ಜಿಲ್ಲೆಯ ಕದರಮಂಡಲಗಿ ಸೇರಿದಂತೆ ವಿವಿಧೆಡೆ ಹನುಮ ಜಯಂತಿ ಆಚರಣೆ
ಹಾವೇರಿ: ಕೋವಿಡ್-೧೯ ನಡುವೆಯೂ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಂಗಳವಾರ ಹನುಮ ಜಯಂತಿಯನ್ನು ಶ್ರದ್ಧಾ, ಭಕ್ತಿಯಿಂದ ಸರಳ ರೀತಿಯಲ್ಲಿ ಆಚರಿಸಲಾಯಿತು. ಜಿಲ್ಲೆಯ ಬ್ಯಾಡಗಿ ತಾಲೂಕಿನ ಐತಿಹಾಸಿಕ ಕದರಮಂಡಲಗಿ ಕಾಂತೇಶ ದೇವಸ್ಥಾನದಲ್ಲಿ ಸರಳವಾಗಿ ಹನುಮಜಯಂತಿಯನ್ನು ಆಚರಿಸಲಾಯಿತು.
ಕೋವಿಡ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಬಹುತೇಕ ಆಂಜನೇಯ ದೇವಸ್ಥಾನಗಳಿಗೆ ಬೀಗ ಜಡಿಯಲಾಗಿತ್ತು. ಆದರೆ, ಭಕ್ತರು ಹೊರಗಿನಿಂದಲೇ ದೇವರಿಗೆ ಕೈಮುಗಿದು ಹೋದರು. ಕೆಲವೆಡೆ ಅರ್ಚಕರು ಧಾರ್ಮಿಕ ವಿಧಿ ವಿಧಾನ ಮುಗಿಸಿ, ದೇವಸ್ಥಾನ ಮುಚ್ಚಿದರು.
ನಗರದ ತೇರುಬೀಧಿ ಹನುಂತ ದೇವರ ದೇವಸ್ಥಾನ, ಸೇರಿದಂತೆ ನಗರದ ವಿವಿಧ ದೇವಸ್ಥಾನದಲ್ಲಿ ಅರ್ಚಕರು ಪೂಜೆ ಸಲ್ಲಿಸಿ, ದ್ವಾರ ಮುಚ್ಚಿದರು. ವಿವಿಧ ಕಡೆಗಳಿಂದ ಬಂದಿದ್ದ ಭಕ್ತರು, ಬಾಗಿಲು ಮುಚ್ಚಿರುವುದು ನೋಡಿ ನಿರಾಸೆ ಪಟ್ಟರು. ದ್ವಾರದ ಬಳಿ ಹೋಗಿ ಆಂಜನೇಯನಿಗೆ ಹೊರಗಿನಿಂದಲೇ ನೋಡಿ, ಕೈಮುಗಿದು ತೆರಳಿದರು.
ಪಾದಗಟ್ಟೆ ಆಂಜನೇಯ ದೇವಸ್ಥಾನದಲ್ಲೂ ಇಂತಹುದೇ ದೃಶ್ಯಗಳು ಕಂಡು ಬಂದವು. ಆಂಜನೇಯ ದೇವಸ್ಥಾನದಲ್ಲಿ ಕೆಲವು ಭಕ್ತರು ಬೆಳಿಗ್ಗೆಯೇ ಗುಡಿಯೊಳಗೆ ಹೋಗಿ ಹತ್ತಿರದಿಂದ ದರ್ಶನ ಪಡೆದರು. ಇನ್ನು, ಗ್ರಾಮೀಣ ಪ್ರದೇಶಗಳಲ್ಲೂ ಇದೇ ಪರಿಸ್ಥಿತಿ ಇತ್ತು. ಬಹುತೇಕರು ಮನೆಯಲ್ಲೇ ಆಂಜನೇಯನಿಗೆ ಪೂಜೆ ಸಲ್ಲಿಸಿ, ಸಮಾಧಾನ ಪಟ್ಟುಕೊಂಡರು.