ಹಾವೇರಿ: ಸಾರ್ವಜನಿಕರಲ್ಲಿ ನಾಗರಿಕ ಪ್ರಜ್ಞೆ ಇರಬೇಕು, ಸಂಚಾರಿ ನಿಯಮಗಳಬಗ್ಗೆ ತಿಳಿದುಕೊಳ್ಳಬೇಕು. ಸಾಮಾಜಿಕ ಹೊಣೆಗಾರಿಕೆಯಿಂದ ವಾಹನ ಚಾಲನೆಮಾಡಿದಾಗ ಜೀವಹಾನಿ ತಡೆಯಬಹುದು. ಯುವ ಜನತೆ ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸುವುದು ಅವಶ್ಯವಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಹೇಳಿದರು.
ನಗರದ ಜಿಲ್ಲಾ ಗುರುಭವನದಲ್ಲಿ ಬುಧವಾರ ಜರುಗಿದ ೩೨ನೇ ರಸ್ತೆ ಸುರಕ್ಷತಾ ಮಾಸಿಕ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ವರ್ಷದಿಂದ ವರ್ಷಕ್ಕೆ ವಾಹನಗಳ ಸಂಚಾರ ದಟ್ಟಣೆ ದ್ವಿಗುಣ ಗೊಳ್ಳುತ್ತಿದೆ. ವಾಹನಗಳ ಉತ್ಪಾದನೆ, ಖರೀದಿ ಹಾಗೂ ವಾಹನ ಓಡಿಸುವವರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಸಂಚಾರಿ ದಟ್ಟಣೆ, ಸಂಚಾರಿ ನಿಯಮಗಳ ಪಾಲನೆಯಲ್ಲಿ ನಿರ್ಲಕ್ಷ್ಯದ ಕಾರಣ ರಸ್ತೆಗಳು ಮೃತ್ಯುಕೂಪಗಳಾಗಿವೆ ಎಂದು ಹೇಳಿದರು.
ರಸ್ತೆ ಅಪಘಾತಗಳಿಗೆ ನಿರ್ಲಕ್ಷ್ಯ ಚಾಲನೆ ಜೊತೆಗೆ ನಮ್ಮ ವಾಹನಗಳ ನಿರ್ವಹಣೆಯೂ ಕಾರಣವಾಗಿರುತ್ತದೆ. ಕಾಲಕಾಲಕ್ಕೆ ವಾಹನಗಳನ್ನು ಸರ್ವಿಸ್ ಮಾಡಿಸದೇ ಹೋದರೆ ತಾಂತ್ರಿಕ ವಿಫಲತೆಯಿಂದಲೂ ಅಪಘಾತಗಳು ಸಂಭವಿಸುತ್ತವೆ. ಈ ನಿಟ್ಟಿನಲ್ಲಿ ಚಾಲನೆ ಜೊತೆಗೆ ವಾಹನಗಳ ಸುರಕ್ಷತೆ ಕಡೆಗೆ ಹೆಚ್ಚಿನ ಗಮನ ಹರಿಸುವಂತೆ ಸಲಹೆ ನೀಡಿದರು.
ಯುರೋಪ ದೇಶದ ಪ್ರವಾಸ ಸಂದರ್ಭದಲ್ಲಿ ಒಮ್ಮೆ ವೃತ್ತ ಒಂದರಬಳಿ ನಿಂತು ಸಂಚಾರಿ ನಿಯಮಗಳ ಪಾಲನೆ ಕುರಿತಂತೆ ಗಮನಿಸಿ, ಸಂಚಾರಿ ಪೊಲೀಸರು ಇರಲಿಬಿಡಲಿ ವಾಹನ ಚಾಲಕರು ಸಿಗ್ನಲ್ ಲೈಟ್‌ಗಳ ಮಾರ್ಗ ಸೂಚಿಯಂತೆ ಸ್ವಯಂ ಪ್ರೇರಿತರಾಗಿ ಸಂಚಾರಿ ಮಾರ್ಗಸೂಚಿಗಳು ಅನುಸರಿಸುತ್ತಾರೆ. ಇದೇ ಮಾದರಿಯಲ್ಲಿ ಸಂಚಾರಿ ನಿಯಮಗಳ ಪಾಲನೆಗೆ ನಾವೆಲ್ಲ ಸ್ವಯಂ ಪ್ರೇರಿತವಾಗಿ ಮುಂದಾಗೋಣ ಎಂದು ಕರೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಅವರು ಮಾತನಾಡಿ, ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆ ಕುರಿತಂತೆ ಒಂದು ತಿಂಗಳ ಕಾಲ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ದಿನ ಈ ಕಾರ್ಯಕ್ರಮದ ಸಮಾರೋಪ ನಡೆಸಲಾಗಿದೆ. ಪೊಲೀಸ್ ಇಲಾಖೆಯಿಂದ ೨,೮೦೦ ಜಾಗೃತಿ ಕಾರ್ಯಕ್ರಮಗಳ ಆಯೋಜನೆ ಮೂಲಕ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಹೇಳಿದರು.
ಜಾಗೃತಿ ಕಾರ್ಯಕ್ರಮಗಳ ಸಂದರ್ಭದಲ್ಲಿ ೧೧,೪೦೦ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ೪೪ ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಈ ವರ್ಷ ಜಿಲ್ಲೆಯಲ್ಲಿ ಕೋವಿಡ್‌ನಿಂದ ೧೯೫ ಜನ ಮೃತಪಟ್ಟರೇ, ರಸ್ತೆ ಅಪಘಾತದಿಂದ ಕೂಡ ೧೯೫ ಜನ ಮೃತಪಟ್ಟಿದ್ದಾರೆ. ಕಳೆದ ಎರಡೂವರೆ ತಿಂಗಳಲ್ಲಿ ೪೮ ಜನ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿದರು.
ನಿಗಧಿತ ಅವಧಿಗೆ ಮುಂಚಿತವಾಗಿ ಕಚೇರಿ, ಶಾಲಾ-ಕಾಲೇಜುಗಳಿಗೆ ಹೊರಟರೇ ಅವಸರ ಹಾಗೂ ಅತಿಯಾದ ವೇಗದ ಚಾಲನೆಯನ್ನು ತಡೆಯಬಹುದು. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಬಾರದು. ದ್ವಿಚಕ್ರವಾಹನ ಚಾಲನೆ ಮಾಡುವಾಗ ಹೆಲ್ಮೆಟ್‌ನ್ನು ಕಡ್ಡಾಯವಾಗಿ ಧರಿಸಬೇಕು. ಒಂದೊಮ್ಮೆ ಅಪಘಾತಗಳು ಸಂಭವಿಸಿದಾಗ ಮೊಬೈಲ್‌ನಲ್ಲಿ ಚಿತ್ರಿಕರಿಸುತ್ತ ಕಾಲಹರಣ ಮಾಡುವ ಬದಲು ತಕ್ಷಣವೇ ಆಸ್ಪತ್ರೆ ದಾಖಲಿಸಿ ಜೀವ ಉಳಿಸುವ ಕೆಲಸಮಾಡಬೇಕು. ಪ್ರತಿಯೊಬ್ಬರೂ ರಸ್ತೆ ನಿಯಮಗಳನ್ನು ಪಾಲಿಸಬೇಕು. ರಸ್ತೆ ಅಪಘಾತದಲ್ಲಿ ಮೃತರಾದರೆ ಕೇವಲ ಮೃತವ್ಯಕ್ತಿಗಲ್ಲದೆ ಕುಟುಂಬಕ್ಕೂ ನಷ್ಟ ಎಂಬುದನ್ನು ನಾವೆಲ್ಲ ಅರಿತುಕೊಳ್ಳಬೇಕು ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರು ಮಾತನಾಡಿ, ಇಂದಿನ ದಿನಗಳಲ್ಲಿ ಜನರಲ್ಲಿ ಸಾಮಾನ್ಯ ಪ್ರಜ್ಞೆ ಕಡಿಮೆಯಾಗುತ್ತಿದೆ. ಸಂಚಾರಿ ನಿಯಮಗಳನ್ನು ಪಾಲಿಸುವಲ್ಲಿ ಬೇಜವಾಬ್ದಾರಿ ಕಾಣಬಹುದಾಗಿದೆ. ನಮ್ಮಲ್ಲಿ ನಾಗರಿಕ ಪ್ರಜ್ಞೆ ರೂಢಿಸಿಕೊಳ್ಳದಿದ್ದರೆ ಹಾವೇರಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಚಾಲಕರ ನಿರ್ಲಕ್ಷ್ಯತನದಿಂದ ಅನಗತ್ಯವಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಮಹಾಯುದ್ಧಗಳಲ್ಲಿ ಮರಣಹೊಂದಿದ ಜನರ ಸಂಖ್ಯೆಗಿಂತಲೂ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚು ಇದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಸಂಚಾರಿ ನಿಯಮಗಳನ್ನು ಪಾಲಿಸಲು ನಾವೆಲ್ಲ ಬದ್ಧರಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾರಿಗೆ ಪ್ರಾದೇಶಿಕ ಕಚೇರಿ ಸಿದ್ಧಪಡಿಸಿದ ಸಾಕ್ಷ್ಯ ಚಿತ್ರ ಪ್ರದಶೀಸಲಾಯಿತು ಹಾಗೂ ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.
ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಮಬಾಬಾ ಮುದ್ದೇಬಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರ ಭಾವನಾಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ, ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಬಸನಗೌಡ ಪಾಟೀಲ, ಪ್ರಸನ್ನ ಇತರರು ಉಪಸ್ಥಿತರಿದ್ದರು.