Kourava News

ನಿಂದ್ರಿಕಿ ದೇವರು, ಕ್ವಾರಂಟೈನ್ ಮತ್ತು ಕರೆಯಮನ………….

ನಾವು ಹುಡುಗರಿದ್ದಾಗ ನಮ್ಮೂರಾಗ ಕರೆಯಮನಪ್ಪ ಅಂತಾ ಇದ್ದ. ಅವ್ನ ಹೆಸರು ಬರೆೆ ಯಮನಪ. ರ‍್ರಗ ಇದ್ದದ್ದಕ್ಕ ಕರೆಯಮನಪ್ಪಾ ಅಂತಿದ್ರು. ಒಂದು ವರ್ಷ ಮೊಹರಂ ಹಬ್ಬದಾಗ ಅವನ ಮ್ಯಾಲೆ ನಿಂದ್ರಕಿ ದೇವರು ಹರ‍್ಸಿ ಬಿಟ್ಟರು. ನಿಂದ್ರಕಿ ದೇವರು ಅಂದ್ರ, ಡೋಲಿಯೊಳಗ ಮರ‍್ನಾಕು ದೇವರು ಕುಂರ‍್ಸಿದ್ದರ, ಒಂದು ದೇವರನ್ನು ಮಸೀದಿಯ ಕಂಭಕ್ಕ ನಿಲ್ಲಿಸರ‍್ತಾರ. ಡೋಲಿಯನ್ನು ನಾಲ್ಕು ಜನ ಹೊತ್ತರೆ, ನಿಂದ್ರಕಿ ದೇವರನ್ನು ಒಬ್ಬಾಂವ ಹೊರತಾನ. ನಮ್ಮೂರಾಗ ಬರಿ ಮೂರ ಮೂರು ಪಿಂಜಾರ ಮನಿ ಅದಾವು. ಪ್ರತಿ ವರ್ಷಾ ಬೇನಗಿಡದ ಹುಸೇನಪ್ಪ ಹೊರತಿದ್ದ. ಆದರೆ ಆ ವರ್ಷ ಹುಸೇನಪ್ಪ ಅಲ್ಲಾಹನ ಪಾದ ಸೇರಿ ಬಿಟ್ಟಿದ್ದ. ಅದಕ್ಕ ನಿಂದ್ರಕಿ ದೇವರನ್ನು ಹೊರಾವ್ರು ಯಾರು ಇಲ್ಲದಂಗಾಗಿ ಕರೆಯಮನಪ್ಪನ ಮ್ಯಾಲೆ ಹರ‍್ಸಿ ಬಿಟ್ಟರು. ಕರೆ ಯಮನಪ್ಪ ಸಾಬರ ಪೈಕಿ ಅಲ್ಲ. ಆತ ಒಬ್ಬ ಹಿಂದೂ ಆಗಿದ್ದ. ದೇವರು ಹೊಳಿಗೆ ಹೋಗ ಮುಂದೆ, ಇಲ್ಲಾಂದ್ರ ಖತಲ್ ರಾತ್ರಿ ದಿವಸ ದೇವರು ಮೈಯ್ಯಾಗ ಬರೋದು ರೂಢಿ.ಹಾಂಗ ದೇವರು ಮೈಯ್ಯಾಗ ಬಂದಾಗ, ಭಕ್ತರು ಬಂದು ಆ ದೇವರ ಮುಂದೆ ಅಡ್ಡ ಬಿದ್ದು ತಮ್ಮ ಅಹವಾಲು ಹೇಳಿ ಪರಿಹಾರ ಕಂಡುಕೊಳ್ತಾರ. ದೆವ್ವ ಬಡಕೊಂಡವ್ರೂ, ಅಡ್ಡ ಬಿದ್ದು ದೆವ್ವಾ ಬಿಡ್ಸಿಕೊಳ್ತಾರ.
ಕರೆಯಮನ ದೇವರು ಹೊತ್ತಾಗೂ ಆತನ ಮೈಯ್ಯಾಗ ದೇವರು ಬಂದು ಬುಟ್ತು.ಅಂವಾ ಜೋಲಿ ಹೊಡಕೊಂತಾ,ಡೋಲಿ ಬಿಟ್ಟು ಗಾಣಗೇರ ಓಣ್ಯಾಗ ಓಡಿ ಹೋಗಿ ಬಿಟ್ಟ. ಹಲಗಿ ಬಡಿಯವ್ರೂ ಆ ನಿಂದ್ರಕಿ ದೇವರ ಹಿಂದೆ ಹೋಗಿ ಬಿಟ್ರು. ಡೋಲಿ ಹೊತ್ತವರು ನಾಲ್ಕು ಮಂದಿ ಬಿಟ್ಟರ ಅಲ್ಲಿ ಯಾರೂ ಉಳಿಯಲಿಲ್ಲ. ಡೋಲಿ ಹಂತೇಲಿ ಏನೂ ಮಜಾ ಇಲ್ಲಂತ ನಾವೆಲ್ಲಾ ‘ ಜಡ್ಡಿನಕ, ಪಂಪನ್ನಕ’ ಅನುಕೊಂತ ಆ ನಿಂದ್ರಕಿ ದೇವರ ಹಿಂದೆ ಓಡಿ ಹೋದೆವು. ನಾಕೈದು ಮಂದಿ ಹಿರೇರು ಹೋಗಿ ಆ ಕರೆಯಮನನಿಗೆ ದಿಷ್ಟಿ ಆಗೇತಿ ಅಂತಾ ಲಿಂಬಿ ಹಣ್ಣು ಇಳೆದಗದು ಒಗ್ದು, ಅವನ್ನ ಹಿಡಕೊಂಡು ಬಂದ್ರು. ಅಗ್ಸಿ ಕಲ್ಲಾಗ ಬಂದ ಕೂಡ್ಲೆ ದೇವರ ಮುಂದೆ ಅಡ್ಡ ಬೀಳವ್ರದೊಂದು ದೊಡ್ಡ ಹಿಂಡ ಬಂತು.ದೇವರು ಹೆಣ್ಮಕ್ಕಳಿಗೆ ಡಿಕ್ಕಿ ಹೊಡಿತಿತ್ತು, ಡಿಕ್ಕಿ ಹೊಡಿತಿದ್ದದ್ದು ದೇವರ, ಏನು ಯಮನಪ್ಪನ ಹೊಡಿತಾನ ಅನ್ನೋದು ನಮಗ ಗೊತ್ತಾಕ್ಕಿದ್ದಿಲ್ಲ. ಇಲ್ಲಾಂದ್ರ ಕಾಲಾಗ ಹಾಕಿ ಕಚಿ-ಪಿಚಿ ತುಳ್ದು ಮುಂದಕ್ಕ ಹೋಗಿ ಬುಡ್ತಿತ್ತು. ಕೆಂಪು ಭೀಮವ್ವ ಆರು ತಿಂಗಳು ಬಸುರಿ, ಆಕಿಗೂ ದೆವ್ವ ಗಂಟ ಬಿದ್ದಿತ್ತು. ಆಕಿನೂ ತಂದು ದೇವರ ಮುಂದೆ ಅಡ್ಡ ಬೀಳ್ಸಿದ್ರು. ಆಕಿಮ್ಯಾಲೆ ಯಮನೂರ ಹಿಂದಕ ಮುಂದಕ ನಾಕೈದು ಸರ್ತಿ ಅಡ್ಡಾಡಿ ಬುಟ್ಟ. ಆಕಿ ಸೀರೆಲ್ಲಾ ಕೆಂಪಗ ಆತು. ಆಕಿ ಬದುಕಿ ಉಳಿಲಿಲ್ಲ. ಇವ್ರಾಪ್ರ ಮಾದ್ಯಮದ ಕೆಟ್ಟ ಹುಡುಗ್ರು,ನಮ್ದ ಮೊದ್ಲು, ನಾವ ಮೊದ್ಲು ಅಂತಾ ವಾದಗಿ ಬೀದಿ ಹೋಗಿ ಪೋಲೀಸರಿಗೆ ಸುದ್ದಿ ಮುಟ್ಟಿಸಿ ಬುಟ್ರು. ಮರುದಿವಸ ನಮ್ಮೂರಿಗೆ ಪೋಲೀಸರು ಬಂದ್ರು.ಊರಿಗೆ ಊರ ಲಾಕ್‌ಡೌನ ಆತು. ಕರೆಯಮನನ್ನ ಕ್ವಾರಂಟೈನ್ ಮಾಡಿ ಎಲ್ಲೋ ಇಟ್ಟು ಬಿಟ್ರು.ಆ ಯಮನಪ್ಪನ ಹೇಣ್ತಿ ದ್ಯಾಮವ್ವ “ಅಯ್ಯಯ್ಯೋ ಆ ದೇವರ ಯಾಕ ಹೊರಾಕ ಹೋಗಿದ್ದೋ ಮಾರಾಯಾ” ಅಂತಾ ಬಾಯಿ ಬಾಯಿ ಬಡಕೊಂಡ್ಲು. ಆಕಿನ ಜರ‍್ಸಿ ಮನಿಗೆ ಕಳಿಸಿದರು. ಮರುದಿವ್ಸ, ಆ ಫಕೀರವ್ವ, ಅವರತ್ತಿ ಹನುಮವ್ವ, ಮೈದ್ನ ಮಲ್ಲೇಶಿ ಎಲ್ಲರ‍್ನೂ ಕ್ವಾರಂಟೈನ್ ಮಾಡಿ ಇಟ್ಟು ಬಿಟ್ರು.


ವಿರೂಪಾಕ್ಷಪ್ಪ ಕೋರಗಲ್, ಹಾವೇರಿ