Kourava News

“ಕಾಜಾಣ ಬಲು ಜಾಣ”….

ರಾಜಕಾಗೆಯನ್ನ ನೀವು ಎಲ್ಲಾದರೂ ನೋಡಿದ್ದೀರಾ.?

 “ಹಾವೇರಿಪರಿಸರದಲ್ಲಿ  ಕಾಜಾಣ”

“ಕಾಜಾಣ ಬಲು ಜಾಣ”….
ಕಾಜಾಣ ಅಂದರೆ ನೆನಪಿಗೆ ಬರುವುದು ರಾಷ್ಟ್ರಕವಿ ಕುವೆಂಪು ಅವರ ಪ್ರಸಿದ್ದ ಕವಿತೆ “ಕಾಜಾಣ” ಪದ್ಯದಲ್ಲಿನ “ನಿನಗೆ ನಮೋ ಓ ಕಾಜಾಣ” ಎನ್ನುವ ಸಾಲುಗಳು. ಕುವೆಂಪು ಅವರ ಪುಸ್ತಕಗಳ ಮುಖಪುಟಗಳಲ್ಲಿ ತಂತಿಬಾಲದ ಕಾಜಾಣದ ಜೋಡಿಯ ಚಿತ್ರ ಇದ್ದೇ ಇರುತ್ತದೆ. ಇಂತಿಪ್ಪ ಕಾಜಾಣ ಫೆ.೧೭ರಂದು ಮಂಗಳವಾರ ಬೆಳಿಗ್ಗೆ ೮-೨೫ರಸುಮಾರಿಗೆ ಹಾವೇರಿಯ ಹೆಗ್ಗೇರೆಕೆರೆಯಬಳಿ ಮಂಜು ಮುಸುಕಿದವೇಳೆ ನನಗೆ ಕಂಡು ಬಂದಿತು.
“ಸೂರ್ಯರಷ್ಮಿ ಮೂಡದ ಹಿನ್ನಲೆಯಲ್ಲಿ ಮಂಗಳವಾರ ಬೆಳಗ್ಗೆ ಮಂಜು ಮುಸುಕಿ ವಾತಾವರಣವೆಲ್ಲ ಮಂಜಿನ ಹಿಡಿತದಲ್ಲಿತ್ತು”!. “ಈ ವೇಳೆ ಕರೆಯ ಪರಿಸರದ ಒಣಗಿದ ಮರದ ರೆಂಬೆಯಮೇಲೆ ಕಾಜಾಣ ಕುಳಿತಿರುವುದನ್ನು ಕಂಡು ಈ ಕಪ್ಪುಸುಂದರಿಯ ಕೆಲವು ಛಾಯಾಚಿತ್ರಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದೆ” ಇದರ ಬಗ್ಗೆ ಪಕ್ಷಿ ಪ್ರೇಮಿ ಮಿತ್ರ ರಾಣೇಬೆನ್ನೂರಿನ ನಾಮದೇವ ಕಾಗದಗಾರ ಕೆಲವು ಉಪಯುಕ್ತ ಮಾಹಿತಿ ನೀಡಿದರು. “ಕಾಗೆಗಳನ್ನೆಲ್ಲಾ ನಾವು-ನೀವು ನೋಡಿರುತ್ತೇವೆ. ಆದರೆ, ರಾಜಕಾಗೆ ಬಗ್ಗೆ ನೀವೆಲ್ಲಾದರೂ ಕೇಳಿದ್ದೀರಾ.? ರಾಜಕಾಗೆಯನ್ನ ನೀವು ಎಲ್ಲಾದರೂ ನೋಡಿದ್ದೀರಾ.? ಇಲ್ಲಾ ಅಲ್ಲವೇ?. ಇಲ್ಲಿದೆ ನೋಡಿ ಅದರ ಕುರಿತ ಸಂಪೂರ್ಣ ಮಾಹಿತಿ.
“ಪಕ್ಷಿ ವರ್ಗದ ಪ್ಯಾಸೆರಿಫಾರ್ಮೀಸ್ ಗಣದ ಡೈಕ್ರೂರಿಡೀ ಕುಟುಂಬದ ಒಂದು ಜಾತಿಯ ಹಕ್ಕಿಯ ಹೆಸರು ಕಾಜಾಣ (ಡ್ರಾಂಗೊ). ಇದಕ್ಕೆ ರಾಜಕಾಗೆ ಎಂಬ ಹೆಸರೂ ಇದೆ. ಆಂಗ್ಲ ಭಾಷೆಯಲ್ಲಿ ಇದನ್ನು ಕಿಂಗ್ ಕ್ರೋ ಎಂದು ಕರೆಯುತ್ತಾರೆ”. ಈ ಪಕ್ಷಿ ಜಾತಿಯ ವೈಜ್ಞಾನಿಕ ಹೆಸರು ಡೈಕ್ರೂರಸ್. ಕನ್ನಡದಲ್ಲಿ ಕಾಜಾಣ ಪಕ್ಷಿಯನ್ನು ಭೀಮರಾಜ ಎಂತಲೂ ಕರೆಯುತ್ತಾರೆ. ಹಾರುವಾಗ ಪುಕ್ಕದ ತುದಿಯ ಕವಲುಗಳು ಬೀಸುವ ಗದೆಯಂತೆ ತುಯ್ದಾಡುವುದೇ ಈ ಹೆಸರಿಗೆ ಕಾರಣ.
ಕಾಜಾಣ ಸುಮಾರು ೧೦”-೧೨” ಉದ್ದದ ಸಣ್ಣ ಗಾತ್ರದ ಹಕ್ಕಿ. ದೇಹದ ಬಣ್ಣ ಅಚ್ಚಕಪ್ಪು ಅಥವಾ ನೇರಳೆ. ಕೆಲವು ಪ್ರಭೇದಗಳಲ್ಲಿ ಹೊಟ್ಟೆ ಭಾಗ ಬಿಳಿಯಾಗಿ, ಪುಕ್ಕಗಳು ಬೂದಿ ಅಥವಾ ಕಂದು ಬಣ್ಣದ್ದಾಗಿರುತ್ತದೆ. ಈ ಬಣ್ಣಗಳ ಆಧಾರದ ಮೇಲೆ ಪ್ರಭೇದಗಳನ್ನು ವಿಂಗಡಿಸಲಾಗಿದೆ.ಕಾಜಾಣವು ವಿಶೇಷವೆ ಎನ್ನಬಹುದಾದ ಪಕ್ಷಿ. ಅದರ ಸ್ವಭಾವವೇ ಅದಕ್ಕೆ ಕಾರಣ. ರಾಜಕಾಗೆ” ಅಂತಲೂ ಕರೆಯುತ್ತಾರೆ. ದೂರದಿಂದ ನೋಡಿದಾಗ ಕಾಗೆಯಂತೆಯೇ ಕಾಣಬಹುದಾದರೂ ಕಾಗೆಯ ಜಾತಿಗೆ ಸೇರಿದ ಪಕ್ಷಿಯಲ್ಲ. ಇದನ್ನು “ಕಪ್ಪುಮಿಶ್ರಿತ ಬೂದು ಬಣ್ಣದ, ಕವಲೊಡೆದ ಬಾಲದ, ಮಿಂಚುವ ಕೆಂಪು ಕಣ್ಣುಗಳ, ಸಪೂರ ದೇಹವುಳ್ಳ ಕಾಜಾಣ ಬಹಳ ಧೈರ್ಯಶಾಲಿಪಕ್ಷಿ.
ಪ್ರಭೇದಗಳೆಷ್ಟು?: ಡೈಕ್ರೂರಸ್ ಪಕ್ಷಿ ಜಾತಿಯಲ್ಲಿ ಸುಮಾರು ೩೦ ಪ್ರಭೇದಗಳಿವೆ. ಈ ಜಾತಿಯ ಪಕ್ಷಿಗಳನ್ನು ಏಷ್ಯಾ, ಇಥಿಯೋಪಿಯ, ಮಲಯ ಮತ್ತು ಆಸ್ಟ್ರೇಲಿಯಾದಲ್ಲಿ ಕಾಣಬಹುದು. ಭಾರತದಲ್ಲಿ ಡೈ ಸೀರೂಲೆಸೆನ್ಸ್ (ಬಿಳಿ ಹೊಟ್ಟೆಯ ಕಾಜಾಣ) ಡೈ ಪ್ಯಾರಡಿಸಿಯಸ್ (ಉದ್ದ ಬಾಲದ ಕಾಜಾಣ) ಮತ್ತು ಡೈ ಮಾಕ್ರೊಸೆರ್ ಕಸ್ (ಕಪ್ಪು ಕಾಜಾಣ) ಎಂಬ ಮೂರು ಪ್ರಭೇದಗಳು ನಮಗೆ ಕಾಣಸಿಗುತ್ತವೆ. ತೋಟಗಳು, ಕಾಡುಗಳು, ನದಿ-ತೊರೆಗಳಬಳಿ, ವನ್ಯ ಪ್ರದೇಶಗಳಲ್ಲಿ ಒಂಟಿಯಾಗಿ ಅಥವಾ ಜೋಡಿಗಳಲ್ಲಿ ಕಾಜಾಣ ವಾಸಿಸುತ್ತವೆ.
ಚುರುಕಾದ ಹಕ್ಕಿ: ಕಾಜಾಣ ಬಲು ಚುರುಕಾದ ಪಕ್ಕಿ. ಹಾರಾಟದಲ್ಲೂ ಬಲು ಕುಶಲಿ. ಕೀಟಗಳು, ಹಾರಬಲ್ಲ ಕೀಟಗಳು, ಮಿಡತೆಗಳು ಇದರ ಪ್ರಮುಖ ಆಹಾರ. “ಹೊಲದಲ್ಲಿ ಬೆಳೆಗಳನ್ನು ಹಾಳು ಮಾಡುವ ಹುಳುಗಳನ್ನು ತಿನ್ನುವ ಅಭ್ಯಾಸ ಕಾಜಾಣಕ್ಕಿದೆ. ಹೀಗಾಗಿ ಈ ಪಕ್ಷಿ ರೈತ ಸ್ನೇಹಿಯಾಗಿದೆ”. “ಹಾರುತ್ತಿರುವಾಗಲೇ ಆಹಾರದ ಮೇಲೆ ಹಠಾತ್ತನೆ ಎರಗಿ ಕ್ಷಣಾರ್ಧದಲ್ಲಿ ಹಿಡಿಯಬಲ್ಲ ಸಾಮರ್ಥ್ಯ ಈ ಹಕ್ಕಿಗಿದೆ”. “ದೊಡ್ಡ ದೊಡ್ಡ ಪಕ್ಷಿಗಳು ತನ್ನ ಗೂಡಿನ ಬಳಿ ಬಂದಾಗ, ಅವುಗಳ ಮೇಲೆರಗಿ ದಾಳಿ ಮಾಡುವ ಧೈರ್ಯ ಈ ಪಕ್ಷಿಗಿದೆ”. “ಹೂಗಳ ಮಕರಂದವನ್ನೂ ಇದು ಹೀರುತ್ತದೆ. ಹಲವಾರು ಬಗೆಗಳಲ್ಲಿ ಕೂಗುವ ಕಾಜಾಣ, ಬೇರೆ ಹಕ್ಕಿಗಳ ಕೂಗನ್ನೂ ಅನುಕರಿಸುವ ಶಕ್ತಿ ಹೊಂದಿದೆ”!.
“ತನಗಿಂತ ಗಾತ್ರದಲ್ಲಿ ದೊಡ್ಡದಾದ ಪಕ್ಷಿಗಳ ಮೇಲೆ ಯಾವುದೇ ಭಯವಿಲ್ಲದೆ ಕಾಜಾಣ ಎರಗುತ್ತದೆ”. “ಕಾಜಾಣದ ಗೂಡಿರುವ ಜಾಗದಲ್ಲಿ, ಇತರೆ ಸಣ್ಣಪುಟ್ಟ ಪಕ್ಷಿಗಳು ಗೂಡು ಕಟ್ಟಿಕೊಂಡಿರುತ್ತವೆ”.ಕಾರಣ ಕಾಜಾಣವು ಗೂಡಿನ ಬಳಿ ಬರುವ ಇತರೆ ಆಕ್ರಮಣಕಾರಿ ಪಕ್ಷಿಗಳನ್ನು ಓಡಿಸುತ್ತವೆ. ಕಾಜಾಣ ನಿಂತಲ್ಲಿ ನಿಲ್ಲಲಾರದು. ಬಹಳ ಚುರುಕು, ಆದರೆ, ಮೂಗಿನ ಮೇಲೆ ಕೋಪ ಇವಕ್ಕೆ ! . ಈ ಪಕ್ಷಿ ನಮ್ಮ ಸುತ್ತಮುತ್ತ ಇದ್ದಾಗ ಬೇರೆ ಹಕ್ಕಿಗಳ ಕೂಗನ್ನು ಅನುಮಾನಿಸಿ ನೋಡ ಬೇಕಾಗುತ್ತದೆ. ಬೇರೆ ಪಕ್ಷಿಗಳನ್ನು ಅನುಕರಿಸುವಲ್ಲಿ “ಕಾಜಾಣ ಬಲು ಜಾಣ”.
ಮಾರ್ಚ್ ನಿಂದ ಜೂನ್ ತಿಂಗಳುಗಳ ವೇಳೆಯಲ್ಲಿ ಕಾಜಾಣ ಗೂಡು ಕಟ್ಟುತ್ತವೆ. ಮರಗಳ ಕವಲುಗಳ ಮೇಲೆ ಸಣ್ಣ ಕಡ್ಡಿಗಳು, ಬೇರು, ಎಲೆ, ನಾರು ಮುಂತಾದವುಗಳನ್ನು ಬಳಸಿ ಜೇಡಬಲೆಯಿಂದ ಬಂಧಿಸಿ ಗೂಡು ಕಟ್ಟುತ್ತವೆ. ೩-೫ ಮೊಟ್ಟೆಗಳನ್ನಿಡುವ ಕಾಜಾಣ ಕಾವು ಕೊಡುವುದರಲ್ಲಿ ಹಾಗೂ ಮರಿಗಳ ಪಾಲನೆಯಲ್ಲಿ ಗಂಡು-ಹೆಣ್ಣು ಪಕ್ಷಿಗಳು ಸಹಕರಿಸುತ್ತವೆ.
ಚಿತ್ರ/ಲೇಖನ: ಮಾಲತೇಶ ಅಂಗೂರ
ಕೂಲಿಯವರ ಓಣಿ, ಹಾವೇರಿ.೯೪೮೧೭೪೯೪೪೦