ರಾಜ್ಯ

ಪೇಜಾವರ ಮಠದ   ಶ್ರೀ ವಿಶ್ವೇಶ ತೀರ್ಥರು ಇನ್ನಿಲ್ಲ…

ಉಡುಪಿ ಯ ಶ್ರೀ ವಿಶ್ವೇಶ ತೀರ್ಥರು (೮೮)ಭಾನುವಾರ ನಿಧನರಾದರು.

    ಶ್ರೀ ವಿಶ್ವೇಶ ತೀರ್ಥರು (ಏಪ್ರಿಲ್ ೨೭, ೧೯೩೧) ಉಡುಪಿಯ ಅಷ್ಟಮಠಗಳಲ್ಲಿ ಒಂದಾದ
ಪೇಜಾವರ ಮಠದ ಮುಖ್ಯಸ್ಥರಾಗಿ, ನಾಡಿನ ಹಿರಿಯ ವಿದ್ವಾಂಸರಾಗಿ, ಸಾಮಾಜಿಕ ಸೇವಾ ಕಳಕಳಿಯ
ಮನೋಭಾವವುಳ್ಳವರಾಗಿ ಪ್ರಸಿದ್ಧರಾಗಿದ್ದರು. ಉಡುಪಿಯಿಂದ ೧೨೦ ಕಿ.ಮೀ ದೂರದ
ಸುಬ್ರಮಣ್ಯದ ಸಮೀಪದ ಹಳ್ಳಿ  ರಾಮಕುಂಜ  ಕುಗ್ರಾಮದಲ್ಲಿ   ೧೯೩೧ ಎಪ್ರಿಲ್ ೨೭ರಂದು
ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ಜನಿಸಿದ್ದರು.
ತಂದೆ ನಾರಾಯಣಾಚಾರ್ಯ, ತಾಯಿ ಕಮಲಮ್ಮ. ಹುಟ್ಟಿದ ಎರಡನೆಯ ಗಂಡುಮಗುವಿಗೆ ‘ವೆಂಕಟರಮಣ’
ಎಂದು ಹೆಸರಿಟ್ಟರು. ಪ್ರಜಾಪತಿ ಸಂವತ್ಸರದ ವೈಶಾಖ ಶುದ್ಧ ದಶಮಿ ಸೋಮವಾರದಂದು
ವೆಂಕಟರಮಣನ ಶುಭ ಜನನ. ರಾಮಕುಂಜದ ಹಳ್ಳಿಯ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲೇ
ಪ್ರಾಥಮಿಕ ವಿದ್ಯಾಭ್ಯಾಸ.
ಉಪನಯನಕ್ಕೂ ಮುಂಚೆ, ಹುಡುಗನಿಗಿನ್ನೂ ಆರು ವರ್ಷ. ಆಟವಾಡುವ ವಯಸ್ಸು. ತಂದೆ ? ತಾಯಿ
ಮಗನನ್ನು ಉಡುಪಿಗೆ ಕರೆ ತಂದರು. ಆಗ ಪೇಜಾವರ ಮಠದ ಪರ್ಯಾಯವೇ ನಡೆದಿತ್ತು. ವೆಂಕಟರಮಣ
ಮಠದ ಸ್ವಾಮೀಜಿ ಕೃಷ್ಣ ಪೂಜೆ ಮಾಡುವುದನ್ನು ಆಸಕ್ತಿಯಿಂದ ಗಮನಿಸಿದ. ಏನೋ ಒಂದು
ಅಂತರಂಗದ ಸೆಳೆತ: ತಾನೂ ಹೀಗೆ ಕೃಷ್ಣನನ್ನು ಪೂಜಿಸಬಹುದೆ?
ತಂದೆ – ತಾಯಿ ವೆಂಕಟರಮಣನನ್ನು ಸ್ವಾಮಿಗಳ ಭೇಟಿಗೆ ಕರೆದುಕೊಂಡು ಹೋದರು. ವೆಂಕಟರಮಣ
ಭಕ್ತಿಯಿಂದ ಸ್ವಾಮಿಗಳಿಗೆ ನಮಸ್ಕರಿಸಿದ. ಪುಟ್ಟ ಹುಡುಗನ ಮುಗ್ಧ ಮುಖ, ಅಲ್ಲಿ ತುಂಬಿದ
ಭಕ್ತಿ ಭಾವ, ನಡೆಯ ಚುರುಕುತನ ಎಲ್ಲ ಗಮನಿಸಿದ ಸ್ವಾಮಿಗಳಿಗೆ ಏನನ್ನಿಸಿತೋ!
ಆಕಸ್ಮಿಕವಾಗಿ ಅವರ ಬಾಯಿಂದ ಹೀಗೊಂದು ಮಾತು ಬಂತು. ‘ನೀನು ನನ್ನಂತೆ
ಸ್ವಾಮಿಯಾಗುತ್ತೀಯಾ?’ ವೆಂಕಟರಮಣ ಉತ್ತರಿಸಿದ್ದು “ಹ್ಞೂ, ಆಗುತ್ತೇನೆ” ಎಂದು.
ಪರ್ಯಾಯದ ಅವಧಿ ಮುಗಿಯಿತು. ಆಗಣ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಮಾನ್ಯ ತೀರ್ಥರು
ಸಂಚಾರಕ್ಕೆ ಹೊರಟರು. ಪಯಣದ ಹಾದಿಯಲ್ಲಿ ಹಂಪೆಯನ್ನು ತಲುಪಿದರು. ವ್ಯಾಸತೀರ್ಥರ
ತಪೋಭೂಮಿಯಾದ ಹಂಪೆಯಲ್ಲಿ ಅವರ ನಿರ್ಧಾರ ಗಟ್ಟಿಗೊಂಡಿತು. ಅವರು ವಿಳಂಬ ಮಾಡದೆ
ವೆಂಕಟರಮಣನನ್ನು ಕರೆಸಿಕೊಂಡರು. ಆಗಷ್ಟೇ ಉಪನೀತನಾಗಿದ್ದ ವಟು ವೆಂಕಟರಮಣ ಹಿರಿಯರ ಜತೆ
ಹಂಪೆಗೆ ತೆರಳಿದ.
ಬಹುಧಾನ್ಯ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿಯಂದು (೩.೧೨.೧೯೩೮) ವೆಂಕಟರಮಣನಿಗೆ
ಹಂಪೆಯ ಯಂತ್ರೋದ್ಧಾರ ಮುಖ್ಯಪ್ರಾಣನ ಸನ್ನಿಧಿಯಲ್ಲಿ ದೀಕ್ಷೆ ನಡೆಯಿತು. ರಾಮಕುಂಜದ
ಪುಟ್ಟ ಹಳ್ಳಿಯ ಮುಗ್ಧ ಬಾಲಕ,  ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾಗಿ,
ಪೇಜಾವರ ಮಠದ ಪರಂಪರೆಯ ೩೨ನೆಯ ಯತಿಯಾಗಿ, ಆಚಾರ್ಯ ಮಧ್ವರ ವೇದಾಂತ ಪೀಠವನ್ನೇರಿದ
ವೆಂಕಟರಾಮ ‘ವಿಶ್ವೇಶತೀರ್ಥ’ರಾದರು.
೧೯೫೨ ಜನವರಿ ೧೮ರಂದು, ೨೧ರ ಹರೆಯದಲ್ಲಿ ಮೊದಲ ಪರ್ಯಾಯ ಪೀಠಾರೋಹಣ, ಅನ್ನದಾನ
ಜ್ಞಾನದಾನಗಳಲ್ಲಿ ಸಾಟಿಯಿಲ್ಲದ ಪರ್ಯಾಯ. ಪರ್ಯಾಯದ ಅವಧಿಯಲ್ಲೇ ಮಾಧ್ವರೆಲ್ಲರ
ಸಂಘಟನೆಗೆ ನಾಂದಿ ಹಾಡಿದ ಮಾಧ್ವ ತತ್ವಜ್ಞಾನ ಸಮ್ಮೇಳನ,
೧೯೫೬ ಜುಲೈ ೨೮, ಟೀಕಾಚಾರ್ಯರ ಪುಣ್ಯದಿನದಂದು ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ
ವಿದ್ಯಾಪೀಠದ ಸ್ಥಾಪನೆ. ೧೨ ವರ್ಷಗಳ ಕಾಲ ನಿರಂತರ ಶಾಸ್ತ್ರಾಧ್ಯಯನ ನಡೆಸುವ ಗುರುಕುಲದ
ಮಾದರಿಯ ನಾಡಿನ ಹೆಮ್ಮೆಯ ಆಧ್ಯಾತ್ಮ ವಿದ್ಯಾಕೇಂದ್ರ.
೧೯೬೮ ಜನವರಿ ೧೮ರಿಂದ, ೧೯೭೦ ಜನವರಿ ೧೭ರ ವರೆಗೆ ಎರಡನೆಯ ಶ್ರೀಕೃಷ್ಣ ಪೂಜಾ ಪರ್ಯಾಯ
ಐತಿಹಾಸಿಕ ಪರ್ಯಾಯ. ಮೊದಲ ಪರ್ಯಾಯವನ್ನೂ ಮೀರಿ ನಿಂತ ಅದ್ದೂರಿಯ ಎರಡನೆಯ ಪರ್ಯಾಯ.
ಕಲಾವಿದರ, ವಿದ್ವಾಂಸರ ಮನಸೂರೆಗೊಂಡ ಪರ್ಯಾಯ.
ಈ ಪರ್ಯಾಯದ ಅವಧಿಯಲ್ಲೇ ೧೯೬೮ ಆಗಸ್ಟ್ ೧೮ರಂದು ಉಡುಪಿಯಲ್ಲಿ, ಕೃಷ್ಣನ
ಸನ್ನಿಧಿಯಲ್ಲಿ, ಶ್ರೀಕೃಷ್ಣ ಉಚಿತ ಚಿಕಿತ್ಸಾಲಯದ ಉದ್ಘಾಟನೆ. ಬಡ ರೋಗಿಗಳಿಗೊಂದು
ವರದಾನ. ಶ್ರೀಪಾದರ ಸಾಮಾಜಿಕ ಕಳಕಳಿಗೊಂದು ಅನನ್ಯ ನಿದರ್ಶನ. ಈ ಅವಧಿಯಲ್ಲೇ
ಉಡುಪಿಯಲ್ಲಿ ಶ್ರೀಪಾದರ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮಹಾಸಮ್ಮೇಳನ
ನಡೆಯಿತು. ಜನಸಾಗರವವೇ ಉಡುಪಿಯತ್ತ ಹರಿದುಬಂತು. ‘ಹಿಂದೂಗಳೆಲ್ಲ ಒಂದಾಗಿ
ಬಂಧುಭಾವದಿಂದ ಬದುಕಬೇಕು’ ಎಂಬ ಸಂದೇಶವನ್ನು ಶ್ರೀಪಾದರು ಈ ವೇದಿಕೆಯಲ್ಲಿ ನೀಡಿದರು.
ದೀನದಲಿತರಿಗಾಗಿ ಮರುಗಿದ ಮನ:
ಶ್ರೀಪಾದರನ್ನು ಬಾಲ್ಯದಿಂದ ಕಾಡುತ್ತಿದ್ದ ಸಮಸ್ಯೆ ಅಸ್ಪೃಶ್ಯತೆ. ಸಮಾಜದಲ್ಲಿ ಒಂದು
ವರ್ಗವನ್ನು ಅಸ್ಪೃಶ್ಯರೆಂದು ಪರಿಗಣಿಸಿ ದೂರವಿಡುವುದರ ವಿರುದ್ಧ ಅವರ ಒಳಮನಸ್ಸು
ಸಿಡಿದೇಳುತ್ತಲೇ ಇತ್ತು. ಈ ಸಂದರ್ಭದಲ್ಲಿಯೇ ಗಾಂಧೀಜಿಯ ವಿಚಾರಧಾರೆ ಅವರ ಮೇಲೆ
ಗಾಢವಾದ ಪ್ರಭಾವ ಬೀರಿತು. ಅಂದಿನಿಂದ, ಮಠದ ಯತಿಗಳು ಉತ್ಸವಗಳಲ್ಲಿ ಧರಿಸುತ್ತಿದ್ದ
ಪಟ್ಟೆ ಪೀತಾಂಬರಗಳ ವೈಭವದ ಪೋಷಾಕನ್ನು ತೊರೆದು ಶುದ್ಧ ಖಾದಿಧಾರಿಯಾಗುವ ದೀಕ್ಷೆ
ತೊಟ್ಟರು.

ಮಠದಲ್ಲಿ ಸ್ವಾಮಿಗಳಿಗೆ ಪ್ರತ್ಯೇಕ ಅಡುಗೆ ಮಾಡುವ ಪದ್ಧತಿಯನ್ನು ರದ್ದುಗೊಳಿಸಿದರು.
ಎಲ್ಲರಿಗೂ ಬಡಿಸುವ ಅಡುಗೆಯನ್ನೇ ತಾನೂ ಉಂಡರು. ವೈಭವದ ಉತ್ತುಂಗ ಸ್ಥಿತಿಯಲ್ಲಿ
ಸರಳತೆಯ ಸಾಕಾರ ಮೂರ್ತಿಯಾಗಿ ನಿಂತರು.   ಶ್ರೀಪಾದರು ಮೊದಲು ದಲಿತ ಕೇರಿಗೆ ಭೇಟಿ
ನೀಡುವ ಮೂಲಕ ಸಂಪ್ರದಾಯವನ್ನು ಮೀರಿ ನಿಂತರು. ಈಬಗ್ಗೆ ಸಾಕಷ್ಟು ಟೀಕೆಗಳನ್ನು ಅವರು
ಎದುರಿಸಿದರು.
ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಹೀಗೆಯೇ ಸಾವಿರಾರು ಮಂದಿ ಬೀದಿಯಲ್ಲಿ ನಿಂತ
ಸಂದರ್ಭದಲ್ಲಿ  ಪೇಜಾವರ ಶ್ರೀಪಾದರು ಪ್ರಕೃತಿಯ ಕೋಪಕ್ಕೆ ಬಲಿಯಾದವರ ನೆರವಿಗೆ
ನಿಂತರು. ಪೀಠಾಧಿಪತಿ ಸಾಮಾಜಿಕವಾಗಿ ಹೇಗೆ ಸ್ಪಂದಿಸಬೇಕು ಎನ್ನುವುದಕ್ಕೆ ಮಾದರಿಯಾಗಿ
ನಿಂತರು. ತಮ್ಮ ಮೂರನೆಯ ಪರ್ಯಾಯದ ಅವಧಿಯಲ್ಲಿ ರಂಜಾನ್ ಆಚರಣೆಯನ್ನು ಉಡುಪಿಯ
ರಾಜಾಂಗಣದಲ್ಲಿ ನಡೆಸಿ, ಸರ್ವಧರ್ಮ ಸಮಭಾವಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟವರು ಪೇಜಾವರ ಶ್ರೀಪಾದರು.

Show More

Related Articles

Leave a Reply

Your email address will not be published. Required fields are marked *

Back to top button
Close