Breaking News

ಕೋವಿಡ್ ಕರ್ತವ್ಯ ನಿರಾಕರಿಸಿದರೆ ಕ್ರಮ:-ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

ಕೋವಿಡ್ ಕರ್ತವ್ಯ ನಿರಾಕರಿಸಿದರೆ ಕ್ರಮ ದ ಎಚ್ಚರಿಕೆ
ಕೋವಿಡ್ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಶೇ.೫೦ರಷ್ಟು ಹಾಸಿಗೆ ಕಾಯ್ದಿರಿಸಿ
-ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ
ಹಾವೇರಿ: ಜಿಲ್ಲೆಯ ಖಾಸಗಿ ನರ್ಸಿಂಗ್ ಹೋಮ್‌ಗಳಲ್ಲಿರುವ ಹಾಸಿಗೆಗಳ ಪೈಕಿ ಶೇ.೫೦ರಷ್ಟು ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗಾಗಿ ಕಾಯ್ದಿರಿಸುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.
ಇಂದು ಜಿಲ್ಲಾ ಹಾಗೂ ತಾಲೂಕಾ ಭಾರತೀಯ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು ಹಾಗೂ ತಹಶೀಲ್ದಾರಗಳೊಂದಿಗೆ ಕೋವಿಡ್ ನಿಯಂತ್ರಣ ಮತ್ತು ಚಿಕಿತ್ಸೆಗೆ ಖಾಸಗಿ ವೈದ್ಯಕೀಯ ಸೇವೆ ಬಳಕೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಿಂದ ವಿಡಿಯೋ ಸಂವಾದ ನಡೆಸಿ ಸರ್ಕಾರದ ಸೂಚನೆಯಂತೆ ಕೋವಿಡ್ ಚಿಕಿತ್ಸೆಗಾಗಿ ಜಿಲ್ಲೆಯ ಖಾಸಗಿ ವೈದ್ಯರ ಸೇವೆ ಹಾಗೂ ನರ್ಸಿಂಗ್ ಹೋಮ್‌ಗಳಲ್ಲಿರುವ ಶೇ. ಶೇ.೫೦ ರಷ್ಟು ಪ್ರಮಾಣದ ಬೆಡ್‌ಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕೋವಿಡ್ ಆಸ್ಪತ್ರೆಗಳಾಗಿ ಪರಿವರ್ತಿಸಲು ಖಾಸಗಿ ನರ್ಸಿಂಗ್ ಹೋಮ್‌ಗಳು ಮುಂದೆಬಂದರೆ ಹಾಗೂ ಕೋವಿಡ್ ಟೆಸ್ಟ್ ಮಾಡಲು ಖಾಸಗಿ ಲ್ಯಾಬ್‌ಗಳು ಮುಂದೆಬಂದರೆ ಅನುಮತಿ ನೀಡಲಾಗುವುದು. ಪ್ರಾಮಾಣಿಕೃತ ಮಾರ್ಗಸೂಚಿಯಂತೆ ಚಿಕಿತ್ಸಾ ಮತ್ತು ತಪಾಸಣೆ ನಡೆಸಬೇಕಾಗುತ್ತದೆ. ವೈದ್ಯಕೀಯ ವೆಚ್ಚವನ್ನು ಸರ್ಕಾರದಿಂದ ಭರಿಸಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ತೊಂದರೆ, ರೆಮ್‌ಡಿಸಿವಿರ್ ಸೇರಿದಂತೆ ಲಸಿಕೆಗಳ ಕೊರತೆ ಇದ್ದರೆ ಜಿಲ್ಲಾಡಳಿತದಿಂದಲೇ ಪೂರೈಕೆಗೆ ಕ್ರಮವಹಿಸಲಾಗುವುದು. ಹೆಚ್ಚುವರಿಯಾಗಿ ಆಮ್ಲಜನಕದ ಸಿಲೆಂಡರ್‌ಗಳ ಪೂರೈಕೆ ಹಾಗೂ ರೆಮ್‌ಡಿಸಿವಿರ್ ಲಸಿಕೆ ಪೂರೈಕೆಗೆ ಬೇಡಿಕೆ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಆಮ್ಲಜನಕ ಮತ್ತು ರೆಮ್‌ಡಿಸಿವಿರ್ ಲಸಿಕೆ ಕೊರತೆ ಇರುವುದಿಲ್ಲ ಎಂದರು.
ಒಂದೊಮ್ಮೆ ಕೋವಿಡ್ ಚಿಕಿತ್ಸೆಗೆ ಬೆಡ್‌ಗಳನ್ನು ನೀಡಲು ನಿರಾಕರಿಸುವ ಹಾಗೂ ಕೋವಿಡ್ ಕರ್ತವ್ಯ ನಿರ್ವಹಿಸಲು ನಿರಾಕರಿಸುವ ಖಾಸಗಿ ನರ್ಸಿಂಗ್ ಹೋಮ್ ಹಾಗೂ ವೈದ್ಯರನ್ನು ಕೆಂಪುಪಟ್ಟಿಗೆ ಸೇರಿಸಿ ಕಾಯ್ದೆಯಂತೆ ನಿರ್ದ್ಯಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯ ಪ್ರತಿ ನರ್ಸಿಂಗ್ ಹೋಮ್‌ಗಳಲ್ಲಿರುವ ಸಾದಾ ಬೆಡ್‌ಗಳ ಸಂಖ್ಯೆ, ಐಸಿಯು, ಆಕ್ಸಿಜನ್ ಬೆಡ್‌ಗಳ ಸಂಖ್ಯೆ ಸೇರಿದಂತೆ ಒಟ್ಟಾರೆ ಬೆಡ್‌ಗಳ ಸಂಖ್ಯೆಯ ಮಾಹಿತಿ ಹಾಗೂ ಜಿಲ್ಲೆಯ ನರ್ಸಿಂಗ್ ಹೋಮ್, ಖಾಸಗಿ ಕ್ಲಿನಿಕ್‌ನಲ್ಲಿ ಸೇವೆಯಲ್ಲಿರುವ ವೈದ್ಯರ ಮಾಹಿತಿಯನ್ನು ಲಿಖಿತವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮಾಹಿತಿ ನೀಡಿ. ಈ ಮಾಹಿತಿಯನ್ನು ಆಧರಿಸಿ ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳ ಬೆಡ್‌ಗಳ ಬಳಕೆ ಹಾಗೂ ಕೋವಿಡ್ ಕರ್ತವ್ಯಕ್ಕೆ ಖಾಸಗಿ ವೈದ್ಯರ ಸೇವೆಯನ್ನು ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ವ್ಯವಸ್ಥೆ ಸಮನ್ವಯವಾಗಿ ಕಾರ್ಯನಿರ್ವಹಿಸಿದರೆ ಕೋವಿಡ್ ನಿಯಂತ್ರಣ ಮಾಡುವುದು ಕಷ್ಟವಾಗುವುದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಖಾಸಗಿ ವೈದ್ಯರು ಕೋವಿಡ್ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿವೆ. ನಿತ್ಯ ನೂರರ ಗಡಿ ದಾಟುತ್ತಿದೆ. ಹೀಗೆ ಮುಂದುವರೆದರೆ ಪರಿಸ್ಥಿತಿ ಗಂಭೀರವಾಗಲಿದೆ. ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಜೊತೆ ಖಾಸಗಿ ವೈದ್ಯರು ಕೈಜೋಡಿಸಬೇಕು. ಜಿಲ್ಲೆಯಲ್ಲಿ ಕೋವಿಡ್‌ನಿಂದ ಸಾವುಗಳು ಉಂಟಾಗಬಾರದು. ಜನರಿಗೆ ತೊಂದರೆಯಾದರೆ ವೈದ್ಯರಿಗೆ ನಾನು ತೊಂದರೆ ಕೊಡುವೆ. ಸರಿಯಾದ ಸಮಯದಲ್ಲಿ ಸರಿಯಾದ ವೈದ್ಯಕೀಯ ಮಾರ್ಗದರ್ಶನ ಹಾಗೂ ಚಿಕಿತ್ಸೆ ದೊರೆತರೆ ಕೋವಿಡ್‌ನಿಂದ ಉಂಟಾಗುವ ಸಾವುಗಳನ್ನು ತಡೆಯಬಹುದು. ಪ್ರತಿ ವೈದ್ಯರು ಸಮನ್ವಯ, ಸಂವಹನವನ್ನು ಮುಕ್ತವಾಗಿರಿಸಿಕೊಂಡು ಕೋವಿಡ್ ನಿಯಂತ್ರಣ ಮತ್ತು ಚಿಕಿತ್ಸೆಗಾಗಿ ಶ್ರಮಿಸಲು ಸ್ವಯಂ ಪ್ರೇರಣೆಯಿಂದ ಮುಂದೆಬರುವಂತೆ ಸಲಹೆ ನೀಡಿದರು.
ಜಿಲ್ಲೆಯ ಎಲ್ಲ ಖಾಸಗಿ ನರ್ಸಿಂಗ್ ಹೋಮ್, ಕ್ಲಿನಿಕ್, ಆಯುಷ್, ದಂತ ವೈದ್ಯರು, ಬ್ಲೆಡ್ ಬ್ಯಾಂಕ್, ಲ್ಯಾಬೋಟರಿಯಲ್ಲಿ ಕೆಲಸಮಾಡುವ ತಜ್ಞವೈದ್ಯರು, ವೈದ್ಯರು, ಅರೇವೈದ್ಯಕೀಯ ಸಿಬ್ಬಂದಿಗಳ ಹೆಸರು, ಖಾಯಂ ವಿಳಾಸ, ಸೇವಾ ಮಾಹಿತಿ ಸೇರಿದಂತೆ ಪಟ್ಟಿಮಾಡಿ ಸಲ್ಲಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ ಅವರಿಗೆ ಸೂಚನೆ ನೀಡಿದರು.
ತಪಾಸಣೆ ನಡೆಸಿ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್ ಅವರು ಮಾತನಾಡಿ, ಖಾಸಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಐ.ಎಲ್.ಎ. ಮತ್ತು ಸಾರಿ ಲಕ್ಷಣಗಳಿದ್ದರೆ ಕಡ್ಡಾಯವಾಗಿ
ಆರ್.ಟಿ.ಪಿ.ಸಿ.ಆರ್. ತಪಾಸಣೆಗೆ ಒಳಪಡಿಸಬೇಕು. ನಿಮ್ಮಲ್ಲಿ ವ್ಯವಸ್ಥೆ ಇಲ್ಲದಿದ್ದರೆ ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿ. ತಾಲೂಕಾ ಆಸ್ಪತ್ರೆಯ ತಂಡ ತಪಾಸಣೆ ಮಾಡಲಿದೆ. ರೆಮ್‌ಡಿಸಿವಿರ್ ಲಸಿಕೆಯನ್ನು ಸರ್ಕಾರದ ಮಾರ್ಗಸೂಚಿಯಂತೆ ಬಳಸಿ. ಮಾಸ್ಕ್ ಹಾಗೂ ಸಾಮಾಜಿಕ ಅಂತರ, ಕೈ ತೊಳೆಯುವುದು, ಸ್ಯಾನಿಟೈಸರ್ ಬಳಕೆ ಕುರಿತಂತೆ ಜಾಗೃತಿ ಮೂಡಿಸಿ. ಈ ಕುರಿತಂತೆ ಎಲ್ಲ ಖಾಸಗಿ ವೈದ್ಯರಿಗೆ ಮಾಹಿತಿ ನೀಡಿ ಎಂದು ಐ.ಎಂ.ಎ. ಪದಾಧಿಕಾರಿಗಳಿಗೆ ಸಲಹೆ ನೀಡಿದರು.
ಅಮಾನತ್ ಎಚ್ಚರಿಕೆ: ಆರಂಭದಲ್ಲಿ ಜಿಲ್ಲೆಯ ಪ್ರತಿ ತಾಲೂಕಿಗೊಂದೊಂದು ೫೦ ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಸಿದ್ಧವಾಗಿರಲಿ. ಸ್ವಚ್ಛತೆ, ವೈದ್ಯಕೀಯ ತ್ಯಾಜ್ಯದ ನಿರ್ವಹಣೆ, ಹಾಸಿಗೆ ವ್ಯವಸ್ಥೆ, ಊಟದ ವ್ಯವಸ್ಥೆ, ಪಿಪಿಕಿಟ್, ಸಿಬ್ಬಂದಿಗಳ ನಿಯೋಜನೆ ಕುರಿತಂತೆ ಮಾರ್ಗಸೂಚಿಯಂತೆ ಕ್ರಮವಹಿಸಬೇಕು. ಈ ಸೆಂಟರ್‌ಗಳಲ್ಲಿ ಯಾವುದೇ ಅವ್ಯವಸ್ಥೆಯ ದೂರು ಬಂದರೆ ತಹಶೀಲ್ದಾರಗಳನ್ನು ಹೊಣೆಮಾಡಿ ಅಮಾನತ್‌ಗೊಳಿಸಲಾಗುವುದು ಎಂದು ಎಚ್ಚರಿಸಿದರು. ಹಾಗೂ ಸರ್ಕಾರ ಹೊರಡಿಸುವ ಮಾರ್ಗಸೂಚಿಯಂತೆ ಕರ್ಫ್ಯೂವನ್ನು ಜಾರಿಗೊಳಿಸಿ ಎಂದು ತಿಳಿಸಿದರು.
ಐ.ಎಂ.ಎ. ಜಿಲ್ಲಾ ಅಧ್ಯಕ್ಷರಾದ ಡಾ.ರವಿಕುಮಾರ ಮಲ್ಲಾಡದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಡಾ.ಜಯಾನಂದ, ಡಾ.ದೇವರಾಜ್, ಡಾ.ನೀಲೇಶ್, ತಹಶೀಲ್ದಾರ ಗಿರೀಶ ಸ್ವಾದಿ, ಐ.ಎಂ.ಎ ಎಲ್ಲ ತಾಲೂಕಾ ಅಧ್ಯಕ್ಷರು, ಪದಾಧಿಕಾರಿಗಳು ವಿಡಿಯೋ ಸಂವಾದದ ಮೂಲಕ ಜಿಲ್ಲೆಯ ಎಲ್ಲ ತಹಶೀಲ್ದಾರಗಳು, ತಾಲೂಕಾ ಆರೋಗ್ಯಾಧಿಕಾರಿಗಳು ಭಾಗವಹಿಸಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button
Close