“ತಾಯಿ ನಿನ್ನ ಉಪಕಾರವನು ಮರೆಯಲೆಂತು ನಾನು”…..
ಬಾಣಂತಿ ಮುಂದೆ ಗೊಣಗಾಟ ಬೇಡ.
ತಾಯ್ತನದ ದುರ್ಗಮ ದಾರಿ.
ಛೇ..ಮತ್ತೆ ಹೆಣ್ಣು ಮಗು ಹುಟ್ಟಿತು.
[ಹೆಣ್ಣು, ಗಂಡು ಮಗು ಹುಟ್ಟಲು ಪುರುಷನೇ(XX chromosome) ಕಾರಣೀಕರ್ತ ಹೊರತು ಹೆಣ್ಣಲ್ಲ ಇವಳು ಅನಿಷ್ಟೆ..!! ಡೆಲಿವರಿ ಟೈಮಲ್ಲಿ ನೋವು ಕೊಟ್ಟು ಸಹಕರಿಸದೇ ಸಿಜೇರಿಯನ್ ಆಪರೇಷನ್ ಗೆ ಹಣ ಕಳೆದಳು. ಆಸ್ಪತ್ರೆಯ ಖರ್ಚು ಸಾವಿರ- ಸಾವಿರ ಹರಿದೋಯ್ತು.!! ಸರ್ಕಾರಿ ಆಸ್ಪತ್ರೆ ಆಗಿದ್ರೆ ಒಂದಿಷ್ಟು ಉಳಿತಿತ್ತು. ಜಗತ್ತಿನಲ್ಲಿ ಯಾರೂ ಹೆರದದ್ದನ್ನು ನೀನು ಹೆತ್ತಿದ್ದಿಯಾ.. ನೋಡು!! ಮೈಗಳ್ಳಿ.!! ಸೊಂಟ ನೋವಂತೆ. ಒಂದು ಹಡಿದು ಈ ಗತಿ.. ಇನ್ನೊಂದಾದರೆ ಮುಗೀತು.
ನಿನ್ನ ದೇಕರೇಖಿಯಲ್ಲಿಯೇ ನನ್ನ ಜೀವ ಸಾಕು- ಸಾಕಾಯ್ತು.!! ಗೆಳೆಯ!!,… ಮಗು ಹೆತ್ತು ಸುಸ್ತಾಗಿ ತಾಯ್ತನದ ಘಮಲು ಆಸ್ವಾದಿಸುತ್ತಿರುವ ಆ ಹೆಣ್ಣಿನ ಮುಂದೆ ಹೀಗೆಲ್ಲ “ಅಸಹಾಯಕತೆ”, ಮೊದಲಿಕೆ, ಚುಚ್ಚು ಮಾತಾಡಬೇಡ.
ಆ ಜೀವ ಇನ್ನಷ್ಟು ಜರ್ಝರಿತಗೊಂಡು, ಖಿನ್ನತೆಗೆ ಒಳಗಾದರೆ ಆ ಪಾಪ ನಿನ್ನ ಕಾಡದೆ ಇರದು. ಹೀಗೆ ಗೊಣಗುವ ಮೊದಲು ಮೂಕ ಪ್ರೇಕ್ಷಕನಂತೆ ತಾಯ್ತನದ ಹಿಂದಿನ ದಟ್ಟ ನೋವಿನ ರಹಸ್ಯ ಕಂಡ ನನ್ನ ಅನುಭವ ಒಂಚೂರು ಓದಿಬಿಡು.
ಹೆಣ್ಣಿನ ಗರ್ಭದಲ್ಲಿ ಮತ್ತೊಂದು ಜೀವ ಚಿಗುರೊಡೆದ ದಿನದಿಂದಲೆ ಮನೆ ಮಂದಿಗೆಲ್ಲಾ ಸಂಭ್ರಮ. ಗರ್ಭ ಹೊತ್ತವಳ ದೇಹ, ಮನಸ್ಸು ಏರಿಳಿತಗಳ ಅಲೆಗೆ ನಲುಗಿ ಹೋಗುತ್ತೆ. ಅವಳಿಗೆ ಗರ್ಭ ನಿಂತ ಕ್ಷಣದಿಂದ, ಹೆರಿಗೆಯ ತನಕದ ದೇಹ, ಮನಸ್ಸಿನ ಭಾರಿ ಬದಲಾವಣೆ, ಹಾರ್ಮೋನುಗಳ ಏರಿಳಿತಗಳಿಗೆ ವೈದ್ಯ, ದಾದಿಯರೆ ಮೂಕ ಸಾಕ್ಷಿ.
ಮೊದಲ ಮೂರು ತಿಂಗಳು ಬಗ್ಗು ಬಡಿದು ಹಾಕುವ ವಾಂತಿ, ಉಬ್ಬಳಿಕೆ. ಅನ್ನದ ಘಮ ಮೂಗು ತಾಗಿದರೂ ಹಿಂಡುವ ಕರುಳು. ಒತ್ತರಿಸಿ ಮೆಲಕ್ಕೇರುವ ವಾಂತಿ. (Hyperemesis Gravidarum)ಏನು ತಿಂದರೂ, ಕುಡಿದರೂ ಹೊಟ್ಟೆ ಹಿಡಿಯದು. ದೇಹ ದಣಿದು ಮುದುಡಿ ಹೋಗುತ್ತೆ. ಅದೇನೇನೋ ತಿನ್ನುವ ಆಸೆ.
ಅದೆಲ್ಲಿಂದಲೋ ಬೇಡಿ ಬರುವ ಬಯಕೆಗಳು. ಹಲ್ಲು ಜುಮ್ಮೇನ್ನುವ ಹುಳ್ಳನೆಯ ಹಣ್ಣು, ನಾಲಿಗೆ ನೀರೂರಿ ಸಿಹಿ ಸವಿಯುವ, ಮುಂತಾದ ಏನೇನೋ ಬಯಕೆ. ನಂತರದ ದಿನಗಳು ಹೆಚ್ಙು ಪ್ರಯಾಣಿಸುವಂತಿಲ್ಲ. ಹಬ್ಬ, ಮದುವೆ- ಮುಂಜಿ, ಟೆರೆಸ್ ಹತ್ತಿ ಸುತ್ತು, ಇಷ್ಟದ ತಿನಿಸು, ದೂರದ ಯಾನ, ಉಹ್ಞುಂ!! ಎಲ್ಲದಕ್ಕೂ ತಿಲಾಂಜಲಿ.
ಅವಳಾಯಿತು, ಚಿಗಿತ ಮಗುವಾಯಿತು. ಮನೆ, ಗಂಡ, ಮನೆಕೆಲಸ ಇವಿಷ್ಟೇ. ಒಲ್ಲದ ಮನಸ್ಸಿನಿಂದ ಪ್ರತಿ ದಿನ ನುಂಗುವ ಒಂದ್ಹಿಡಿ ಮಾತ್ರೆ. ಆಗಾಗ ಅನುಭವಕ್ಕೆ ಬರುವ ಚಿಗುರು ಮಗುವಿನ ಮಿಸುಕಾಟ, ನೆಗೆತ, ಮೌನ ಮಾತು. ದೇಹದ ಅಲ್ಲಲ್ಲಿನ ಅಂಗಗಳಲ್ಲಿ ಬದಲಾಗುತ್ತಿರುವ ರೂಪ, ಬಣ್ಣ, ಗಾತ್ರ. ಮಗು ಬೆಳೆದು ನಿಂತ “ತುಂಬಿದ ಹೊಟ್ಟೆ”. ಸೊಂಟ ನೋವು. ವಿಪರೀತ ಕಾಡುವ ತೊಡೆ ನೋವು. ತಳ ಹೊಟ್ಟೆ ಹಿಂಡುವ ಮಲಬದ್ದತೆ. ಎದೆಯುರಿಯುವ ಹುಳಿತೇಗು.
ಕೂತು ಏಳಲು ಭೂಮಿಗೆ ಊರುವ ಕೈ ಆಸರೆ. ಅಬ್ಬಬ್ಬಾ!! ನೋವು ನೂರಿದ್ದರು ನಗುವ ವದನ. ಮೊದಲಿನ ಬಟ್ಟೆಗಳಾವವು ಬರಲೋಲ್ಲವು.
ಕರೆಯದೆ ಧುತ್ತನೆ ಬಂದೆರಗುವ ರಕ್ತದೊತ್ತಡ, ಮಧುಮೇಹ, ಥೈರಾಯ್ಡ್ ಕಾಯಿಲೆಗಳು. ದಿನದಿನಕ್ಕೆ ಮೈದುಂಬುವ ಕೊಬ್ಬು, ಬದಲಾಗುವ ದೇಹದ ಅಪರಿಚಿತ ಪರಿ. ನುಗ್ಗಾದರೂ ಮುನ್ನುಗ್ಗುವ ಛಾತಿ ಹೆಣ್ಣಿನದು. ಕೇವಲ ತಾನು ವಂಶದ ಕುಡಿಗೆ ಆಸರೆಯಾಗಲು. ಒಂಬತ್ತು ತಿಂಗಳಿನ ಬದುಕು ದುರ್ಗಮ ದಾರಿಯ ಪಯಣ. ವೈದ್ಯ, ದಾದಿಯರು ನಿತ್ಯ ಕಾಣುವ ಹೆಣ್ಣಿನ ಸುಮಧುರ ನೋವುಗಳು.
ಕೊನೆಯ ಹಂತ ಹೆರಿಗೆ. ಹೆರಿಗೆ ಸಹಜವಾದರೆ ಒಂದಿಷ್ಟು ನಿರಾಳತೆ. ಮಗು ತಲೆ ದೊಡ್ಡದಿದೆ, ತೂಕ ಹೆಚ್ಚಿದೆ ಎಂದಾಗ ವೈದ್ಯರು “ಯೋನಿಯ” ಅಕ್ಕ ಪಕ್ಕ ಕತ್ತರಿಸಿ (ಇಠಿisioಣomಥಿ) ಕತ್ತರಿ ಪ್ರಯೋಗಿಸುವ ಮೂಲಕ ಮಗು ಭುವಿಗಿಳಿಸುವರು.
ರಕ್ತ ಜಳ್ಳನೆ ಚಿಮ್ಮುವುದು. ಹರಿದ ಯೋನಿಗೆ ಮತ್ತೇ ಎಂಟ್ಹತ್ತು ಹೊಲಿಗೆ . ಗಾಯ ಒಣಗಲು ಸಮಯ ಹೆಚ್ಚು. ಸಕ್ಕರೆ ಕಾಯಿಲೆಯಿದ್ದರಂತೂ ಗಾಯವು ಬೇಗನೆ ಒಣಗದು. ಅದರ ನೋವು ಆಕ್ರಂದನ ನನ್ನಿಂದ ಬರೆಯಲಾಗದು.
ನಾವು ಕಲ್ಪನೆ ಮಾಡಿಕೊಂಡರೆ ತರ- ತರ ಕೈ ಕಾಲು ನಡಗುತ್ತವೆ. ಇನ್ನೂ ಆ ಹೆಣ್ಣಿನ ನೋವೆಷ್ಟೀರಬೇಕು. ದೇವರೆ.!!!
ರಕ್ತದೊತ್ತಡ ಹೆಚ್ಚಾಗಿ ಫಿಟ್ಸ್ ಬರುವ ಸಂಭವ ಹೆಚ್ಚು. ಜೀವಕ್ಕೆರಗುವ ಆಪತ್ತು ಮಗ್ಗುಲಿಗೆ ಮಲಗಿರತ್ತೆ. ಸಹಜ ಹೆರಿಗೆಯಾದರೂ ಆ ನೋವು ಹೇಳತಿರದು, ಗರ್ಭಚೀಲದ ಮಾಂಸಖಂಡಗಳ ತೀವ್ರ ಸಂಕೋಚನ, ಆಕುಂಚನದಿಂದ ಮಗು ಹೊರದಬ್ಬಲ್ಪಡುತ್ತೆ. ಬೆನ್ನು, ಯೋನಿ ಒಳಭಾಗ, ಹೊಟ್ಟೆ, ತೊಡೆಯ ಮಾಂಸಖಂಡಗಳು ಸಿಡಿದೆದ್ದ ಆರ್ಭಟದ ನೋವಿಗೆ ಪತರುಗುಟ್ಟಿ ಹೋಗವವು. ಭುಗಿಲೆದ್ದ ನೋವನ್ನು ದವಡೆಗಚ್ಙಿ ಸಹಿಸುವಳು. ಒಬ್ಬ ಗಂಡಸೂ ಸಹ ತಡೆಯಲಾಗದ ನೋವದು.
ಕನಸಲ್ಲಿಯೂ ನಾವು ಕಂಡಿರದ, ಊಹಿಸಲಸಾಧ್ಯ ನೋವು.
ನಡೆಯುವಾಗ ಕಲ್ಲಿಗೆ ಎಡವಿದರೆ ಪಾದದ ನೋವು ನೆಲಕಚ್ಚುವಂತೆ ಮಾಡುವುದು. ಕೇವಲ ಹಲ್ಲು ನೋವು, ಕಿವಿ ನೋವಿಗೆ ಗದಗದ ನಡುಗಿ ನೀರಾಗುವ ನಾವುಗಳೆಲ್ಲಿ, ಮಗುವಿಗೆ ಜನ್ಮ ನೀಡುವ ತಾಯಿ ಎಲ್ಲಿ? ಅಜಗಜಾಂತರದ ದೂರ. ಇನ್ನೂ ಮಗು ಅಡ್ಡ ಕೂತಿದೆ, ಗರ್ಭಚೀಲದೊಳಗಿ ನೀರು ಕಡಿಮೆ ಇದೆ, ಮಗು ಮಲ ತಿಂದಿದೆ, ಮಗುವಿನ ಜನ್ಮಕ್ಕೆ ಎಂತದಕ್ಕೋ ಗಂಡಾಂತರ, ತಾಯಿಯ ಜೀವಕ್ಕೆ ಕುತ್ತು, ತುರ್ತು ಎಂದು ಹೊಟ್ಟೆ ಬಗೆದು (ಐಂಅS) ಮಗು ತೆಗೆಯುವ ಕಾರ್ಯ ನಡೆದರಂತೂ ಅವಳು ಹೀನಾಮಾನ ಸೋತು ಹೋಗುವಳು. ಆಪರೇಷನ್ ಥಿಯೇಟರ್ ಒಳಗಿನ ಮಂಚದ ಮೇಲೆ ಪ್ರಖರ ಬೆಳಕಿಗೆ ಒರಗುವ ತುಂಬು ಗರ್ಭಿಣಿ. ತಾಯ್ತನ ಪಡೆಯುವ ಹೋರಾಟಕ್ಕೆ ಅಣಿಯಾದಂತಿರುತ್ತಾಳೆ. ತನ್ನ ಮೊಣಕಾಲು ಹಣೆಗೆ ತಾಕುವಂತೆ ಮುದುಡಿ ಮಗ್ಗಲು ಮಲಗಲು ಹೇಳಲಾಗತ್ತೆ. ( ಗರ್ಭದೊಳಗಿನ ಮಗು ತರ). ಬಿಲ್ಲಿನಂತಾಗುವ ಬೆನ್ನುಹುರಿಗೆ ಗೇಣುದ್ದ ಸೂಜಿ ಚುಚ್ಚಿ, ಅನಸ್ತೇಷಿಯಾ ಔಷಧಿ ಒಳ ಹರಿಸಲಾಗತ್ತೆ. ಸೂಜಿ ಒಳಹೊಕ್ಕ ನೋವಿಗೆ ಮೆದುಳು ಕಲಸಿದಂತಾಗಿ.
ನಿಧಾನಕ್ಕೆ ಕಣ್ಣು ಮಂಜುಮಂಜು ಕಂಡು, ಸಂಪೂರ್ಣ ದೇಹ ಗಾಳಿಯಲ್ಲಿ ತೇಲಾಡಿದಂತೆ ಭಾಸವಾಗತ್ತೆ., ಅರೆಪ್ರಜ್ಞೆಗೆ ನಿಧಾನಕ್ಕೆ ಜಾರುತ್ತಾಳೆ.
ಆಮೇಲೆ ವೈದ್ಯನ ಕತ್ತರಿ ಪ್ರಯೋಗ.. ಹೊಟ್ಟೆ ಬಗಿದು, ಗರ್ಭಚೀಲ ಸೀಳುತ್ತೆ (ಅಚಿesಚಿಡಿeಚಿಟಿ seಛಿಣioಟಿ). ಒಳ ಪವಡಿಸಿದ ಮಗುವನ್ನು ಹೊರ ತೆಗೆದು, ಮತ್ತೆ ಸೂಜಿ, ದಾರದಿಂದ ಗರ್ಭಚೀಲ, ಹೊಟ್ಟೆಯ ಮಾಂಸಖಂಡ, ಮೇಲ್ಪದರನ್ನು ಹೊಲೆದು ತೇಪೆ ತರಹ ಪಟ್ಟಿ ಕಟ್ಟುವ ಕೆಲಸ. ಕೇವಲ ಒಂದೂವರೆ- ಎರಡಿಂಚು ಸೂಜಿ ಚುಚ್ಚಿಸಿಕೊಳ್ಳಲು ಬೆವೆತು ತೊಪ್ಪೆಯಾಗುವ ಗಂಡಸರು ನಾವೆಲ್ಲಿ. ಗೇಣುದ್ದ ಸೂಜಿ ಚುಚ್ಚಿಕೊಂಡು, ಹೊಟ್ಟೆ ಹರಿದು ಮಗು ಕೊಡುವ ಹೆಣ್ಣು ಎಲ್ಲಿ? ಯಾರು ದಿ ಗ್ರೇಟ್!!!!?
ಮೂರ್ನಾಲ್ಕು ತಾಸು ಕೆಲಸ ಮಾಡುವ ಅನಸ್ತೇಶಿಯಾ ಔಷಧಿಯಿಂದ ಆ ತಾಯಿಗೆ ನೋವು ಕಾಣದಿದ್ದರೂ ನಂತರ ಎರಗುವ ನೋವು ನರನಾಡಿಗಳನ್ನ ಹಿಂಡಿ ಹಿಪ್ಪೆಯಾಗಿಸಿ, ಬಗ್ಗು ಬಡಿಯುವಂತಿರತ್ತೆ. ಬೆನ್ನಿನಲ್ಲಿ ಚುಚ್ಚಿದ ಸೂಜಿಯ ನೋವು ಒಂದಡೆಯಾದರೆ, ಹೊಟ್ಟೆ ಅಗೆದ ನೋವು ಮತ್ತೊಂದೆಡೆ. ಪ್ರತಿಕ್ಷಣ ನೋವು, ದೇಹದ ಆಕ್ರಂದನ ಮುಗಿಲು ಮುಟ್ಟುವಂತಿರತ್ತೆ. ಆ ತಾಯಿ ಎಲ್ಲವನ್ನೂ ಹಲ್ಲು ಕಚ್ಚಿ ಸಹಿಸುವಳು. ಹೆಣ್ಣಿನಿಂದ ತಾಯಿಯಾದ ಅನನ್ಯ ಅನುಬಂಧದ ಉತ್ಸಾಹದಲ್ಲಿ. ಮಾರನೆಯ ದಿನದೊಳಗೆ ಎದೆ ಹಾಲು ಉಕ್ಕಿದರೆ ಸರಿ ಇಲ್ಲವಾದರೆ ತಕರಾರಿಲ್ಲದೆ ಅದಕ್ಕೂ ಒಂದಿಷ್ಟು ಸೂಜಿ- ಮದ್ದುಗಳು. ಮಗುವಿನ ಪ್ರತಿ ಕದಲುವಿಕೆಗೂ ಕಂಗಾಲಾಗುವ ತಾಯಿ, ತಾಸಿಗೊಮ್ಮೆ ಮೊಲೆಹಾಲು ಹಿಡಿಸುವಳು. ಅದು ಕಣ್ಣೇದುರಿನ ದೇವರು ನೀಡುವ ಅಮೃತ. ಮಗುವಿನ ಇಂಚಿಂಚು ಬೆಳವಣಿಗೆಗೆ ಅವಳೇ ಪೂರಕ ಜಗತ್ತು.
ಪ್ರತಿ ಹೆಣ್ಣಿಗೂ ಹೆರಿಗೆಯೆಂಬುದು ಪುನರ್ಜನ್ಮ. ಈಗ ಹೇಳಿ..ಮಗುವನ್ನೇತ್ತಿ ಮುದ್ದಾಡುತ್ತಾ. ಸಹಿಸಲಸಾಧ್ಯ ನೋವು ಅನುಭವಿಸಿಯೂ, ನಗುನಗುತಾ ತಾಯ್ತನ ಅನುಭವಿಸುತ್ತಿರುವವಳ ಮುಂದೆ ನಾವು ಗೊಣಗೊವುದು ಸರಿಯೇ?..
[ಇಲ್ಲಿ ಹೆರಿಗೆಯನ್ನು ಆದಷ್ಟು ಸಾಮಾನ್ಯ ಭಾಷೆಲಿ ತಿಳಿಸಲಿಕ್ಕೆ ಪ್ರಯತ್ನಿಸಿ, ತುಸು ಮಾತ್ರ ಬರೆದಿರುವೆ. ಇನ್ನೂ ಅಗಾಧ ವಿಚಾರಗಳಿವೆ] ಗೊಣಗುವ ಬದಲು ಆ ಬಾಣಂತಿ ಮಗ್ಗಲು ನಿಂತು, ಹಣೆ ಸವರಿ, ಕೈ ಅದುಮಿ ನಕ್ಕುಬಿಡು ಸಾಕು. ಆ ತಾಯಿಗೆ ಅದಮ್ಯ ಚೇತನ ಮೈ ತುಂಬಿಕೊಳ್ಳುತ್ತೆ. ಬಲಿಷ್ಠಳಾಗಿ ನಿನ್ನ ಮನೆ ಮನ ಬೆಳಗುವಳು.
“ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ”
{ತಾಯಿ ಮತ್ತು ತಾಯ್ನೆಲ ಸ್ವರ್ಗಕ್ಕಿಂತ ಮಿಗಿಲು)
ಇಂತಿ.
ಡಾ. ಪ್ರಕಾಶ ಬಾರ್ಕಿ
ಕಾಗಿನೆಲೆ.
೯೪೮೧೫೨೬೮೦೦