ಹಾವೇರಿ

ಹಾವೇರಿಜಿಲ್ಲೆಯಲ್ಲಿ ಡಿಸೆಂಬರ್ ೩೧ರವರೆಗೆ ತಹಶೀಲ್ದಾರ ಹಂತದಲ್ಲೇ ಉತಾರ ತಿದ್ದುಪಡಿಗೆ ಅವಕಾಶ

ದೂದಿಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿಕೆ

ಹಾವೇರಿಜಿಲ್ಲೆಯಲ್ಲಿ ಡಿಸೆಂಬರ್ ೩೧ರವರೆಗೆ ತಹಶೀಲ್ದಾರ ಹಂತದಲ್ಲೇ ಉತಾರ ತಿದ್ದುಪಡಿಗೆ ಅವಕಾಶ
ದೂದಿಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ
ಹಾವೇರಿ: ರೈತರ ಜಮೀನಿನ ಉತಾರ(ಪಹಣಿ)ಗಳಲ್ಲಿನ ಲೋಪಗಳನ್ನು ಸರಿಪಡಿಸಿ ತಿದ್ದುಪಡಿ ಮಾಡುವ ಅಧಿಕಾರವನ್ನು ಸರ್ಕಾರ ತಹಶೀಲ್ದಾರಗಳಿಗೆ ನೀಡಿದೆ. ಇದೇ ಡಿಸೆಂಬರ್ ೩೧ರವರೆಗೆ ಉತಾರ ತಿದ್ದುಪಡಿಗೆ ಕಾಲಾಶವಕಾಶ ನೀಡಲಾಗಿದೆ. ರೈತರು ಉತಾರದಲ್ಲಿ ತಿದ್ದುಪಡಿಗಳಿದ್ದರೆ ಸರಿಪಡಿಸಕೊಳ್ಳಲು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಹೇಳಿದರು.
ಹಳ್ಳಿ ಕಡೆಗೆ ಜಿಲ್ಲಾಧಿಕಾರಿಗಳ ನಡಿಗೆ ಕ್ರಾರ್ಯಕ್ರಮದ ಅಂಗವಾಗಿ ಶನಿವಾರ ಜಿಲ್ಲೆಯ ಹಿರೇಕೆರೂರು ತಾಲೂಕಿನ ದೂದಿಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಲಾದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈವರೆಗೆ ಉತಾರಗಳ ತಿದ್ದುಪಡಿಗೆ ಕೇವಲ ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಮಾತ್ರ ಸರ್ಕಾರ ಅಧಿಕಾರ ನೀಡಿತ್ತು. ಸಣ್ಣ-ಪುಟ್ಟ ತಿದ್ದುಪಡಿ ಬದಲಾವಣೆಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಡಿಸೆಂಬರ್ ೩೧ರವರೆಗೆ ತಹಶೀಲ್ದಾರಗಳಿಗೆ ಉತಾರ ತಿದ್ದುಪಡಿ ಅಧಿಕಾರ ನೀಡಲಾಗಿದೆ, ಎಲ್ಲ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಪ್ರತಿ ವರ್ಷ ಸರ್ಕಾರದಿಂದ ಒಂದು ಪ್ರತಿ ಉತಾರವನ್ನು ಉಚಿತವಾಗಿ ನೀಡಲಾಗುತ್ತದೆ. ತಮ್ಮ ಜಮೀನಿನ ಉತಾರದಲ್ಲಿ ದಾಖಲಾಗಿರುವ ಸರ್ವೇ ನಂಬರ, ಹೆಸರು, ಬೆಳೆ ನಮೂದು, ವಿಸ್ತೀರ್ಣ ಸರಿಯಾಗಿದೆಯೇ ಎಂಬುದನ್ನು ಪ್ರತಿಯೊಬ್ಬರೂ ಪರಿಶೀಲಿಸಿಕೊಳ್ಳಬೇಕು. ಒಂದೊಮ್ಮೆ ಯಾವುದಾರೂ ಅಂಶ ತಪ್ಪಾಗಿದ್ದರೆ ಲೋಪದೋಷಗಳಿದ್ದಲ್ಲಿ ಸರಿಪಡಿಸಿಕೊಡಲು ಗ್ರಾಮ ಪಂಚಾಯತಿ ಲೆಕ್ಕಾಧಿಕಾರಿಗಳಿಗೆ ಮೌಖಿಕವಾಗಿ ಅಥವಾ ಲಿಖಿತವಾಗಿ ಅರ್ಜಿ ನೀಡಬೇಕು ಎಂದು ಹೇಳಿದರು.
ಮೊದಲು ಕೈಬರಹ ಪಹಣಿ ಸಂದರ್ಭದಲ್ಲಿ ಶೀಘ್ರವಾಗಿ ಸರಿಪಡಲು ಅವಕಾಶವಿತ್ತು. ಕೈಬರಹದಿಂದ ಗಣಕೀಕರಣ ಸಂದರ್ಭದಲ್ಲಿ ಕೆಲವು ತಪ್ಪುಗಳಾಗಿರಬಹುದು. ತಪ್ಪುಗಳನ್ನು ಸರಿಪಡಿಸುವ ಕೆಲಸ ನಡೆದಾಗ್ಯೂ ಇನ್ನೂ ಕೆಲ ತಿದ್ದುಪಡಿಗಳು ಉಳಿದುಕೊಂಡಿವೆ. ಹಾಗಾಗಿ ಜಮೀನಿನ ಖಾತೆ ಕಿರ್ದಿ ಹಾಗೂ ದಾಖಲೆಗಳನ್ನು ಕಾಲಕಾಲಕ್ಕೆ ಪರಿಶೀಲಿಸಿಕೊಂಡು ತೊಡಕುಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ರೈತರಿಗೆ ಮನವಿ ಮಾಡಿಕೊಂಡರು.
ಪಿ.ಎಂ.ಕಿಸಾನ್ ಸಮ್ಮಾನ್, ಬೆಳೆವಿಮೆ, ಬೆಳೆಪರಿಹಾರ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳಲು ಭೂ ದಾಖಲಾತಿಗಳು, ಬ್ಯಾಂಕ್ ಖಾತೆಗಳು, ಆಧಾರ್ ಕಾರ್ಡ್‌ಗಳಲ್ಲಿ ಹೆಸರುಗಳು ಸರಿಯಾಗಿರಬೇಕು. ಒಂದಕ್ಕೊಂದು ಹೊಂದಾಣಿಕೆ ಇರಬೇಕು ಹೀಗಿದ್ದಾಗ ಯಾವುದೇ ಮಿಸ್‌ಮ್ಯಾಚ್ ಆಗದೆ ಸೌಲಭ್ಯಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ನಮ್ಮ ದಾಖಲೆಗಳನ್ನು ಸರಿಪಡಿಸಿಕೊಂಡರೆ ಸಮಸ್ಯೆಗಳಿಗೆ ಸಿಲುಕುವುದು ತಪ್ಪುತ್ತದೆ. ಮೊದಲು ಪ್ರತಿಯೊಬ್ಬರೂ ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಸಲಹೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್ ಅವರು ಮಾತನಾಡಿ, ಆರೋಗ್ಯ, ಸಾಮಾಜಿಕ, ಶೈಕ್ಷಣಿ, ಸ್ವಚ್ಛತೆ ಹಾಗೂ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸದಿದ್ದರೆ ಗ್ರಾಮದ ಅಭಿವೃದ್ಧಿಯಾಗುವುದಿಲ್ಲ. ಇಂದು ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಎಲ್ಲ ಕಡೆಗಳಲ್ಲಿ ಕಸ, ತಿಪ್ಪೆಗುಂಡಿ, ಕಟ್ಟಿದ ಚಂಡಿಗಳು ಕಾಣುತ್ತಿವೆ. ಇದರಿಂದ ಮಕ್ಕಳು, ಗರ್ಭಿಣಿ ಹಾಗೂ ಬಾಂಣತಿಯರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ. ಕೂಡಲೇ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಮಾಡಿ ಸ್ವಚ್ಛತೆ ಕ್ರಮಕೈಗೊಳ್ಳಬೇಕು. ಗ್ರಾಮಗಳು ಸ್ವಚ್ಛವಾಗಿದ್ದರೆ ತಾಲೂಕು, ಜಿಲ್ಲೆ ಹಾಗೂ ರಾಜ್ಯ ಸ್ವಚ್ಛವಾಗಿರುತ್ತದೆ. ನೂತನ ಗ್ರಾಮ ಪಂಚಾಯತ್ ಸದಸ್ಯರು ಐದು ವರ್ಷದ ಅಧಿಕಾರವಧಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಿಲ್ಲೆಯ ರೂಪರೇಷೆ ಬದಲಾವಣೆ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಚನ್ನಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಕರಿಬಸಪ್ಪ ಗಿರಿಯಣ್ಣನವರ ಮಾತನಾಡಿದರು. ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ ಕೆ.ಎ.ಉಮಾ ಸ್ವಾಗತಿಸಿದರು. ಡಿ.ಎಸ್.ಓ.ಕ್ರಾಂತಿ, ಪ್ರೊಬೇಷನರಿ ತಹಶೀಲ್ದಾರ ಮಹೇಶ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಶೀಲಮ್ಮ ಮಾರವಳ್ಳಿ ಉಪಸ್ಥಿತರಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button
Close