Kourava News

ಅರ್ಹ ಪ್ರತಿಭಾವಂತ ಅಭ್ಯರ್ಥಿಗಳಿಗೆ ಉದ್ಯೋಗ ನೀಡಬೇಕು -ಸಚಿವ ಜಮೀರ ಅಹ್ಮದ ಖಾನ್

ಅರ್ಹ ಪ್ರತಿಭಾವಂತ ಅಭ್ಯರ್ಥಿಗಳಿಗೆ ಉದ್ಯೋಗ ನೀಡಬೇಕು
-ಸಚಿವ ಜಮೀರ ಅಹ್ಮದ ಖಾನ್
ಹಾವೇರಿ: ಜ.೨೫: ಜಿಲ್ಲೆಯ ನಿರುದ್ಯೋಗಿ ಯುವ ಸಮೂಹಕ್ಕೆ ಉದ್ಯೋಗ ಒದಗಿಸಲು ಹಾಗೂ ಕಂಪನಿಗಳಿಗೆ ಕೆಲಸಗಾರನ್ನು ಒದಗಿಸುವ ನಿಟ್ಟಿನಲ್ಲಿ ಈ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಕಂಪನಿಗಳು ಅರ್ಹ ಪ್ರತಿಭಾವಂತ ಅಭ್ಯರ್ಥಿಗಳಿಗೆ ಉದ್ಯೋಗ ನೀಡಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳು, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಹಾಗೂ ಹಜ್ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಹೇಳಿದರು.
ಶುಕ್ರವಾರ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾ ನಗರಾಭಿವೃದ್ಧಿಕೋಶ ಹಾಗೂ ನಗರಸಭೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ಕಾರಣದಿಂದ ಶಿಕ್ಷಣ ಮೊಟಕುಗೊಳಿಸಿದ ಬಡ ನಿರುದ್ಯೋಗಿಗಳಿಗೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಕೆಲಸ ನೀಡಲು ಮೊದಲಾಧ್ಯತೆ ನೀಡಬೇಕು. ಈ ಮೇಳದಲ್ಲಿ ಭಾಗವಹಿಸಿ ಎಷ್ಟು ಜನರಿಗೆ ಕೆಲಸ ದೊರೆತಿದೆ ಎಂದು ಮಾಹಿತಿ ನೀಡಬೇಕು. ಉದ್ಯೋಗ ಮೇಳಗಳನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಆಯೋಜಿಸುವ ಮೂಲಕ ಅರ್ಹ ಹಾಗೂ ಬಡ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಅವರ ವಿದ್ಯಾರ್ಹತೆಗನುಗುಣವಾಗಿ ಕೆಲಸ ನೀಡುವ ಕಾರ್ಯವಾಗಬೇಕು. ಕೇವಲ ಕಾಟಾಚಾರಕ್ಕೆ ಮೇಳಗಳನ್ನು ಆಯೋಜಿಸಬಾರದು ಎಂದು ಹೇಳಿದರು.
ಶಾಸಕ ನೆಹರು ಓಲೇಕಾರ ಅವರು ಮಾತನಾಡಿ, ಜಿಲ್ಲೆಯಲ್ಲಿ ಉದ್ಯೋಗ ಸಮಸ್ಯೆ ಇದ್ದು, ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಆರಂಭವಾದರೆ ಜಿಲ್ಲೆಯ ನಿರುದ್ಯೋಗಿ ವಿದ್ಯಾವಂತರಿಗೆ ಕೆಲಸ ದೊರೆಯುತ್ತದೆ. ಕಾರಣ ಮೆಡಿಕಲ್ ಕಾಲೇಜು ಆರಂಭಕ್ಕೆ ಅಗತ್ಯ ಅನುದಾನ ಬಿಡುಗಡೆಗೊಳಿಸುವಂತೆ ಸಚಿವರಿಗೆ ಮನವಿ ಮಾಡಿಕೊಂಡರು.
ಈ ಮೇಳದಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ಸಿಕ್ಕ ಕೆಲಸವನ್ನು ಶ್ರದ್ಧೆಯಿಂದ ಮಾಡುವ ಮೂಲಕ ತಮ್ಮ ಬದುಕಿನಲ್ಲಿ ಯಶಸ್ಸನ್ನು ಕಾಣಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಅಪರ ಜಿಲ್ಲಾಧಿಕಾರಿ ವಿನೋದಕುಮಾರ ಹೆಗ್ಗಳಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಾಸಣ್ಣ, ಮಾಜಿ ಶಾಸಕ ಬಸವರಾಜ ಶಿವಣ್ಣನವರ ಇತರರು ಉಪಸ್ಥಿತರಿದ್ದರು.