Kourava News

ಪರಿಸರ ರಕ್ಷಿಸದಿದ್ದರೆ ಮಾನವ ಸಂಕುಲದ ಅವನತಿ !

ಪ್ರಕೃತಿ ಉಳಿಯದಿದ್ದರೆ ಕೊರೊನಾದಂತಹ ನೂರಾರು ವೈರಸ್‌ಗಳ ಭಯ ಪ್ರತಿದಿನವೂ ಕಾಡುವುದು ದಿಟ

ಪ್ರಪಂಚದಲಿ ಮನುಷ್ಯ ಏಕಾಂಗಿ ಜೀವಿಯಲ್ಲ. ಪ್ರಕೃತಿ ಪ್ರತಿಯೊಂದು ಜೀವಿಗೂ ಸೇರಿದ ಪ್ರಾಕೃತಿಕ ಸಂಪತ್ತು. ಮನುಷ್ಯ ಗಿಡ, ಮರ, ಗಾಳಿ, ಮಳೆ ಇವುಗಳೊಂದಿಗೆ ನೇರವಾದ ಸಂಬಂಧವನ್ನು ಹೊಂದಿದ್ದು, ಇವುಗಳನ್ನು ಉಳಿಸಿ ಬೆಳೆಸಬೇಕಿದೆ ಆದರೆ ಇಂದು ಮನುಷ್ಯನ ವಕ್ರದೃಷ್ಟಿ ಅರಣ್ಯ, ಪ್ರಾಣಿಗಳು ಮತ್ತು ಪಕ್ಷಿಗಳ ಮೇಲೆ ಬಿದ್ದಿರುವ ಪರಿಣಾಮ ಅನಾಹುತಗಳನ್ನು ತಂದೊಡ್ಡಿದೆ. ಭೂಮಿಯ ಮೇಲಿನ ಆಹಾರ ಸರಪಳಿ ಜೀವಿಗಳ ಸಮತೋಲನವನ್ನು ಕಾಪಾಡುತ್ತದೆ ಆದರೆ ಇಂದು ವನ್ಯಜೀವಿಗಳನ್ನು ನಾಶ ಮಾಡುವುದರಿಂದ ಆಹಾರ ಸರಪಳಿ ಅಸಮತೋಲನವಾಗಿದೆ.

ವನ್ಯಜೀವಿಗಳು ಪರಿಸರದ ಅವಿಭಾಜ್ಯ ಅಂಗ. ಆದರೆ ಅನೇಕ ಪ್ರಾಣಿಗಳು ಅಳಿವಿನ ಅಪಾಯದಲ್ಲಿವೆ ಮತ್ತು ಕೆಲವೊಂದು ಪ್ರಭೇದಗಳು ನಶಿಸಿ ಹೋಗವೆ. ಪ್ರಾಣಿಗಳು ಭೂಮಿಯ ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ ಪರಿಸರವನ್ನು ಸಂರಕ್ಷಣೆ ಮಾಡುತ್ತವೆ. ಮಾನವನ ಅಹಿತಕರ ಚಟುವಟಿಕೆಗಳು ಮತ್ತು ಮನೋರಂಜನೆ ಪ್ರಾಣಿ ಸಂಕುಲಕ್ಕೆ ದೊಡ್ಡ ಅಪಾಯವನ್ನು ತಂದೊಡ್ಡುತ್ತಿವೆ. ಅರಣ್ಯದಲ್ಲಿ ಬೇಟೆ ಮತ್ತು ಅಕ್ರಮ ಟ್ರಕಿಂಗ್ ಮಾಡುವ ವೇಳೆ ಮೋಜಿಗಾಗಿ ಹಲವಾರು ಕಾಡು ಪ್ರಾಣಿಗಳು ಮತ್ತು ಪಕ್ಷಿಗಳು ನಿರ್ದಾಕ್ಷಿಣ್ಯವಾಗಿ ಕೊಲ್ಲಲ್ಪಡುತ್ತವೆ.

ಕೆಲವರು ತಮ್ಮ ಆದಾಯಕ್ಕಾಗಿ ಪ್ರಾಣಿಗಳ ಚರ್ಮ, ಮಾಂಸ ಇತ್ಯಾದಿಗಳನ್ನು ಮಾರಾಟ ಮಾಡುವುದರ ಮೂಲಕ ಲಾಭ ಗಳಿಸುವುದಕ್ಕಾಗಿ ಪ್ರಾಣಿಗಳನ್ನು ಕೊಲ್ಲುತ್ತಾರೆ. ಆನೆಗಳನ್ನು ದಂತಕ್ಕಾಗಿ ಕೊಲ್ಲಲಾಗುತ್ತದೆ. ಚರ್ಮಕ್ಕಾಗಿ ಹುಲಿ, ಸಿಂಹಗಳು ಬಲಿಯಾಗುತ್ತಿವೆ. ರೆಕ್ಕೆಪುಕ್ಕಗಳಿಗಾಗಿ ಪಕ್ಷಿಗಳು, ಮಾಂಸಕ್ಕಾಗಿ ಕಾಡು ಹಂದಿ, ಕಾಡು ಕೋಳಿಗಳು, ಜಿಂಕೆ ಹೀಗೆ ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಬೆಳೆಯುತ್ತದೆ. ಪ್ರಾಣಿಗಳನ್ನು ಬೇಟೆಯಾಡುವುದು ಕೇವಲ ಪ್ರಾಣಿಗಳಿಗೆ ಮಾಡಿದ ಕ್ರೌರ್ಯವಲ್ಲ, ಪರೋಕ್ಷವಾಗಿ ಅದು ಮಾನವ ಸಂಕಲದ ಅವನತಿಯೂ ಹೌದು. ದಿನದಿಂದ ದಿನಕ್ಕೆ ಅರಣ್ಯ ನಾಶಕ್ಕೆ ನಾವೇ ನಾಂದಿ ಹಾಡುತ್ತಿದ್ದೇವೆ. ಅಲ್ಲದೇ ಅಪರೂಪದ ಪ್ರಾಣಿ-ಪಕ್ಷಿಗಳಿಗೆ ನಾವೇ ಜವರಾಯರಾಗಿ ಕಾಡುತ್ತಿದ್ದೇವೆ.

ನಗರೀಕರಣದ ಪ್ರಭಾವದಿಂದ ವಾಸಿಸಲು ಸ್ಥಳಾವಕಾಶಕ್ಕಾಗಿ ಅರಣ್ಯವನ್ನು ಎಗ್ಗಿಲ್ಲದೇ ನಾಶ ಮಾಡುವ ಮೂಲಕ ಅಪಾರ ಸಂಖ್ಯೆಯ ಪ್ರಾಣಿಗಳನ್ನು ನಿರಾಶ್ರಿತರನ್ನಾಗಿ ಮಾಡಿದ್ದೇವೆ ಮತ್ತು ಮಾಡುತ್ತಿದ್ದೇವೆ. ಮರಗಳನ್ನು ಇಂಧನ ಮತ್ತು ಕಾಗದ ತಯಾರಿಕೆಗಾಗಿ ಕತ್ತರಿಸುವುದರಿಂದ ಅರಣ್ಯದ ವ್ಯಾಪ್ತಿ, ವಿಸ್ತಾರ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಕಾಡು ನಾಶವಾದಂತೆ ಪ್ರಾಣಿ, ಪಕ್ಷಿ ಪ್ರಬೇಧಗಳು ವಿರಳವಾಗುತ್ತಿರುವುದರಿಂದ ಕೆಲವು ಪ್ರಾಣಿಗಳು ಹಸಿವಿನಿಂದ ನರಳುತ್ತಿವೆ. ಹೀಗಾಗಿ ಆಹಾರ ಅರಸಿಕೊಂಡು ಕಾಡಿನಿಂದ ನಾಡಿಗೆ ಬರುತ್ತಿವೆ. ಪ್ರಾಣಿ, ಪಕ್ಷಿಗಳ ನೈಸರ್ಗಿಕ ಆವಾಸಸ್ಥಾನ ಹಾಳಾಗಿರುವುದರಿಂದ ಮುಂದೊಂದು ದಿನ ಪ್ರಾಣಿ ಪಕ್ಷಿಗಳನ್ನು ಛಾಯಚಿತ್ರಗಳಲ್ಲಿ ವೀಕ್ಷಿಸುವಂತಹ ದಿನಗಳು ಬರುವ ಕಾಲ ದೂರವಿಲ್ಲ.

ಮಕ್ಕಳಿಗೆ ಅಭ್ಯಾಸದ ದಿನಗಳಲ್ಲಿಯೇ ಪರಿಸರ ನಾಶದಿಂದಾಗುವ ಪರಿಣಾಮಗಳು ಹಾಗೂ ಪರಿಸರ ಕಾಪಾಡುವುದರಿಂದ ಆಗಬಹುದಾದ ಪ್ರಯೋಜನಗಳನ್ನು ಶಿಕ್ಷಣದ ಮೂಲಕ ನೀಡುವ ವ್ಯವಸ್ಥೆ ಜಾರಿಯಾಗಬೇಕಿದೆ. ಅಲ್ಲದೇ ಅನಕ್ಷರಸ್ಥ ಜನರಿಗೆ ಭಿತ್ತಿಪತ್ರಗಳ ಮೂಲಕ ವನ್ಯಜೀವಿ ಸಂಪತ್ತು ಉಳಿವಿಗೆ ಜಾಗೃತಿ ಮೂಡಿಸುವ ಮೂಲಕ ಅವರ ಮನಸ್ಸು ಪರಿವರ್ತನೆ ಮಾಡುವ ಕೆಲಸ ಮಾಡಬೇಕಿದೆ. ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ ಕೇವಲ ಅರಣ್ಯ ಇಲಾಖೆ, ಸರ್ಕಾರದ ಕೆಲಸವಲ್ಲ, ಅದು ಪ್ರತಿಯೊಬ್ಬ ಮಾನವರ ಆದ್ಯ ಕರ್ತವ್ಯವಾಗಿದೆ ಎಂಬುವುದನ್ನು ಮನಗಾಣಬೇಕು.

ವನ್ಯಜೀವಿಗಳ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ವಿವಿಧ ನೈಸರ್ಗಿಕ ಯೋಜನೆಗಳು ಮತ್ತು ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಾದ ಪ್ರಾಜೆಕ್ಟ್ ಟೈಗರ್, ನೇಚರ್ ಕ್ಯಾಂಪ್ಸ್ ಮತ್ತು ಜಂಗಲ್ ಲಾಡ್ಜ್‌ಗಳನ್ನು ಪ್ರಾರಂಭಿಸಿತು. ಈ ಯೋಜನೆಗಳು ನಮ್ಮ ನೈಸರ್ಗಿಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ರಕ್ಷಿಸಲು ಮಾತ್ರವಲ್ಲದೆ ಪರಿಸರ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುತ್ತವೆ. ಹುಲಿ ಜನಸಂಖ್ಯೆಯನ್ನು ರಕ್ಷಿಸುವಲ್ಲಿ ಭಾರತ ಸರ್ಕಾರ ಯಶಸ್ವಿಯಾಗಿದೆ. ಅಸ್ಸಾಂನ ಕಾಜಿರಂಗಾ ರಾಷ್ಟ್ರೀಯ ಉದ್ಯಾನವು ಅಳಿವಿನಂಚಿನಲ್ಲಿರುವ ಖಡ್ಗಮೃಗವನ್ನು ಉಳಿಸುವ ಪ್ರಯತ್ನವನ್ನು ಮಾಡುತ್ತಿದೆ.

ಅರಣ್ಯ ನಾಶ ಮುಂದುವರೆದರೆ ಕೆಲವೇ ವರ್ಷಗಳಲ್ಲಿ ಬೆಂಗಾಲ್ ಟೈಗರ್, ಗೆಂಡಾಮೃಗ, ಕಾಳಿಂಗ ಸರ್ಪದಂತಹ ವನ್ಯಜೀವಿಗಳು ಕಾಣಲು ಸಿಗುವುದಿಲ್ಲ ಹಾಗಾಗಿ ವನ್ಯಜೀವಿ ಸಂರಕ್ಷಣೆ ನಮ್ಮಂತೆಯೇ ಅಗತ್ಯವಾಗಿದೆ. ಕಾಡು ಪ್ರಾಣಿಗಳನ್ನು ಉಳಿಸಿದರೆ ನಮಗೆ ಅರಣ್ಯ ಸಂರಕ್ಷಣೆಯಾಗುತ್ತದೆ ಇಲ್ಲವಾದಲ್ಲಿ ಮುಂದೊಂದು ದಿನ ದೊಡ್ಡ ಅಪಾಯದ ದಿನಗಳನ್ನು ನಾವು ಎದುರಿಸಬೇಕಾಗಿ ಬರುವುದು ಆದ್ದರಿಂದ, ವನ್ಯಜೀವಿಗಳನ್ನು ಸಂರಕ್ಷಿಸಿ ಮತ್ತು ವಿಶ್ವದ ಜೀವವನ್ನು ಉಳಿಸಲು ನಾವು ಸಿದ್ಧರಾಗಬೇಕಿದೆ.

ಅರಣ್ಯ ನಾಶವಾಗಿ ಮುಂದೊಂದು ದಿನ ಆಮ್ಲಜನಕದ ಕೊರತೆಯಾಗಿ ನಾವು ಬದುಕುವುದೇ ದುಸ್ತರವಾಗುವಂತಹ ದಿನಗಳು ದೂರವಿಲ್ಲ. ಇದಕ್ಕೆ ಉದಾಹರಣೆಯಾಗಿ ನಾವುಗಳು ನೀರನ್ನು ಹಣ ಕೊಟ್ಟು ಖರೀದಿಸಿ ಕುಡಿಯುತಿದ್ದೇವೆ. ಮುಂದಿನ ದಿನಗಳಲ್ಲಿ ಶುದ್ದ ಗಾಳಿಯನ್ನು ಸಹ ಹಣ ನೀಡಿ ಆಮ್ಲಜನಕ ಪಡೆದರೂ ಆಶ್ಚರ್ಯಪಡಬೇಕಾಗಿಲ್ಲ. ಎಲ್ಲಿಯೂ ಶುದ್ದ ಗಾಳಿ ಸಿಗದಂತಾಗಿ ಮೊಬೈಲ್‌ನಂತೆ ಆಮ್ಲಜನಕದ ಕಿಟ್ ಹೆಗಲಿಗೆ ಹಾಕಿಕೊಂಡು ಸಂಚರಿಸುವ ದಿನಗಳು ಸಮೀಪಸುತ್ತಿರುವಂತೆ ಭಾಸವಾಗುತ್ತಿದೆ. ಮನುಷ್ಯನ ದುರಾಸೆಗೆ ಕೊನೆ ಎಂಬುವುದೇ ಇಲ್ಲವೇ ಎನ್ನುವ ಪ್ರಶ್ನೆ ಇಂದು ಕಾಡುತ್ತಿದೆ.

ಕೇವಲ ವಿಶ್ವ ಪರಿಸರ ದಿನದಂದು ಒಂದೆರಡು ಗಿಡಗಳನ್ನು ನೆಟ್ಟು ದಿನಾಚರಣೆ ಆಚರಣೆ ಮಾಡಿದರೆ ಸಾಲದು, ಇದರಿಂದ ಯಾವುದೇ ಪ್ರಯೋಜನವಿಲ್ಲ. ಅವುಗಳನ್ನು ಸಂರಕ್ಷಣೆ ಮಾಡುವ ಕಾಯಕ ಮಾಡಬೇಕು. ನಾವು ನಿಜವಾಗಿ ಭೂಮಿಯನ್ನ ರಕ್ಷಿಸುವ ಮೂಲಕ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕೆಂದರೆ ಮೊದಲು ಅರಣ್ಯ ಹಾಗೂ ವನ್ಯಜೀವಿ ಸಂಪತ್ತು ಉಳಿಸಬೇಕಿದೆ. ಜಗತ್ತಿಗೆ ಬಂದಿರುವ ಕೊರೊನಾ ಕಂಟಕ ಕೇವಲ ನಾಮಕಾವಸ್ತೆ ಅಷ್ಟೇ, ಪರಿಸರ ಉಳಿಯದಿದ್ದರೆ ಇಂತಹ ನೂರಾರು ವೈರಸ್‌ಗಳು ಪ್ರತಿದಿನವೂ ನಮ್ಮನ್ನು ಭಯದಲ್ಲಿಯೇ ಕೊಂದು ಹಾಕುವುದಂತೂ ದಿಟ.

– ಎ.ವಿ. ಅರುಣಕುಮಾರ್, ಪ್ರಾಂಶುಪಾಲರು

TMAES BB  PU Science College

Mob : 9591327969, ಹರಪನಹಳ್ಳಿ.