ಹಾವೇರಿ

ಪ್ರಸ್ತುತ ಸಂದರ್ಭದಲ್ಲಿ ಹಾಲಿ ಗ್ರಾ.ಪಂ.ಸದಸ್ಯರನ್ನೇ ಮುಂದುವರೆಸುವುದು ಸೂಕ್ತ: ಮೇಗಳಮನಿ

ಹಾವೇರಿ: ಅವಧಿ ಮುಗಿದಿರುವ ಗ್ರಾಮ ಪಂಚಾಯಿತಿಯಗಳಿಗೆ ಪ್ರಸ್ತುತ ಕೊರನಾ ಸಂಕಷ್ಟದ ಸಂದರ್ಭದಲ್ಲಿ ಚುನಾವಣೆ ನಡೆಸಲು ಚುನಾವಣೆ ಆಯೋಗ ಮುಂದಾಗಿಲ್ಲ. ಬಹುತೇಕ ಅಧಿಕಾರಿಗಳು ಕೊರೊನಾ ಸಂಕಷ್ಟ ನಿವಾರಣೆಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗಿನ ಕೊರೊನಾ ಸೋಂಕಿನ ನಿಯಂತ್ರಣದಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಒಗ್ಗೂಡಿ ಸಮರ್ಪಕ ನಿರ್ವಹಣೆಮಾಡಿದ್ದಾರೆ. ಸರ್ಕಾರ ಅವಧಿ ಮುಗಿದಿರುವ ಗ್ರಾ.ಪಂಗಳಿಗೆ ಹಾಲಿ ಸದಸ್ಯರನ್ನೆ ಸದಸ್ಯರೆಂದು ಮುಂದುವರೆಸುವುದು ಸೂಕ್ತವೆಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ಅಭಿಪ್ರಾಯ ಪಟ್ಟಿದ್ದಾರೆ.
ಈಹಿಂದೆ ೧೯೮೭ ರಿಂದ ೧೯೯೨ರ ಅವಧಿಯಲ್ಲಿ ಇದ್ದ ಮಂಡಳ ಪಂಚಾಯತಿಗಳನ್ನು ಅಂದಿನ ಸರ್ಕಾರ ಗ್ರಾಮಪಂಚಾಯತಿಗಳನ್ನಾಗಿ ಪರಿವರ್ತಿಸಿತ್ತು, ಆ ವೇಳೆ ಮಂಡಳ ಪಂಚಾಯತಿ ಸದಸ್ಯರನ್ನು ಗ್ರಾಮ ಪಂಚಾಯತಿ ಚುನಾವಣೆ ನಡೆಯುವವರೆಗೂ ಎರಡು ವರ್ಷಗಳ ಕಾಲ ಗ್ರಾಮಪಂಚಾಯತಿ ಸದಸ್ಯರನ್ನಾಗಿ ಮುಂದುವರೆಸಲಾಗಿತ್ತು. ಆ ವೇಳೇ ರಾಣೆಬೆನ್ನೂರು ತಾಲೂಕಿನ ಅರೇಮಲ್ಲಾಪುರ ಮಂಡಳ ಪಂಚಾಯತಿಗೆ ನಾನು ಸದಸ್ಯನಿದ್ದ ಸಂದರ್ಭದಲ್ಲಿ ಹಿರೇಬಿದರಿ ಗ್ರಾಮ ಪಂಚಾಯತಿ ಸದಸ್ಯನಾಗಿ ಗ್ರಾಪಂ ಚುನಾವಣೆ ನಡೆಯುವವರೆಗೂ ಎರಡು ವರ್ಷಗಳ ಕಾಲ ಸದಸ್ಯನಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು.
ಈಅವಧಿಯಲ್ಲಿ ನೆರೆ ಹಾವಳಿ ಉಂಟಾದ ಸಂದರ್ಭದಲ್ಲಿ ಹಿರೇ ಬಿದರಿಗ್ರಾಮದ ಸರ್ವಾಂಗಿಣ ಅಭಿವೃದ್ಧಿ ಮಾಡಲು ಸಾಧ್ಯವಾಯಿತು . ಪ್ರಸ್ತುತ ಸಂದರ್ಭದಲ್ಲಿ ಸರ್ಕಾರ ಗ್ರಾ.ಪಂ. ಚುನಾವಣೆಯವರೆಗೆ ಹಾಲಿ ಸದಸ್ಯರನ್ನು ಮುಂದುವರೆಸುವುದು ಸರಿಯಾದ ಮಾರ್ಗ ಎಂದು ಎಂದು ಮೇಗಳಮನಿ ತಿಳಿಸಿದ್ದಾರೆ.
ಸ್ಥಳೀಯ ಸರಕಾರಗಳೆಂದು ಕರೆಯಲಾಗುವು ಗ್ರಾಮಪಂಚಾಯತಿಗಳ ಸದಸ್ಯರು ಗ್ರಾಮೀಣ ಭಾಗದ ಜನರ ನಾಡಿ ಮೀಡಿತ ಬಲ್ಲವರಾಗಿರುತ್ತಾರೆ. ಪ್ರಸ್ತುತ ಕೊರೊನಾ ಸೋಂಕು ಹರಡದಂತೆ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಜನ ಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಅರಿವು ಗ್ರಾಮ ಪಂಚಾತ್ ಸದಸ್ಯರಿಗೆ ಇರುತ್ತದೆ. ಅಧಿಕಾರಿಗಳ ಕಡತಗಳನ್ನು ನಿರ್ವಹಿಸುತ್ತಾರೆ. ಆದರೆ ಗ್ರಾ.ಪಂ. ಸದಸ್ಯರು ಜನರ ಮಧ್ಯೆ ಇದ್ದು, ಅವರ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸುತ್ತಾರೆ.
ಈಸಂದರ್ಭದಲ್ಲಿ ಸರ್ಕಾರ ಮತ್ತು ಅಧಿಕಾರಿಗಳ ನಡುವೆ ಸಮನ್ವಯತೆ ಸಾಧಿಸಿ ಜನರಿಗೆ ಸರಕಾರದ ಸೌಲಭ್ಯಗಳನ್ನು ತಲುಪಿಸುವ ಮಹತ್ವದ ಕಾರ್ಯ ಗ್ರಾ.ಪಂ ಸದಸ್ಯರುಗಳ ಮೇಲಿರುತ್ತದೆ. ಕಳೆದ ವರ್ಷ ಉಂಟಾದ ಪ್ರಕೃತಿ ವಿಕೋಪ ಉಂಟಾದ ಸಂದರ್ಭದಲ್ಲಿ, ಈಗಿನ ಕೊರೊನಾ ಸೋಂಕಿನ ನಿಯಂತ್ರಣದಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಒಗ್ಗೂಡಿ ಸಮರ್ಪಕ ನಿರ್ವಹಣೆ ಮಾಡಿದ್ದಾರೆ.
ಈ ವಿಕೋಪದ ಪರಿಸ್ಥಿತಿ ಇನ್ನೂ ಮುಂದುವರೆಯುತ್ತಿರುವ ಈ ಸವಾಲಿನ ಸಮಯದಲ್ಲಿ, ಪಂಚಾಯತ್ ಆಡಳಿತಕ್ಕೆ ಕೇವಲ ಆಡಳಿತಾಧಿಕಾರಿಯ ಆಥವಾ ಉಸ್ತುವಾರಿ ಅಧಿಕಾರಿಯ ನೇಮಕದಿಂದ ಸಮರ್ಪಕವಾಗಲಾರದು. ಚುನಾಯಿತ ಪ್ರತಿನಿಧಿಗಳ ಒಳಗೊಳ್ಳುವಿಕೆಯಿಂದ ಪ್ರಸ್ತುತ ಸವಾಲನ್ನು ಎದುರಿಸಲು ಸಾಧ್ಯವಿದೆ. ಈನಿಟ್ಟಿನಲ್ಲಿ ಸರ್ಕಾರ ಹಾಲಿ ಗ್ರಾಪಂ ಸದಸ್ಯರನ್ನು ಮುಂದುವರೆಸುವುದು ಸೂಕ್ತ ಎಂದು ಪರಮೇಶ್ವರಪ್ಪ ಮೇಗಳಮನಿ ಅಭಿಪ್ರಾಯಪಟ್ಟಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button
Close