ಹಾವೇರಿ: ಕಳಪೆ ಬೀಜದ ವಿಚಾರದಲ್ಲಿ ಯಾವುದೇ ಮುಲಾಜಿಲ್ಲ, ಕೃಷಿ ಮಂತ್ರಿಯಾಗಿ ಯಾವುದೇ ಪ್ರಭಾವಕ್ಕೂ ಮಣಿಯುವುದಿಲ್ಲ, ನಕಲಿ ಬೀಜದ ಮಾಹಿತಿ ತಿಳಿದು ಮುಖ್ಯಮಂತ್ರಿಗಳು ಶಾಕ್ ಆಗಿದ್ದಾರೆ. ಕೋಲ್ಡ್ ಸ್ಟೋರೆಜ್ ಮತ್ತು ಮತ್ತು ನಕಲಿ ಬೀಜ ಮಾರಾಟ ಮಾಲೀಕರ ಮೇಲೆ ಕ್ರಮಕ್ಕೆ ಮುಂದಾಗಿ ಎಂದು ಸಿಎಂ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಆದೇಶದಂತೆ ಸೂಕ್ತ ಕ್ರಮಕ್ಕೆ ಮುಂದಾಗಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.
ಮೇ.೧ರಂದು ಶುಕ್ರವಾರ ಜಿಲ್ಲೆಯ ಹಿರೇಕೆರೂರಿನ ತಮ್ಮ ನಿವಾಸದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಬಿಡಿ ಬೀಜಗಳನ್ನು ರೈತರು ಖರೀದಿ ಮಾಡಬಾರದು ಎಂದು ಮನವಿಮಾಡಿಕೊಂಡರು.ಗೋವಿನಜೋಳದ ನಕಲಿ ಬಿತ್ತನೆ ಬೀಜ ಗೋದಾಮಿನಲ್ಲಿ ಸಂಗ್ರಹಿಸಿಟ್ಟವರ ಮೇಲೆ ಹಾಗೂ ನಕಲಿ ಬೀಜ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿ ಜೈಲಿಗೆ ಅಟ್ಟುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.
ನಕಲಿ ಬಿತ್ತನೆ ಬೀಜ ತಯಾರಿಸುವವರ ಮೂಲವನ್ನ ಪತ್ತೆ ಮಾಡಿ ರೈತರಿಗೆ ಆಗುತ್ತಿರುವ ದೊಡ್ಡ ಅನ್ಯಾಯವನ್ನ ತಪ್ಪಿಸುವಂತೆ ಗೃಹ ಸಚಿವರು ಮತ್ತು ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದೇನೆ. ಕಳೆದ ವಾರ ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ನಕಲಿ ಬಿತ್ತನೆ ಬೀಜ ಸಂಗ್ರಹ ಮಾಡಿದ್ದ ಅಡ್ಡೆಗಳ ಮೇಲೆ ದಾಳಿ ಮಾಡಿ ಒಂದು ಲಕ್ಷದ ಆರು ನೂರಾ ಎಂಬತ್ತೈದು ಕ್ವಿಂಟಲ್ ನಕಲಿ ಬಿತ್ತನೆ ಬೀಜವನ್ನ ಜಪ್ತಿ ಮಾಡಿದ್ದಾರೆ. ಪ್ರಸಕ್ತ ವರ್ಷ ರೈತರಿಗೆ ಬೇಕಾದ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಆಗದಂತೆ ಕ್ರಮ ಕೈಗೊಂಡಿದ್ದೇವೆ ಅವಧಿ ಮೀರಿದ ರಸಗೊಬ್ಬರ ಮಾರಾಟ ಮಾಡುವುದು ಕಂಡುಬಂದರೆ ಅಂತಹ ಅಂಗಡಿಗಳ ಲೈಸನ್ಸ್ ರದ್ದು ಮಾಡುವುದಾಗಿ ಸಚಿವ ಪಾಟೀಲ ತಿಳಿಸಿದರು.
ಕಳಪೆ ನಕಲಿ ಬಿತ್ತನೆ ಬೀಜ ಮಾರಾಟದ ಮೂಲ ಆಂದ್ರಪ್ರದೇಶ, ಹೈದರಾಬಾದ್, ವಿಜಯವಾಡ, ಕರೀಂನಗರಗಳಾಗಿವೆ. ಪೊಲೀಸ್ ಇಲಾಖೆ ಇಲ್ಲಿಯವರೆಗೆ ಆರೋಪಿಗಳ ವಿರುದ್ಧ ಕ್ರಮಜರುಗಿಸದಿರುವುದು ನೋವು ತಂದಿದೆ ಎಂದು ಅವರು ಕಳಪೆ ಕೀಟನಾಶಕಗಳ ಬಗ್ಗೆಯೂ ನಮ್ಮ ಗಮನಕ್ಕೆ ಬಂದಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಂಡು, ಅವರ ಪರವಾನಿಗೆ ರದ್ದುಗೊಳಿಸಲು ಕೃಷಿ ಜಾಗೃತದಳ ಎಡಿಗಳಿಗೆ ಸೂಚಿಸಲಾಗಿದೆ. ಸರ್ಕಾರದಲ್ಲಿ ತೊಂದರೆಯಿದ್ದರೂ ಸಹ ರೈತರ ಬಿತ್ತನೆಬೀಜಕ್ಕಾಗಲೀ ಗೊಬ್ಬರ ಪೂರೈಕೆಗಾಗಲೀ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಕಳಪೆ ಬಿತ್ತನೆ ಬೀಜ, ನಕಲಿ ಅಕ್ರಮಬೀಜ ಸತತ ಪತ್ತೆ ಕಾರ್ಯಾಚರಣೆಗೆ ಮುಖ್ಯಮಂತ್ರಿಗಳು ಶ್ಲಾಘನೆ ವ್ಯಕ್ತಪಡಿಸಿ, ರೈತರಿಗೆ ಅನ್ಯಾಯವಾಗುವಂತಹ ಯಾವುದೇ ಕೆಲಸವನ್ನು ಸಹಿಸುವುದಿಲ್ಲ ಎಂದಿದ್ದಾರೆ.
ತಿರಸ್ಕೃತ ಬೀಜಗಳನ್ನು ಮೂಲದಲ್ಲಿಯೇ ಸುಟ್ಟುಹಾಕಬೇಕು. ಆದರೆ ಕೆಲವರು ಅವನ್ನು ತಂದು ಬಣ್ಣಹಾಕಿ ಒಳ್ಳೆಯ ಬೀಜಗಳ ಜೊತೆ ಬೆರೆಸಿ ಮಾರಾಟ ಮಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ಜಾಗೃತ ದಳ ಕ್ಷಿಪ್ರಕಾರ್ಯಾಚರಣೆ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ. ಕಳಪೆ ಬಿತ್ತನೆ ಬೀಜ ಮಾರಾಟದ ಹಿಂದೆ ದೊಡ್ಡ ಲಾಬಿಯೇ ಇದ್ದು, ರೈತನಹಿತಕ್ಕಿಂತ ದುಡ್ಡುಮಾಡುವ ದುರುದ್ದೇಶ ಮಾತ್ರ ಇವರದ್ದಾಗಿರುತ್ತದೆ ಎಂದು ಸಚಿವ ಬಿ.ಸಿ.ಪಾಟೀಲ ತಿಳಿಸಿದರು.
ದಾಳಿ ಮಾಡಿ ವಶಪಡಿಸಿಕೊಂಡ ಅಕ್ರಮ ಬಿತ್ತನೆಬೀಜದ ಬಗ್ಗೆ ಎರಡು ದಿನಗಳಲ್ಲಿ ಪ್ರಯೋಗಾಲಯದಿಂದ ವರದಿ ಪಡೆಯಬೇಕು. ಇಂತಹ ಬೀಜಗಳನ್ನು ಸರ್ಕಾರದ ಆದೇಶ ಪಡೆದು ಸುಟ್ಟುಹಾಕಬೇಕು. ಹಾವೇರಿ ಜಿಲ್ಲೆಯ ಬ್ಯಾಡಗಿ ಮತ್ತು ಇತರೆಡೆ ಹಾಗೂ ಹುಬ್ಬಳ್ಳಿ-ಧಾರವಾಡ,ಬಳ್ಳಾರಿ ಸೇರಿದಂತೆ ವಿವಿಧೆಡೆ ದಾಳಿ ನಡೆಸಿ ಸುಮಾರು ೧ ಲಕ್ಷದ ೬೮೫ ಕ್ವಿಂಟಾಲ್ ಕಳಪೆ ಬೀಜ ಇದರಲ್ಲಿ ೧೯೪ ಕ್ವಿಂಟಾಲ್ ಮುಸುಕಿನಜೋಳ,೨೮೮.೪ ಸೂರ್ಯಕಾಂತಿ, ೨೮೮.೬ಹತ್ತಿ ಕಳಪೆ ಬಿಡಿಬೀಜಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಂದು ಸಚಿವರು ವಿವರ ನೀಡಿದರು.