Breaking News

“ಕೋವಿಡ್ ನಿಯಂತ್ರಣ ಮುಂದಾಳತ್ವ ವಹಿಸಿ, ಇಂದಿನಿಂದ ಕೋವಿಡ್ ಕೇರ್ ಸೆಂಟರ್ ಆರಂಭಮಾಡಿ” ತಹಶೀಲ್ದಾರಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ

ಕೋವಿಡ್ ಮಾರ್ಗಸೂಚಿಗಳ ಅನುಷ್ಠಾನ ಕುರಿತಂತೆ ತಾಲೂಕಾ ತಹಶೀಲ್ದಾರಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು

“ಕೋವಿಡ್ ನಿಯಂತ್ರಣ ಮುಂದಾಳತ್ವ ವಹಿಸಿ, ಇಂದಿನಿಂದ ಕೋವಿಡ್ ಕೇರ್ ಸೆಂಟರ್ ಆರಂಭಮಾಡಿ”
ತಹಶೀಲ್ದಾರಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ

ಹಾವೇರಿ: ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನಾಳೆಯಿಂದ (ಶನಿವಾರ) ಕೋವಿಡ್ ಕೇರ್ ಸೆಂಟರ್‌ಗಳನ್ನು ಆರಂಭಮಾಡಿ. ತಾಲೂಕುಗಳಲ್ಲಿ ಕೋವಿಡ್ ನಿಯಂತ್ರಣ, ಚಿಕಿತ್ಸೆ ತಪಾಸಣೆ, ವ್ಯಾಕ್ಸಿನ್ ಒಳಗೊಂಡಂತೆ ವೈದ್ಯರ ಬೇಕು, ಬೇಡಗಳ ಕುರಿತು ಮುಂದಾಳತ್ವ ವಹಿಸಿ ಅಗತ್ಯ ನೆರವು ಹಾಗೂ ಮಾರ್ಗದರ್ಶನ ನೀಡುವಂತೆ ಜಿಲ್ಲೆಯ ತಹಶೀಲ್ದಾರಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.
ಇಂದು ಕೋವಿಡ್ ನಿಯಂತ್ರಣ ಸರ್ಕಾರದ ಕೋವಿಡ್ ಮಾರ್ಗಸೂಚಿಗಳ ಅನುಷ್ಠಾನ ಕುರಿತಂತೆ ತಾಲೂಕಾ ತಹಶೀಲ್ದಾರಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು, ಕಳೆದ ವರ್ಷ ಕೋವಿಡ್ ಕೇರ್ ಸೆಂಟರ್‌ಗಳಿಗೆ ಶುಕ್ರವಾರ ಸಂಜೆ ಬೇಕಾದ ಎಲ್ಲ ಮೂಲ ಸೌಕರ್ಯಗಳನ್ನು ಸಿದ್ಧಮಾಡಿಕೊಳ್ಳಿ. ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿ, ಹಾಸಿಗೆ ವ್ಯವಸ್ಥೆ, ಕುಡಿಯುವ ನೀರು, ಪಾರ್ಸ್‌ಲ್ ವ್ಯವಸ್ಥೆ ಮೂಲಕ ಊಟದ ಪೂರೈಕೆಗೆ ಅಗತ್ಯ ವ್ಯವಸ್ಥೆ, ವೈದ್ಯಕೀಯ ತ್ಯಾಜ್ಯಗಳ ವಿಲೇವಾರಿ, ಸ್ವಚ್ಛತೆ, ಕಸ ವಿಲೇವಾರಿ ಕುರಿತಂತೆ ಸೂಕ್ತ ಸಿಬ್ಬಂದಿಗಳ ವ್ಯವಸ್ಥೆಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಕೋವಿಡ್ ನಿರ್ವಹಣೆ ಮತ್ತು ಚಿಕಿತ್ಸೆಗೆ ಆಕ್ಸಿಜನ್, ಲಸಿಕೆ ಸೇರಿದಂತೆ ವೈದ್ಯಕೀಯ ಸೌಲಭ್ಯಗಳ ಕೊರತೆ, ತಾಂತ್ರಿಕ ಸಮಸ್ಯೆಗಳು ಉಂಟಾದರೆ ನನ್ನ ಗಮನಕ್ಕೆ ತನ್ನಿ. ತತಕ್ಷಣದಲ್ಲಿ ಸಮಸ್ಯೆ ನಿವಾರಣೆ ಮಾಡಲಾಗುವುದು. ಉಳಿದಂತೆ ತಹಶೀಲ್ದಾರಗಳೇ ನೇತೃತ್ವ ವಹಿಸಿ ಕೋವಿಡ್ ನಿಯಂತ್ರಣಕ್ಕೆ ಕ್ರಮವಹಿಸಬೇಕಾಗಿದೆ. ನಿತ್ಯವೂ ತಾಲೂಕಿನ ಪಾಸಿಟಿವ್‌ಗಳ ಸಂಖ್ಯೆ, ಸಂಪರ್ಕ ಪತ್ತೆ, ಜ್ವರ ತಪಾಸಣೆ ಹಾಗೂ ಲಸಿಕಾ ಪ್ರಗತಿಯ ಕುರಿತಂತೆ ಮಾಹಿತಿ ಹೊಂದಿರಬೇಕು. ಡೆಡಿಕೆಟೆಡ್ ಕೋವಿಡ್ ಸೆಂಟರ್, ಕೋವಿಡ್ ಕೇರ್ ಸೆಂಟರ್,ಕ್ವಾರಂಟೈನ್ ವಾಚ್, ಹೌಸ್ ಐಸೋಲೇಷನ್‌ನಲ್ಲಿರುವವರ ಪಕ್ಕಾ ಮಾಹಿತಿ ಹೊಂದಿರಬೇಕು. ರೋಗಿಗಳ ಸ್ಥಿತಿಗತಿ ಕುರಿತಂತೆ ಮಾಹಿತಿ ಹೊಂದಿರಬೇಕು. ಆಸ್ಪತ್ರೆಗಳಲ್ಲಿ ಕೋವಿಡ್ ಪಾಸಿಟಿವ್ ಹಾಗೂ ಕೋವಿಡೇತರ ರೋಗಿಗಳ ಚಿಕಿತ್ಸೆಗೆ ಯಾವುದೇ ತೊಂದರೆಯಾಗದಂತೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಈ ಎಲ್ಲದರ ಬಗ್ಗೆ ವಿಶೇಷ ಗಮನಹರಿಸುವಂತೆ ಸೂಚನೆ ನೀಡಿದರು.
ಕೋವಿಡ್ ನಿಯಂತ್ರಣದ ಕಾರ್ಯ ಕೇವಲ ಆರೋಗ್ಯ ಇಲಾಖೆಯದು ಮಾತ್ರವಲ್ಲ. ಆರೋಗ್ಯ ಇಲಾಖೆ ಒಳಗೊಂಡಂತೆ ಕಂದಾಯ, ಪೊಲೀಸ್, ಗ್ರಾಮೀಣಾಭಿವೃದ್ಧಿ ಹಾಗೂ ನಗರ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರ ಜಂಟಿ ಹೊಣೆಗಾರಿಕೆಯಾಗಿದೆ. ಪ್ರಸ್ತುತ ಕೋವಿಡ್ ಕಾಲದಲ್ಲಿ ಜಾಗೃತರಾಗಿ ಕರ್ತವ್ಯ ನಿರ್ವಹಿಸಿ. ರಜೆ ಹಾಕಬೇಡಿ, ಕೇಂದ್ರ ಸ್ಥಾನಬಿಡಬೇಡಿ. ಎಲ್ಲ ಅಧಿಕಾರಿಗಳು ಸಕಾಲಕ್ಕೆ ಸಂಪರ್ಕಕ್ಕೆ ಸಿಗಬೇಕು. ಯಾವುದೇ ಸೂಕ್ಷ್ಮ ಸಂದರ್ಭಗಳನ್ನು ತಕ್ಷಣವೇ ನನ್ನ ಗಮನಕ್ಕೆ ತರಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಗಳು ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಚಿಕಿತ್ಸೆ ನೀಡುವಾಗ ಸರ್ಕಾರದ ಪ್ರಮಾಣಿಕೃತ ಮಾರ್ಗಸೂಚಿಗಳ ಅನುಸಾರವೇ ತಪಾಸಣೆ ಹಾಗೂ ಔಷಧಿಗಳನ್ನು ನೀಡಬೇಕು. ಸಾಧ್ಯವಾದಷ್ಟು ತಾಲೂಕಾ ಆಸ್ಪತ್ರೆಗಳಲ್ಲೇ ಚಿಕಿತ್ಸೆ ನೀಡಬೇಕು. ಅನಗತ್ಯವಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಬಾರದು. ಆಸ್ಪತ್ರೆಗಳಿಗೆ ಬರುವ ರೋಗಿಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸಬೇಕು, ಕಾಳಜಿಯಿಂದ ಕಾಣಬೇಕು. ಆಸ್ಪತ್ರೆ ಬರುವ ಕೋವಿಡೇತರ ಸಾಮಾನ್ಯ ರೋಗಿಗಳಿಗೂ ಚಿಕಿತ್ಸೆ ಪಡೆಯಲು ತೊಂದರೆಯಾಗದಂತೆ ಕ್ರಮವಹಿಸಬೇಕು. ಸಂಖ್ಯೆ ಹೆಚ್ಚಳವಾಗಿ ಸರತಿ ಸಾಲಿನಲ್ಲಿನಿಲ್ಲುವಂತಾದವರೆ ಆಸನದ ವ್ಯವಸ್ಥೆ ಮಾಡಬೇಕು. ಆಸ್ಪತ್ರೆಗೆ ಬರುವ ಸಾಮಾನ್ಯ ರೋಗಿಗಳಿಗೆ ಜ್ವರದ ಲಕ್ಷಣಗಳು ಕಂಡುಬಂದರೆ ಆರ್.ಟಿ.ಪಿ.ಸಿ.ಆರ್. ತಪಾಸಣೆ ಕೈಗೊಳ್ಳುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಳ್ಳಳ್ಳಿ, ಡಿ.ವೈ.ಎಸ್.ಪಿ.ಶಂಕರ ಮಾರಿಹಾಳ, ಕೃಷಿ ಜಂಟಿ ನಿರ್ದೇ ಶಕ ಮಂಜುನಾಥ್, ತೋಟಗಾರಿಕೆ ಉಪನಿರ್ದೇಶಕ ಡಾ.ಪ್ರದೀಪ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಭಾವನಾಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಭಿಯಂತರ ಅತ್ತರವಾಲ್, ಪಂಚಾಯತ್ ರಾಜ್ ಇಂಜನೀಯರಿಂಗ್ ವಿಭಾಗದ ಅಭಿಯಂತರ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ವಿರಕ್ತಿಮಠ, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ತಿಮ್ಮೇಶ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಬಸವರಾಜಪ್ಪ, ಪೌರಾಯುಕ್ತ ಪರಶುರಾಮ ಚಲವಾದಿ, ತಹಶೀಲ್ದಾರ ಗಿರೀಶ ಸ್ವಾದಿ, ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ ನಾಯ್ಕ ಉಪಸ್ಥಿತರಿದ್ದರು.

ನಿಷೇಧಾಜ್ಞೆ ಕಠಿಣ ಜಾರಿಗೊಳಿಸಿ:


ಸಾಮಾಜಿಕ ಅಂತರ ಹಾಗೂ ಮಾಸ್ಕ ಧರಿಸುವ ಕುರಿತಂತೆ ಜಾಗೃತಿಯ ಜೊತೆಗೆ ಸರ್ಕಾರದ ಕೋವಿಡ್ ಮಾರ್ಗಸೂಚಿ ಅನುಸಾರ ಸೆಕ್ಷನ್ ೧೪೪ನ್ನು ಕಠಿಣವಾಗಿ ಜಾರಿಗೊಳಿಸಿ. ಸರ್ಕಾರ ನಿಗಧಿಪಡಿಸಿದಂತೆ ಬೆಳಗಿನ ಅವಧಿಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶಮಾಡಿಕೊಡಿ. ಕೆಲಸವಿಲ್ಲದೆ ಅನಗತ್ಯವಾಗಿ ಅಡ್ಡಾಡುವವರ ಮೇಲೆ ಕಠಿಣ ಕ್ರಮಕೈಗೊಳ್ಳಿ. ಸಂತೆ, ತರಕಾರಿ ಮಾರಾಟ ಮಾಡಲು ಬಯಲು ಪ್ರದೇಶದಲ್ಲಿ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್ ವ್ಯವಸ್ಥೆ ಕೈಗೊಳ್ಳಿ. ನಾಲ್ಕು ಜನಕ್ಕಿಂತ ಹೆಚ್ಚು ಜನ ಒಂದೇಡೆ ಸೇರದಂತೆ ಕ್ರಮವಹಿಸಿ. ಸರ್ಕಾರದ ಮಾರ್ಗಸೂಚಿಗಳನ್ನು ಕಠಿಣವಾಗಿ ಪಾಲಿಸಿ ಎಂದು ಪೊಲೀಸ್, ಕಂದಾಯ ಅಧಿಕಾರಿಗಳಿಗೆ ಹಾಗೂ ತಹಶೀಲ್ದಾರಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

Show More

Related Articles

Leave a Reply

Your email address will not be published. Required fields are marked *

Back to top button
Close