Kourava News

ಹಾವೇರಿ ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನ

ಪ್ರತಿ ಮನೆಗೂ ನಳದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ: ಪಂಚಾಯತ್ ಅಧ್ಯಕ್ಷ ಬಸನಗೌಡ ದೇಸಾಯಿ

ಹಾವೇರಿ: ಮನೆ ಮನೆಗೆ ಗಂಗೆ ಯೋಜನೆಯಡಿ (ಕೇಂದ್ರ ಜಲಜೀವನ್ ಮಿಷನ್) ಜಿಲ್ಲೆಯ ಪ್ರತಿ ಮನೆಗೂ ನಳದ ಮೂಲಕ ಶುದ್ಧ ನೀರು ಪೂರೈಸುವ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಸನಗೌಡ ದೇಸಾಯಿ ಅವರು ತಿಳಿಸಿದರು.
ಪಂಚಾಯತ್ ರಾಜ್‌ನ ನೀರು ಮತ್ತು ನೈರ್ಮಲ್ಯ ಅಭಿಯಂತರರ ಕಾರ್ಯಾಲಯದಲ್ಲಿ ಮಂಗಳವಾರ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಲಜೀವನ್ ಮಿಷನ್ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆಗೆ ಸಲ್ಲಿಸಲಾಗುತ್ತಿದೆ. ಮುಂದಿನ ನಾಲ್ಕು ವರ್ಷದ ಅವಧಿಯಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ಈ ವರ್ಷದಿಂದಲೇ ಈ ಯೋಜನೆ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ ಅವರು ಮಾತನಾಡಿ, ಮನೆ ಮನೆಗೆ ಗಂಗೆ ಯೋಜನೆ ಜನರಿಗೆ ಶುದ್ಧ ನೀರನ್ನು ಪೂರೈಸುವ ಉದ್ದೇಶ ಹೊಂದಲಾಗಿದೆ. ಪ್ರತಿ ಹಳ್ಳಿಯ ಪ್ರತಿ ಮನೆಗೂ ಶುದ್ಧ ನೀರು ದೊರಕಬೇಕು. ನೀರಿನ ಮಿತಬಳಕೆ, ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆಯುವುದು, ಪ್ರತಿ ಹನಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವುದು, ನೀರು ಕಲುಷಿತಗೊಳ್ಳದಂತೆ ನಿರ್ವಹಣೆ ಮಾಡಿ ಪ್ರತಿ ವ್ಯಕ್ತಿಗೂ ಶುದ್ಧ ನೀರು ಪೂರೈಸುವ ಯೋಜನೆ ಇದಾಗಿದೆ ಎಂದು ತಿಳಿಸಿದರು.
ಪ್ರತಿ ವ್ಯಕ್ತಿಗೆ ಪ್ರತಿದಿನ ೫೫ ಲೀಟರ್‌ನಂತೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶ ಹೊಂದಲಾಗಿದ್ದು, ಪ್ರತಿ ಗ್ರಾಮದ ಜನಸಂಖ್ಯೆ ಹಾಗೂ ನೀರಿನ ಪ್ರಮಾಣ ಆಧರಿಸಿ ಮೊದಲ ಹಂತದಲ್ಲಿ ಸಂಪರ್ಕ ಕಲ್ಪಿಸಲಾಗುವುದು. ಜನಸಂಖ್ಯೆ ಆಧರಿಸಿ ಕಡಿಮೆ ನೀರಿನ ಮೂಲಗಳಿರುವ ಗ್ರಾಮಗಳಲ್ಲಿ ಜಲಶೇಖರಣೆ ಕಾಮಗಾರಿಗಳನ್ನು ಕೈಗೊಂಡು ಹಂತ ಹಂತವಾಗಿ ಮನೆ ಮನೆಗೆ ಸಂಪರ್ಕ ಕಲ್ಪಿಸುವ ಕಾರ್ಯ ಕೈಗೊಳ್ಳಲಾಗುವುದು. ಈಗಾಗಲೇ ಈ ಕುರಿತಂತೆ ಎಲ್ಲರೊಂದಿಗೆ ಚರ್ಚಿಸಲಾಗಿದೆ. ಎಲ್ಲರ ಸಲಹೆಗಳನ್ನು ಪಡೆದು ಅನುಷ್ಠಾನಗೊಳಿಸಲಾಗುತ್ತದೆ. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಶೇ.೪೫ ರಷ್ಟು ಹಾಗೂ ರಾಜ್ಯ ಸರ್ಕಾರದಿಂದ ಶೇ.೪೫ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಶೇ.೧೦ರಷ್ಟು ಅನುದಾನದ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ತಿಳಿಸಿದರು.
ಮೊದಲ ವರ್ಷದಲ್ಲಿ ೧೦೦ಕ್ಕೆ ೫೦ ಗ್ರಾಮಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ ನೀರಿನ ಸಂಪನ್ಮೂಲ ಕಡಿಮೆ ಇರುವೆಡೆಗಳಲ್ಲಿ ನದಿ ನೀರು ಇತರೆ ಮೂಲಗಳಿಂದ ಪೈಪ್‌ಲೈನ್ ಮೂಲಕ ಹಾಗೂ ವೋವರ್ ಹೆಡ್ ಟ್ಯಾಂಕ್ ಮೂಲಕ ಸಂಗ್ರಹಿಸಿ ಗ್ರಾಮಗಳಿಗೆ ಪೂರೈಸಲಾಗುವುದು. ಈ ಕಾರ್ಯ ನಿರಂತರವಾಗಿ ನಡೆಯಲಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಜಿಲ್ಲೆಯಲ್ಲಿ ತ್ವರಿತವಾಗಿ ಯೋಜನೆಯನ್ನು ಅನುಷ್ಠಾನಕ್ಕೆ ತಂದು ಗರಿಷ್ಠ ಪ್ರಮಾಣದಲ್ಲಿ ಅನುದಾನವನ್ನು ಜಿಲ್ಲೆಗೆ ಪಡೆಯುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಅತ್ತಾವರ ಹಾಗೂ ವಿವಿಧ ವಿಭಾಗೀಯ ಅಭಿಯಂತರರು, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.