ಹಾನಗಲ್ಲ:ಹುಬ್ಬಳ್ಳಿ ಮೂರುಸಾವಿರಮಠದ ಉತ್ತರಾಧಿಕಾರಿ ವಿಚಾರವಾಗಿ ಬಾಲೇಹೊಸೂರಿನ ದಿಂಗಾಲೇಶ್ವರ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಲು ಮೂಜಗು ನಿರಾಕರಿಸಿದ್ದಾರೆ.ಮೂರುಸಾವಿರ ಮಠದ ವಿವಾದ ಪತ್ರಿಕೆಯಲ್ಲಿ ಮತ್ತೆ ಪ್ರತಿಧ್ವನಿಸಿದ್ದರಿಂದ ಸೋಮವಾರ ಹಾನಗಲ್ಲ ಮಠಕ್ಕೆ ಭಕ್ತರ ಆಗಮನ ಅಧಿಕವಾಗಿತ್ತು. ವಿಶೇಷವಾಗಿ ಹುಬ್ಬಳ್ಳಿ ಭಕ್ತರು ಮೂಜಗು ಭೇಟಿಗೆ ಬಂದಿದ್ದರು.
ಹುಬ್ಬಳ್ಳಿ, ಹಾನಗಲ್ಲ ಭಕ್ತರ ಜೊತೆಯಲ್ಲಿ ಶ್ರೀಗಳು ಚರ್ಚೆಯಲ್ಲಿ ತೊಡಗಿದ್ದರು. ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಗೆ ಸಂಬಂಧಿಸಿದಂತೆ ಮಾತುಕತೆಗಳು ನಡೆದವು ಎಂಬುದು ಖಚಿತವಾಗಿಲ್ಲ.
ಹುಬ್ಬಳ್ಳಿ ಮಠದ ಉತ್ತರಾಧಿಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಸ್ಪಷ್ಟವಾಗಿ ಹೇಳಿದರು.
ಫೆ ೧೨ ರಿಂದ ೧೪ರ ವರೆಗೆ ಇಲ್ಲಿನ ಕುಮಾರೇಶ್ವರ ವಿರಕ್ತಮಠದಲ್ಲಿ ನಡೆದ ಲಿಂ.ಕುಮಾರ ಶಿವಯೋಗಿಗಳವರ ೩ ದಿನಗಳ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಅಂದಿನಿಂದ ಹಾನಗಲ್ಲ ಶ್ರೀಮಠದಲ್ಲಿಯೇ ವಾಸ್ತವ್ಯ ಹೊಂದಿದ್ದಾರೆ. ಮೂಜಗು ಹಾನಗಲ್ಲ ವಿರಕ್ತಮಠದ ಪೀಠಾಧಿಪತಿಗಳು ಹೌದು.
ಲಿಂ.ಕುಮಾರ ಶಿವಯೋಗಿಗಳ ಪುಣ್ಯ ಸ್ಮರಣೆ ಕಾರ್ಯಕ್ರಮ ಪೂರ್ಣಗೊಂಡ ಬಳಿಕ ರವಿವಾರ ಸಮೀಪದ ಮಲ್ಲಿಗಾರ ಗ್ರಾಮದಲ್ಲಿ ತಾಲೂಕು ಪ್ರಥಮ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಿದ್ದರು. ೧೭ನೇ ಸೋಮವಾರ ಶಿವಪೂರ ಗ್ರಾಮದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.