Breaking News

ಪೆಟ್ರೋಲ್-ಡಿಸೇಲ್ ಬೆಲೆ ಹೆಚ್ಚಳ ವಿರೋಧಿಸಿ, ಕೇಂದ್ರ -ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿ ಖಂಡಿಸಿ ಬಿಎಸ್‌ಪಿ ಪ್ರತಿಭಟನೆ

ಪೆಟ್ರೋಲ್-ಡಿಸೇಲ್ ಬೆಲೆ ಹೆಚ್ಚಳ ವಿರೋಧಿಸಿ, ಕೇಂದ್ರ -ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿ ಖಂಡಿಸಿ ಬಿಎಸ್‌ಪಿ ಪ್ರತಿಭಟನೆ
ಹಾವೇರಿ: ಪೆಟ್ರೋಲ್-ಡಿಸೇಲ್ ಬೆಲೆ ಹೆಚ್ಚಳ ವಿರೋಧಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳನ್ನು ಖಂಡಿಸಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಮೂಲಕ ಮನವಿ ಪತ್ರವನ್ನು ರಾಷ್ಟ್ರಪತಿ ಅವರಿಗೆ ಸಲ್ಲಿಸಿದರು.
ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿದ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ಮುಖಂಡರು ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳು ಹಾಗೂ ಅವುಗಳ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ೭೦ ಲಕ್ಷ ವಿದ್ಯಾರ್ಥಿಗಳಿಗೆ ೨೦೧೮-೧೯ ಹಾಗೂ ೨೦೧೯-೨೦ನೇ ಸಾಲಿನ ವಿದ್ಯಾರ್ಥಿ ವೇತನಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನನಿರತರು ತಕ್ಷಣವೇ ಎರಡೂ ಸರ್ಕಾರಗಳು ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಕೃಷಿಗೆ ಸಂಬಂಧಿಸಿದ ಕಾನೂನುಗಳ ವಿರುದ್ಧ ದೆಹಲಿ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಅವರು ಘೋಷಣೆಗಳನ್ನು ಕೂಗಿದರು. ’ಸರ್ಕಾರ ಜಾರಿಗೆ ತಂದಿರುವ ಕಾನೂನುಗಳು ರೈತ ವಿರೋಧಿಯಾಗಿದ್ದು, ತಕ್ಷಣವೇ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.
ಕಾರ್ಮಿಕರ ಕೆಲಸದ ಅವಧಿಯನ್ನು ಎಂಟು ಗಂಟೆಗೆ ಬದಲಾಗಿ ೧೨ ಗಂಟೆಗೆ ಹೆಚ್ಚಿಸುವ ತಿದ್ದುಪಡಿಯನ್ನು ಕೈ ಬಿಡಬೇಕು. ಬಡವರ ಬಗರ್ ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಬೇಕು. ೯೪ ಸಿಸಿ ಅನ್ವಯ ಸರ್ಕಾರಿ ಜಮೀನಿನಲ್ಲಿ ಕಟ್ಟಿರುವ ಮನೆಗಳಿಗೆ ಹಕ್ಕುಪತ್ರ ನೀಡಬೇಕು. ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಶಾಲಾ ಶುಲ್ಕವನ್ನು ಮನ್ನಾ ಮಾಡಬೇಕು. ವಿಧವಾ ವೇತನ, ವೃದ್ಧಾಪ್ಯ ವೇತನ ಬಾಕಿ ಸಹಿತ ಕೂಡಲೇ ಬಿಡುಗಡೆ ಮಾಡಬೇಕು, ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು. ಎಂದು ಆಗ್ರಹಿಸಿದರು.
ಗೋಹತ್ಯೆ ನಿಷೇಧ ಕಾಯ್ದೆಯಿಂದಾಗಿ ನಿರುಪಯೋಗಿ ರಾಸುಗಳ ನಿರ್ವಹಣೆ ಮಾಡುವುದು ರೈತರಿಗೆ ಬಹುದೊಡ್ಡ ಸಮಸ್ಯೆಯಾಗಿದೆ. ಇದರಿಂದಾಗಿ ಅಲ್ಲದೇ ಚರ್ಮಗಾರಿಕೆ ಉದ್ಯಮದಲ್ಲಿ ತೊಡಗಿರುವ ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗುತ್ತಾರೆ. ಗೋರಕ್ಷಕರ ಹೆಸರಿನಲ್ಲಿ ದಲಿತ, ಮುಸ್ಲಿಂ, ಕ್ರಿಶ್ಚಿಯನ್ನರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳು ಹೆಚ್ಚಲಿದ್ದು, ಕಾನೂನು ಸುವ್ಯವಸ್ಥೆಗೆ ಭಂಗ ಬರಲಿದೆ. ಇದಲ್ಲದೇ, ಈ ಕಾನೂನು ಜನರ ಆಹಾರದ ಹಕ್ಕನ್ನು ಕಸಿಯುತ್ತಿದೆ. ಹಾಗಾಗಿ, ರಾಜ್ಯ ಸರ್ಕಾರ ಇದನ್ನು ಹಿಂಪಡೆಯಬೇಕು’ವಿದೇಶಕ್ಕೆ ಗೋಮಾಂಸ ರಫ್ತು ಮಾಡುವ ಕಂಪನಿಗಳಿಗೆ ನೀಡಿರುವ ಪರವಾನಗಿಯನ್ನು ರದ್ದುಗೊಳಿಸಿ, ರಫ್ತು ಮಾಡುವುದನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಮನವಿ ಅರ್ಪಿಸುವ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಅಶೋಕ ಮರೆಣ್ಣನವರ, ಪಕ್ಷದ ಮುಖಂಡರುಗಳಾದ ಎಮ್.ಕೆ.ಮಕಬೂಲ, ವಿಜಯಕುಮಾರ ವಿರಕ್ತಮಠ, ರುದ್ರಯ್ಯ ಸಾಲಿಮಠ, ನಾಗರಾಜ ಅಂಗಡಿ, ಮೋಹಿನ್ ಮುಲ್ಲಾ. ಎಸ್.ಎಸ್.ಹನಗೋಡಿಮಠ, ಶಿವಕುಮಾರ ತವರಮೆಳ್ಳಳ್ಳಿ ಮೊದಲಾದವರು ಹಾಜರಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button
Close