ಅಳಿವಿನ ಅಂಚಿನಲ್ಲಿರುವ ರಾಣೇಬೆನ್ನೂರ ತಾಲೂಕಿನ ಐರಣಿ ಕೋಟೆ…
ರಾಣೇಬೆನ್ನೂರ ತಾಲೂಕಿನ ಐರಣಿ
ಗ್ರಾಮ ಐತಿಹಾಸಿಕ ನೆಲೆಯಾಗಿದ್ದು, ಶ್ರೀ ಸಿದ್ಧಾರೂಡ ಹಾಗೂ ಮುಪ್ಪಿನಾರ್ಯ ಸ್ವಾಮೀಜಿಯವರು ತಪೋಗೈದ ಪೂಣ್ಯ ಭೂಮಿ (ಮಲ್ಲಿಕಾರ್ಜುನ ಬೆಟ್ಟ) ಈ ಐರಣಿ. ಇಲ್ಲಿಯ ವೆಂಕಪ್ಪ ದೇವಸ್ಥಾನ ಹಾವನೂರ ದೇಸಾಯಿಯವರ ನೆನಪನ್ನು ಬಿಚ್ಚಿಡುತ್ತದೆ. ಇಲ್ಲಿಯ ಹಾಳಾದ ಕೋಟೆ, ಮಠ ಹಾಗೂ ದೇವಸ್ಥಾನ ತನ್ನ ಗತವೈಭವದ ಕತೆಯನ್ನು ಹೇಳುತ್ತವೆ.
ಬ್ರಿಟಿಷರು ಹಳೆಯ ಧಾರವಾಡ ಜಿಲ್ಲೆಯನ್ನು ಶತ್ರುಗಳಿಂದ ರಕ್ಷಿಸಲು ಪೂರ್ವ ದಿಕ್ಕಿನಲ್ಲಿಯ ಐರಣಿ ಗ್ರಾಮದಲ್ಲಿ ಗುಡ್ಡಗಳ ಶ್ರೇಣಿಯೊಂದಿದೆ ಎಂದು ದಾಖಲಿಕರಿಸಿದ್ದಾರೆ. ಕೋಟೆಯ ಮಂಭಾಗದಲ್ಲಿಯ ರಸ್ತೆಯ ( ನದಿಹರಳಹಳ್ಳಿಗೆ ಹೋಗುವ ಮಾರ್ಗ) ಮೇಲೆ ವಾರಕ್ಕೊಮ್ಮೆ(ಶನಿವಾರ) ಸಂತೆ ನಡೆಯುತ್ತಿತ್ತು. ಹೀಗಾಗಿ ಹಳೆಯ ಮಂದಿ ಇದನ್ನು ಸಂತೆಯ ದಾರಿಯೆಂದು ಈಗಲೂ ಕರೆಯುತ್ತಾರೆ. 1881ರಲ್ಲಿ ಕೇವಲ 1778 ಜನರು ಮಾತ್ರ ಈ ಗ್ರಾಮದಲ್ಲಿ ವಾಸವಾಗಿದ್ದರು. ಗುಣಮಟ್ಟದ ಕಂಬಳಿಗಳನ್ನು ಇಲ್ಲಿಯ ಕೆಲವು ‘ಕುರುಬ’ ಜನಾಂಗದ ಕುಟುಂಬಗಳು ಸ್ಥಳೀಯರ ಉಪಯೋಗಕ್ಕಾಗಿ ನೇಯುತ್ತಿದ್ದರು. ಆದರೆ ಆ ಜನಾಂಗದವರು 1876- 77 (ಬರಗಾಲ ಬಂದ ವಷ೯) ರಲ್ಲಿ ಬರಗಾಲದಿಂದಾಗಿ ಊರನ್ನು ಬಿಟ್ಟು ಹೋದರು. ಹೀಗಾಗಿ ಇಲ್ಲಿ ಕಂಬಳಿ ನೇಯುವುದು ಸಂಪೂರ್ಣವಾಗಿ ನಿಂತು ಹೋಯಿತು.
ಹೊಳೆಯ ದಂಡೆಗೆ ಬೇಳೆಯುತ್ತಿದ್ದ ಕಲ್ಲಂಗಡಿ ಬ್ರಿಟಿಷರಿಗೆ ಬಹು ಪ್ರಿಯವಾಗಿತ್ತು. ಸವಣೂರ ನವಾಬರ ಆಡಳಿತಕ್ಕೆ ಒಳಪಡುತ್ತಿದ್ದ ಈ ಪ್ರದೇಶದಲ್ಲಿ ನವಾಬರ ಪರವಾನಗಿಯನ್ನು ಪಡೆದು ಇರಾನ್ ನಿಂದ ಬಂದಂತಹ ಬಟ್ಟೆ ವ್ಯಾಪಾರಸ್ಥರು ನದಿಯ ದಡದಲ್ಲಿ ಬೀಡನ್ನು ಬಿಟ್ಟರು. ಬಹುಶಃ ಹೀಗಾಗಿಯೇ ಈ ಗ್ರಾಮದ ಹೆಸರು “ಐರಣಿ” ಎಂದು ಬಂದಿರಬಹುದೆಂದು ಅಭಿಪ್ರಾಯಿಸಬಹುದು. ಆದರೆ ಪೌರಾಣಿಕೆ ಹಿನ್ನೆಲೆಯಲ್ಲಿ ಈ ಗ್ರಾಮವನ್ನು ಐರಾವತ ಕ್ಷೇತ್ರವೆಂದು ಕರೆಯಲಾಗುತ್ತದೆ ಹಾಗೂ ಕೆಲವರ ಅಭಿಪ್ರಾಯದ ಪ್ರಕಾರ ಮೊಂಡಗೈ ಹನುಮಂತಗೌಡ ದೇಸಾಯಿಯವರ ಆನೆಗಳು ಇಲ್ಲಿ ಬರುತ್ತಿದ್ದರಿಂದ ಐರಾವತ ಕ್ಷೇತ್ರ ಐರಣಿ ಎಂದಾಯಿತು ಎಂದು ಹೇಳುವರು ಸಹ ಇದ್ದಾರೆ. ಆದರೆ ಇಲ್ಲಿ ಇದುವರೆಗೂ ಯಾವುದೇ ಶಾಸನ ದೊರೆತಿಲ್ಲವಾದ್ದರಿಂದ ಗ್ರಾಮನಾಮದ ಹುಟ್ಟನ್ನು ಸ್ಪಷ್ಟಪಡಿಸುವುದ ಕಷ್ಟದ ಕೆಲಸವಾಗಿದೆ. 1790 ರಲ್ಲಿ “ಟಿಪ್ಪೂಸುಲ್ತಾನ” ಈ ಕೋಟೆಯನ್ನು ವಶಪಡಿಸಿಕೊಂಡು ರಾಣೇಬೆನ್ನೂರಿನ ಕಡೆ ದಾಪುಗಾಲನ್ನು ಹಾಕುತ್ತಿರುವಾಗ ಬ್ರಿಟಿಷ್ ಅಧಿಕಾರಿ “ಕ್ಯಾಪ್ಟನ್ ಮೂರ್” ಮರಾಠರ ಸಹಾಯಕ್ಕಾಗಿ ತನ್ನ ಸೈನಿಕರ ಪಡೆಯನ್ನು ಕಳುಹಿಸಿಕೊಡುತ್ತಾನೆ. ಬಹುಶಃ ಈ ಯುದ್ದದಲ್ಲಿ ಬ್ರಿಟಿಷರು ಸೋತಿರಬಹುದಾಗಿದೆ. ಕಾರಣ ಟಿಪ್ಪೂ ಸುಲ್ತಾನ ‘ಚೆನ್ನಾಪುರದಲ್ಲಿ’ ಜಮಾಲ ಷಾವಲಿ ದಗಾ೯ವನ್ನು ನೋಡಿಕೊಳ್ಳುತ್ತಿದ್ದ ಜೂಡಿದಾರರಿಗೆ ಗ್ರಾಮವನ್ನು ದಾನ ನೀಡಿ ಕನ್ನಡದಲ್ಲಿ ಶಾಸನವೂಂದನ್ನು ನಿಲ್ಲಿಸುತ್ತಾನೆ. ಹೀಗಾಗಿ ಬ್ರಿಟಿಷರು ಖಂಡಿತವಾಗಿ ಸೋತಿದ್ದಾರೆ ಎನ್ನಬಹುದು. ಮುಂದೆ ಈ ಕೋಟೆಯನ್ನು “ಸೌತ್ ಇಂಡಿಯನ್ ರಿಬೆಲ್ಲಿಯನ್” ಹಾಗೂ “ಉಭಯ ಲೋಕಾಧೀಶ್ವರ” ಎಂದೇ ಖ್ಯಾತಿ ಹೊಂದಿದ್ದ ಚನ್ನಗಿರಿಯ ಮರಾಠರ ಪವಾರ ವಂಶಸ್ಥ “ಧೊಂಡೀಯಾ ವಾಘ” ವಶಪಡಿಸಿಕೊಳ್ಳುತ್ತಾನೆ. ಇವನು ಟಿಪ್ಪೂವಿನ ಸೇನೆಯಲ್ಲಿ ಸೇನಾಧಿಕಾರಿಯಾಗಿದ್ದು ಮುಂದೆ ಆತನಿಂದಲೇ ಶ್ರೀರಂಗಪಟ್ಟಣದಲ್ಲಿ ಬಂಧಿತನಾಗಿರುತ್ತಾನೆ. ಟಿಪ್ಪೂವಿನ ಮರಣದ ನಂತರ ಅವನ 300 ಸೈನಿಕರನ್ನು ಹಾಗೂ ಯುದ್ದದ ಆಯುಧಗಳನ್ನು ಸಂಗ್ರಹಿಸಿಕೊಂಡು ಐರಣಿ ಕೋಟೆಯನ್ನು ವಶಪಡಿಸಿಕೊಳ್ಳುತ್ತಾನೆ. ಸುಮಾರು ವಷ೯ ಬ್ರಿಟಿಷರಿಗೆ ಸಿಂಹಸ್ವಪ್ನದಂತೆ ಕಾಡುತ್ತಾನೆ. ಮರಾಠರೊಡನೆ ಗಡಿಯನ್ನು ಗುರುತಿಸುವುದು ಇವನಿಂದಾಗಿ ತೊಂದರೆಯಾಗುತ್ತಿರುವುದನ್ನು ಅರಿತ ಬ್ರಿಟಿಷ್ ಸರಕಾರ, ಧೊಂಡೀಯಾ ವಾಘನನ್ನು ಸೆರೆ ಹಿಡಿಯಲು ಸಿ.ವೆಲ್ಲಸ್ಲಿಯನ್ನು ಮುಂದೆ ವಿಲ್ಲಿಂಗ್ಟನನ್ನು ನೆಮಿಸಿತು. 20 ಜೂನ್ 1800 ಕ್ಕೆ ಈ ಮಾಹಿತಿಯನ್ನು ತಿಳಿದ ವಾಘನ ಸೈನಿಕರು ಈ ಕೋಟೆಯನ್ನು ಅಂದು ರಾತ್ರಿಯೇ ತ್ಯಜಿಸಿರುತ್ತಾರೆ. ಮರುದಿನ (21 ಜೂನ್) ಮುಂಜಾನೆ ಬ್ರಿಟಿಷರ ತಂಡ ಈ ಕೋಟೆಯನ್ನು ತಮ್ಮ ವಶಕ್ಕೆ ತಗೆದುಕೊಳ್ಳುತ್ತದೆ. 24 ಜೂನ್ 1800 ರಂದು ಸಿ.ವೆಲ್ಲಸ್ಲಿ ತುಂಗಭದ್ರ ನದಿಯನ್ನು ದಾಟಿ 19 ಕಿ.ಮೀ ದೂರ ಐರಣಿ ಪಶ್ಚಿಮ ದಿಕ್ಕಿನಲ್ಲಿರುವಾಗ ( ಬಹುಶಃ ಯಕ್ಲಾಸಪುರ ಹಾಗೂ ರಾಹುತನಕಟ್ಟಿ ಮಧ್ಯದಲ್ಲಿಯ ಇಪ್ತಿಹಳ್ಳದ ದೇವಸ್ಥಾನದ ಹತ್ತಿರ ವಿಶ್ರಮಿಸುತ್ತಿರುವಾಗ) ವಾಘನ ಬಂಟರು ಇನ್ನೂ ಐರಣಿಯಲ್ಲಿರುವ ವಿಷಯವನ್ನು ತಿಳಿದು ಕೋಟೆಗೆ ಬೆಂಕಿ ಹಾಕಿ ದಾಳಿಯಿಡಲು ಸೂಚಿಸುತ್ತಾನೆ. ಈ ಕಾರ್ಯವನ್ನು 50 ಯುರೋಪಿಯನ್ ಸೈನಿಕರು ಹಾಗೂ 150 ಸ್ಥಳೀಕರು ಲೆಫ್ಟಿನೆಂಟ್ ಸಿ.ಮೊನಿಪೆನ್ನಿ ನೇತೃತ್ವದಲ್ಲಿ ದಾಳಿ ಮಾಡಿ 500 ದಾಳಿಕೋರರನ್ನು ಕೊಲ್ಲುತ್ತಾರೆ. ಮುಂದೆ ವೆಲ್ಲಸ್ಲಿ ರಾಣೇಬೆನ್ನೂರನ್ನು ವಶಪಡಿಸಿಕೊಂಡು ಅದನ್ನು ತಮಗೆ ಸಹಾಯ ಮಾಡಿದ ಮರಾಠ ಸೇನಾನಿ “ಅಪ್ಪಾಸಾಹೇಬ್ ಪಟವರ್ದನಗೆ” ಬಿಟ್ಟು ಕೊಡುತ್ತಾನೆ. ಅಪ್ಪಾಸಾಹೇಬ್ ಧಾರವಾಡ ಜಿಲ್ಲೆಯ ಎರಡು ರೇವಿನ್ಯೂ ನಗರಗಳನ್ನು ಪಡೆದುಕೊಂಡು 500 ಅಶ್ವದಳ ಹಾಗೂ 1000 ಕಾಲ್ದಳವನ್ನಿಟ್ಟುಕೊಳ್ಳುತ್ತಾನೆ. ಧೊಂಡೀಯಾ ವಾಘ ಹಾಗೂ ಆತನ ಸಹಚರರನ್ನು ತುಂಗಭದ್ರ ಹಾಗೂ ವರದಾ ನದಿಯ ಆಚೆಗೆ ದಬ್ಬಲಾಗುತ್ತದೆ. ಧೊಂಡಿಯಾ ವಾಘ ಹನುಮನ ಭಕ್ತನಾಗಿದ್ದರಿಂದ ತನ್ನ ಆಳ್ವಿಕೆಯಲ್ಲಿ ಕದಿರಮಂಡಲಗಿಯ ಕಾಂತೇಶನ ಪಾದಕ್ಕೆ ತನ್ನ ಬಲಗೈ ಖಡ್ಗವನ್ನು ಅರ್ಪಿಸುತ್ತಾನೆ. ಈಗಲೂ ಸಹ ನಾವು ದೇವಸ್ಥಾನದಲ್ಲಿ ಅದನ್ನು ನೋಡಬಹುದಾಗಿದೆ. ಧೀರ್ಘಕಾಲದ ಹೋರಾಟ ಹಾಗೂ ಅಪಾರ ವೆಚ್ಚದ ಪರಿಣಾಮವೆಂಬಂತೆ ವಾಘನನ್ನು ಬ್ರಿಟಿಷರು ಹರಸಾಹಸಪಟ್ಟು 09 ಸೆಪ್ಟೆಂಬರ್ 1800 ರಂದು ಕೋಣಗಲ್ ಎಂಬಲ್ಲಿ ಕೊಲ್ಲುತ್ತಾರೆ. 1842 ರಲ್ಲಿ ಬ್ರಿಟಿಷ್ ಸರಕಾರ ದಕ್ಷಿಣಕ್ಕಿರುವ ಮರಾಠರ ಕೋಟೆಯನ್ನು ಪರೀಕ್ಷಿಸಲು ‘ಕ್ಯಾಪ್ಟನ್ ಬರ್ಗೊಯಿನ್ ಹಾಗೂ ಲೆಫ್ಟಿನೆಂಟ್ ಬೆಲ್’ ರವರನ್ನು ನೇಮಿಸಿದರು. ಅವರು ಐರಣಿ ಕೋಟೆಯ ಭಾಗವನ್ನು ಸಂಪೂರ್ಣವಾಗಿ ವೀಕ್ಷಿಸಿ ತಮ್ಮ ವರದಿಯನ್ನು ಸರಕಾರಕ್ಕೆ ನೀಡುತ್ತಾರೆ. ಈ ವರದಿಯಲ್ಲಿ ಐರಣಿ ಕೋಟೆಯು ತುಂಗಭದ್ರಾ ನದಿಯ ಎಡಭಾಗದಲ್ಲಿದ್ದು ಕೋಟೆಯ ಪಶ್ಚಿಮ ಭಾಗ ಹೆಚ್ಚು ನದಿಯಿಂದ ಕೂಡಿರುತ್ತದೆ. ಕೋಟೆಯನ್ನು ದಿನ್ನೆಯ ಮೇಲೆ ಅಂಕು-ಡೊಂಕಾಗಿ ಕಟ್ಟಲಾಗಿದೆ. ಕೋಟೆಯು ಎರಡು ರಕ್ಷಣಾ ಗೋಡೆಗಳನ್ನು ಹೊಂದಿದ್ದು. ಒಳಗಡೆಯ ರಕ್ಷಣಾ ಗೋಡೆ ಹೊರಗಿನ ತೆಗ್ಗುಗಳನ್ನುಳ್ಳ ಗೋಡೆಯಿಂದ 45 ಮೀ ಅಂತರದಲ್ಲಿದೆ. ಪಶ್ಚಿಮ ಹಾಗೂ ದಕ್ಷಿಣ – ಪಶ್ಚಿಮದ ಮುಂಭಾಗದಲ್ಲಿ ಆಳವಾದ ತೆಗ್ಗುಗಳಿವೆ. ಹೊರಗೋಡೆಯು ಮಣ್ಣಿನ ದಿಬ್ಬದಿಂದ ಮಾಡಲ್ಪಟ್ಟಿದ್ದು ಕೋಟೆಯ ಉತ್ತರ ಹಾಗೂ ದಕ್ಷಿಣ ಭಾಗ ಬಹಳ ಹಾಳಾಗಿದೆ. ಆದರೆ ಪೂರ್ವ ದಿಕ್ಕಿನಲ್ಲಿಯ ಹಾಳಾದ ಹೊರಗೋಡೆಯನ್ನು ( ಹೊಳೆಯ ಸಮೀಪ) ಸರಿಪಡಿಸಬಹುದು. ಕೋಟೆಯ ಹೊರಗೋಡೆಯಿಂದ ಒಳಗೆ ಬರಲು ಮೂರು ಬಾಗಿಲುಗಳು ಕೋಟೆಯ ಉತ್ತರ ದಿಕ್ಕಿನಲ್ಲಿ ಇವೆ. ಆದರೆ ಇವುಗಳು ಸಂಪೂರ್ಣವಾಗಿ ಹಾಳಾಗಿದ್ದು ಇವುಗಳನ್ನು ಸರಿಪಡಿಸಲು ಸಾದ್ಯವಿಲ್ಲ. ಕೋಟೆಯು ಉತ್ತರ-ಪೂರ್ವ ಹಾಗೂ ದಕ್ಷಿಣ-ಪೂರ್ವ ದಿಕ್ಕಿಗೆ 250 ಯಾರ್ಡನಷ್ಟು (228.5 mtr) ಉದ್ದವಾಗಿ ಚಾಚಿಕೊಂಡಿದೆ ಹಾಗೂ 100 ಯಾರ್ಡ (91.4mtr) ಅಗಲವಾದ ವಿಸ್ತೀರ್ಣ ಹೊಂದಿದೆ. ದಕ್ಷಿಣ-ಪಶ್ಚಿಮಕ್ಕೆ ಕೆಲವು ಕೆಲವು ಕಲ್ಲುಗಳಿಂದ ಗೋಡೆಯನ್ನು ನಿರ್ಮಿಸಿದ್ದು ಅದು 25 ಫೂಟ್ ಉದ್ದವಾಗಿದ್ದು ಶತ್ರುಗಳನ್ನು ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿದೆ ( ನದಿಹರಹಳ್ಳಿಗೆ ಹೋಗು ಮಾರ್ಗ). ಪೂರ್ವ ಭಾಗದಲ್ಲಿ ಕೋಟೆಯ ಗೋಡೆ ಕಲ್ಲುಗಳನ್ನು ಹೊಂದಿಲ್ಲ ಅದು ನದಿಗೆ ಸಮೀಪವಾಗಿದ್ದು ಬಹಳ ಹಾಳಾಗಿದೆ. ಕೋಟೆಯ ಒಳಭಾಗದಲ್ಲಿ ಹಾಳಾದ ಅರಮನೆ ಹಾಗೂ ಬಾವಿಯನ್ನು ಹೊರತುಪಡಿಸಿ ಎನೂ ಇಲ್ಲಾ. ಕೋಟೆಯಿಂದ ನದಿಯ ಕಡೆ ಹೋಗಲು ಸಣ್ಣದೊಂದು ಬಾಗಿಲು ಇದೆ. ದಕ್ಷಿಣ -ಪಶ್ಚಿಮಕ್ಕೆ ಆಳಾವಾದ ತೆಗ್ಗು ಹೊರಗೋಡೆಯಲ್ಲಿದ್ದು ಅದರಲ್ಲಿ ನೀರಿಲ್ಲದೆ ಬರಿದಾಗಿದ್ದು ಜನರು ಇಲ್ಲಿಂದ ಕೋಟೆಯನ್ನು ಹತ್ತಿ ಇಳಿಯುವುದು ಸಾಮಾನ್ಯವಾಗಿದೆ. ಕೋಟೆಯ ಉತ್ತರಕ್ಕೆ ಐರಣಿ ಗ್ರಾಮವಿದ್ದು. ಇದು ಕೋಟೆಯಿಂದ 91.4 ಮೀ ದೂರದಲ್ಲಿದೆ. ಗ್ರಾಮದ ದಕ್ಷಿಣ-ಪಶ್ಚಿಮಕ್ಕೆ ಕೆರೆಯೊಂದಿದ್ದು ಇದು ಕೋಟೆಯ ತೆಗ್ಗಿನ ರಸ್ತೆಯ ಪಕ್ಕದಲ್ಲಿದೆ ( ಈಗ ಕೆರೆ ಕಾಣುತ್ತಿಲ್ಲ). ಕೋಟೆಯಿಂದ 800 ಯಾರ್ಡನಲ್ಲಿ ಮತ್ತೊಂದು ಗುಡ್ಡವಿದ್ದು ಅದು ಸಹ ರಕ್ಷಣಾ ಕವಚದಂತಿದೆ. ಕೋಟೆಯ ಒಳಭಾಗವನ್ನು ದುರಸ್ತಿಪಡಿಸಬಹುದಾಗಿದ್ದು ಇದೊಂದು ಅದ್ಬುತ ಕೋಟೆಯೆಂದು ದಾಖಲಿಸಿದರು. ಸವಣೂರ ನವಾಬ, ಟಿಪ್ಪೂ ಸುಲ್ತಾನ, ದೊಂಡೀಯಾ ವಾಘ, ಅಪ್ಪಾಸಾಹೇಬ ಪಟವರ್ದನ್ ಹಾಗೂ ಬ್ರಿಟಿಷರ ಆಡಳಿತಕ್ಕೆ ಸೇರಿದ್ದ ಈ ಕೋಟೆ ಕಾಲಕ್ರಮೇಣ ನಿಧಿಗಳ್ಳರ ಹಾಗೂ ಕಳ್ಳ-ಕಾಕರ ಕಾಟಕ್ಕೆ ತುತ್ತಾಗಿ ನಾಶವಾಗುತ್ತಿರುವುದು ವಿಷಾದನೀಯ. ಇತಿಹಾಸದ ಅರಿವಿಲ್ಲದ ಜನರು ಇದನ್ನು ಹಾಳಗೆಡವುತ್ತಿರುವುದು ನೋವಿನ ಸಂಗತಿ. ಕೋಟೆಯಲ್ಲಿ ಅರಮನೆ ಹಾಗೂ ಗುರುಮನೆಯನ್ನು ಕಟ್ಟಿಕೊಂಡು ನಮ್ಮನ್ನಾಳಿದ ಆ ಅರಸರ ನೆನಪಿಗಾಗಿಯಾದರೂ ಇದನ್ನು ಸಂರಕ್ಷಿಸಿ ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಿದಲ್ಲಿ ಕೆಲವರು ಉದ್ಯೋಗ ಪಡೆಯಬಹುದಾಗಿದೆ.
ಪ್ರಮೋದ ನಲವಾಗಲ,
ರಾಣೇಬೆನ್ನೂರ
9686168202