“ರೇಣುಕ, ಬುದ್ಧ, ಬಸವ, ಏಸು, ಮಹಾವೀರ, ಪೈಗಂಬರ ಮೊದಲಾದ ಮಹನೀಯರು ಈ ಪ್ರಪಂಚವೇ ಕಂಡ ಪರಮ ಶಾಂತಿಯ ವಿಶಾಲ ವೃಕ್ಷಗಳು. ಕೋಟ್ಯಾಂತರ ಮಾನವರು ಈ ದಿವ್ಯ ವೃಕ್ಷಗಳಡಿಯಲ್ಲಿ ಶಾಂತಿಯ ನೆರಳನ್ನು, ಸುಜ್ಞಾನದ ಸವಿ ಫಲವನ್ನು ಜಗತ್ತಿಗೆ ನೀಡಿ, ನಿಜವಾದ ಸುಖ ಶಾಂತಿ ಏನೆಂಬುದನ್ನು ಮನುಕುಲಕ್ಕೆ ತಿಳಿಸಿದ್ದಾರೆ”.
ಕರೋನಾ ಎಂಬ ವೈರಸ್ ದಾಳಿ ಚೀನಾದಿಂದ ವಿಶ್ವವನ್ನೆ ವ್ಯಾಪ್ತಿಸಿ ಲಕ್ಷಾಂತರ ಜನರ ಪ್ರಾಣದೊಂದಿಗೆ ತನ್ನ ಚೆಲ್ಲಾಟವಾಡುತ್ತಿದೆ. ಚೀನಾ ಜನಸಂಖ್ಯೆಯಲ್ಲಿ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು, ವಯೋವೃದ್ಧರಿಗೆ ಜೀವದ ಅಭಯ ನೀಡಿ ತೆರೆ ಮರೆಯಲ್ಲಿ ಅವರು ನಿಷ್ಪ್ರಯೋಜಕರೆಂದು ಅವರ ಬದುಕಿನ ಅಂತ್ಯ ಕಾಣಿಸುತ್ತಿರುವುದು ಕಣ್ಮುಂದೆಯಿದೆ. ತನ್ನವರನ್ನು ಕೊಂದು ಅದರ ಅತೃಪ್ತ ಭಾವನೆಗೆ ಇಡೀ ವಿಶ್ವಕ್ಕೆ ಕೊರೊನಾ ವೈರಸ್ ಹರಡಿದ್ದರೂ ವಿಶ್ವಸಂಸ್ಥೆ ಚಕಾರ ಎತ್ತದೇ ಅಚ್ಚರಿ ಮೂಡಿಸಿದೆ. ಜವಾಬ್ದಾರಿ ಸ್ಥಾನದಲ್ಲಿ ಕುಳಿತವರು ಅಪ್ರಮಾಣಿಕರಾದರೆ ಜಗವೇನು, ಇಡೀ ಸರ್ವ ಲೋಕಗಳೇ ತಲ್ಲಣಗೊಳ್ಳುವವು ಎಂಬ ಭಾವನೆ ಮೊಳಕೆಯೊಡೆಯುತ್ತದೆ.
ಅನ್ನ, ಹಣ, ಸದ್ಗುಣ ಸದ್ಭಾವದಂತಹ ಬಾಹ್ಯ ಮತ್ತು ಆಂತರಿಕ ಸಿರಿಯಿಂದ ಮಾನವನ ಮನಸ್ಸು ಕೂಡಿದರೆ ಮಾನವ ಜೀವನವೇ ನವೋಲ್ಲಾಸಗೊಳ್ಳುತ್ತದೆ. ಆದರೆ ಇಂದು ಅನ್ನ, ಹಣಗಳೆಂಬ ಬಾಹ್ಯ ಸಂಪತ್ತಿನ ಹಿಂದೆ ಬಿದ್ದಿರುವುದರಿಂದ ಸದ್ಗುಣ ಸದ್ಭಾವದಂತಹ ಅಂತಃಶಕ್ತಿಯನ್ನು ಕಳೆದುಕೊಂಡು ಅತೃಪ್ತನಾಗಿರುವ ಮಾನವನು ಒಂದು ರಾಷ್ಟ್ರ ಹಾಗೂ ವಿಶ್ವದ ನಾಯಕರ ಸಾಲಿನಲ್ಲಿ ಗುರುತಿಸಿಕೊಂಡರೆ ವಿಶ್ವಕಂಟಕನಾಗುತ್ತಾನೆ. ಇದಕ್ಕೆ ಚೀನಾವನ್ನು ಉದಾಹರಣೆ ನೀಡಬಹುದಾಗಿದೆ.
ಭಾವನೆಯು ಪರಮಾತ್ಮನು ಕರುಣಿಸಿದ ಪವಿತ್ರ ಪಾತ್ರೆ. ಭಾವನೆ ಹಸನಾದರೆ ಪರಮಾತ್ಮನ ಕರುಣೆ ಆದಂತೆಯೇ! ನಮ್ಮ ಭಾವದಂತೆ ಭಾಗ್ಯ. ಸ್ವಚ್ಛ ಭಾವದಿಂದ ನಿರಂತರ ಆನಂದ. ನಮ್ಮ ಹೆಮ್ಮೆಯ ಭಾರತ ದೇಶ ವಿಶ್ವದ ಅನೇಕ ರಾಷ್ಟ್ರಗಳಿಗೆ ಔಷಧಿಯನ್ನು ರಫ್ತುಗೊಳಿಸಿ ಶತೃ ರಾಷ್ಟ್ರಕ್ಕೂ ಕೂಡ ಉಪಕರಿಸುವೆನೆಂಬ ನಿರ್ಮಲ ಭಾವದಲ್ಲಿ ಜಗತ್ತಿನ ಪೂಜ್ಯತೆಯನ್ನು ಪಡೆದುಕೊಂಡಿದೆ. ಆದರೆ ಕೆಲವು ರಾಷ್ಟ್ರಗಳು ಇದನ್ನು ಸಹಿಸುತ್ತಿಲ್ಲವಲ್ಲ ಎಂದು ಯೋಚಿಸಿದರೆ ಅವರ ಭಾವನೆಯೆಂಬ ಪಾತ್ರೆ ಮಲಿನವಾಗಿದೆ ಎಂದು ಬೇರೆ ಹೇಳಬೇಕಿಲ್ಲ. ಮಲಿನವಾದ ಪಾತ್ರೆಯಲ್ಲಿರುವ ಅಮೃತವೂ ಕೂಡ ವಿಷವೇ ಸರಿ. ಭಾವನೆಯು ನಮ್ಮ ಬದುಕನ್ನು ರೂಪಿಸುತ್ತದೆಯೇ ಹೊರತು ಸ್ವಾರ್ಥ ಭಾವವು ನಮ್ಮ ಬದುಕನ್ನು ನರಕವಾಗಿಸುತ್ತದೆ.
ಪವಿತ್ರ ಭಾವದ ಸಾಮರ್ಥ್ಯ ಅಗಾಧವಾದುದು. ಅಂತಹ ಅಗಾಧವಾದ ಪವಿತ್ರ ಭಾವನೆಯ ತಾಯಿ ಬೇರು ವಿಶ್ವದಲ್ಲಿಯೇ ನಮ್ಮ ಹೆಮ್ಮೆಯ ಭಾರತ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ನಮಗೆ ಜನ್ಮ ಕೊಡುವ ತಾಯಿಗೆ ವಿದ್ಯೆ, ಬುದ್ಧಿ, ಶಕ್ತಿ ಸಾಮರ್ಥ್ಯ, ಸ್ಥಾನಮಾನ ಕಡಿಮೆ ಇರಬಹುದು ಅಥವಾ ಹೆಚ್ಚು ಇರಬಹುದು, ಆದರೆ ಆ ತಾಯಿಯೂ ತನ್ನ ವಿಶಾಲ ಹೃದಯದಿಂದ, ಪರಿಶುದ್ಧ ಭಾವದಿಂದ ದೇವರೆನಿಸುವಳು. ಆ ಪೂಜ್ಯ ದೇವ ಭಾವವನ್ನು ವಿಶ್ವದ ಅನೇಕ ರಾಷ್ಟ್ರಗಳು ಪುಣ್ಯಭೂಮಿ ಭಾರತದಲ್ಲಿ ಕಂಡಿವೆ ಎಂದರೆ ಅತಿಶಯೋಕ್ತಿಯೇನಲ್ಲ. ಭಾರತ ನಮಗೂ ತಾಯಿಯಾಗಿ, ಪರರಿಗೂ ತಾಯಿ ಸ್ಥಾನವನ್ನು ಕಲ್ಪಿಸುವ ಕಲ್ಪದೃವ.
ತಾಯಿಗಿರುವ ಪೂಜ್ಯತೆ ಯಾರಿಗಿದೆ? ಹಾಗೆ ನಮ್ಮ ಅಖಂಡ ಭಾರತ ದೇಶದಲ್ಲಿ ತಾಯಿಗೆ ಮಗುವಿನ ಮೇಲೆ ಅಪಾರ ಪ್ರೇಮವಿರುವಂತೆ ಸಂತ-ಮಹಾಂತರಿಗೆ ಪ್ರಪಂಚದ ಮೇಲೆ ಎಲ್ಲಿಲ್ಲದ ಪ್ರೇಮ. ಅಂತಹ ಪ್ರಪಂಚವನ್ನೇ ಕರುಣೆಯ ದೃಷ್ಟಿಯಿಂದ ನೋಡುವ ಸಂತ ಮಹಾಂತರ ಕರುಣೆಯ ಕಂದನಾಗಿ ನಮ್ಮ ದೇಶದ ಪ್ರತಿನಿಧಿಯಾಗಿ ಬರುವವರು ಸಮಸ್ತ ಪ್ರಜೆಗಳನ್ನೆಲ್ಲಾ ಸುಖಿಯಾಗಿಡಬಲ್ಲರು. ಅಂತಹ ನಿಸ್ವಾರ್ಥ ದೇಶ ಸೇವಕರು ರಾಷ್ಟ್ರದ ಚುಕ್ಕಾಣಿಯನ್ನು ಹಿಡಿದರೆ ಕರೋನಾದಂತಹ ಕಣ್ಣಿಗೆ ಕಾಣದ ಸಾವಿರ ಶತೃ ವೈರಸ್‌ಗಳು ಬಂದರೂ ನಮ್ಮನ್ನು ಏನು ಮಾಡಲಾರವು.
ಹಸನಾದ ಹೃದಯದಿಂದ ಜನ ಸೇವೆ ಮಾಡುವ ಜನಪ್ರತಿನಿಧಿಯೂ ಕಾಣದ ಭಗವಂತನನ್ನು ತನ್ನಲ್ಲಿ ತೋರಿಸಿ ಕೊಡುತ್ತಾನೆ. ಜಗತ್ತು ಕೆಟ್ಟಿಲ್ಲ, ಜಗದಲ್ಲಿರುವ ಬೆರಳೆಣಿಕೆಯ ಮನುಷ್ಯ ರೂಪ ಧರಿಸಿದ ಕೆಲವೇ ಕೆಲವು ಕ್ರೂರಿಗಳು ತಮ್ಮ ದುರ್ವರ್ತನೆಯಿಂದ ಜಗತ್ತನ್ನೇ ಕೆಟ್ಟು ಕೊಳಕು ನಾರುವಂತೆ ಮಾಡುತ್ತಿದ್ದಾರೆ. ಭಗವಂತನೆಂಬ ಕಣ್ಣಿಗೆ ಕಾಣದ ಸೃಷ್ಟಿಕರ್ತನು ಈ ಪ್ರಪಂಚವೆಂಬ ಬಂಗಾರದ ಬಟ್ಟಲನ್ನು ನಮ್ಮ ಕೈಗಿಟ್ಟು, ಈ ಬಟ್ಟಲು ಇರುವುದು ಹಾಲು ಮಜ್ಜಿಗೆ ಕುಡಿಯಲೆಂದೇ ಹೊರತು ಮನಸ್ಸು, ಆರೋಗ್ಯವನ್ನು ಕೆಡಿಸುವ ದ್ರವ್ಯ (ಭಯೋತ್ಪಾದನೆ) ಕುಡಿಯಲು ಅಲ್ಲ ಎಂದು ನಮ್ಮ ಬುದ್ಧಿಯ ಮೂಲಕ ಸದಾ ಎಚ್ಚರಿಸುತ್ತಿರುತ್ತಾನೆ. ಆದರೆ ಮಾನವ, ಭಗವಂತನು ಕೊಟ್ಟ ಬಂಗಾರದ ಬಟ್ಟಲನ್ನು ದುರುಪಯೋಗ ಪಡಿಸಿಕೊಂಡು ಶಿವನಿಗೂ ಹಾಗೂ ಆತ ನೀಡಿದ ಬಂಗಾರದ ಬಟ್ಟಲು ಎಂಬ ಜೀವನಕ್ಕೂ ಅಪಮಾನಿಸುತ್ತಿದ್ದಾನೆ.
ರೇಣುಕ, ಬುದ್ಧ, ಬಸವ, ಏಸು, ಮಹಾವೀರ, ಪೈಗಂಬರ ಮೊದಲಾದ ಮಹನೀಯರು ಈ ಪ್ರಪಂಚವೇ ಕಂಡ ಪರಮ ಶಾಂತಿಯ ವಿಶಾಲ ವೃಕ್ಷಗಳು. ಕೋಟ್ಯಾಂತರ ಮಾನವರು ಈ ದಿವ್ಯ ವೃಕ್ಷಗಳಡಿಯಲ್ಲಿ ಶಾಂತಿಯ ನೆರಳನ್ನು, ಸುಜ್ಞಾನದ ಸವಿ ಫಲವನ್ನು ಜಗತ್ತಿಗೆ ನೀಡಿ, ನಿಜವಾದ ಸುಖ ಶಾಂತಿ ಏನೆಂಬುದನ್ನು ಮನುಕುಲಕ್ಕೆ ತಿಳಿಸಿದ್ದಾರೆ. ಧರ್ಮ ಶಾಸ್ತಗಳು ಓದಲಿಕ್ಕೆ, ಬರೆಯಲಿಕ್ಕೆ, ಬೋಧಿಸಲಿಕ್ಕೆ ಮಾತ್ರವಲ್ಲ, ಅವುಗಳು ಅನುಭವಿಸಬೇಕಾದ ಸವಿಫಲಗಳು ಎಂದು ನುಡಿದು, ನಡೆದು ಅಖಂಡ ಜಗತ್ತನ್ನೇ ದೇವನ ಹೃದಯ ಮಂದಿರ ಎಂದು ತಿಳಿಸಿಕೊಟ್ಟವರು. ಏಲೇ ಮಾನವ ಅಳಿಯಾಸೆ ಬೇಡವೋ, ಕಾಳ ಬೆಳದಿಂಗಳ ಸಿರಿಯು ಸ್ಥಿರವಲ್ಲ, ಕೇಡಿಲ್ಲದ ಪದವಿಯನೀವ ಎನ್ನುವ ಮಹಾತ್ಮರ ವಾಣಿಯಂತೆ ನಮ್ಮ ಸಾಧನೆಗೆ ತಕ್ಕಷ್ಟು ಬಯಸಿದರೆ ಮನುಷ್ಯ ಸುಖಿಯಾಗಿರಬಲ್ಲ.
ಹರಿವ ಸಾಗರ, ಬೆಳಗುವ ಸೂರ್ಯ-ಚಂದಿರ, ಅನಂತ ಆಗಸ, ಅಸಂಖ್ಯ ಗೃಹ ತಾರೆಗಳಲ್ಲಿ ಮನುಷ್ಯ ಆನಂದವನ್ನು ಕಾಣುತ್ತಿಲ್ಲ. ಭಗವಂತನದು ವಿರಾಟ್ ದರ್ಶನ ಎಂಬ ಅರಿವು ನಮಗಿಲ್ಲ. ಗಗನವೇ ಗುಂಡಿಗೆ, ಆಕಾಶವೇ ಅಗ್ಗವಣಿ ಇವು ಮಹಾತ್ಮರ ದೃಷ್ಟಿ. ಇದನ್ನರಿಯದ ನಾವು ಸಂತ ಮಹಾಂತರ ದಿವ್ಯ ಭಾವವನ್ನು ತಂದುಕೊಳ್ಳದೇ ಮನುಷ್ಯ ಕುಬ್ಜರಾಗಿ ಜಗವನ್ನೇ ಕುಬ್ಜಗೊಳಿಸಲು ಹೊರಟಿದ್ದಾನೆ. ಇಂದ್ರಿಯಗಳಿಂದ ಕೇವಲ ವಸ್ತುಗಳ ಜ್ಞಾನವಾಗುತ್ತದೆ ಆದರೆ ಕರ್ಮೇಂದ್ರಿಯಗಳಿಂದ ಜ್ಞಾನೇಂದ್ರಿಯಗಳಿಂದ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಭಗವಂತನ ಜ್ಞಾನ ನಮಗಾದಾಗ ಬಾಹ್ಯ, ಅಪಾಯಕಾರಿ ವಸ್ತುಗಳು ನಮ್ಮ ಸನಿಹ ಸುಳಿಯಲಾರವು. ಅದಕ್ಕೆ ಉತ್ತಮ ಉದಾಹರಣೆ ಮಹಾಶಿವಶರಣೆ ಅಕ್ಕಮಹಾದೇವಿಯ ಜೀವನ ಚರಿತ್ರೆ. ಭಗವಂತನ ಜ್ಞಾನವೊಂದನ್ನೇ ಸಂಪಾದಿಸಿದ ಶರಣೆ, ಜೀವನವನ್ನೇ ಗೆದ್ದು ಧಾರ್ಮಿಕ ಜಗತ್ತಿನ ಇತಿಹಾಸದ ಪುಟದಲ್ಲಿ ಶ್ರೇಷ್ಠ ರತ್ನವಾಗಿ ಕಂಗೊಳಿಸಿದ್ದಾಳೆ.
ನಮ್ಮ ನಡೆ ನುಡಿಗಳು ಭಗವಂತನ ಸ್ವಾಧೀನವಾದರೆ ಅರಿಷಡ್ವರ್ಗಗಳೇ ನಮ್ಮನ್ನ ಏನು ಮಾಡಲಾರವು ಎಂಬ ಸಂದೇಶವನ್ನ ಸಾರಿ ನಮ್ಮೊಳಗಿರುವ ವೈರಿಗಳನ್ನೇ ಗೆದ್ದು ಅಕ್ಕಮಹಾದೇವಿ ಜಗತ್ತಿಗೆ ತೋರಿಸಿದ್ದಾಳೆ. ಇನ್ನೂ ನಮ್ಮ ದೇಹದಿಂದ ಆಚೆ ಇರುವ ವೈರಿಗಳು ಅಂತಹ ಸಾಧಕರಿಗೆ ಏನು ಮಾಡಲು ಸಾಧ್ಯ ! ಪರಮಾತ್ಮನು ಯಾರ ಕಣ್ಣಿಗೂ ಕಾಣುವವನಲ್ಲ, ನನಗೆ ಯಾರು ಹಿತವನ್ನು ಹೇಳುವರೋ ಅವರ ರೂಪದಲ್ಲಿ ಭಗವಂತನು ನಮ್ಮ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದಾನೆ ಎಂಬ ಅರಿವು ಒಂದೇ ನಮ್ಮ ಜೀವನ ಗೆಲ್ಲಲು ಸುಂದರ ಸೂತ್ರ. ಕೊರೊನಾ ವೈರಸ್ ಕೂಡ ಅಷ್ಟೇ ನಮ್ಮ ಜೀವನನ್ನು ಸರಿ ಮಾಡಲು ಬಂದಿರುವ ಕಣ್ಣಿಗೆ ಕಾಣದಿರುವ ಸಂತ.
ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ
[email protected]
ತೆಗ್ಗಿನಮಠ ಸಂಸ್ಥಾನ, ಹರಪನಹಳ್ಳಿ