Kourava News

ಹಾವೇರಿಜಿಲ್ಲೆಯಿಂದ ೩೧ ಮೆಟ್ರಿಕ್ ಟನ್ ಶುಂಠಿ, ಕಲ್ಲಂಗಡಿ, ಪೇರಲ ದೆಹಲಿ, ಗೋವಾ ರಾಜ್ಯಕ್ಕೆ ರಫ್ತು

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ರಾಣೇಬೆನ್ನೂರು ವರ್ತಕರಿಗೆ ಡಿಸಿ ಕೃಷ್ಣ ಬಾಜಪೇಯಿ ಸಲಹೆ

ಹಾವೇರಿ: ರಾಣೇಬೆನ್ನೂರು ಮಾರುಕಟ್ಟೆಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವರ್ತಕರೊಂದಿಗೆ ಮಾತನಾಡಿ, ಕರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಿದರು.
ಶುಕ್ರವಾರ ಬೆಳಿಗ್ಗೆ ಮಾರುಕಟ್ಟೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಕಡ್ಡಾಯವಾಗಿ ಪ್ರತಿ ಮಾರಾಟ ಸ್ಥಳದಲ್ಲಿ ಅಂತರವನ್ನು ಕಾಪಾಡಿಕೊಳ್ಳಬೇಕು. ಸಾಮಾಜಿಕ ಅಂತರದೊಂದಿಗೆ ತರಕಾರಿ ಖರೀದಿಗೆ ಜನರಿಗೆ ಮಾರ್ಗದರ್ಶನ ಮಾಡಬೇಕು ಎಂದು ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ತಹಶೀಲ್ದಾರ ಬಸವನಗೌಡ, ಪೌರಾಯುಕ್ತ ಡಾ.ಮಹಾಂತೇಶ ಇತರರು ಉಪಸ್ಥಿತರಿದ್ದರು.
ಹೊರ ಜಿಲ್ಲೆಗೆ ರೈತರ ಉತ್ಪನ್ನ: ತೋಟಗಾರಿಕೆ ಇಲಾಖೆಯ ಸಹಕಾರದೊಂದಿಗೆ ಜಿಲ್ಲೆಯ ರೈತರ ತೋಟಗಾರಿಕಾ ಉತ್ಪನ್ನಗಳನ್ನು ದೆಹಲಿ, ಶಿವಮೊಗ್ಗ, ಬಾಗಲಕೋಟೆ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಿಗೆ ರಫ್ತುಮಾಡಲಾಗಿದೆ.
ಜಿಲ್ಲೆಯ ರೈತರು ಬೆಳೆದ ಶುಂಠಿಯನ್ನು ದೆಹಲಿಗೆ ೧೬ ಮೆಟ್ರಿಕ್ ಟನ್, ಶಿವಮೊಗ್ಗ ನಾಲ್ಕು ಮೆ.ಟನ್, ಹುನಗುಂದಕ್ಕೆ ಎರಡು ಮೆ.ಟನ್ ಶುಂಠಿಯನ್ನು ಕಳುಹಿಸಲಾಗಿದೆ. ಗೋವಾ ರಾಜ್ಯಕ್ಕೆ ಐದು ಮೆಟ್ರಿಕ್ ಟನ್ ಕಲ್ಲಂಗಡಿ ಹಣ್ಣನ್ನು ಕಳುಹಿಸಲಾಗಿದೆ. ದಾವಣಗೆರೆ ಹಾಗೂ ಚಿತ್ರದುರ್ಗಕ್ಕೆ ಒಂದು ಮೆಟ್ರಿಕ್ ಟನ್ ಪೇರಲ ಹಣ್ಣನ್ನು ಕಳುಹಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ್ ಅವರು ತಿಳಿಸಿದ್ದಾರೆ.