Kourava News

breaking news ಮುಂಬೈಯಿಂದ ಸವಣೂರಿಗೆ ಬಂದಿದ್ದ ಎರಡನೆ ವ್ಯಕ್ತಿಗೂ ಕೋವಿಡ್-೧೯, ಹಾವೇರಿ ಜಿಲ್ಲೆಯಲ್ಲಿ ಎರಡೆ ದಿನಕ್ಕೆ ೨ ಪ್ರಕರಣಗಳು ಪತ್ತೆ

ಜಿಲ್ಲಾಧಿಕಾರಿ ಗಳು ಎರಡನೆಯ ವ್ಯಕ್ತಿ ಗೆ ಕೋವಿಡ್-೧೯ ಇರುವ ಬಗ್ಗೆ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ.

ಹಾವೇರಿ: ಮುಂಬೈಯಿಂದ ಲಾರಿಯಲ್ಲಿ ಜಿಲ್ಲೆಯ ಸವಣೂರಿಗೆ ಬಂದಿದ್ದ ಮೂವರಲ್ಲಿ ಮೇ.೪ರಂದು ೩೨ವರ್ಷದ ಓರ್ವವ್ಯಕ್ತಿಗೆ ಕೋವಿಡ್-೧೯ ಇರುವುದು ಲ್ಯಾಬ್ ವರದಿಯಿಂದ ದೃಢಪಟ್ಟಿತ್ತು. ಇದೀಗ ಮುಂಬೈಯಿಂದ ಬಂದಿದ್ದ ಮತ್ತೊಬ್ಬ ವ್ಯಕ್ತಿಗೆ ಕೋವಿಡ್-೧೯ಸೋಂಕು ಇರುವುದು ಮೇ.೫ರಂದು ಲ್ಯಾಬ್ ವರದಿ ದ್ರಢಪಡಿಸಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಎರಡೆದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಎರಡಕ್ಕೇರಿದೆ.
ಮೇ.೪ರಂದು ಕೋವಿಡ್-೧೯ ದೃಢಪಟ್ಟಿದ್ದ ೩೨ ವರ್ಷದ ವ್ಯಕ್ತಿಯ ಅಣ್ಣ ೪೦ ವರ್ಷದ ವ್ಯಕ್ತಿಗೆ ಮೇ.೫ರಂದು ಮಂಗಳವಾರ ಕೋವಿಡ್-೧೯ ದೃಢಪಟ್ಟಿದೆ. ಏಪ್ರೀಲ್ ೨೮, ೨೦೨೦ರಂದು ಮುಂಬೈನಿಂದ ಸವಣೂರಿಗೆ ಬಂದಿದ್ದ ಸೋಂಕಿತನಿಗೆ ಸೋಂಕು ದೃಢಪಟ್ಟಿದ್ದ ಪಿ-೬೩೯ ಸಂಖ್ಯೆಯ ಪೇಶಂಟ್ ಸಂಪರ್ಕದಲ್ಲಿದ್ದ ರೋಗಿಯ ೪೦ ವರ್ಷದ ಅಣ್ಣನಿಗೆ ಕೋವಿಡ್-೧೯ ಇರುವುದನ್ನು ಪಿ-೬೭೩ ಲ್ಯಾಬ್ ದ್ರಢಪಡಿಸಿದೆ.
ಮುಂಬೈನಿಂದ ಲಾರಿಯಲ್ಲಿ ಬಂದಿದ್ದ ಮೂವರಲ್ಲಿ ಅಣ್ಣ ಮತ್ತು ತಮ್ಮನಲ್ಲಿ ಕೋವಿಡ್ ದೃಢಪಟ್ಟಿದ್ದು ಇನ್ನೊಬ್ಬನ ವರದಿಗಾಗಿ ಆರೋಗ್ಯ ಇಲಾಖೆ ಕಾಯುತ್ತಿದೆ. ಮುಂಬೈಯಿಂದ ಸವಣೂರಿಗೆ ಬಂದಿದ್ದ ಸೋಂಕಿತರು ಓಡಾಡಿದ ಪ್ರದೇಶದಲ್ಲಿನ ೩೯ಕ್ಕೂ ಅಧಿಕ ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಇವರ ಲ್ಯಾಬ್ ಪರೀಕ್ಷಾವರದಿ ಬರಬೇಕಿದೆ.
ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರ ಪರದಾಟ:
ಸೋಂಕಿತರು ಓಡಾಡಿದ ಪ್ರದೇಶದಲ್ಲಿ ಓಡಾಡಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಸವಣೂರು ಪಟ್ಟಣದ ಹೊಟೇಲ್ ನಲ್ಲಿ ಕ್ವಾರಂಟೈನ್‌ನಲ್ಲಿರಿಸಲಾಗಿದ್ದು ಇವರು ಮೂಲಸೌಲಭ್ಯಗಳಿಲ್ಲದೇ ಪರದಾಡುತ್ತಿದ್ದಾರೆ. ಕುಡಿಯುವ ನೀರು, ಊಟ-ಉಪಹಾರ ಇಲ್ಲದೆ ಇವರು ಪರದಾಡುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
ಕೊರೊನಾ ಸೋಂಕಿತ ರೋಗಿ ಸಂಖ್ಯೆ ಪಿ ೬೩೯ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದರಿಂದ ಕ್ವಾರಂಟೈನ್‌ನಲ್ಲಿರುವ ಓರ್ವ ಆಶಾ ಕಾರ್ಯಕರ್ತೆ, ಓರ್ವ ಸ್ಟಾಪ್ ನರ್ಸ್, ಓರ್ವ ಲ್ಯಾಬ್ ಟೆಕ್ನಿಷಿಯನ್ ಸೇರಿ ಮೂವರು ಪರದಾಡುತ್ತಿದ್ದಾರೆಂದು , ಸಿಬ್ಬಂದಿಗೆ ಯಾವ ಸೌಲಭ್ಯಗಳನ್ನು ಜಿಲ್ಲಾಡಳಿತವಾಗಲಿ, ತಾಲೂಕಾ ಆಡಳಿತವಾಗಲಿ ಕಲ್ಪಿಸಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ.
ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಆರೋಗ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಮತ್ತು ಓರ್ವ ಆಶಾ ಕಾರ್ಯಕರ್ತೆಗೆ ಕುಡಿಯುವ ನೀರು, ತಿಂಡಿ, ಊಟ ಸಿಗದೆ ಪರದಾಡುತ್ತಿದ್ದಾರೆ. ಜಿಲ್ಲಾಡಳಿತ ಮೇ.೫ ಸೋಮವಾರದಿಂದ ಪಟ್ಟಣದ ಖಾಸಗಿ ಹೊಟೇಲ್ ನಲ್ಲಿ ಇವರನ್ನು ಕ್ವಾರಂಟೈನ್ ಮಾಡಿದೆ. ಕೊರೊನಾ ವಾರಿಯರ್ಸ್‌ಗಳನ್ನು ಕ್ವಾರಂಟೈನ್ ಮಾಡಿದ್ದು ಬಿಟ್ಟರೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳು ಈವರೆಗೂ ಯಾವುದೇ ಸೌಲಭ್ಯ ಕಲ್ಪಿಸಿಲ್ಲ.
ನಮ್ಮನ್ನ ಕ್ವಾರಂಟೈನ್ ಮಾಡಿದ್ದು ಬಿಟ್ಟರೆ ನಮಗೆ ಕುಡಿಯುವ ನೀರು, ಉಪಹಾರ , ಊಟ ಕೊಟ್ಟಿಲ್ಲ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಸವಣೂರು ಸೀಲ್‌ಡೌನ್ ಪ್ರದೇಶಕ್ಕೆ ಡಿಸಿ ಭಾಜಪೇಯಿ ಭೇಟಿ ;

 

ಈಮಧ್ಯೆ ಜಿಲ್ಲೆಯ ಸವಣೂರಿನಲ್ಲಿ ವ್ಯಕ್ತಿಯೋರ್ವನಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾದ ಹಿನ್ನಲೆಯಲ್ಲಿ ಮೇ.೫ರಂದು ಮಂಗಳವಾರ ಸವಣೂರಿನ ಸೀಲ್‌ಡೌನ್ ಪ್ರದೇಶಕ್ಕೆ ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಜಿಲ್ಲಾ ಪೊಲೀಸ್ ವಿರಿಷ್ಠಾಧಿಕಾರಿ ಕೆ.ಜಿ.ದೇವರಾಜ್ ಹಾಗೂ ಎಡಿಸಿ ಯೋಗೇಶ್ವರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಗಳ ಭೇಟಿ ವೇಳೆ ಸ್ಥಳೀಯರು ಹಾಲು ನೀರಿನ ಕೊರತೆ ಕುರಿತಂತೆ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಎಡಿಸಿ ನೇತೃತ್ವದ ತಂಡ ಸ್ಥಳೀಯರ ಸಮಸ್ಯೆಗೆ ಸ್ಪಂದಿಸಿ ಹಾಲು ವಿತರಣೆ ಮಾಡಿದೆ.