Kourava News

“ಕೊರೊನಾ ಹೆಸರಿನಲ್ಲಿ ಬಂದು ಕಾಡುತ್ತಿರುವ ವಿಧಿ!”

ಹೆಂಡ ಇದ್ದಲ್ಲಿಗೆ ಹೋಗುತ್ತೇವೆ; ಹಾಲು ನಾವು ಇದ್ದಲ್ಲಿಗೆ ಬರಲಿ ಎಂದು ಬಯಸುತ್ತೇವೆ...

ವಿಧಿ ಯಾರನ್ನು ಬಿಟ್ಟಿಲ್ಲ; ರಾವಣನ ಲಂಕೆಯನ್ನೇ ಸುಟ್ಟು ಹಾಕಿದವಳು. ಬಿಡುವಿಲ್ಲದೇ ಜಗತ್ತನ್ನು ಬೆಳಗುವ ಸೂರ್ಯ-ಚಂದ್ರರನ್ನೇ ಲಟ್ಟಿ ಹಾಕಿದವಳು. ಬುದ್ದಿವಂತರಿಗೆ ಬಡತನ ನೀಡಿ, ಮೂರ್ಖರಿಗೆ ಸಿರಿತನ ನೀಡುವ ಮೂಲಕ ಮೂರ್ಖರ ಮುಂದೆ ಬುದ್ದಿವಂತರನ್ನು ಕೈಕಟ್ಟಿಕೊಂಡು ನಿಲ್ಲುವಂತೆ ಮಾಡಿದವಳು. ಅವಶ್ಯಕತೆ ಇಲ್ಲದಾಗ ಸಿರಿ ನೀಡುವೆ, ಸಿರಿಯೇ ನೀನು ಬೇಡವೆಂದಾಗ ಕಾಲ ಕಸ ಮಾಡುವೆ. ಸಿರಿವಂತರಿಗೆ ಬೆರಳಣಿಕೆಯ ಮಕ್ಕಳನ್ನು ಕೊಟ್ಟು, ಒಂದು ವೇಳೆ ಅದೂ ಇಲ್ಲದಂತೆ ಮಾಡುತ್ತಾಳೆ, ಬಡವರಿಗೆ ಮನೆತುಂಬ ಮಕ್ಕಳನ್ನು ಕೊಟ್ಟು ಹಸಿವೆಯಿಂದ ಬಳಲುವಂತೆ ಮಾಡುವೆ.!

ದುರ್ಯೋಧನಂತಹ ದುರ್ಬುದ್ದಿಯ ಹೀನನಿಗೆ ಸಾಯುವವರೆಗೆ ರತ್ನ ಖಚಿತ ಕಿರೀಟ ವನ್ನಿಟ್ಟುಕೊಂಡು ಬದುಕುವಂತೆ ಮಾಡಿದೆ. ಅರ್ಜುನನಿಂದ ಸ್ವಯಂ ವರದಲ್ಲಿ ಗೆಲ್ಲಲ್ಪಟ್ಟ ದ್ರೌಪದಿಯನ್ನು ಐವರಿಗೆ ಹೆಂಡತಿಯನ್ನಾಗಿಸಿದೆ. ಧರ್ಮನಂದನನ ಬಾಯಿಯಿಂದ
ಅಸತ್ಯ ನುಡಿಸಿ ಆಚಾರ್ಯ ದ್ರೋಣರಿಗೆ ಸಾವು ತಂದೆ. ಚಿರಂಜೀವಿಯಾದ ಅಶ್ವತ್ಥಾಯ
ಬಹಬಲಶಾಲಿಯಾದರೂ ಸಾಮಾನ್ಯ ಹೆಣ್ಣಿನಿಂದ ಅವನ ಹಣೆಯ ಪಣಿಯನ್ನು ಕಡೆಗಾಗಿಸಿದೆ.
ಕುಂತಿದೇವಿಗೆ ವಿವಾಹ ಪೂರ್ವದಲ್ಲಿ ಸಂತಾನ ನೀಡಿದೆ.

ಗಂಧಾರಿಗೆ ಹೊತದೊಂದಿಗೆ ವಿವಾಹ ಮಾಡಿಸಿದೆ. ಶ್ರೀರಾಮನಾಥ ಅವತಾರಿ ಪುರುಷೋತ್ತಮನನ್ನು
ಬಂಗಾರದ ಜಿಂಕೆಯ ಹಿಂದೆ ಓಡಿಸಿದೆ. ಸೀತೆಯ ಬಾಯಿಯಿಂದ ಲಕ್ಷ್ಮಣನಿಗೆ ಬಿರು ನುಡಿಯಾಡಿಸಿ ಓಡಿಸಿದೆ. ಶಿವಭಕ್ತನಾದ ರಾವಣನ ಮನಸ್ಸನ್ನು ಕೆಡಿಸಿದೆ. ಅಮೂಲ್ಯವಾದ ಮಹಾಭಾರತ ಹಾಗೂ ರಾಮಾಯಣದಂತಹ ಕಥೆಗಳಿಗೆ ಕವಿ ಸರ್ವಜ್ಞನ ತ್ರಿಪದಿಯಿಂದ ಸೋದರರ ವಧೆ ಹಾದರದ ಕಥೆ ಎಂದು ಬರೆಸಿ ಜೀವನದ ಪಾಠವಿರುವ ಕಥೆಯನ್ನು ಮೀರಿ ಬಾಳು ಇದೆ ಅದರಂತೆ
ಬದುಕಿ ಎಂದು ಹೇಳಿದೆ. ವಿಧಿಯೇ ನೀನಾರನ್ನು ಬಿಟ್ಟವಳು! ಸತ್ಯವನ್ನೆ ಉಸಿರಾಗಿಸಿಕೊಂಡು
ಬಂದ ರಾಜ ಹರಿಶ್ಚಂದ್ರನನ್ನು ಮಸಣದಲಿ ಪರೀಕ್ಷಿಸಿದೆ.

ವಿಶ್ವಮಿತ್ರ ಮಹರ್ಷಿಗಳನ್ನು ಹ್ಯಾವಕ್ಕೆ ಕೆಡವಿ ಅವರ ತಪಸ್ಸಿನ ಫಲವನ್ನೆ ಇಲ್ಲವಾಗಿಸಿದೆ. ಮನುಷ್ಯ ತಾನುಂದುಕೊಂಡಂತೆ ಎಂದೂ ಏನೂ ಆಗುವುದಿಲ್ಲ. ನಮ್ಮ ದೇಶ ಭಾರತ ವಿಶ್ವ ಮಟ್ಟದಲ್ಲಿ ಪ್ರಗತಿಯ ಹೆಜ್ಜೆಯನಿರಿಸಿ ನಾಗಲೋಟದ ಅಭಿವೃದ್ದಿಯ ಅಶ್ವ ಇನ್ನೇನು
ವಿಶ್ವದ ಭೂಪಟದಲ್ಲಿ ಪಟ್ಟಕಟ್ಟಿಸಿಕೊಳ್ಳುವ ಸಮಯ ಹೇಗಿತ್ತೆಂದರೆ ಶ್ರೀರಾಮನಿಗೆ
ಪಟ್ಟಾಭಿಷೇಕದ ಸಿದ್ದತೆ ನಡೆದು ದಶರಥ ಮಹಾರಾಜನ ಆಸೆ ಫಲಿಸಿ ಸಾರ್ವಭೌಮ ಪದವಿಯನ್ನು ಇನ್ನೇನು ಶ್ರೀರಾಮ ಸ್ವೀಕರಿಸುವ ಕ್ಷಣಗಣನೆಯ ಮರುಕ್ಷಣವೇ ಮಲತಾಯಿ
ಶ್ರೀರಾಮಚಂದ್ರನನ್ನು ಅರಣ್ಯಕ್ಕೆ ಕಳುಹಿಸಿ ಭರತನಿಗೆ ಸಾರ್ವಭೌಮ ಪಟ್ಟ ಕಟ್ಟುವಂತೆ,
ದಶರಥನ ಮಡದಿಯಾಗಿ ವಿಧಿಯೇ ಮಾರುವೇಷದಲ್ಲಿ ಬಂದು ದೊಡ್ಡದೊಂದು ಬಿರುಗಾಳಿಯನ್ನೇ
ಎಬ್ಬಿಸಿತು.

ದಶರಥ ಮಹಾರಾಜನ ಜೀವನದ ಅಂತಿಮ ಗಳಿಗೆಯಲ್ಲಿ ಇವೆಲ್ಲಾ ಕೇವಲ ಉದಾಹರಣೆ ಮಾತ್ರ. ನಮ್ಮ ಜಗಕೆ ಬಂದಿರುವ ಕಾಣದ ಜೀವಿ ಕೊರೊನಾದ ಅಬ್ಬರ ಒಂದು ಕ್ಷಣ ಸ್ಮರಿಸಿ ವಿಧಿಯು ಅಂದು ವ್ಯಕ್ತಿ ವ್ಯಕ್ತಿಗಳಿಗೆ, ಪ್ರಾಂತ, ಪ್ರಾಂತಗಳಿಗೆ ಸೀಮಿತವಾಗಿ ಕಾಡಿತ್ತು. ಆದರೆ ಇಂದು ಜಗವನ್ನೇ ತನ್ನ ಕಪಿಮುಷ್ಠಿಯಲ್ಲಿ ಬಂಧಿಸಿದೆ. ವೈರಸ್ ಸೋಂಕಿತ ಒಬ್ಬ ವ್ಯಕ್ತಿ ತಾನು ನಡೆದಾಡಿದ ಪ್ರದೇಶವನ್ನೆಲ್ಲ ಸೋಂಕಿತಗೊಳಿಸಿ ತನ್ನ ಸಾವಿನ ಸಹ ಪಯಣಿಗರು ನೀವೆಲ್ಲರು ಬನ್ನಿ ಎಂದು ಕರೆದಂತೆ ಭಾಸವಾಗತೊಡಗಿತು. ಲಾಕ್‌ಡೌನ್ಸಡಿಲಿಕೆಯಾಗುತ್ತಿದ್ದಂತೆಯೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಅಂದು ಬ್ರಿಟಿಷರು ನಮ್ಮ ಸ್ವತಂತ್ರಹರಣ ಮಾಡಿದ್ದರು. ಅದಕ್ಕಿಂತಲೂ ಭೀಕರಣವಾಗಿದೆ ಈ ಕೊರೊನಾ ಸ್ವಾತಂತ್ರಹರಣ.! ವಿಶ್ವಸಂಸ್ಥೆಯಂತಹ ದೊಡ್ಡ ಜಾಗದಲ್ಲಿ ಕುಳಿತವರು ಚೀನಾ ದೇಶದ ಪರವಾಗಿ ನಿರ್ಧಾರ ಕೈಗೊಳ್ಳುವ ಮೂಲಕ ವಿಶ್ವವನ್ನೆ ನರಕದ ಕೂಪಕ್ಕೆ ತಳ್ಳಿದರು.
ಯಾರೇನು ಮಾಡುವುದು, ಇದಲ್ಲಕ್ಕೂ ವಿಧಿಯೇ ಹೊಣೆ ಎಂದು ಭಾವಿಸಿ ಸುಮ್ಮನಾದರು.
ಲಾಲ್‌ಡೌನ್‌ನಿಂದ ಜಾರಿಯಾಗಿರುವುದರಿಂದ ಅಪಘಾತದಲ್ಲಿ ಮೃತಪಡುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ ಎಂದು ತಜ್ಞರು ಹೇಳುತ್ತಾರೆ. ನಿಜವಿರಬಹುದು, ಆದರೆ ಆ ಸಾವು ಸಾವಿನಿಂದ ಸಾವಿಗೆ ಸರಪಳಿಯಾಗಿ ಇನ್ನೊಬ್ಬರಿಗೆ ಹರಡುವ ಖಾಯಿಲೆ ಅಲ್ಲ. ಕೊನೆಗೆ ಮೃತ
ದೇಹವನ್ನಾದರೂ ಸಂಬಂಧಿಗಳು ಅಂತ್ಯ ಸಂಸ್ಕಾರದ ವಿಧಿಗೆ ಒಳಪಡಿಸಿ ತಮ್ಮ ಸಂಬಂಧಿಯ ಕೊನೆ ದರ್ಶನದ ಆಸೆಯನ್ನಾದರೂ ಈಡೇರಿಸಿಕೊಂಡು ಹುಟ್ಟು-ಸಾವು ಸಹಜವೆಂದುಕೊಂಡು ಸುಮ್ಮನಾಗುತ್ತಿದ್ದರು. ಆದರೆ ಈ ಕೊರೊನಾ ವೈರಸ್ ದಾಳಿಯ ಸಾವು ಅನಾಥ ಹೆಣವನ್ನಾಗಿಸಿದೆ.

ನಿಮ್ಮ ಹೆಂಡತಿ-ಮಕ್ಕಳು, ಬಂಧು-ಬಾಂಧವರು, ಸ್ನೇಹಿತರು ಕೇವಲ ಪ್ರಯಾಣದ ಸಮಯದಲ್ಲಿ ಪರಿಚಿತರಾಗಿ ಸಮಯ ಬಂದಾಗ ಇಳಿದು ಹೋಗಿ ಬಿಡುತ್ತಾರೆ ಎನ್ನುವುದನ್ನು ಕೊರೊನಾ ಮನವರಿಕೆ ಮಾಡಿ ಕೊಟ್ಟಿತು. ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಮೊಟ್ಟೆಯನ್ನು ತಯಾರಿಸಿ ತನ್ನ
ಹೀನ ಕೃತ್ಯವನ್ನು ಮೆರೆದ ಚೀನಾ ತಮ್ಮ ಆಹಾರ ಪದ್ದತಿಗನುಗುಣವಾಗಿ ತಮ್ಮ ದುರ್ಗುಣವನ್ನು ಹೊರ ಹಾಕಿತು. ಹಣ ಇಡಲು ಬ್ಯಾಂಕ್, ಬ್ಲಡ್ ಬ್ಯಾಂಕ್, ವೀರ್ಯಾಣು ಬ್ಯಾಂಕ್ ಸೇರಿದಂತೆ
ಮುಂತಾದ ಬ್ಯಾಂಕ್‌ಗಳನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ವೈರಸ್‌ಗಳ ಬ್ಯಾಂಕ್
ತೆರೆದು ವೈರಸ್‌ಗಳನ್ನು ಸಂಗ್ರಹಿಸಿರುವುದು ದುರ್ಬದ್ದಿಯ ಸಂಕೇತವೆಂದೇ
ಭಾವಿಸಬೇಕಾಗುತ್ತದೆ.

ಜೈವಿಕಾಸ್ತ್ರ ಪ್ರಯೋಗಿಸುವ ಮೂರ್ಖ ರಾಷ್ಟ್ರ ಇಂದು ಜಗತ್ತಿಗೆ ಪರಿಚಯವಾಯಿತು. ಜಗತ್ತು ತಲ್ಲಣಗೊಂಡರೂ ವಿಶ್ವ ಸಂಸ್ಥೆ ಮೊದಲುಗೊಂಡು ಯಾವ ರಾಷ್ಟ್ರವೂ ಚೀನಾದ ವಿರುದ್ದ ದಂಧೆ ಏಳುತ್ತಿಲ್ಲ; ಎಂದರೆ ಪರಮಾಣುಗಳ ಬೆದರಿಕೆ. ಒಂದು ಕಾಣದ ಜೀವಿ ಎಷ್ಟು ಸುಂದರವಾಗಿ
ನಮ್ಮನ್ನು ಸಾವಿನ ಬಾಯಿಗೆ ನೂಕುತ್ತಿದೆ. ಅಂದರೆ ಕಣ್ಣಿಗೆ ಕಾಣುವ ಜೀವಿ ಏನು ಮಾಡಲಾರದು. ಆದರೆ ಅಣು-ಪರಮಾಣುಗಳ ಗಾತ್ರ ತೀರಾ ಎಷ್ಟು ಚಿಕ್ಕದು. ಅಂತಹ ಚಿಕ್ಕ ಪರಮಾಣು ಜಗವನ್ನೆ ಭಸ್ಮ ಮಾಡಬಲ್ಲದು. ಪ್ರೀತಿ, ಪ್ರೇಮ, ವಿಶ್ವಾಸದಿಂದ ಬಾಳಿ ಬದುಕಬೇಕು ಎನ್ನುವವರು ಒಂದಡೆಯಾದರೆ ಇನ್ನು ಕೆಲವರು ಹಿಂಸೆಯಿಂದ ವಿಕೃತಾನಂದ ಅನುಭವಿಸುವವರು ಇದ್ದಾರೆ. ಕೆಟ್ಟದ್ದು ಬೇಗನೆ ಅಂಟುತ್ತದೆ; ಒಳ್ಳೆಯದನ್ನು ಪ್ರಯತ್ನ ಪೂರ್ವಕವಾಗಿ ಮೈಗೂಡಿಸಿಕೊಳ್ಳಬೇಕು.

‘ಬಿತ್ತದೆ ಬೆಳೆಯುವುದು ಕಸ, ಬಿತ್ತಿಯೂ ಬೆಳೆಯದು ದಾನ್ಯ’ ಎಂದು ಸಾಹಿತಿ ಡಿವಿಜಿ
ಅವರು ಮನುಷ್ಯನಿಗೆ ದುರ್ಗುಣಗಳು ತಾವಾಗಿಯೇ ಬಂದು ಸೇರುತ್ತವೆ ಆದರೆ ಸದ್ಗುಣಗಳನ್ನುಮೈಗೂಡಿಸಿಕೊಳ್ಳಲು ಹರಸಾಹಸವೇ ಪಡಬೇಕು ಎಂದು ಹೇಳುತ್ತಾರೆ. ಅದರಂತೆ ಇಂದು ಕೆಟ್ಟ ಕೆಲಸಕ್ಕೆ ಸಹಾಯ ಮಾಡುವವರು ಹೇರಳವಾಗಿ ಸಿಗುತ್ತಾರೆ. ಅದೇ ಒಂದು ಒಳ್ಳೆಯ ಕಾರ್ಯಕ್ಕೆ
ಸಹಾಯ ಮಾಡಿ ಎಂದರೆ ಯಾರು ಮಾಡುವುದಿಲ್ಲ. ಒಂದು ವೇಳೆ ಮಾಡುವುದಾದರೆ ಸಾವಿರಾರು ಕರಾರುಗಳ ಮೇಲೆ ಮಾಡುತ್ತಾರೆ. ಜೂಜು, ಕುಡಿತ, ಮೋಜು-ಮಸ್ತಿ ಇವುಗಳಿಂದ ಮನುಷ್ಯ ಸಂಪತ್ತನ್ನು ಹಾಳು ಮಾಡಿಕೊಳ್ಳುತ್ತಾನೆ ಎಂಬುವುದು ಯಾರಿಗೆ ಗೊತ್ತಿಲ್ಲ ಹೇಳಿ? ಆದರೂ ಇವುಗಳ ವ್ಯಸನಿಗಳು ನಾವು. ಪರೋಪಕಾರ, ದಯೆ, ಕ್ಷಮಾದಂತಹ ಸದ್ಗುಣಗಳಿಂದ ನಾವುಮಹಾತ್ಮರಾಗುತ್ತೇವೆ ಎಂಬುದು ನಮಗೆಲ್ಲರಿಗೂ ಗೊತ್ತು ಆದರೂ ನಾವು ಇಂತಹ
ಸತ್ಕಾರ್ಯದಲ್ಲಿ ನಿರತರಾಗುವುದು ಕಡಿಮೆ!

‘ಹೆಂಡ ಇದ್ದಲ್ಲಿಗೆ ಹೋಗುತ್ತೇವೆ; ಹಾಲು ನಾವು ಇದ್ದಲ್ಲಿಗೆ ಬರಲಿ’ ಎಂದು ಬಯಸುತ್ತೇವೆ. ಹಾಲುಕೊಂಡು ಕೊಳ್ಳಲು ಚೌಕಾಶಿ ಮಾಡುತ್ತೀವೆ. ಆದರೆ ಅದೇ ಬಾರಗಳಲ್ಲಿ ಅವರು ಹೇಳಿದಷ್ಟು ಹಣ ಕೊಟ್ಟು ತರುತ್ತೇವೆ. ಈ ಗುಣ ಇಂದು-ನಿನ್ನೆಯದಲ್ಲ, ಈ ಕಲಿಯುಗದ
ಆರಂಭದಿಂದಲೇ ನೂರಕ್ಕೆ ತೊಂಬತ್ತರಷ್ಟು ಜನ ನಾವು ಕೆಡುವ ದಾರಿಯನ್ನು ನಾವೇ
ಹುಡುಕಿಕೊಂಡಿದ್ದೇವೆ. ಈ ಯುಗವೇ ವಿಧಿಯ ಸಾಮ್ರಾಜ್ಯವಾಗಿದ್ದು, ನಾವೆಲ್ಲರೂ ವಿಧಿಯ
ಕೈಗೊಂಬೆಯಾಗಿದ್ದೇವೆ. ಈಗ ಕೊರೊನಾ ಹೆಸರಿನಲ್ಲಿ ಬಂದು ಕಾಡುತ್ತಿರುವವಳು ಅಷ್ಟೇ!

ಡಾ.ಮಳೆಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ
ಉಜ್ಜಯಿನಿ ಸದ್ದಧರ್ಮ ಸಿಂಹಾಸನ ಶಾಖಾ
ಮಾನಿಹಳ್ಳಿ ಪುರವರ್ಗ ಮಠ
ಮಾನಿಹಳ್ಳಿ, ಹೂವಿನಹಡಗಲಿ, ತಾ||
ಸಂಪರ್ಕ: ೯೮೪೫೮೪೭೫೬೦