ವ್ಯೆವಿಧ್ಯತೆ

ಸ್ವಾರ್ಥದಿಂದ ಸಾರ್ಥಕತೆಗೆ ಕರೆದೊಯ್ಯಲು ಬಂದ ಕೊರೊನಾ!

ಸಂಕಷ್ಟದ ಕಾಲದಲ್ಲಿ ಧೈರ್ಯ, ಪರಿಹಾರ, ಕ್ಷಮಾ ಗುಣ ಮೈಗೂಡಿಸಿಕೊಂಡಲ್ಲಿ ವಿಪತ್ತನ್ನು ಎದುರಿಸಬಹುದು

ಜಗತ್ತು ಕೊರೊನಾ ಭೀತಿಯಲ್ಲಿ ಬಳಲಿ ಬೆಂಡಾಗಿ ಮಾನವ ಜೀವನದಲ್ಲಿ ಎಂದೂ ಕಾಣದ ಬದಲಾವಣೆಯನ್ನು ಮೂಡಿಸಿತು. ಬಸ್ ನಿಲ್ದಾಣಗಳು, ಮಾರುಕಟ್ಟೆ, ಅಂಗಡಿ ಮಹಲುಗಳು ಗ್ರಾಹಕರಿಂದ ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ದೃಶ್ಯ ಮಾಯಾವಾಯಿತು. ಹಳ್ಳಿಗರಿಗಿಂತ ನಗರ ವಾಸಿಗಳ ಜೀವನ ಯಮಯಾತನೆ ಎನಿಸಿದೆ.
ಚಲನವಲನವಿಲ್ಲದ ದೇಹ ಸ್ಥಿತಿ ಹೇಗೆ ತಾನೆ ಆರೋಗ್ಯವಾಗಿರಲು ಸಾಧ್ಯ ಎಂದು ಗೋಣಗುತ್ತಾ ಜನಗಳು ಮೌನವಾಗಿಯೇ ತಮ್ಮ ಮನೆಯ ವಿಸ್ತಾರವನ್ನು ವಿರಾಟ್ ರೂಪವೆಂದುಕೊಂಡು ಕಾಲ ಕಳೆಯ ತೊಡಗಿದರು. ಬೆಂಗಳೂರುನಂತಹ ಮಹಾನಗರಗಳು ಮಾನವ ಹಾಗೂ ವಾಹನ ರಹಿತ ವಾತಾವರಣದಿಂದ ವಾಯು ಮಾಲಿನ್ಯ ರಹಿತವಾಗಿದೆ. ಪ್ರಕೃತಿ ನಿಜವಾಗಿಯೂ ಪ್ರಾಣಿ ಪಕ್ಷಿಗಳ ಸ್ವಾತಂತ್ರ್ಯವನ್ನು ಕಂಡು ಕಿಲಕಿಲ ನಗುತ್ತಿರುವುದೇನೋ ಎಂಬಂತೆ ಭಾಸವಾಗುತ್ತಿದೆ.
ಮಾನವನ ಹಿಂಸೆಯಿಂದ ಪವಿತ್ರ ಭೂಮಿ, ಗಿಡ-ಮರಗಳು ಬಿಡುಗಡೆಗೊಂಡು ಪ್ರಾಣಿ ಪಕ್ಷಿ ಸಂಕುಲಕ್ಕೆ ಸಹಕರಿಸಿದೆ. ಸ್ವಚ್ಚ ಭಾರತ ಮಾತ್ರವಲ್ಲ, ಸ್ವಚ್ಚ ಜಗತ್ತು ಎಂಬ ಭಾವ ಮೂಡುವಂತೆ ಮಾಡಿದೆ. ಶಿಸ್ತಿ ಮತ್ತು ಸ್ವಚ್ಚತೆಯಿಂದ ಇರಿ ಎಂದು ಹೇಳಿದವರು ಎಷ್ಟೇ ದೊಡ್ಡ ಮನುಷ್ಯರಾದರೂ ಅದನ್ನು ಪಾಲಿಸುವಲ್ಲಿ ಕೆಲವರು ಹಿಂಸೆಯನ್ನು ಸೃಷ್ಠಿಸಿದರು. ಕೆಲವರಂತೂ ಉದ್ದೇಶ ಪೂರ್ವಕವಾಗಿ ಕೊರೊನಾ ಮಹಾಮಾರಿಯನ್ನು ಪಸರಿಸಲು ತಾವು ಸತ್ತರೂ ಚಿಂತೆಯಿಲ್ಲ, ಇತರರು ಸಾಯಲಿ ಎಂಬಂತೆ ವರ್ತಿಸಿದರು.
ನಮ್ಮ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಕ್ರಿಯಾಶೀಲರಾದ ವೈದ್ಯರು, ಪೊಲೀಸರು, ಅಶಾ ಕಾರ್ಯಕರ್ತರು ಸರ್ಕಾರದ ಆದೇಶ ಪಾಲನೆಯಂತೆ ಕರ್ತವ್ಯ ನಿರತರಾಗಿದ್ದರೂ ಉಪಕಾರಗೇಡಿಗಳ ದುರ್ವರ್ತನೆಯಿಂದ ಹಿಂಸೆ ಅನುಭವಿಸಿದರು. ಹಾವಿಗೆ ಹಾಲೆರೆದು ಮುದ್ದು ಕೊಟ್ಟರೆ ಅದು ಕಚ್ಚದೇ ಬಿಡಲಾರದು ಎಂಬ ಮಾತನ್ನು ಕೆಲವರು ದುಷ್ಟರು ತೋರಿಸಿ ಕೊಟ್ಟರು! ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟವಾದರೂ ಅದನ್ನು ಸಹಿಸಿಕೊಂಡು ದೇಶದ ಜನರ ಆರೋಗ್ಯದ ಹಿತದೃಷ್ಠಿಯಿಂದ ಕಠಿಣ ನಿರ್ಧಾರಗಳನ್ನು ಕೈಗೊಂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಾವು ಎಂದೆಂದಿಗೂ ಋಣಿಯಾಗಿರಬೇಕು.
ಸಾರ್ವಜನಿಕರ ಕೃಪೆಯಿಂದ ಬೆಳೆದು ಸಾವಿರಾರು ಕೋಟಿ ಒಡೆಯರಾದ ಉದ್ಯಮಿಗಳು, ಕಲಾವಿದರು, ಹೇರಳವಾಗಿ ಕೊರೊನಾ ಸಂತ್ರಸ್ತರ ಪರಿಹಾರ ನಿಧಿಗೆ ಕೋಟಿ ಕೋಟಿ ಹಣ ದೇಣಿಗೆ ನೀಡಿದ್ದಾರೆ. ಇಂತಹ ಪುಣ್ಯವಂತವರು ಸುಖವಾಗಿ ಬಾಳಲಿ ಎಂದು ಹಾರೈಸದ ಒಬ್ಬ ವ್ಯಕ್ತಿಯೂ ನಮ್ಮ ಪುಣ್ಯ ದೇಶದಲ್ಲಿ ಸಿಗುವುದಿಲ್ಲ. ಕೊರೊನಾ ಬಂದವರನ್ನು ಗುಂಡಿಕ್ಕಿ ಕೊಲ್ಲಿ ಎಂದು ಆದೇಶ ಮಾಡಿರುವ ಒಂದು ದೇಶದ ಅಧ್ಯಕ್ಷನ ಕ್ರೂರ ವರ್ತನೆಯನ್ನು ನಾವೆಲ್ಲಾ ಕೇಳಿದ್ದೇವೆ. ಆಧರೆ ನಮ್ಮ ಭಾರತದಲ್ಲಿ ಮನೆ ಮನೆಗೆ ಆಹಾರ ಸಾಮಾಗ್ರಿಗಳನ್ನು ತಲುಪಿಸಿ ಮಾನವೀಯತೆ ಮೆರೆದ ನಮ್ಮ ಜನನಾಯಕರ ಸದ್ಗುಣಗಳನ್ನು ನಾವು ಮರೆಯಬಾರದು!
ಮನುಷ್ಯ ಇಂದು ತನ್ನ ಪ್ರಾಂತಕ್ಕೆ ತನ್ನ ಗಡಿಗೆ ಸೀಮಿತವಾಗಿ ಉಳಿದಿಲ್ಲ. ಜಾಗತೀಕರಣದ ವಿಸ್ತಾರಕ್ಕೆ ವಿಸ್ತರಿಸಿಕೊಂಡಾಗಿದೆ. ಇಂದು ವಿಶ್ವವೇ ಒಂದು ಮನೆಯಾಗಿ ರಾಷ್ಟ್ರ ರಾಷ್ಟ್ರಗಳು ಮನೆಯ ಒಂದೊಂದು ಕೋಣೆಯಂತೆ ಆಗಿವೆ. ಯಾವ ದೇಶಗಳು ಸದ್ಗುಣಗಳೆಂಬ ಸಂಪತ್ತಿನಿಂದ ರಚನೆಯಾಗುತ್ತಿವಿಯೋ ಅವುಗಳಿಗೆ ವಿಶೇಷವಾದ ಕೋಣೆಯ ಹೆಸರಿನಿಂದ ಕರೆಯಲ್ಪಡುತ್ತವೆ. ನಮ್ಮ ಹೆಮ್ಮಯ ಭಾರತ ಮಾತೆಗೆ ದೇವರ ಕೋಣೆಯ ಸ್ಥಾನವಿದೆ. ಹೀಗಾಗಿ ಇಲ್ಲಿ ಕ್ರೂರಿಗಳಿಗೂ ಬದುಕುವ ಅವಕಾಶವಿದೆ. ಆದರೆ ಆ ಕ್ರೂರಿಗಳು ಬದಲಾಗಿ ಸದ್ಗಣಿಗಳಾಗದಿದ್ದರೆ ಪ್ರಕೃತಿಯೇ ಅವರಿಗೆ ಶಿಕ್ಷೆ ವಿಧಿಸುತ್ತದೆ.
ಮಾನವನನ್ನು ಸ್ವಾರ್ಥದಿಂದ ಸಾರ್ಥಕತೆಗೆ ಕರೆದೊಯ್ಯಲು ಬಂದಿರುವ ಕೊರೊನಾ ಚೀನಾದಿಂದ ಬಂದಿದ್ದರೂ ಮಾನವನ ಸತ್ಯ ಶೋಧನೆಗೆ ಕನ್ನಡಿಯಂತೆ ಗೋಚರಿಸಿದೆ ಎಂದು ಹೇಳಿದರೆ ತಪ್ಪೇನಿಲ್ಲ! ಉದ್ಯೋಗದಲ್ಲಿ ನಿರತರಾದ ಮಕ್ಕಳಿಗೆ ತಂದೆ ತಾಯಿಗಳ ಪರಿಚಯವೇ ಇಲ್ಲವೇನೋ ಎಂಬಂತ ವಾತಾವರಣದಲ್ಲಿ ಬದುಕು ಕಳೆಯುತ್ತಿದ್ದರು. ಆದರೆ ಇದೀಗ ಕೊರೊನಾ ತಂದೆ-ತಾಯಿ, ಬಂಧು ಬಾಂಧವರನ್ನು ಪರಿಚಯಿಸಿ ಕೊಟ್ಟಿದೆ. ಹಣವೇ ಎಲ್ಲಾ ಎಂದುಕೊಂಡವರಿಗೆ ಮಾನವೀಯ ಸಂಬಂಧಗಳ ಮರು ಪಾಠವಾಗಿದೆ. ಹೆಜ್ಜೆ ತಪ್ಪಿದ ಬಾಳಿಗೆ ಸರಿಯಾದ ಹೆಜ್ಜೆ ಇರಿಸುವಂತೆ ಕೊರೊನಾ ಮಾಡಿದೆ. ಹಣದ ಮುಂದೆ ಬಾಳಿನ ನಿಜವಾದ ಸಂತಸದ ಸೂತ್ರದ ಕೊಂಡಿಯಿಂದ ಕಳಚಿಕೊಂಡವರಿಗೆ ಮತ್ತೆ ಸೂತ್ರ ಹರಿದ ಗಾಳಿಪಟಕ್ಕೆ ಸೂತ್ರ ಕಲ್ಪಿಸಿದೆ.
ಬಂಗಾರವನ್ನು ಪರೀಕ್ಷಿಸಲು ಬೆಂಕಿಯಲ್ಲಿ ಹಾಕುತಾರೆ, ಅದು ಬೆಂಕಿಗೆ ಬಿದ್ದಾಗ ಇನ್ನಷ್ಟು ತನ್ನ ಹೊಳಪನ್ನು ತೋರಿಸುತ್ತದೆ. ಹಾಗೆಯೇ ಕೊರೊನಾವೆಂಬ ಬೆಂಕಿಯ ದುಳ್ಳುರಿಯಲ್ಲಿ ಕೆಲವು ರಾಷ್ಟ್ರಗಳ ನಿಜ ಬಣ್ಣ ಬಯಲಾಗಿದೆ. ಅದರಲ್ಲಿ ಭಾರತ ಶ್ರೇಷ್ಠವೆಂಬುವುದು ಸಾಬೀತಾಗಿದೆ. ವಿಶ್ವದ ಮೂಲೆ ಮೂಲೆಯಿಂದ ಆಗಮಿಸಿ ದೆಹಲಿಯ ಧರ್ಮ ಸಭೆಯಲ್ಲಿ ಭಾಗವಹಿಸಿದವರಿಂದ ಕೊರೊನಾ ಭಾರತ ದೇಶದ್ಯಾಂತ ಪಸರಿಸಲು ಕಾರಣವಾಯಿತು. ಆದರೆ ಕೆಲವು ಜನಪ್ರತಿನಿಧಿಗಳು ನಮ್ಮ ಜನರು ಅನಕ್ಷರಸ್ಥರು ಎಂದು ಹೇಳುವ ಮೂಲಕ ತಮ್ಮ ದಡ್ಡತನವನ್ನು ಪ್ರದರ್ಶಿಸಿದರು. ತಪಾಸಣೆಗೆ ಕರೆದರೆ ನಮ್ಮ ಕ್ಷೇತ್ರದ ಶಾಸಕರು ಹೇಳಿದರೆ ಮಾತ್ರ ಹೇಗುತ್ತೇವೆ ಎನ್ನುವ ಮೂಲಕ ಸ್ವಾಮಿನಿಷ್ಠೆ ಎಂಬ ಮೌಢ್ಯತೆಯ ಮೂರ್ಖತನವನ್ನು ಅನಾವರಣಗೊಳಿಸಿದರು. ಮನುಷ್ಯ ಮನುಷ್ಯರಂತೆ ಬದುಕಲು ಐಎಎಸ್ ಓದಿರಬೇಕೆ ಪ್ರಶ್ನೆ ಮೂಡುವಂತೆ ಮಾಡಿದರು.
ಇಂದು ಹೆಚ್ಚು ಓದಿದವರೇ ಸಮಾಜ ಕಂಟಕರಾಗಿದ್ದಾರೆ ಎಂಬುವುದನ್ನು ನಾವು ಮರೆಯುವಂತಿಲ್ಲ. ಭಾರತದಂತಹ ಪುಣ್ಯ ಭೂಮಿಯಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಮಾನವೀಯ ಗುಣಗಳ ವಿರುದ್ದವಾಗಿ ಬದುಕುವ ಮೂಲಕ ನಂದನ ವನದಂತಿದ್ದ ಜಗವನ್ನು ಬಂಧನ ಭೂಮಿಯನ್ನಾಗಿಸಿದ್ದಾರೆ. ಸಂಕಷ್ಟದ ಕಾಲದಲ್ಲಿ ಧೈರ್ಯ, ಪರಿಹಾರ, ಕ್ಷಮಾ ಗುಣ ಮೈಗೂಡಿಸಿಕೊಂಡಲ್ಲಿ ಎಂತಹ ವಿಪತ್ತನ್ನಾದರೂ ಎದುರಿಸಬಹುದು. ಕೊರೊನಾ ಕಂಠಕದಿಂದ ಹೊರ ಬಂದು ಅಭಿವೃದ್ದಿಯತ್ತಾ ಸಾಗೋಣ..

ಡಾ.ಮಳೆಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ
ಉಜೈನಿ ಸದ್ಧರ್ಮ ಸಿಂಹಾಸನ ಶಾಖಾ
ಮಾನಿಹಳ್ಳಿ ಪುರವರ್ಗ ಮಠ
ಮಾನಿಹಳ್ಳಿ, ಹೂವಿನಹಡಗಲಿ, ತಾ||
ಸಂಪರ್ಕ: ೯೮೪೫೮೪೭೫೬೦

Show More

Related Articles

Leave a Reply

Your email address will not be published. Required fields are marked *

Back to top button
Close