ಹಾವೇರಿ: ಜಿಲ್ಲೆಯಲ್ಲಿ ಜೂನ್ ೨ರ ಮಂಗಳವಾರ ಮತ್ತೊಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಮುಂಬೈನಿಂದ ತಂದೆ-ತಾಯಿಯೊಂದಿಗೆ ಜಿಲ್ಲೆಗೆ ಆಗಮಿಸಿದ್ದ ಖಾಸಗಿ ಕಂಪನಿಯ ಉದ್ಯೋಗಿ P-೩೭೩೦ ೨೪ ವರ್ಷದ ಯುವತಿಗೆ ಕರೋನಾ ಸೋಂಕು ದೃಢ ಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.
ಮೂಲತಃ ಶಿಗ್ಗಾಂವಿ ಪಟ್ಟಣದ ನಿವಾಸಿಯಾದ ಇವರು ಮುಂಬೈನಿಂದ ಆಗಮಿಸಿದ್ದರು. ಮೇ ೩೧ ರಂದು ಯುವತಿಯ (P-೩೭೩೦) ತಂದೆಗೆ(P-೩೨೭೧) ಸೋಂಕು ದೃಢಪಟ್ಟಿತ್ತು. ಇಂದಿನ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ ೧೬ ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಆರುಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ.
ಪ್ರವಾಸ ಹಿನ್ನೆಲೆ: ಮುಂಬೈನ ಸಿದ್ದಿವಿನಾಯಕ ಚಾಳ ಸಾಂತಾಕ್ರೂಸ್‌ನಲ್ಲಿ ತಂದೆ-ತಾಯಿಯೊಂದಿಗೆ ೨೪ ವರ್ಷದ P-೩೭೩೦ ವಾಸವಾಗಿದ್ದು, ಅಂಧೇರಿಯ ಸ್ಥಳೀಯ ಖಾಸಗಿ ಕಂಪನಿಯಲ್ಲಿ ಕೆಲಸಮಾಡುತ್ತಿದ್ದರು. ಓಲಾ ಕಂಪನಿಯ ಕಾರ್‌ನ್ನು ಬಾಡಿಗೆಗೆ ಪಡೆದು ಮೇ ೧೯ ರಂದು ಮುಂಬೈನಿಂದ ಹೊರಟು ಪೂನಾ, ನಿಪ್ಪಾಣಿ, ಬೆಳಗಾವಿ, ಹುಬ್ಬಳ್ಳಿ ಮಾರ್ಗವಾಗಿ ತಡಸ ಚೆಕ್ ಪೋಸ್ಟ್‌ಗೆ ಅಂದು ರಾತ್ರಿ ೯-೩೦ಕ್ಕೆ ಆಗಮಿಸಿದ್ದರು. ಇವರನ್ನು ವೈದ್ಯಕೀಯ ತಪಾಸಣೆ ನಂತರ ಜಕ್ಕಿನಕಟ್ಟೆ ರಾಣಿ ಚೆನ್ನಮ್ಮ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಮೇ ೨೪ ರಂದು ಸ್ವಾಬ್ ಪರೀಕ್ಷೆಗೆ ಕಳಹಿಸಲಾಗಿತ್ತು. ಜೂನ್ ೨ ರಂದು ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಕ್ಕಿನಕಟ್ಟೆ ರಾಣಿ ಚೆನ್ನಮ್ಮ ವಸತಿ ಶಾಲೆಯ ೧೦೦ ಮೀಟರ್ ವ್ಯಾಪ್ತಿಯನ್ನು ಈಗಾಗಲೇ ಕಂಟೈನ್‌ಮೆಂಟ್ ಜೋನ್ ಎಂದು ಘೋಷಿಸಲಾಗಿದೆ ಹಾಗೂ ಜಕಿನಕಟ್ಟಿ ಗ್ರಾಮವನ್ನು ಬಫರ್ ಜೋನ್ ಎಂದು ಗುರುತಿಸಲಾಗಿದೆ. ಶಿಗ್ಗಾಂವ ತಾಲೂಕಾ ತಹಶೀಲ್ದಾರ ಅವರನ್ನು ಇನ್ಸಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.