ಕಲೆ ಸಾಹಿತ್ಯ

“ಜಾಗೃತ ಸಾಕ್ಷಿಪ್ರಜ್ಞೆಯ ಪ್ರತಿಬಿಂಬ ಪ್ಯಾರಿಪದ್ಯ”

ಹಿರಿಯ ವಿಮರ್ಶಕ ಡಾ. ಎಚ್.ಎಸ್. ಸತ್ಯನಾರಾಯಣ ಕಂಡಂತೆ ಪ್ಯಾರಿಪದ್ಯ

ಜಾಗೃತ ಸಾಕ್ಷಿಪ್ರಜ್ಞೆಯ ಪ್ರತಿಬಿಂಬ ಪ್ಯಾರಿಪದ್ಯ
ಗದುಗಿನ ಗೆಳೆಯರಾದ ಎ.ಎಸ್. ಮಕಾನದಾರ ನಮ್ಮ ನಡುವಿನ ಭರವಸೆಯ ಕವಿ. ‘ಪ್ಯಾರಿ ಪದ್ಯಗಳು’ ಈ ಕವಿಯ ಹೊಸ ಕೃತಿ ಹೆಸರಿನಲ್ಲಿಯೇ ಒಂದು ಆಯಸ್ಕಾಂತೀಯ ಗುಣವಿದ್ದು, ಪ್ರತಿ ಪದ್ಯದಲ್ಲಿಯೂ ಎದ್ದು ಕಾಣುವ ತಾಜಾತನ, ಲವಲವಿಕೆ, ಜೀವನೋತ್ಸಾಹಗಳು ಪುಟಿಯುತ್ತವೆ. ಹೊಸತನವು ಪ್ಯಾರಿ ಪದ್ಯಗಳ ಬಹುಮುಖ್ಯ ಕಾವ್ಯಲಕ್ಷಣವಾಗಿದ್ದು, ಈ ಕಾರಣವೇ ಪ್ಯಾರಿ ಪದ್ಯಗಳನ್ನು ಪ್ರೀತಿಯಿಂದ ಓದಲು ಪ್ರೇರಕಶಕ್ತಿಯಾಗಿದೆ.
“ಕಿರುಬೆರಳು ತಾಕಿಸು
ಪ್ರೀತಿಯ ಗೋವರ್ಧನಗಿರಿ
ಎತ್ತಬಲ್ಲೇ”
ಎಂಬ ಪುಟ್ಟ ರಚನೆಯೊಂದು ಈ ಸಂಕಲನದಲ್ಲಿದೆ. ಕೃಷ್ಣನಿಗೆ ಕಿರುಬೆರಳಿನಿಂದ ಬೆಟ್ಟವನ್ನೆತ್ತಿ ಹಿಡಿಯಲು ರಾಧೆಯ ಒಲವು ತುಂಬು ಪ್ರೇರಣೆಯನ್ನು ನೀಡಿದಂತೆ ಈ ಕವಿಗೆ ಬದುಕೆಂಬ ಗೋವರ್ಧನ ಗಿರಿಯನ್ನು ಎತ್ತಿ ಜಯಿಸುವ ಸಾಹಸಕ್ಕೆ ಆತ್ಮ ಸಖಿಯ ಪ್ರೀತಿಯ ಕಿರುಬೆರಳ ಸ್ಪರ್ಶಸುಖ ಚೆಲ್ಲುವ ಕಾವ್ಯ ಸುಗಂಧದ ಸೌರಭ ಬೇಕಿದೆ. ಇಲ್ಲಿ ಗೋವರ್ಧನಗಿರಿಯನ್ನು ಶ್ರೀಕೃಷ್ಣ ಹಿಡಿದೆತ್ತಿದ ಪುರಾಣ ಪ್ರತಿಮೆಯನ್ನು ಮಕಾನದಾರ ಅವರು ವರ್ತಮಾನದ ಬದುಕಿಗೆ ಬೆಸೆಯುವಲ್ಲಿ ತೋರುವ ‘ಹೊಸತನ’ ನನ್ನ ಗಮನ ಸೆಳೆದ ಮೊದಲ ಅಂಶ. ಇಡೀ ಸಂಕಲನದಲ್ಲಿ ಇಂತಹ ಅನೇಕ ರಚನೆಗಳು ನಮ್ಮ ಗಮನಸೆಳೆಯುತ್ತವೆ. ಮೇಲೆ ಉದಾಹರಿಸಿರುವ ಪುಟ್ಟ ಪದ್ಯ ‘ಪ್ಯಾರಿ ಪದ್ಯಗಳ’ ಕಾವ್ಯ ಪ್ರಣಾಳಿಕೆಯಂತೆಯೂ ಗೋಚರಿಸುತ್ತದೆ.
ಮಕಾನದಾರ ಅವರ ಇಲ್ಲಿನ ರಚನೆಗಳು ಈಗಾಗಲೇ ನಮಗೆ ಪರಿಚಿತವಾಗಿರುವ ಯಾವುದೇ ಅಭಿವ್ಯಕ್ತಿಯನ್ನು ನೆನಪಿಸದೆ, ಇದೀಗತಾನೇ ಮೊಟ್ಟಮೊದಲಿಗೆ ಈ ಹೊಸ ಅನುಭವವನ್ನೋ, ಆಲೋಚನೆಯನ್ನೋ ಹೊಸ ಭಾಷೆಯೊಂದರಲ್ಲಿ ನಮ್ಮ ಮುಂದೆ ಮಂಡಿಸುತ್ತಿದೆ ಎಂಬ ಕಾರಣಕ್ಕೆ ಮಕಾನದಾರ ಅವರ ರಚನೆಗಳು ನಮ್ಮ ಮನಸ್ಸನ್ನು ಗೆದ್ದು ಬಿಡುತ್ತವೆ. ಇವತ್ತು ಕಾವ್ಯ ರಚನೆಯಲ್ಲಿ ತೊಡಗಿರುವ ಅನೇಕರಲ್ಲಿ ಕೆಲವರಿಗೆ ಮಾತ್ರ ಈ ಕಾವ್ಯಸಿದ್ಧಿ ಪ್ರಾಪ್ತವಾಗಿದೆ ಎಂಬುದನ್ನು ಯೋಚಿಸಿದಾಗ ಮಕಾನದಾರ ಅವರ ಕಾವ್ಯ ಪ್ರತಿಭೆಯ ಬಗ್ಗೆ ಅಭಿಮಾನ ಹೆಚ್ಚುತ್ತದೆ.
ಎಲ್ಲಿರುವೆ ಸಖಿ
ಸುಳಿವಾದರೂ ನೀಡು
ಹೊರಡಲು ಸಿದ್ಧನಾಗಿರುವೆ
ದಾರಿಯಾದರು ತೋರು (ಸಖಿ)
ಎಂಬಂತಹ ಸಾಲುಗಳಲ್ಲಿರುವ ವಿಪ್ರಲಂಬ ಶೃಂಗಾರವ ವಿರಹದಾತುರ ಕನ್ನಡ ಕಾವ್ಯ ಪರಂಪರೆಗೆ ಹೊಸತಲ್ಲವಾದರೂ ಮಕಾನದಾರ ಅವರ ಅಭಿವ್ಯಕ್ತಿಯಲ್ಲಿರುವ ಸ್ವಂತಿಕೆ ಅನನ್ಯವಾದುದು. ಉಳಿದವರ ಕಾವ್ಯಕ್ಕೆ ವಾಕ್ಯಗಳು ಮೂಲ ಆಕರವೆನಿಸುವುದಾದರೆ ಈ ಕವಿಯ ಕಾವ್ಯಕ್ಕೆ ಶಬ್ಧವೇ ಮೂಲ ಘಟಕವಾಗಿಬಿಡುವ ಪರಿ ಅತ್ಯಂತ ಗಮನಾರ್ಹ.
ದುವಾ ಕುಬುಲ್ ಆಗಿದೆ
ಎದೆಗೆ ಒರಗಿದ ಪ್ರೇಯಸಿ
ಮುಂಗುರುಳು ತೀಡುತ ಹಣಿಸಿ ಬಿಟ್ಟಳು
ತುಂಬಿ ತುಳುಕಿತು ಚಮ್ಲಾ
ಎಂಬಲ್ಲಿ ದುವಾ, ಕುಬುಲ್, ಚಮ್ಲಾ ಪದಗಳಿಗೆ ಸಂವಾದಿಯಾಗಿ ಪ್ರಾರ್ಥನೆ, ಪರವಾನಿಗೆ, ಭಿಕ್ಷಾಪಾತ್ರೆ ಎಂಬ ಪದಗಳನ್ನು ಬಳಸಬಹುದೆಂಬುದು ಕನ್ನಡದ ನುಡಿಗಟ್ಟನ್ನು ಸೊಗಸಾಗಿ ಬಳಸಬಲ್ಲ ಈ ಕವಿಗೆ ತಿಳಿದಿದೆಯಾದರೂ ಹಾಗೆ ಮಾಡದೆ ಅವರು ಮೂಲ ಸೊಗಡು ಮರೆಯಾಗಬಾರದೆಂಬ ಅಪೇಕ್ಷೆಯಿಂದ ಅವವೇ ಪದಗಳನ್ನು ಉಳಿಸಿಕೊಂಡಿರುವುದು ಹೊಸ ಬಗೆಯ ಆಯಾಮವನ್ನು ಜೋಡಿಸಿದಂತಾಗಿದೆ. ಹಿಂದೆಯೇ ಎಂ. ಅಕಬರ ಅಲಿ, ಕೆ.ಎಸ್. ನಿಸಾರ ಅಹಮದ್‌ರಂತಹ ಕವಿಗಳು ಬುರ್ಖಾ, ಕಾಫರ್, ಬಾಂಗ್ ಪದಗಳನ್ನು ಕಾವ್ಯದಲ್ಲಿ ಪ್ರಯೋಗಿಸಿರುವರೆಂಬುದನ್ನು ನೆನೆದರೆ, ಆ ಪರಂಪರೆಯ ಮುಂದುವರಿಕೆಯಾಗಿ ಮಕಾನದಾರ ಅವರ ಪ್ರಯೋಗಗಳನ್ನಿಟ್ಟು ಚರ್ಚಿಸಲು ಅವಕಾಶಗಳು ತೆರೆದುಕೊಳ್ಳುತ್ತವೆ. ಅಭ್ಯಾಸಿಗಳ ಅನುಕೂಲಕ್ಕಾಗಿ ಈ ಸಂಕಲನದಲ್ಲಿ ಇಂತಹ ಪಾರಿಭಾಷಿಕ ಪದಗಳಿಗೆ ಸಮಾನಾರ್ಥಕ ಪದಗಳ ಪಟ್ಟಿಯನ್ನು ನೀಡಿ, ಕಾವ್ಯದ ಗ್ರಹಿಕೆಗೆ ಕವಿಯೇ ನೆರವು ನೀಡಿರುವುದೂ ಮೆಚ್ಚತಕ್ಕ ಅಂಶಗಳಲ್ಲೊಂದಾಗಿದೆ.
“ಗೋರಿಯ ಮೇಲೆ ಹೂವೊಂದು ಅರಳಿದೆ
ಜಾತಿ-ಧರ್ಮದ ಲೇಬಲ್ಲು ನೋಡಿಯೇ ದುಂಬಿ ಅಲ್ಲಿ ಬಂದಿದೆ!”
ಎಂಬ ಮಾತಿನ ಮೆಲುದನಿಯ ಪ್ರತಿಭಟನೆ ಕೂಡ ಈ ಕವಿಯ ಸಾಮಾಜಿಕ ಹೊಣೆಗಾರಿಕೆಯನ್ನು ಮನದಟ್ಟು ಮಾಡಿಕೊಡುವುದರೊಂದಿಗೆ ಪ್ಯಾರಿ ಪದ್ಯಗಳಲ್ಲಿ ವಿರಹದ ಕನವರಿಕೆಯ ಜೊತೆ ಜೊತೆಯಲ್ಲೇ ಜಾಗೃತ ಸಾಕ್ಷಿಪ್ರಜ್ಞೆಯನ್ನೂ ಪರಿಣಾಮಕಾರಿಯಾಗಿ ಬಿಂಬಿಸುತ್ತದೆ. ವಿಶ್ವಪ್ರೇಮ ಬಾವುಟ ಹಾರಿಸಲಾಶಿಸುವ ಈ ಕವಿಯ ಆಶಯದ ದಾರಿಯ ಪಯಣಕ್ಕೆ ಸಾಕಿಯ ಪ್ರೇಮ ಜೀವಚೈತನ್ಯವಾದರೆ, ಮನುಷ್ಯತ್ವವನ್ನು ಮಾರಿಕೊಂಡ ಮೂಲಭೂತವಾದಿಗಳ ನಡೆ ತಡೆಗೋಡೆಯಾಗಿದೆ. ಇಂತಹ ಅಮಾನುಷತೆಯನ್ನು ಕಣ್ಣೀರು ಕರೆಯುತ್ತ ಸಹಿಸುವ ಬದಲು ಕಣ್ಣೀರನ್ನು ಜಾರಗೊಡದೆ ಗಟ್ಟಿಯಾಗುವ ದಾರಿಯ ಕಡೆಗೇ ಕವಿಯ ಒಲವಿದೆ.
ಮನ ಹೇಳಿತು ಅತ್ತು ಹಗುರಾಗು
ಕಣ್ಣೀರು ಹೇಳಿತು ಜಾರದೆ ಗಟ್ಟಿಯಾಗು (ಸಾಕಿ)
ಎಂಬುದು ಈ ಕವಿಯ ದೃಢ ನಿಲುವು ಮಾತ್ರವಲ್ಲದೇ, ಓದುಗರೆದೆಯಲ್ಲೂ ಪರ್ಯಾಯದ ಹಾದಿ ತೆರೆಯುವಷ್ಟು ಪರಿಣಾಮಕಾರಿಯಾಗಿದೆ. ಪ್ರೀತಿ ಮತ್ತು ಪ್ರೀತಿಸುವ ಮನಸ್ಸುಗಳೆರಡೂ ನಮ್ಮ ಜೀವವಾಹಿನಿಗಳೆಂಬ ಆಶಯ ಮತ್ತ ಮತ್ತೆ ಅನುರಣಿತವಾಗಿರುವುದು ಕೂಡ ಆಕಸ್ಮಿಕವೇನಲ್ಲ. ಪುಟ್ಟ ಪುಟ್ಟ ಶಬ್ದಗಳಲ್ಲಿ, ಪುಟ್ಟ ಸಾಲುಗಳಲ್ಲಿ ಈ ಕವಿತೆ ಹೇಳಿರುವುದನ್ನೂ ಹೇಳದಿರುವುದನ್ನೂ ಹೇಳಬಾರದನ್ನೂ ಒಟ್ಟೊಟ್ಟಿಗೇ ಧ್ವನಿಸುತ್ತಾ ಮಾತು ಮತ್ತು ಮೌನಗಳ ಸಂಯೋಗವನ್ನೂ ತೆರೆದಿಡುತ್ತದೆ.
ಯೌವ್ವನದ ಹೊಳೆಯಲಿ ಬಹುಕಾಲ ಈಜದಿರು
ನೀರಗುಳ್ಳೆಯಂತೆ ಶರೀರ ಒಡೆದುಹೋಗುವುದು ಮರೆಯದಿರು.
ಎಂಬಂತಹ ವಾಚ್ಛರ್ಥಕ ಹೇಳಿಕೆಗಳು ಮೇಲಿನ ನನ್ನ ಮಾತಿಗೆ ಅಪವಾದಗಳಾಗಿರುವುದೂ ಉಂಟು. ಇಂತಹ ಅನೇಕ ಮಿತಿಗಳ ನಡುವೆಯೂ ಪ್ಯಾರಿ ಪದ್ಯಗಳು ಓದಿದ ಮೇಲೂ ನೆನೆದು ಕನವರಿಸುವ ಗುಂಗಿನಂತೆ ಆವರಿಸುತ್ತವೆ. ಪ್ರೇಮವೆಂಬುದೇ ಒಂದು ಕನವರಿಕೆ ತಾನೇ?
ಮಕಾನದಾರ ಅವರ ಈ ಬಗೆಯ ಕನವರಿಕೆಗಳು ಕೇವಲ ತೆಳುವಾದ ಭಾವಕಲ್ಪಗಳಾಗಿರದೆ ಆಳವಾದ ಜೀವನಾನುಭವದಿಂದ ಒಡಮೂಡಿರುವುದನ್ನು ಮರೆಯುವಂತಿಲ್ಲ. ಈ ಲೋಕ ಎರಚುವ ಕೆಸರಿನಲ್ಲಿ ತೊಯ್ದುಕೊಂಡೇ ಪ್ಯಾರಿ, ಸಾಕಿಯರ ದಿವ್ಯದ ಕನಸು ಅರಳಿರುವ ವಿಸಂಗತಿಯನ್ನು ಧೇನಿಸುವ ಸಿದ್ಧಿ ಈ ಕವಿಯದು, ತಮ್ಮ ಅಭಿವ್ಯಕ್ತಿ ವಾಸ್ತವ ಮತ್ತು ರೂಪಾಂತರಗಳ ನಡುವೆ ಜೀಕಾಟ ನಡೆಸುವುದನ್ನು ಸಮರ್ಥವಾಗಿ ಹೊಸ ರೂಪಕಗಳ ಮೂಲಕ ಈ ಕವಿ ಕಟ್ಟಿಕೊಡುವುದನ್ನು ಅನೇಕ ಪದ್ಯಗಳಲ್ಲಿ ಕಾಣಬಲ್ಲೆವು. ಮಿಂಚಿನಂತೆ ಶಬ್ದಗಳನ್ನು ಬಳಸುತ್ತಾ ತಮ್ಮ ಅನುಭವಗಳನ್ನು ಇವರು ದಾಖಲಿಸಬಲ್ಲರು. ಯಾರ ಕಾವ್ಯದಲ್ಲೇ ಆಗಲಿ ಕವಿಗೆ ಕಂಡ ಎಲ್ಲ ವಿವರಗಳೂ ಇರುವುದು ಸಾಧ್ಯವೇ ಇಲ್ಲ. ಬದುಕು ಒಡ್ಡುವ ಅನುಭವ ಮತ್ತು ವಿವರ ಸಮೃದ್ಧಿಯಲ್ಲಿ ಕವಿಯ ಲೋಕದೃಷ್ಟಿ ತನ್ನ ಆಯ್ಕೆಯನ್ನು ಔಚಿತ್ಯಪೂರ್ಣವಾಗಿ ಬಳಸಿಕೊಳ್ಳುತ್ತದೆಂಬುದನ್ನು ಈ ಕವಿ ಬಲ್ಲರು. ಜೀವನದ ಅರ್ಥಹೀನತೆ ಮತ್ತು ಅಸಂಬದ್ಧತೆ, ಕಗ್ಗಂಟಾಗಿರುವ ಮಾನವೀಯ ಸಂಬಂಧಗಳು, ನೆಲೆ ಇಲ್ಲದ ಜೀವತಳಮಳ ಮುಂತಾದ ಸಂಗತಿಗಳು ಮಕಾನದಾರ ಅವರ ಕಾವ್ಯದ ತಳಹದಿಯ ಭಾವವಾಗಿರುವದನ್ನು ಈ ದೃಷ್ಟಿಯಿಂದ ಕಾವ್ಯಾಸಕ್ತರು ಪರಿಶೀಲಿಸಬೇಕು.
ಇಂದು ಅನೇಕರು ಈ ಬಗೆಯ ಕಿರುಗವನ ರಚನೆಯ ಪ್ರಯೋಗಕ್ಕೆ ಒಡ್ಡಿಕೊಂಡಿದ್ದಾರೆ. ಆದರೆ ಯಶಸ್ಸು ಕಂಡವರು ವಿರಳಾತಿ ವಿರಳ. ವಸ್ತು ಯಾವುದೇ ಇರಲಿ ನಾಲ್ಕು ಸಣ್ಣ ಸಾಲುಗಳು, ಒತ್ತಾಯಕ್ಕೆ ತರುವ ಪ್ರಾಸ, ಕೊನೆಗೊಂದು ಪಂಚು-ಇವಿಷ್ಟಿದ್ದರೆ ಒಂದು ಹನಿಗವನ ರಚನೆಯಾದಂತೆಯೇ ಎಂದು ಭ್ರಮಿಸಿದವರ ತೆಳುರಚನೆಗಳ ಮುಂದೆ ಶಬ್ದಗಳ ನರ್ತನದಲ್ಲಿ ಕಿವಿಗಳಿಗೆ ಒಂದಿಷ್ಟು ಮೋಡಿಮಾಡುವ, ಸಹಜ-ಸರಳ-ಮಿತ ಶಬ್ದಗಳ ಮೂಲಕ ತನ್ನ ಅರ್ಥದ ಆಳಕ್ಕೆ ಕರೆದೊಯ್ದು ಥಟ್ಟನೆ ಒಂದು ಚಿಂತನೆಗೆ ತೊಡಗಿಸುವ ಮಕಾನದಾರ ಅವರ ರಚನೆಗಳಲ್ಲಿ ಬದುಕಿನ ಅರ್ಥ ಶೋಧಿಸುವ ಹಂಬಲವಿರುವುದನ್ನು ಮೆಚ್ಚದಿರಲಾಗದು. ಹಾಗಾಗಿ ನಾನು ಆರಂಭದಲ್ಲಿ ಹೇಳಿದ ತಾಜಾತನ, ಹೊಸತನ, ಲವಲವಿಕೆಯ ಗುಣಗಳ ಜೊತೆಗೇ ಪ್ರಾಪ್ತವಾಗಿರುವ ‘ಅರ್ಥ’ ಪ್ರಾಧಾನ್ಯತೆಯನ್ನು ಗಂಭೀರವಾಗಿ ಪರಿಗಣಿಸುವುದು ನಮಗೆ ಅನಿವಾರ್ಯ. ತಮ್ಮ ಈ ಪದ್ಯಗಳ ಹೊರ ಆವರಣವನ್ನು ಕಟ್ಟುವಾಗ ಎಲ್ಲಿಯೂ ಶಬ್ದ, ಪ್ರಾಸಗಳಿಗಾಗಿ ತಡಕಾಡಿದಂತೆ ಕಾಣುವುದಿಲ್ಲ. ಕವಿತೆಯ ಆಶಯಕ್ಕೆ ಪೂರಕವಾದ ಶಬ್ದ ಪ್ರಪಂಚದ ನೆರವನ್ನು ಬಹಳ ಸುಲಭವಾಗಿ ದುಡಿಸಿಕೊಳ್ಳುವುದು ಮಕಾನದಾರ ಅವರು ಸಾಧಿಸಿಕೊಂಡಿರುವ ಅಪೂರ್ವ ಕೌಶಲ್ಯ. ಓದುತ್ತಾ ಹೋದಂತೆ ಕವಿಯೊಬ್ಬನ ಒಟ್ಟಂದದ ಗ್ರಹಿಕೆ, ಅನುಭವಗಳಿಗೆ ರೂಪಕ-ಶಬ್ದ ಚಿತ್ರಗಳ ಮೂಲಕ ಒಂದು ಸಮಗ್ರತೆಯನ್ನು ಪ್ರಾಪ್ತವಾಗಿಸುವ ಸಂಕೀರ್ಣ ಪ್ರಯತ್ನವನ್ನೂ ಈ ಕವಿ ಮಾಡಿದ್ದಾರೆ ಪ್ಯಾರಿ ಪದ್ಯಗಳಿಗೆ ಇನ್ನಷ್ಟು ಮಹತ್ವ ಲಭಿಸುತ್ತಿತ್ತೆಂಬುದನ್ನು ನೆನಪಿಸಲೇಬೇಕು.
ಪ್ರೀತಿ, ವಿರಹ, ಮೌನ, ಧ್ಯಾನ, ಚಂದಿರ, ಚೈತನ್ಯ, ಮಣ್ಣು, ಆಕಾಶ, ನಕ್ಷತ್ರ, ಹೊಳಪು, ಕತ್ತಲೆ, ಬೆಳಕು ಮುಂತಾದುವೆಲ್ಲಾ ಪ್ಯಾರಿ ಪದ್ಯಗಳಲ್ಲಿ ಮತ್ತೆ ಮತ್ತೆ ಕಾಣಿಸುವ ಪ್ರತಿಮೆಗಳು. ಇವುಗಳಿಂದ ಸ್ಪೂರ್ತಿಗೊಂಡ ಕಾವ್ಯೋತ್ಪತ್ತಿಯಲ್ಲಿ ತಮ್ಮ ಸ್ನಿಗ್ಧವಾದ ಆರ್ದ್ರ ದನಿಯನ್ನು ಕೇಳಿಸುವ ಕಲೆಗಾರಿಕೆಯನ್ನು ಮಕಾನದಾರ ಅವರ ಕವಿತೆಗಳಲ್ಲಿ ನಾನು ದರ್ಶಿಸಿದ ಉತ್ಸಾಹದಲ್ಲಿ ಈ ಕೆಲವು ಮಾತುಗಳನ್ನು ಬರೆಯುವ ಉಮೇದು ತೋರಿರುವೆ. ಶಾಯಿರಿ ಮತ್ತು ಗಜ಼ಲ್‌ಗಳ ಸವಿಯನ್ನು ಈಗಾಗಲೇ ಉಂಡಿರುವ ಕಾವ್ಯಾಸಕ್ತರಿಗೆ ‘ಪ್ಯಾರಿ ಪದ್ಯಗಳ’ ಮನಮೋಹಕ ಶೈಲಿಯ ಸೊಗಡು ಎದೆ ತುಂಬಲಿವೆ ಎಂಬ ಆಶಯದೊಂದಿಗೆ ಈ ಕವಿಯ ಗಂಭೀರ, ಪ್ರಾಮಾಣಿಕ ಪ್ರಯತ್ನಕ್ಕೆ ಎಲ್ಲ ಒಳಿತುಗಳೂ ಜೊತೆಗೂಡಲೆಂದು ಪ್ರೀತಿಯಿಂದ ಹಾರೈಸುವೆ.
ಡಾ. ಎಚ್.ಎಸ್. ಸತ್ಯನಾರಾಯಣ
ಹಿರಿಯ ವಿಮರ್ಶಕರು, ಚಿಕ್ಕಮಗಳೂರು

 

Show More

Related Articles

Leave a Reply

Your email address will not be published. Required fields are marked *

Back to top button
Close