ಹೊಸಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆಯ ಮೂಲಕ ಶಿವರಾತ್ರಿ ಆಚರಣೆ
ಹಾವೇರಿ: ಇಲ್ಲಿನ ಶ್ರೀ ಹೊಸಮಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಗುರುವಾರ ಸಂಜೆ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ಬಸವಶಾಂತಲಿಂಗ ಮಹಾಸ್ವಾಮಿಜಿಯವರ ಸಮ್ಮುಖದಲ್ಲಿ ಜರುಗಿತು.
ಈಸಂದರ್ಭದಲ್ಲಿ ಮಾತನಾಡಿದ ಬಸವಶಾಂತಲಿಂಗಶ್ರೀಗಳು ಶಿವರಾತ್ರಿಯ ಸಂದರ್ಭದಲ್ಲಿ ಜಾಗರಣೆ ಮಾಡುವ ಪದ್ದತಿ ನಮ್ಮಲ್ಲಿದೆ. ಜಾಗರಣೆ ಎಂದರೆ ಜಾಗೃತನಾಗಿರುವುದು ಎಂದರ್ಥ. ನೈತಿಕತೆಯಿಂದ ತನ್ನ ಅಂತರಂಗ ಬಹಿರಂಗಗಳನ್ನು ಶುದ್ಧವಾಗಿಟ್ಟುಕೊಂಡ ಮನುಷ್ಯ, ಸದಾಕಾಲ ಜಾಗೃತನಾಗಿರುತ್ತಾನೆ. ಅವನಲ್ಲಿ ತನ್ನ ನೈತಿಕ ಬದ್ದತೆಯಿಂದ ವಿಮುಖವಾಗದಿರುವ ವಿವೇಕ ಜಾಗೃತವಾಗಿರುತ್ತದೆ.
ಅವನು ಮಲಗಿದರೆ ಅದು ಜಪದಂತೆ- ನಿಶ್ಕಲ್ಮಶ ಶುದ್ಧಾಂತಃಕರುಣಿಯಾದವನ ಉಸಿರು ಉಸಿರಲ್ಲಿ ಶಿವನಿರುತ್ತಾನೆ. ಹಾಗಾಗಿಯೇ ಅವನು ಎದ್ದಿದ್ದರೆ ಅದು ಶಿವರಾತ್ರಿ. ನಾವು ಒಂದುದಿನ ಮಾಡುವ ಶಿವರಾತ್ರಿ ನಮ್ಮನ್ನು ಇಂತಹ ಚಿಂತನೆಗಳಿಗೆ ಪ್ರೇರೇಪಿಸಬೇಕು. ಅದನ್ನು ಬಿಟ್ಟು ಯಾಂತ್ರಿಕವಾಗಿ ತೂಕಡಿಸಿಕೊಳ್ಳುತ್ತಾ ಮಾಡುವ ಶಿವರಾತ್ರಿ ತನ್ನ ಅರ್ಥ ಕಳೆದುಕೊಳ್ಳುತ್ತದೆ ಎಂದರು.
ಶರಣನ ವ್ಯಕ್ತಿತ್ವ ಸದಾ ಜಾಗೃತವಾದ್ದರಿಂದ ಅವನ ನಿದ್ದೆ ಎಚ್ಚರಗಳೆಲ್ಲವೂ ಶಿವನ ಸ್ಮರಣೆ, ನುಡಿಗಳೆಲ್ಲ ಶಿವತತ್ತ್ವ ಆಗಿರುತ್ತವೆ. ಹೆಚ್ಚೇನು! ಬಸವಣ್ಣ, ಅಂತಹ ಜಾಗೃತ ಶರಣನ ಕಾಯ ಕೈಲಾಸವಾಗಿರುತ್ತದೆ. ಅವನೊಳಗೆ ಶಿವ ನೆಲೆಸಿರುತ್ತಾನೆ ಎಂದು ತಿಳಿಸಿದ್ದಾರೆ. ಶಿವರಾತ್ರಿಯ ಈ ಸಂದರ್ಭದಲ್ಲಿ ಶರಣನಂತೆ ನಮ್ಮಲ್ಲಿ ನಿರಂತರವಾಗಿ ಜಾಗೃತಿ ಮೂಡುವಂತೆ ಶಿವನ ಅನುಗ್ರಹ ಎಲ್ಲರಿಗಾಗಲಿ ಎಂದು ಪೂಜ್ಯರು ಹಾರೈಸಿದರು.
ಜಗತ್ತಿನಲ್ಲಿ ಅನೇಕ ಧರ್ಮಗಳಿವೆ, ಅವು ತಮ್ಮ ದೇಹದ ಆಚಾರ-ವಿಚಾರಗಳನ್ನು ಒಳಗೊಂಡಿವೆ. ಇದರ ಜೊತೆಯಲ್ಲಿ ಅದೊಂದು ನಿರ್ದಿಷ್ಟವಾದ ಸಂಕೇತ ಲಾಂಛನವನ್ನು ಹೊಂದಿವೆ. ಅದರಂತೆ ಲಿಂಗಾಯತ ಧರ್ಮವು ಇಷ್ಟಲಿಂಗವನ್ನು ಧಾರ್ಮಿಕ ಸಮಾನತೆಯ ಸಂಕೇತವೆಂದು. ಇಷ್ಟಲಿಂಗವನ್ನು ತನು- ಮನ- ಬಾವ ಅಂದರೆ ಸ್ಥೂಲ ಸೂಕ್ಷ್ಮ ಕಾರಣ ಶರೀರದಲ್ಲಿ ಆಯತ ಮಾಡಿಕೊಂಡವನು ಲಿಂಗಾಯತ. ಅಂತರಂಗದಲ್ಲಿ ಅರಿವು ಬಹಿರಂಗದಲ್ಲಿ ಕ್ರಿಯೆ. ಧರ್ಮದಲ್ಲಿ ಶ್ರದ್ಧೆ ಮತ್ತು ಕಾಯಕದಲ್ಲಿ ನಿಷ್ಠೆಯುಳ್ಳಾತನೆ ಲಿಂಗಾಯತ. ಬಸವಣ್ಣನವರು ಮೊದಲು ಇಷ್ಟಲಿಂಗದ ಕಲ್ಪನೆಯನ್ನು ಅದರೊಂದಿಗೆ ಮಾಡುವ ಯೋಗದ ವಿಧಾನವನ್ನು ತಂದರು.
ಗುಡಿ ಗುಂಡಾರಗಳ ಹೆಸರಿನಲ್ಲಿನಲ್ಲಿ ಶೋಷಣೆ ನಡೆಯುತ್ತಿದ್ದು .ಮುಗ್ಧ ಜನರನ್ನು ಇದರಿಂದ ವಂಚಿತರಾಗುತ್ತಿದ್ದರು. ಹೀಗೆ ಧರ್ಮದ ಹೆಸರಿನಲ್ಲಿ ಶೋಷಣೆ ಸಲ್ಲದೆಂದೂ. ಮೇಲು -ಕೀಳು ಭಾವನೆ ಸರಿಯಲ್ಲವೆಂದು. ಇಷ್ಟಲಿಂಗವನ್ನು ಅಂಗದ ಮೇಲೆ ಧರಿಸುವ ಪದ್ಧತಿಯನ್ನು ಜಾರಿಗೊಳಿಸಿ .ಅಂಗವೇ ಲಿಂಗ ಕಾಯಕವೇ ಕೈಲಾಸವೆಂಬ ತತ್ವವನ್ನು ಪ್ರಸ್ತುತಪಡಿಸಿದರು ಎಂದು ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಬಸವ ಶಾಂತಲಿಂಗ ಸ್ವಾಮೀಜಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜನ ಹಿಂಚಗೆರಿ, ಇಂಧೊದರ ಯರೆಶಿಮಿ, ಮುರುಗೆಪ್ಪ ಕಡೆಕೊಪ್ಪ, ಶಿವಯೋಗಿ ಬೆನ್ನುರು, ಶಿವಬಸಪ್ಪ ಮುದ್ದಿ, ಜಯದೇವ ಕೆರೊಡಿ ಸೇರಿದಂತೆ ಶ್ರೀ ಮಠದ ಅನೇಕ ಭಕ್ತರು ಲಿಂಗಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.