Kourava News

ಮಾರ್ಚ್ ೩೧ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿ, ನಿಷೇಧಾಜ್ಞೆ ಉಲ್ಲಂಘಿಸಿದರೆ ಕಠಿಣ ಕ್ರಮ -ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ

ಹಾವೇರಿ:  ಹಾವೇರಿ ಜಿಲ್ಲೆಯಲ್ಲಿ ಕೊರೋನಾ (ಕೋವಿಡ್-೧೯) ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಸಾರ್ವಜನಿಕರು ಆರೋಗ್ಯದ ದೃಷ್ಟಿಯಿಂದ ಕಡ್ಡಾಯವಾಗಿ ಪಾಲಿಸಬೇಕು. ಉದ್ದೇಶಪೂರ್ವಕವಾಗಿ ನಿಷೇಧಾಜ್ಞೆ ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೊರೋನಾ ಮುಂಜಾಗ್ರತಾ ಕ್ರಮ ಕುರಿತಂತೆ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ೧೯೭೩ ದಂಡಪ್ರಕ್ರಿಯೆ ಸಂಹಿತೆ ೧೩೩, ೧೪೪ ಅನ್ವಯ ಕೊರೊನಾ ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಪಾರ್ಸ್‌ಲ್ ಸೇವೆ ಹೊರತುಪಡಿಸಿ ಹೋಟೆಲ್‌ಗಳನ್ನು ಬಂದ್ ಮಾಡಲಾಗಿದೆ.
ಖಾಸಗಿ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಸ್ಥಾನಗಳು, ಮಸೀದಿ, ಚರ್ಚ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸಿದೆ. ಜಾತ್ರೆ, ವಾರದಸಂತೆ ಸಹ ನಿಷೇಧಿಸಲಾಗಿದೆ. ಈ ಸ್ಥಳಗಳಲ್ಲಿ ಜನದಟ್ಟಣೆಯಾಗದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಾರ್ಚ್ ೩೧ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ನಿಷೇಧಾಜ್ಞೆ ಅನುಷ್ಠಾನ ಕುರಿತಂತೆ ಗ್ರಾಮ ಮಟ್ಟದಿಂದ ತಾಲೂಕಾ ಹಾಗೂ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಿ ವಿವಿಧ ಅಧಿಕಾರಿಗಳನ್ನು ನಿಯೋಜಿಸಿ ಜವಾಬ್ದಾರಿ ನೀಡಲಾಗಿದೆ ಎಂದು ವಿವರಿಸಿದರು.
ವಿದೇಶದಿಂದ ಜಿಲ್ಲೆಗೆ ಆಗಮಿಸಿದ ೧೫೦ ಜನರನ್ನು ಹೋಂ ಕ್ವಾರಂಟೈನ್‌ಲ್ಲಿರಿಸಲಾಗಿದೆ. ಈವರೆಗೆ ಶಂಕಿತ ನಾಲ್ಕು ಜನರ ಗಂಟಲು ದ್ರವ್ಯ ಹಾಗೂ ರಕ್ತದ ಮಾದರಿಯನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಎಲ್ಲ ಪ್ರಕರಣಗಳಲ್ಲೂ ನೆಗಟಿವ್ ಬಂದಿರುವುದರಿಂದ ಜಿಲ್ಲೆಯಲ್ಲಿ ಯಾವುದೇ ಕೊರೋನಾ ಪ್ರಕರಣಗಳು ಇರುವುದಿಲ್ಲ. ಸಾರ್ವಜನಿಕರು ಯಾವುದೇ ಆತಂಕ ಮತ್ತು ಗಾಬರಿ ಪಡುವ ಅಗತ್ಯವಿಲ್ಲ.
ಆದಾಗ್ಯೂ ಸ್ವಯಂ ಜಾಗೃತಿ ವಹಿಸುವುದು ಅಗತ್ಯವಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ವ್ಯಕ್ತಿಯಿಂದ ವ್ಯಕ್ತಿಗೆ ಅಂತರ ಕಾಪಾಡಿಕೊಳ್ಳುವುದು, ಮದುವೆ ಧಾರ್ಮಿಕ ಸಮಾರಂಭಗಳನ್ನು ಮುಂದೂಡುವಂತೆ ಮನವಿಮಾಡಿಕೊಂಡರು. ಸರ್ಕಾರದ ಮಾರ್ಗಸೂಚಿಯನ್ನು ಹಾಗೂ ಜಿಲ್ಲಾಡಳಿತ ಕಾಲಕಾಲಕ್ಕೆ ಹೊರಡಿಸುವ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿಕೊಂಡರು.
ಜಿಲ್ಲಾ ಮತ್ತು ತಾಲೂಕಾ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ವ್ಯವಸ್ಥೆಮಾಡಲಾಗಿದೆ. ಮಾಸ್ಕ್ ಮತ್ತು ಸ್ಯಾನಿಟೈಸರ್ ಇತರ ಔಷಧಿಗಳನ್ನು ತರಿಸಲಾಗುತ್ತಿದೆ. ಈಗಾಗಲೇ ಔಷಧಿ ಅಂಗಡಿ ಮಾರಾಟಗಾರರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನು ಹೆಚ್ಚಿನ ದರದಲ್ಲಿ ಮಾರಾಟಮಾಡುವುದಾಗಲಿ ಅಥವಾ ಕೃತಕ ಅಭಾವ ಸೃಷ್ಟಿಸದಂತೆ ಸೂಚನೆ ನೀಡಲಾಗಿದೆ. ಇದರ ಮೇಲೆ ನಿಗಾವಹಿಸಲು ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.
ಹೊರ ಜಿಲ್ಲೆಯಿಂದ ಬರುವವರ ಮೇಲೆ ನಿಗಾವಹಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಗದಗ ಮತ್ತು ಧಾರವಾಡದಿಂದ ಬರುವ ಪ್ರಯಾಣಿಕರ ಮೇಲೆ ಆಯಾ ತಾಲೂಕಾ ಆಡಳಿತ ನಿಗಾವಹಿಸಿದೆ. ಅಗತ್ಯ ಸಂದರ್ಭದಲ್ಲಿ ಚೆಕ್‌ಪೋಸ್ಟ್ ಆರಂಭಿಸುವ ಕುರಿತಂತೆ ತಾಲೂಕಾ ಆಡಳಿತಕ್ಕೆ ಸೂಚನೆ ನೀಡಲಾಗುವುದು. ಸಾರ್ವಜನಿಕರು ಅನಗತ್ಯವಾಗಿ ಪ್ರಯಾಣಮಾಡಬಾರದು. ಸದ್ಯದ ಪರಿಸ್ಥಿತಿಯಲ್ಲಿ ಪ್ರವಾಸ ಸೇರಿದಂತೆ ಪ್ರಯಾಣವನ್ನು ಮುಂದೂಡುವಂತೆ ಮನವಿ ಮಾಡಿಕೊಂಡರು.
ಕಡ್ಡಾಯ ರಜೆ: ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಪಾಜಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಿಂದ ಬರುವ ಹಾವೇರಿಗೆ ಬರುವ ನೌಕರರಿಗೆ ರಜೆಮೇಲೆ ಕಳುಹಿಸಲಾಗುತ್ತಿದೆ. ಕೊರೋನಾ ಪಾಜಿಟಿವ್ ಕಂಡುಬಂದ ವ್ಯಕ್ತಿಯ ನಿವಾಸದ ಮೂರು ಕಿ.ಮೀ.ವ್ಯಾಪ್ತಿಯಲ್ಲಿ ಮನೆಹೊಂದಿರುವ ಜಿಲ್ಲೆಯ ನೌಕರರೋರ್ವನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ. ಹುಬ್ಬಳಿಯಿಂದ ಬಸ್‌ಗಳ ಓಡಾಟ ಸ್ಥಗಿತಗೊಳಿಸಲಾಗಿದೆ ಎಂದು ವಿವರಿಸಿದರು.
ಅಭಿನಂದನೆಗಳು: ಪ್ರಧಾನಮಂತ್ರಿಗಳ ಕರೆಗೆ ಒಗೊಟ್ಟು ಭಾನುವಾರ ಜನತಾ ಕರ್ಫ್ಯೂ ಆಚರಿಸಿ ಜಿಲ್ಲೆಯ ಜನತೆಗೆ ಮಾಧ್ಯಮದವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಹಾವೇರಿ ಉಪವಿಭಾಗಾಧಿಕಾರಿ ದಿಲೀಷ್ ಸಸಿ, ಹೆಚ್ಚು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾಗರಾಜ ನಾಯಕ ಇತರರು ಉಪಸ್ಥಿತರಿದ್ದರು.