ಹಾವೇರಿ: ನುಡಿಜಾತ್ರೆಗೆ ವಸತಿ ವ್ಯವಸ್ಥೆ-ಹೋಟೆಲ್ ಮಾಲೀಕರೊಂದಿಗೆ ಡಿಸಿ ಚರ್ಚೆ
ಹಾವೇರಿ: ಅಖಿಲ ಭಾರತ ೮೬ನೇ ನುಡಿಜಾತ್ರೆಗೆ ಹಾವೇರಿ ಜಿಲ್ಲೆ ಹೊರತು ಹುಬ್ಬಳ್ಳಿ ಹಾಗೂ ದಾವಣಗೆರೆ ನಗರಗಳಲ್ಲಿ ವಸತಿ ವ್ಯವಸ್ಥೆ ಮಾಡಬೇಕಾಗಿದೆ. ಉಭಯ ನಗರಗಳಲ್ಲಿ ವರ್ಗವಾರು ರೂಂಗಳ ಲಭ್ಯತೆ ಹಾಗೂ ದರಗಳ ಕುರಿತಂತೆ ಮಾಹಿತಿ ಸಂಗ್ರಹಿಸಿ ಆಯಾ ನಗರದ ಹೋಟೆಲ್ ಮಾಲೀಕರೊಂದಿಗೆ ಸಭೆ ಆಯೋಜಿಸಲು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಸೂಚನೆ ನೀಡಿದರು.
ಹಾವೇರಿಯಲ್ಲಿ ನಡೆಸಲು ಉದ್ದೇಶಿಸಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ವಸತಿ ವ್ಯವಸ್ಥೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಅಧಿಕಾರಿಗಳು ಹಾಗೂ ಹೋಟೆಲ್ ಮಾಲೀಕರ ಸಭೆಯಲ್ಲಿ ಮಾತನಾಡಿದರು.
ಸಮ್ಮೇಳನಕ್ಕೆ ಅಂದಾಜು ೧೫ ಸಾವಿರ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಸಮ್ಮೇಳನ ನಡೆಯುವ ವಾರದ ಮುಂಚೆ ನಿರ್ಧಿಷ್ಟ ಸಂಖ್ಯೆ ದೊರೆಯಲಿದೆ. ಈಗಾಗಲೇ ಹಾವೇರಿ ಜಿಲ್ಲೆಯಲ್ಲಿ ಹೋಟೆಲ್ ಹಾಗೂ ವಿದ್ಯಾರ್ಥಿ ನಿಲಯ, ಸಮುದಾಯ ಭವನಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ಗುರುತಿಸಲಾಗಿದೆ. ಅಂದಾಜು ೧೦ ರಿಂದ ೧೨ ಸಾವಿರ ಜನರಿಗೆ ಜಿಲ್ಲೆಯಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಅವಕಾಶವಿದೆ. ಒಂದೊಮ್ಮೆ ಪ್ರತಿನಿಧಿಗಳ ನೋಂದಣಿ ಸಂಖ್ಯೆ ಹೆಚ್ಚಾದರೆ ಹುಬ್ಬಳ್ಳಿ ಹಾಗೂ ದಾವಣಗೆರೆಯಲ್ಲಿ ವಸತಿ ವ್ಯವಸ್ಥೆಗೆ ಹೋಟೆಲ್ಗಳು ಅವಶ್ಯಬಿಳಲಿದ್ದು, ಎರಡರಿಂದ ಮೂರು ಸಾವಿರ ಜನರಿಗೆ ಹೊರ ಜಿಲ್ಲೆಯಲ್ಲಿ ವಸತಿ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ದಾವಣಗೆರೆ ಮತ್ತು ಹುಬ್ಬಳ್ಳಿ ಹೋಟೆಲ್ ಮಾಲೀಕರ ಸಂಘದ ಸಭೆಯನ್ನು ಶೀಘ್ರವೇ ಮತ್ತೊಮ್ಮೆ ಕರೆಯಲಾಗುವುದು. ಇದಕ್ಕಿಂತ ಮುಂಚಿತವಾಗಿ ಎರಡು ನಗರಗಳಲ್ಲಿ ಲಭ್ಯವಿರುವ ಕೊಠಡಿ ಹಾಗೂ ದರಗಳ ಪಟ್ಟಿ ಹಾಗೂ ಸಮ್ಮೇಳನಕ್ಕೆ ತಾವು ಒದಗಿಸಬಹುದಾದ ಕೊಠಡಿಗಳ ಸಂಖ್ಯೆ ಕುರಿತಂತೆ ಮಾಹಿತಿ ನೀಡಲು ಕೋರಿದ ಅವರು ಹೋಟೆಲ್ ಮಾಲೀಕರಿಗೂ ನಷ್ಟವಾಗದಂತೆ ಹಾಗೂ ಸಮ್ಮೇಳನಕ್ಕೂ ಹೆಚ್ಚು ಹೊರೆ ಬೀಳದಂತೆ ಪರಸ್ಪರ ಚರ್ಚಿಸಿ ಕೊಠಡಿಗಳ ದರ ಅಂತಿಮಗೊಳಿಸಲು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕಾ ಅಧ್ಯಕ್ಷರಾದ ಯಲ್ಲಪ್ಪ ಆಲದಕಟ್ಟಿ, ಕಾರ್ಯದರ್ಶಿ ಎಸ್.ಎಸ್. ಬೇವಿನಮರದ, ವಸತಿ ಸಮಿತಿ ಕಾರ್ಯದರ್ಶಿ ಮಲ್ಲಿಕಾರ್ಜುನ ಮಠದ, ದಾವಣಗೆರೆ ಹೋಟೆಲ್ ಮಾಲೀಕರ ಸಂಘದ ಪ್ರತಿನಿಧಿ ರಮೇಶ ಹಾಗೂ ವಿವಿಧ ಸ್ಥಳೀಯ ಹೋಟೆಲ್ ಮಾಲೀಕರು ಉಪಸ್ಥಿತರಿದ್ದರು.