ಹಾವೇರಿ:ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷಿ ಎನ್ನುವಂತೆ ಜಿಲ್ಲೆಯನ್ನು ಬಿಟ್ಟು ಬಿಡದೇ ಕಾಡುತ್ತಿದೆ ಕೊರೊನಾ ಸೋಂಕು, ಸೋಮವಾರ ಮೂವರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತಯೇ ಮತ್ತೊಂದು ಪ್ರಕರಣ ಜಿಲ್ಲೆಯಲ್ಲಿ ಪತ್ತೆಯಾಗಿದೆ.
ಮುಂಬೈನಿಂದ ತನ್ನ ಕುಟುಂಬದೊಂದಿಗೆ ಜಿಲ್ಲೆಗೆ ಬಂದಿದ್ದ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಉಳಿದಿದ್ದ ಕಾರ್ಮಿಕನೋರ್ವನಿಗೆ ಇಂದು ಕರೋನಾ ಸೋಂಕು ದೃಢ ಪಟ್ಟಿದೆ. ೫೭ ವರ್ಷದ P-೩೨೭೧ ವ್ಯಕ್ತಿಗೆ ಸೋಂಕು ದೃಢ ಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.
ಪ್ರವಾಸ ಹಿನ್ನೆಲೆ: P-೩೨೭೧ ಮೂಲತಃ ಶಿಗ್ಗಾಂವ ಪಟ್ಟಣದ ಈತನು ಮುಂಬೈನ ಸಿದ್ದಿವಿನಾಯಕ ಚಾಳ ಸಾಂತಾಕ್ರೂಸ್ನಲ್ಲಿ ಹೆಂಡತಿ ಮತ್ತು ಮಗಳೊಂದಿಗೆ ವಸವಾಗಿದ್ದು ಅಲ್ಲಿಯೇ ಸ್ಥಳೀಯ ಕಾರ್ಮಿಕನಾಗಿ ದುಡಿಯುತ್ತಿದ್ದ. ಮೇ ೧೯ ರಂದು ಓಲಾ ಕಂಪನಿ ಬಾಡಿಗೆ ಕಾರ್ ನಲ್ಲಿ ಬೆಳಿಗ್ಗೆ ಹೊರಟು ಪೂನಾ, ನಿಪ್ಪಾಣಿ, ಬೆಳಗಾವಿ, ಹುಬ್ಬಳ್ಳಿ ಮಾರ್ಗವಾಗಿ ತಡಸ ಚೆಕ್ ಪೋಸ್ಟ್ಗೆ ಅಂದು ರಾತ್ರಿ ೯-೩೦ಕ್ಕೆ ಆಗಮಿಸಿದ್ದರು. ವೈದ್ಯಕೀಯ ತಪಾಸಣೆ ನಂತರ ಚಕ್ಕಿನಕಟ್ಟೆ ರಾಣಿ ಚೆನ್ನಮ್ಮ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಮೇ ೨೪ ರಂದು ಸ್ವಾಬ್ ಪರೀಕ್ಷೆಗೆ ಕಳಹಿಸಲಾಗಿತ್ತು. ಮೇ ೩೧ರ ರಾತ್ರಿ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಸೋಂಕಿತನಿಗೆ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಕ್ಕಿನಕಟ್ಟೆ ರಾಣಿ ಚೆನ್ನಮ್ಮ ವಸತಿ ಶಾಲೆಯ ೧೦೦ ಮೀಟರ್ ವ್ಯಾಪ್ತಿಯನ್ನು ಈಗಾಗಲೇ ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ ಹಾಗೂ ಜಕಿನಕಟ್ಟಿ ಗ್ರಾಮವನ್ನು ಬಫರ್ ಜೋನ್ ಎಂದು ಗುರುತಿಸಲಾಗಿದೆ. ಶಿಗ್ಗಾಂವ ತಾಲೂಕಾ ತಹಶೀಲ್ದಾರ ಅವರನ್ನು ಇನ್ಸಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೧೫ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಆರುಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.