Kourava News

ಬಸವಣ್ಣನವರ ವಿಚಾರಗಳನ್ನು ಸ್ಥಾವರಗೊಳಿಸದೇ ಜಂಗಮಗೊಳಿಸೋಣ, ಮನೆಯಲ್ಲಿ ಬಸವಜಯಂತಿ ಆಚರಿಸೋಣ: ಮೇಗಳಮನಿ


ಹಾವೇರಿ: ಮಹಾನ್ ಮಾನವತಾವಾದಿ, ವಿಶ್ವಗುರು ಜಗಜ್ಯೋತಿ ಬಸವೇಶ್ವರರು ಜಗದ ಕಣ್ಣಾಗಿದ್ದು, ಲಾಕ್‌ಡೌನ್ ಹಿನ್ನಲೆಯಲ್ಲಿ ಏ.೨6 ರಂದು ಭಾನುವಾರ ಬಸವೇಶ್ವರರ ಜಯಂತಿಯನ್ನು ಮನೆ-ಮನಗಳಲ್ಲಿ ಆಚರಿಸುವ ಮೂಲಕ ಬಸವೇಶ್ವರರ ಕಾಯಕ-ದಾಸೋಹ ತತ್ವವನ್ನು ಪರಿಪಾಲನೆ ಮಾಡೋಣ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ಮನವಿ ಮಾಡಿಕೊಂಡಿದ್ದಾರೆ.
೧೨ನೇ ಶತಮಾನದಲ್ಲಿ ಜಗದ ಬೆಳಕಾಗಿ ಸಮಾನತೆ ಹರಿಕಾರರಾದ ಬಸವಣ್ಣನವರು ಹಾಗೂ ವಿಶ್ವಶ್ರೇಷ್ಠ ಸಂವಿಧಾನವನ್ನು ನೀಡುವ ಮೂಲಕ ಶೋಷಿತ ಸಮುದಾಯಗಳ ಪಾಲಿನ ಸೂರ್ಯನಾಗಿರುವ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್‌ಅವರು ನಮ್ಮ ದೇಶದ ಆಸ್ತಿ. ಡಾ.ಅಂಬೇಡ್ಕರ್ ಜಯಂತಿಯನ್ನು ಇದೇ ಏ.೧೪ರಂದು ಸರಳವಾಗಿ ಆಚರಿಸಲಾಯಿತು.
ಸಮಾನತೆಯ ಹರಿಕಾರರಾಗಿರುವ ಈ ಇಬ್ಬರು ಮಾಹಾನ್ ಪುರುಷರನ್ನು ಯಾವುದೇ ಒಂದು ಜಾತಿಗೆ ಸೀಮಿತ ಗೊಳಿಸಬಾರದು ೧೨ನೇ ಶತಮಾನದಲ್ಲಿ ಜಾತಿಯ ವಿರುದ್ಧ ಹೋರಾಡಿದ ಬಸವಣ್ಣನವರು, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಅಂಬಿಗರ ಚೌಡಯ್ಯ, ನಾಗಯ್ಯ, ಉರಿಲಿಂಗಪೆದ್ದಿ, ಸೂಳೆಸಂಕವ್ವ, ಕಸ ಹೊಡೆಯುವ ಕಾಯಕಮಾಡುತ್ತಿದ್ದ ಸತ್ಯಕ್ಕ ಇಂತಹ ಅನೇಕ ಸಹಸ್ರಾರು ಶರಣರೊಂದಿಗೆ ವಿಶ್ವದ ಮೊಟ್ಟಮೊದಲ ಪಾರ್ಲಿಮೆಂಟ್ ಮಾಹಾಮನೆಯಲ್ಲಿ ಸಮಾನತೆ ಸಂದೇಶ ಸಾರಿದ್ದಾರೆ.
ಮನುಷ್ಯರನ್ನು ಮನುಷ್ಯರ ರೀತಿಯಲ್ಲಿ ಕಾಣದಂತ ಆ ಕಾಲದಲ್ಲಿ ಇಷ್ಟ ಲಿಂಗವನ್ನು ಕೊಟ್ಟು ಸಮಾನತೆ ಸಾರಿದ ಬಸವಣ್ಣ ಅನುಭವ ಮಂಟಪಕ್ಕೆ ಒಬ್ಬ ದಲಿತ ಜನಾಂಗದ ಅಲ್ಲಮಪ್ರಭುವನ್ನು ಅಧ್ಯಕ್ಷನನ್ನಾಗಿ ಮಾಡಿ ೧೨ನೇ ಶತಮಾನದಲ್ಲಿಯೇ ಮೀಸಲಾತಿಯನ್ನು ಕೊಟ್ಟ ಬಸವಣ್ಣನವರು ಹಾಗೂ ಸ್ತ್ರೀ ಸಮಾನತೆಯನ್ನು ಸಾರುವ ಮೂಲಕ ಬಸವಣ್ಣನವರು ವಿಶ್ವಕ್ಕೆ ಬಹುದೊಡ್ಡ ಸಂದೇಶವನ್ನು ನೀಡಿದ್ದರು. ಅದೇ ಮಾದರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಮಹಿಳೆಗೆ ಪುರುಷನಷ್ಟ ಸಮಾನಳು ಎಂದು ಸಂವಿಧಾನದಲ್ಲಿ ರಚನೆಮಾಡುವ ಮೂಲಕ ಮಹಿಳೆಗೆ ಸಮಾನತೆ ಜೊತಗೆ ಆಸ್ತಿಯಲ್ಲಿಯು ಹಕ್ಕು ನೀಡಿದ್ದಾರೆ.
ಬಸವಾದಿ ಶರಣರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್‌ಅವರು ಪ್ರತಿಪಾಧಿಸಿದ ಸಮ ಸಮಾಜದ ಪರಿಕಲ್ಪನೆಯಿಂದಾಗಿ ಗ್ರಾಮೀಣ ಪ್ರದೇಶದಿಂದ ಬಂದಿರುವ ನನ್ನಂತವನು ಜಿಲ್ಲಾ ಪಂಚಾಯತಿ ಅಧ್ಯಕ್ಷನಾಗಲು ಸಾಧ್ಯವಾಯಿತು.
ದುಡಿಯುವ ವರ್ಗದವರನ್ನು ಹಾಗೂ ಶೋಷಿತರನ್ನು ಬಸವಣ್ಣನವರು ಸಮನಾಗಿ ಕಂಡು ಅವರಿಗೆ ಬದುಕುವ ಹಕ್ಕಿದೆ ಎಂದು ಅವರು ಸಮಾನರು ಎಂದು ಪ್ರತಿಪಾದಿಸಿದ ಕಾರಣಕ್ಕೆ ಇಂದು ಈಮಣ್ಣಿನಲ್ಲಿ ಸಮಾನತೆಯ ಗಾಳಿ ಬಿಸುತ್ತಿದೆ. ಬಡವ -ಬಲ್ಲಿದರೆನ್ನದೆ, ಆಜಾತಿ-ಈಜಾತಿ ಎನ್ನದೆ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿ, ಮನಗಳಲ್ಲಿ ಕಾಯಕತತ್ವ ಸಾರಿರುವ ಮಹಾನ್ ಮಾನವತಾವಾದಿ ಬಸವಣ್ಣನವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲ ಅವರ ವಿಚಾರಗಳನ್ನು ಸ್ಥಾವರಗೊಳಿಸದೇ ಜಂಗಮಗೊಳಿಸೋಣ.

  ಪರಮೇಶ್ವರಪ್ಪ ಮೇಗಳಮನಿ

 ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು,ಹಾವೇರಿ.

ಮೊ:9980305092