“ಹಾವುಏರಿಯಲ್ಲಿ ಹಾವಕ್ಕಿ”
ಭಾನುವಾರ ಬೆಳಿಗ್ಗೆ ೮ರ ಸುಮಾರಿಗೆ ಕಟ್… ಕಟ್…. ಎಂದು ಸದ್ದುಮಾಡುವ ನನ್ನ ನೆಚ್ಚಿನ ಬೈಕ್‌ನ್ನೇರಿ ಹೆಗ್ಗೆರಿ ಪರಿಸರದ ಕಡೆಗೆ ಹೋದಾಗ, ಅದಾಗಲೇ ಈಜು ಕೂಟದ ಸ್ನೇಹಿತರು ಕೆರೆಯ ನೀರಿನಲ್ಲಿ ಈಜಿನ ಸುಖವನ್ನು ಅನುಭವಿಸುತ್ತಿದ್ದರು. ಕೆಲವು ಗೆಳೆಯರು “ಬರ್ರೀ ಅಂಗೂರರ ಹಕ್ಕಿಯಾವು ಇದ್ದಂಗ್ ಇಲ್ಲ್ಲ, ಈಜ ಹೊಡಿ ಬರ್ರೀ” ಎಂದು ಕಿಚಾಯಿಸಿದರು. ಬಂದೆ, ಬಂದೆ ಎನ್ನುತ್ತಾ ಬೈಕ್ ನಿಲ್ಲಿಸಿ ಕ್ಯಾಮೆರಾ ಬ್ಯಾಗ್‌ನ್ನು ಹೇಗಲಿಗೆರಿಸಿಕೊಂಡು ಕ್ಯಾಮೆರ ಹಿಡಿದುಕೊಂಡು ಕೆರೆಯ ದಡದಲ್ಲಿ ನಡೆಯತೊಡಗಿದೆ. ಯಾವುದೇ ಪಕ್ಷಿಗಳು ಸುಳಿವು ಗೋಚರಿಸಲಿಲ್ಲ!. ಇರಲಿ ಹೇಗೂ ವಾಕಿಂಗ್ ಆಗುತ್ತದೆ ಎಂದು ಕೋಡಿಹಳ್ಳಿಯ ಭಾಗದ ಕೆರೆಯಕೋಡಿಯವರೆಗೆ ಹೋಗಿ ಬಂದರಾಯಿತು ಎಂದು ಹೆಜ್ಜೆಹಾಕಿದೆ.
ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ಕೋಡಿಹಳ್ಳಿಯ ಕೋಡಿಭಾಗದಲ್ಲಿನ ನೀರಿನಲ್ಲಿದ್ದ ಮುಳ್ಳಿನ ಪೊದೆಯಲ್ಲಿನ ಹಾವಕ್ಕಿ (ಡಾರ್ಟರ್ ಅಥವಾ ಸ್ನೇಕ್ ಬರ್ಡ್)ಮೀನು ಬೇಟೆಗೆ ಹೊಂಚುಹಾಕಿರುವುದು ಕಂಡಿತು. ನಿಶಬ್ದವಾಗಿ ಅದರ ಸಮೀಪಕ್ಕೆ ನಡೆಯತೊಡಗಿದೆ. ಹಾವಕ್ಕಿಯ ಸುಕ್ಷ್ಮಾತಿ ಸೂಕ್ಷ್ಮ ಕಣ್ಣುಗಳು ನನ್ನ ಬರುವಿಕೆಯನ್ನು ಗಮನಿಸಿ “ಹಾವುಕ್ಕಿ ರೆಕ್ಕೆಗೆ ಬುದ್ದಿಹೇಳಿತು”. ತಡಮಾಡಿದರೆ ಇದರ ಫೋಟೋ ಸಿಗಲಾರವು ಎಂದು ಕ್ಯಾಮೆರವಾವನ್ನು ಅದರಡೆಗೆ ತಿರುಗಿಸಿ ಕೆಲವು ಛಾಯಾಚಿತ್ರಗಳನ್ನು ಕ್ಲಿಕ್ಕಿಸಿದೆ.
ಹಾವಕ್ಕಿ ಹಾವೇರಿ ಪರಿಸರದಲ್ಲಿ (ಹಾವೇರಿಯ ಮೂಲ ಹೆಸರು ಹಾವುಏರಿ)ಈಹಿಂದೆ ಕಂಡು ಬಂದಿರುವುದು ವಿರಳ ಎನ್ನಬಹುದು!. ಈ ಹಿಂದೆ ಅಂದರೆ “೨೦೧೭ರಲ್ಲಿ ಒಂದುಬಾರಿ ಹಾವಕ್ಕಿ ಹಾವೇರಿಯ ಪರಿಸರದಲ್ಲಿ ಕಂಡು ಬಂದಿದ್ದವು”. ನಂತರ ಸುಮಾರು ಸಲ ನಾನು ಹೆಗ್ಗೆರೆಕೆಗೆ ಭೇಟಿ ನೀಡಿದ ವೇಳೆ ಇವು ಕಂಡಿರಲಿಲ್ಲ!. ದಟ್ಟವಾದ ಹಿನ್ನೀರಿನ ಪ್ರದೇಶದಲ್ಲಿ ಬೆಳೆದಿರುವ ಗಿಡ-ಗಂಟೆಗಳಲ್ಲಿ ಇವು ಇರುವುದು ಹೆಚ್ಚು. ಆಹಾರ ಅರಸಿ ಇಲ್ಲವೇ ವಲಸೆಯ ಕಾರಣಕ್ಕೆ ಹಾವಕ್ಕಿ ಬಂದಿರುವ ಸಾಧ್ಯತೆ ಹೆಚ್ಚು.
ಹಾವಕ್ಕಿ ವಿಶಿಷ್ಟವಾದ ನೀರುಹಕ್ಕಿಗಳಾಗಿವೆ. ಇವುಗಳಲ್ಲಿ ೪ ಜಾತಿಯ ಪಕ್ಷಿಗಳನ್ನಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಮೂರು ಸರ್ವೇ ಸಾಮಾನ್ಯವಾಗಿ ಮತ್ತು ಎಲ್ಲೆಡೆ ಕಾಣಸಿಗುತ್ತದೆ. ಆದರೆ ನಾಲ್ಕನೆಯದು ಅತಿ ವಿರಳವಾಗಿದೆ ಎಂದು ಐಯುಸಿಎನ್ ವರ್ಗೀಕರಿಸಿ ಎಚ್ಚರಿಕೆ ನೀಡಿದೆ. ‘ಸ್ನೇಕ್ ಬರ್ಡ್’ (sಟಿಚಿಞebiಡಿಜ) ಎಂಬ ಪದವನ್ನು ಯಾವುದೇ ಪ್ರದೇಶದ ನಿರ್ದಿಷ್ಟ ಹಕ್ಕಿಗೆ ಸೂಚಿಸದೇ ಈ ಜಾತಿಗೆ ಸೇರುವ ವಿವಿಧ ಪಕ್ಷಿಗಳಿಗೆ ಸಾಮಾನ್ಯವಾಗಿ ಈ ಹೆಸರಿನಿಂದ ಕರೆಯಲಾಗುತ್ತದೆ.
ಈ ರೀತಿಯ ಪಕ್ಷಿಗಳಿಗೆ ತೆಳುವಾದ ಉದ್ದನೆಯ ಕುತ್ತಿಗೆ ಇದ್ದು, ಈ ಕುತ್ತಿಗೆಯು ಹಾವಿನ ರೀತಿಯಲ್ಲಿ ಕಾಣುತ್ತವೆ. ಇವು ನೀರಿನಲ್ಲಿ ಈಜುವಾಗ ಇವುಗಳ ದೇಹವು ನೀರಿನಲ್ಲಿ ಮುಳುಗಿದ್ದು , ಕುತ್ತಿಗೆ ಮಾತ್ರ ಕಾಣುತ್ತಿರುತ್ತವೆ. ಇದು ಹಾವಿನ ರೀತಿ ಗೋಚರಿಸುತ್ತದೆ. ಅಥವಾ ಇವು ಜೋಡಿಯಾಗಿ ನೀರಿನಲ್ಲಿ ಹೋಗುತ್ತಿರುವಾಗ ತಿರುಗಿದಲ್ಲಿ ಅವುಗಳು ಬಂಧಿಯಾದಂತೆ ಕಾಣುತ್ತವೆ. ಡಾರ್ಟರ್ ಎಂಬ ಪದವನ್ನು ಭೌಗೋಳಿಕ ಹೆಸರಿನಲ್ಲಿ ನಿರ್ದಿಷ್ಟ ಜಾತಿಯ ಪಕ್ಷಿಗೆ ಕರೆಯಲಾಗುತ್ತದೆ. ಇದು ಈ ಪಕ್ಷಿಯ ಆಹಾರ ಸಂಗ್ರಹಣೆಯ ವಿಧಾನದ ಮೂಲಕ ಸೂಚಿಸಿದಂತಾಗುತ್ತದೆ.
ಮೀನುಗಳನ್ನು ತನ್ನ ಚಿಕ್ಕ ಹಾಗೂ ಚೂಪನೆಯ ಕೊಕ್ಕಿನಿಂದ ಹೆಕ್ಕಿ ತಿನ್ನುತ್ತವೆ. ಇವುಗಳು ಭಾರಿ ದೊಡ್ಡಗ್ರಾತ್ರದವುಗಳಾಗಿದ್ದು, ಉದ್ದ ಬಾಲವನ್ನು ಹೊಂದಿದ ಕಪ್ಪು ಹಕ್ಕಿಯಾಗಿದ್ದು. ಇದನ್ನು ಹಳೆಯ ಪಕ್ಷಿಯಂದು ಗುರುತಿಸಲಾಗುತ್ತದೆ. ಹಾವಕ್ಕಿ ಕೂಗಿನಲ್ಲಿ ಲಟಲಟ ಸದ್ದು ಮಾಡುವುದು, ರೆಂಬೆಯ ಮೇಲೆ ಕುಳಿತುಕೊಳ್ಳುವಾಗ ಸದ್ದು ಮಾಡುವುದೂ ಇದರ ಸ್ವಭಾವವಾಗಿದೆ. ಗೂಡು ಕಟ್ಟುವ ಸಂದರ್ಭದಲ್ಲಿ ಇವು ಕರ್ಕಶವಾಗಿ ಕೂಗುವ, ಗುರುಗುಟ್ಟುವ,ಮತ್ತು ಲಟಪಟ ಸದ್ದು ಮಾಡುವ ಮೂಲಕ ತಮ್ಮ ಸಂಜ್ಞೆಯನ್ನು ನೀಡುತ್ತವೆ. ಸಂತಾನೋತ್ಪತ್ತಿಯ ಸಂದರ್ಭದಲ್ಲಿ ಕೆಲವುಬಾರಿ ಕಾಕಾ ಎಂದು ಕೂಗುವ ಮೂಲಕ ನಿಟ್ಟುಸಿರು ಬಿಡುವ ಶಬ್ದದ ಮೂಲಕ ಮತ್ತು ಹಿಸ್ ಎಂಬ ಶಬ್ದದ ಮೂಲಕ ಸಂಜ್ಞೆಯನ್ನು ನೀಡುತ್ತವೆ. ಗೂಡಿನಲ್ಲಿರುವ ಮರಿಗಳು ಕ್ವಾ ಕ್ವಾ ಎಂಬ ಶಬ್ದಗಳ ಮೂಲಕ ಸಂಜ್ಞೆಯನ್ನು ರವಾನಿಸುತ್ತವೆ.
ಉಪ ಉಷ್ಣವಲಯಗಳು ಮತ್ತು ಬೆಚ್ಚಗಿನ ವಾತಾವರಣಗಳಲ್ಲಿ ಇವು ಸುತ್ತಾಡುತ್ತಾ ಇರುತ್ತವೆ. ಇವುಗಳು ಶುದ್ದವಾದ ನೀರಿನ ಸರೋವರಗಳ, ನದಿಗಳ, ಜವುಗು ಭೂಮಿಯ, ಹೂಳು ಭೂಮಿಯ ಅಕ್ಕ ಪಕ್ಕದಲ್ಲಿ ವಾಸಿಸುವ ಲಕ್ಷಣಗಳನ್ನು ಹೊಂದಿವೆ. ಇವು ಹಾರಾಡುವ ವೈಷಿಷ್ಠ್ಯವೆಂದರೆ ಇವು ರೆಕ್ಕೆಯನ್ನು ಬಿಡಿಸಿಕೊಂಡು ಹಾರಾಡುತ್ತವೆ ಮತ್ತು ಅವು ಯಾವಾಗಲು ಹಾರಾಡುವಾಗ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಗಟ್ಟಿಯಾದ ನೆಲದಲ್ಲಿ ಅವು ವೇಗದ ನಡಿಗೆಯನ್ನು ಹೊಂದಿರುತ್ತವೆ. ಮೀನುಗಳನ್ನು ಶೇಖರಿಸಿಟ್ಟುಕೊಳ್ಳುವ ಸಲುವಾಗಿ ಗಂಟಲು ಚೀಲವುಳ್ಳ ನೀರುಹಕ್ಕಿಯಂತೆಯೇ ರೆಕ್ಕೆಗಳನ್ನು ಬಿಡಿಸುತ್ತಿರುತ್ತವೆ.
ಹೆಣ್ಣು-ಗಂಡು ಎರಡು ಸೇರಿ ಗೂಡುಕಟ್ಟತ್ತವೆ. ಹೆಣ್ಣು ಎರಡರಿಂದ ಆರು ಮೊಟ್ಟೆಗಳನ್ನು ಒತ್ತೊತ್ತಾಗಿ ಇಡುತ್ತದೆ. ಕಾವು ಕೊಡುವ ಸಮಯವು ೨೫ ರಿಂದ ೩೦ ದಿನಗಳಾಗಿರುತ್ತವೆ. ಹಾವಕ್ಕಿಗಳನ್ನು ಆಸ್ಸಾಮ್ ಮತ್ತು ಬಂಗಾಳದಲ್ಲಿ ಕೆಲವುರು ಪಳಗಿಸಿ ಮೀನು ಹಿಡಿಯಲೂ ಸಹ ಬಳಸಿಕೊಳ್ಳುತ್ತಾರೆ. ಇದಿಷ್ಟು ಹಾವಕ್ಕಿಯ ಬಗ್ಗೆ ನನಗೆ ತಿಳಿದ ಸಂಗತಿಯಾಗಿದ್ದು, ಅಳಿವನಂಚಿನಲ್ಲಿರುವ ಪಕ್ಷಿಗಳು ಸಂರಕ್ಷಣೆ ಇಂದಿನ ಅಗತ್ಯವಾಗಿದೆ.
ಚಿತ್ರ/ಲೇಖನ: ಮಾಲತೇಶ ಅಂಗೂರ, ಹಾವೇರಿ.
ಮೊ: ೯೪೮೧೭೪೯೪೪೦