯವಾದಿ ಹೊನ್ನಪ್ಪನವರ ಆಗ್ರಹ


ಹಾವೇರಿ: ಎಸ್‌ಸಿ ಪಟ್ಟಿಯಿಂದ ಲಂಬಾಣಿ, ಬೋವಿ, ಕೊರಚ ಹಾಗೂ ಕೊರಮ ಜಾತಿಗಳನ್ನು ಕೈಬಿಡುವುದಕ್ಕೆ ಸಂಬಂಧಿಸಿದಂತೆ ಸುಪ್ರೀ ಕೋರ್ಟ್ ೧೪-೦೨-೨೦೨೦ರಂದು ರಿಟ್ ಪಿಟಿಶೆನ್(ಸಿವಿಲ್ ನಂ೧೩೮೧/೧೯) ನೇದ್ದರಲ್ಲಿಯ ನೀಡಿದ ತೀರ್ಪಿನ ಅನ್ವಯ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು ವರದಿ ನೀಡುವಂತೆ ಆದೇಶ ನೀಡಿದೆ ಎಂದು ಆದಿ ಜಾಂಬವ(ಮಾದಿಗರ) ಜಿಲ್ಲಾ ನೌಕರರ ಸಂಘದ ಕಾನೂನು ಸಲಹೆಗಾರರು ಹಾಗೂ ನ್ಯಾಯವಾದಿಗಳಾದ ಎಸ್.ಜಿ.ಹೊನ್ನಪ್ಪನವರ ತಿಳಿಸಿದ್ದಾರೆ.
ಈ ಬಗ್ಗೆ ರಾಯಚೂರಿನ ಮಹೇಂದ್ರಕುಮಾರ ಮಿತ್ರ, ನ್ಯಾಯವಾದಿ ದೇವ ಮಿತ್ರ ಹಾಗೂ ಮರಗೌಡನಹಳ್ಳಿಯ ಸಿ.ಎಮ್.ಕೃಷ್ಣಾ, ಮದ್ದರಕಿ ಗ್ರಾಮದ ಮಾರುತಿರಾವ್ ಜಂಬಗಾ ಅವರುಗಳು ಸರ್ವೋಚ್ಚನ್ಯಾಯಾಲಯದಲ್ಲಿ ಈನಾಲ್ಕು ಜಾತಿಗಳನ್ನು ಎಸ್ಸಿ ಪಟ್ಟಿಯಿಂದ ಕೈಬಿಡಲು ಪ್ರಕರಣ ದಾಖಲಿಸಿದ್ದರು. ಸರ್ವೋಚ್ಚ ನ್ಯಾಯಾಲಯದ ಆದೇಶದ ಅನ್ವಯ ಸದರಿಯವರು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ಮನವಿ ಸಲ್ಲಿಸಿ ಇದರನ್ವಯ ಆಯೋಗವು ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದೆ.
ಈಗಾಗಲೇ ತೆಲಂಗಾಣ ರಾಜ್ಯದಲ್ಲಿ ಲಂಬಾಣಿ ಸಮುದಾಯವನ್ನು ಎಸ್‌ಟಿ ಪಟ್ಟಿಯಿಂದ ತಗೆದು ಹಾಕಿ ಎಂದು ರಾಷ್ಟ್ರೀಯ ಬುಡಕಟ್ಟು ಅಭಿವೃದ್ಧಿ ಇಲಾಖೆಗೆ ಆದೇಶ ಹೊರಡಿಸಿದೆ. ಅದೇ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿಯು ಬಂಜಾರ/ಲಂಬಾಣಿ, ಬೋವಿ/ ಕೊರಚ/ ಕೊರಮ ಜಾತಿಗಳನ್ನು ತಗೆದುಹಾಕಲು ಹೋರಾಟವನ್ನು ರೂಪಿಸಲಾಗುತ್ತಿದೆ ಎಂದು ಎಸ್.ಜಿ. ಹೊನ್ನಪ್ಪನವರ ತಿಳಿಸಿದ್ದಾರೆ .
೧೯೩೫ರಲ್ಲಿ ಬ್ರಿಟಿಷ್ ಇಂಡಿಯಾ ಸರ್ಕಾರವು ದೇಶದ ಸಮಸ್ತ ಅಸ್ಪ್ರಶ್ಯ ಜನಾಂಗವನ್ನು ಪರಿಶಿಷ್ಟ ಜಾತಿ ಎಂದು ನಾಮಕರಣ ಮಾಡಿದ್ದು, ದೇಶದಲ್ಲಿದ್ದ ೯ಪ್ರಾಂತಗಳಲ್ಲಿ ಪರಿಶಿಷ್ಟ ಜಾತಿಗಳ ಪಟ್ಟಿ ತಯಾರಿಸಲಾಗಿತ್ತು. ಮದ್ರಾಸ ಪ್ರಾಂತ ಭಾಗವಾಗಿದ್ದ ಮೈಸೂರು ರಾಜ್ಯದ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಬಂಜಾರ, ಬೋವಿ, ಕೊರಚ ಮತ್ತು ಕೊರಮ ಜಾತಿಗಳು ಇರಲಿಲ್ಲ.
೧೯೩೬ರ ಪರಿಶಿಷ್ಟ ಜಾತಿಯ ಪಟ್ಟಿಯನ್ನು ಡಾ.ಬಿ.ಆರ್.ಅಂಬೇಡ್ಕರ ಅವರು ಪರಿಪೂರ್ಣ ಮತ್ತು ಅಧಿಕೃತ ಎಂದು ಘೋಷಣೆಮಾಡಿದ್ದಾರೆ. ೧೯೪೯ರಲ್ಲಿ ಅನುಚ್ಛೇದ ೩೪೧ನ್ನು ಸಂವಿಧಾನದ ವ್ಯಾಪ್ತಿಗೆ ಸೇರ್ಪಡೆ ಮಾಡುವಾಗಲೂ ಯಾರೂ ಅಸ್ಪ್ರಶ್ಯರೋ, ಸಾಮಾಜಿಕವಾಗಿ ತುಳಿತಕ್ಕೆ ಒಳಗಾಗಿದ್ದವರು ಮತ್ತು ಯಾರೂ ಹಿಂದು ಧರ್ಮಪಾಲನೆ ಮಾಡುತ್ತಾರೋ ಅವರೆಲ್ಲ ಪರಿಶಿಷ್ಟ ಜಾತಿ ಎಂದು ಘೋಷಿಸಿದ್ದಾರೆ ಎಂದು ಹೊನ್ನಪ್ಪನವರ ತಿಳಿಸಿದ್ದಾರೆ.
೧೯೫೦ ರಲ್ಲಿ ಮೈಸೂರು ರಾಜ್ಯದ ಪ್ರಮುಖರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ ಅವರು ಈ ನಾಲ್ಕು ಬಂಜಾರ/ಲಂಬಾಣಿ, ಬೋವಿ/ ಕೊರಚ/ ಕೊರಮ ಸವರ್ಣೀಯ ಜಾತಿಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರ್ಪಡೆ ಮಾಡಿದರು. ಅನೇಕ ಕಾರಣಗಳಿಂದಾಗಿ ಅಂದಿನ ಪ್ರಮುಖರು ಇದನ್ನು ವಿರೋಧಿಸಲಿಲ್ಲ.
ಈಹೋರಾಟಕ್ಕೆ ಸುದೀರ್ಘ ಇತಿಹಾಸವಿದೆ. ೧೯೬೫ ರಲ್ಲಿ ಈಸಮಸ್ಯೆ ಇಟ್ಟುಕೊಂಡು ಮೈಸೂರಿನ ಹರಿಜನ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಮುನಿಸ್ವಾಮಿ ಅರ್ಜಿಸಲ್ಲಿಸಿದ್ದರು. ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸರ್ಕಾರವಿದ್ದಾಗ ೧೯೩೫ರಲ್ಲಿ ಮೊದಲಬಾರಿಗೆ ಅಂದಿನ ಸಂವಿಧಾನದಲ್ಲಿ ಎಸ್‌ಸಿ, ಎಸ್ಟಿ ಪದ ಶೇರ್ಪಡೆಯಾಗಿ ಬಳಕೆ ಆರಂಭವಾಯಿತು, ಅದಕ್ಕು ಮೊದಲು ಬೇರೆ ಬೇರೆ ಪದಗಳು ದಲಿತರಿಗೆ ಬಳಕೆಯಾಗುತ್ತಿದ್ದವು. ಅವುಗಳ ಪೈಕಿ ಚಂಡಾಲ, ಬಹ್ಯ, ಆವರ್ಣ, ಅಂತ್ಯಜ, ನಿಮ್ನ ವರ್ಗವೆಂದು ಇದ್ದವು, ನಂತರ ಗಾಂಧಿಯವರಿಂದಾಗಿ ಹರಿಜನ ಪದ ಬೆಳಕೆಯಲ್ಲಿದ್ದವು.
ನಂvರ ೧೭-೦೯-೧೯೪೯ರಲ್ಲಿ ಸಂವಿಧಾನ ಅನುಚ್ಛೇದ ೩೪೧ನ್ನು ಸೇರ್ಪಡೆ ಮಾಡುವಾಗ ಯಾರು ಅಸ್ಪ್ರಶ್ಯರು ತುಳಿತಕ್ಕೆಒಳಗಾಗಿರುವವರೋ ಮತ್ತು ಯಾರೂ ಹಿಂದು ಧರ್ಮಪಾಲನೆ ಮಾಡುತ್ತಾರೋ ಅವರೆಲ್ಲ ಪರಿಶಿಷ್ಟ ಜಾತಿ ಎಂದು ಸ್ಪಷ್ಟವಾಗಿ ಹೇಳಲ್ಪಟ್ಟಿತು. ಆದರೆ ೧೦-೦೧-೧೯೫೦ರಲ್ಲಿ ಅಂದಿನ ಮೈಸೂರು ರಾಜ್ಯದ ಪ್ರಮುಖರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ , ಅಸ್ಪ್ರಶ್ಯಜಾತಿಗಳಾದ ಆದಿ ದ್ರಾವಿಡ, ಆದಿ ಕರ್ನಾಟಕದ ಜೊತಗೆ ಸ್ಪರ್ಶಜಾತಿಗಳಾದ ಬಂಜಾರ/ಲಂಬಾಣಿ, ಬೋವಿ/ ಕೊರಚ/ ಕೊರಮ ಸೇರಿ ಒಟ್ಟು ೬ಜಾತಿಗಳನ್ನು ಎಸ್‌ಸಿಗೆ ಪಟ್ಟಿಗೆ ಸೇರಿಸುವಂತೆ ಶಿಫಾರಸು ಮಾಡಿದರು.
ಆದರೆ, ಯಾರ ಆಕ್ಷೇಪಣೆಯನ್ನು ಕೇಳದೆ ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ ಅನುಚ್ಛೇದ ೩೪೧ನ್ನು ಉಂಲ್ಲಂಘಿಸಿ ೪ ಸವರ್ಣಿಯ ಜಾತಿಗಳನ್ನು ಎಸ್ಸಿಗೆ ಸೇರಿಸಿ ಅಧಿಸೂಚನೆ ಹೊರಡಿಸಿದರು. ೧೯೭೮ರಲ್ಲಿ ಕರ್ನಾಟಕದಲ್ಲಿ ಬಂಜಾರ/ಲಂಬಾಣಿ, ಬೋವಿ/ ಕೊರಚ/ ಕೊರಮ ಈಜಾತಿಗಳನ್ನು ಪರಿಶಿಷ್ಟಜಾತಿಗಳೆಂದು ಪರಿಗಣಿಸಲಾಯಿತು.(ಈಮೊದಲು ಈನಾಲ್ಕುಜಾತಿಗಳನ್ನು ಹಿಂದುಳಿದ ವರ್ಗಗಗಳೆಂದು ಕರೆಯುತ್ತಿದ್ದರು). ಕರ್ನಾಟಕ ರಾಜ್ಯವನ್ನು ಹೊರತು ಪಡಿಸಿ ಈಮೇಲ್ಕಾಣಿಸಿದ ನಾಲ್ಕು ಜಾತಿಗಳನ್ನು ಪರಿಶಿಷ್ಟಜಾತಿ ಎಂದು ಪರಿಗಣಿಸಿರುವುದಿಲ್ಲ.
೨೭-೦೩-೧೯೮೦ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಆರ್.ಗುಂಡುರಾವ್ ರಾಜ್ಯದಲ್ಲಿ ಸಮಾನಾರ್ಥಕ ಜಾತಿಗಳ ಪಟ್ಟಿಯೊಂದನ್ನು ಪ್ರಕಟಿಸಿದರು. ಇದರಲ್ಲಿ ಕೇಂದ್ರ ಸರ್ಕಾರದ ಅಧಿಸೂಚನೆ ಇಟ್ಟುಕೊಂಡು ಈನಾಲ್ಕು ಜಾತಿಗಳನ್ನು ಸೇರ್ಪಡೆ ಮಾಡಿ ಪ್ರಕಟಿಸಿದರು. ಇದಾದ ನಂತರ ಕಳೆದ ೦೫-೦೨- ೨೦೧೪ರಲ್ಲಿ ಕೇಂದ್ರದ ಮಂತ್ರಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಸಹ ಭೋವಿ ವಡ್ಡರು, ಲಂಬಾಣಿಗರನ್ನು ಅಲ್ಲದೇ ಇನ್ನಿತರ ಜಾತಿಗಳನ್ನು ಪರಿಶಿಷ್ಟ ಜಾತಿಗಳು ಎಂದು ಹೇಳಿ ಸೇರ್ಪಡೆ ಮಾಡಲು ಅಂಕಿತ ಹಾಕಿದ್ದರು ಎಂದು ಹೊನ್ನಪ್ಪನವರ ಆರೋಪಿಸಿದ್ದಾರೆ.
ಕಳೆದ ೭೦ ವರ್ಷಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಇದೀಗ ನಮಗೆ ಜಯ ಸಿಕ್ಕಿದೆ. ಸುಪ್ರೀಂ ಕೋರ್ಟ ರಾಷ್ಟ್ರೀಯ ಪರಿಶಿಷ್ಟಜಾತಿಗಳ ಆಯೋಗಕ್ಕೆ ನಿರ್ದೇಶನ ನೀಡಿದೆ . ಎಸ್‌ಸಿ ಪಟ್ಟಿಯಿಂದ ಲಂಬಾಣಿ, ಬೋವಿ, ಕೊರಚ ಹಾಗೂ ಕೊರಮ ಜಾತಿಗಳನ್ನು ಕೈಬಿಡುವುದಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು ನಿರ್ದೇಶನ ನೀಡಿದೆ. ಈಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರವನ್ನು ನ್ಯಾಯವಾದಿ ಎಸ್.ಜಿ.ಹೊನ್ನಪ್ಪನವರ ಆಗ್ರಹಿಸಿದ್ದಾರೆ.