. ಯಾವ ಕಲಾವಿದನ ಕುಂಚದಲ್ಲಿ ಅರಳಿದ ಪ್ರಕೃತಿ ಸೌಂದರ್ಯವಿದು…..! ಅನಿಸುತ್ತಿದೆಯೇ…? ಪ್ರಕೃತಿ ಮಾತೆ ಶೃಂಗರಿಸಿಕೊಂಡ ಮನಮೋಹಕ ದೃಶ್ಯವಿದು. ಕಣ್ಣು ಹಾಯಿಸಿದಷ್ಟು ಎಲ್ಲೆಲ್ಲೂ ಹಸಿರಿನೊಂದಿಗೆ ಬಣ್ಣವೋ ಬಣ್ಣ…
ಪ್ರಕೃತಿ ದೇವಿಯು ತನ್ನ ಕೇಶರಾಶಿಗೆ ಹೂ ಮುಡಿದು ಕೂತಂತೆ…
ಜೊತೆಗೆ ಹಕ್ಕಿಗಳ ಕಲರವದ ಸದ್ದು… ಜೀರುಂಡೆಯ ಗಿಜಿಗಿಜಿ, ಜೇನುನೊಣಗಳ ಝೇಂಕಾರ, ಸಿಕಾಡದ ಸಿಳ್ಳೆ ಹಬ್ಬದ ವೈಭವದಂತಿದೆ. ನಿಸರ್ಗದ ಚೆಲುವನ್ನು ಇಮ್ಮಡಿಸಿದೆ. ಈ ಪೀಠಿಕೆ ಯಾಕಂತೀರಾ.. ರಾಣೇಬೆನ್ನೂರು ಪ್ರಮುಖ ರಸ್ತೆಗಳ ಬದಿಯಲ್ಲಿ, ಶಾಲಾ ಕಾಲೇಜುಗಳ ಕ್ಯಾಂಪಸ್ಸಿನಲ್ಲಿ, ಹೆಂಚಿನ ಫ್ಯಾಕ್ಟರಿ ಆವರಣ ಅಲ್ಲದೇ ಬಯಲು ಸೀಮೆ, ಹಸಿರುಕಾನನ, ನಡುಘಟ್ಟ- ಎಲ್ಲೆಡೆಯಲ್ಲೂ ಗುಲ್‌ಮೊಹರಿನ ಮೊಹರು. ರಸ್ತೆಯಿಕ್ಕೆಲಗಳಲ್ಲಿ ಕೆಂದಳಿರಿನ ತೇರು. ನೀರಿಗೆ ಕೊರೆ ಉಂಟಾಗಿರುವ ಹೊತ್ತಿನಲ್ಲಿ ಕೆಂಪುತೊರೆ.
ಇದು ಮುಂಗಾರಿಗೆ ಸ್ವಾಗತ. ಸ್ವಾಗತ ಕೋರುತ್ತಿದ್ದಾಳೆ “ಗುಲ್‌ಮೊಹರ್” ಚಲುವೆ.
ಇದು ಮೇ-ಜೂನ್ ತಿಂಗಳ ವಿಶೇಷ. ನಿಸರ್ಗದಲ್ಲಿ ಈಗ ಪುಷ್ಪೋತ್ಸವ. ಗಿಡಮರಗಳಲ್ಲಿ ಬಣ್ಣ ಬಣ್ಣದ ಹೂಗಳ ಹಬ್ಬ. ಇದು ನಿಸರ್ಗವೇ ಏರ್ಪಡಿಸುವ ಪುಷ್ಪ ಪ್ರದರ್ಶನ. ಸಾವಿರಾರು ವರ್ಷಗಳಿಂದ ನಿಸರ್ಗದಲ್ಲಿ ನಡೆಯುತ್ತಿರುವ ಪುಷ್ಪೋತ್ವತ್ಸವ. ಮಳೆಗಾಲಕ್ಕೆ ದಿನಗಣನೆ ಆರಂಭವಾಗಿದೆ. ರಸ್ತೆ ಬದಿಯ ಸಾಲು ಮರಗಳಲ್ಲಿ, ಉದ್ಯಾನಗಳಲ್ಲಿ, ಕಾಡಿನ ಮರಗಳಲ್ಲಿ ಪರಿಚಿತ ಹೂಗಳ ಜೊತೆಗೆ ಹೆಸರಿಲ್ಲದ ಪುಷ್ಪಗಳ ಬಣ್ಣ ಬಣ್ಣದ ಹೂಗಳು ನಿರಾಡಂಬರ ಸುಂದರಿಯರಂತೆ ಅರಳಿ ನಳನಳಿಸುತ್ತಿವೆ. ಮನಸ್ಸಿಗೆ ಮುದ ನೀಡುತ್ತವೆ.
ಎಲೆಗಳೇ ಇಲ್ಲದ ಮರಗಳು, ಮೈತುಂಬಾ ಹೂ ಹೊದ್ದು ಪಲ್ಲವಿಸಿವೆ. ನಿಸರ್ಗದ ಚೆಲುವನ್ನು ಈ ಹೂವುಗಳು ಇಮ್ಮಡಿಸಿವೆ. ಅದರಲ್ಲಿ ಗುಲ್ ಮೊಹರ್ ಎನ್ನುವುದು ಚೆಲುವಿನ ಅಕ್ಷಯಪಾತ್ರೆ . ಇಳೆಯ ಅತ್ಯಂತ ವರ್ಣರಂಜಿತ ಮರ ಎನಿಸಿಕೊಂಡಿದೆ. ಮುಂಗಾರು ಮಳೆಯ ಆರಂಭದ ದಿನಗಳವರೆಗೂ ಈ ಚೆಲುವೆಯ ಮೆರವಣಿಗೆ ನಡೆದಿರುತ್ತದೆ. ಬೇಸಿಗೆಯ ಮುಕ್ತಾಯ ಮತ್ತು ಮಳೆಗಾಲದ ಆರಂಭದ ಸಮಯದಲ್ಲಿ ಪ್ರಕೃತಿಗೆ ಅದೇನು ಸಂಭ್ರಮವೋ. ಒಂದೆಡೆ ವಿದಾಯಕ್ಕೆ ಸಿದ್ಧವಾದ ಉರಿ ಬಿಸಿಲಿನ ಕಾವು. ಇನ್ನೊಂದಡೆ ಧರೆಯ ಸಂಪರ್ಕಕ್ಕೆ ಹೊಂಚುಹಾಕಿ ಕಾದು ಕುಳಿತ ಮಳೆ. ಇವೆರಡರ ನಡುವಿನ ಸಂಧಿ ಕಾಲದಲ್ಲಿ ನಿಸರ್ಗ ಋತುಮಾನದ ಪೊರೆ ಕಳಚುವ ಸಂಭ್ರಮದಲ್ಲಿರುತ್ತದೆ. ಆಗ ಹಲವು ಬಗೆಯ ಹೂವುಗಳು ಪಲ್ಲವಿಸುತ್ತವೆ. ಬೇಸಿಗೆ ಝಳವನ್ನು ಪಕ್ಕಕ್ಕೆ ಸರಿಸಿ ಆಹ್ಲಾದಕರ ವಾತಾವರಣ ಸೃಷ್ಟಿಸುತ್ತವೆ. ಈ ಹೂವುಗಳು ನೀಲಾಕಾಶದಲ್ಲಿ ಬಿಳಿ ಮೋಡಗಳ ಹಿನ್ನಲೆಯಲ್ಲಿ ಬರೆದ ಚಿತ್ತಾರದಂತೆ ಕಂಗೊಳಿಸುತ್ತವೆ.
ಈ ಹೂವುಗಳು ನಾರಿಯ ಮುಡಿ ಏರುವುದಿಲ್ಲ. ದೇವರ ಪೂಜೆಗೂ ಬಳಕೆ ಆಗುವುದಿಲ್ಲ. ನೋಡುಗರ ಮನಸ್ಸನ್ನು ಅರಳಿಸಿ ಸಂತೋಷ ಕೊಡುವುದಷ್ಟೇ ಅವುಗಳ ಕೆಲಸ. ಕೆಲ ಗಂಟೆಗಳಕಾಲ ಮುಗುಳ್ನಕ್ಕು ನಂತರ ಮುಖ ಮುದುಡಿ ಕೊಳ್ಳುತ್ತದೆ. ಹೂವುಗಳು ಅರಳಿ ಸೃಷ್ಟಿಸುವ ಚಿತ್ತಾರ ಮನಮೋಹಕ. ಒಟ್ಟಿನಲ್ಲಿ ಈ ಹೂ ಹಬ್ಬ ಮುಂಗಾರಿಗೆ ಸ್ವಾಗತ ಕೋರುವಂತಿದೆ.
ಈ ಹೂ ಹಬ್ಬದ ಲೋಕವನ್ನು, ಅದರ ಬಣ್ಣಗಳ ಸಂಭ್ರಮವನ್ನು ಹತ್ತಿರದಿಂದ ನೋಡಿದಾಗ ನಿಜಕ್ಕೂ ಅದ್ಭುತ ಆನಂದ ಉಂಟಾಗುತ್ತದೆ.
ನಾಮದೇವ ಕಾಗದಗಾರ, ರಾಣೆಬೆನ್ನೂರು.