ಹಾನಗಲ್ಲ: ಗಿಡ, ಮರಗಳಿಗೆ ಬಾಟಲಿ ನೇತು ಹಾಕಿ ಪಕ್ಷಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಿರುವ ಇಲ್ಲಿನಹಾನಗಲ್ಲ ಮೀನುಗಾರಿಕೆ ಇಲಾಖೆ ಆವರಣದಲ್ಲಿನ ಪ್ರಯತ್ನ ಗಮನ ಸೆಳೆಯುತ್ತಿದೆ.
ಎಲ್ಲೆಂದರಲ್ಲಿ ಬಿಸಾಡಿದ ಮಿನರಲ್ ವಾಟರ್ ಬಾಟಲಿಗಳನ್ನು ಸಂಗ್ರಹಿಸಿ, ಅವುಗಳನ್ನು ಅರ್ದ ಭಾಗದಲ್ಲಿ ಕತ್ತರಿಸಿ, ನೀರು ತುಂಬಿಸಿ ಗಿಡ, ಮರಗಳಿಗೆ ನೇತು ಹಾಕಲಾಗಿದೆ, ಇಲಾಖೆ ಆವರಣದಲ್ಲಿ ಹೆಚ್ಚು ಸಂಖ್ಯೆಯಲ್ಲಿ ವಾಸಿಸುವ ಪಕ್ಷಿಗಳಿಗೆ ನೀರು ದಾಹ ತೀರಿಸುವ ವ್ಯವಸ್ಥೆ ಮಾಡಲಾಗಿದೆ.
ಪಟ್ಟಣ ಕೆ.ಎಸ್.ಆರ್.ಟಿಸಿ ಡಿಪೋ ಹಿಂಭಾಗದ ಮುಂಡಗೋಡ ರಸ್ತೆಯಲ್ಲಿ ಮೀನುಗಾರಿಕೆ ಇಲಾಖೆ ಕಚೇರಿ ಇದೆ, ೨ ಎಕರೆ ವಿಸ್ತಾರದ ಇಲಾಖೆ ಆವರಣದಲ್ಲಿ ಸುಮಾರು ೧೦೦ ಗಿಡ, ಮರಗಳು ಇವೆ, ಗುಲ್ ಮೋಹರ್, ಚರ‍್ರಿ ಸೇರಿದಂತೆ ಹಣ್ಣು ಬಿಡುವ ಗಿಡಗಳು ಅಧಿಕವಾಗಿವೆ, ಹೀಗಾಗಿ ಇಲ್ಲಿ ಪಕ್ಷಿಗಳ ಕಲರವ ಹೆಚ್ಚು,
ಜನ ಸಾಂದ್ರತೆ ಕಡಿಮೆ, ನಿರ್ಜನ ಭಾಗವಾದ ಮೀನುಗಾರಿಕೆ ಇಲಾಖೆ ಆವರಣದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಪಕ್ಷಿಗಳು ವಾಸಿಸುತ್ತಿವೆ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲ ಧಗೆ ಕೆರೆ, ಕಟ್ಟೆಗಳಲ್ಲಿ ನೀರಿ ಇಲ್ಲದಂತೆ ಮಾಡಿದೆ, ಇಲಾಖೆ ಆವರಣಕ್ಕೆ ಹೊಂದಿಕೊಂಡು ಸಣ್ಣದೊಂದು ನೀರಿನ ಕಟ್ಟೆ ಇದೆ. ಈಗ ಅದರಲ್ಲೂ ನೀರು ಬತ್ತಿ ಹೋಗಿದೆ.
ಹೀಗಾಗಿ ಪಕ್ಷಿಗಳಿಗೆ ಕುಡಿಯಲು ನೀರು ವ್ಯವಸ್ಥೆ ಮಾಡಲು ಮುಂದಾದ ಮೀನುಗಾರಿಕೆ ಇಲಾಖೆ ಸಿಬ್ಬಂದಿ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಸಂಗ್ರಹಿಸಿ ಪಕ್ಷಿಗಳಿಗೆ ನೀರು ಕುಡಿಯಲು ಅನುವು ಆಗುವಂತೆ ಬಾಟಲಿಗಳನ್ನು ಕತ್ತರಿಸಿ, ನೀರು ತುಂಬಿಸಿ ಮರ, ದಾರದ ಸಹಾಯದಿಂದ ಗಿಡಗಳಲ್ಲಿ ತೂಗು ಬಿಟ್ಟಿದ್ದಾರೆ.
ಡಾ.ಪ್ರಕಾಶ ಪವಾಡಿ, ಮಾರುತಿ ಕೊರಗರ, ಎಚ್.ಎಂ.ಕೋಟಿ, ಹುಸೇನ್‌ಸಾಬ್ ಜಿ ತಮ್ಮ ರಜೆಯ ಒಂದು ದಿನ ವ್ಯಯಿಸಿ, ಪಕ್ಷಿಗಳಿಗೆ ಕುಡಿಯಲು ನೀರು ವ್ಯವಸ್ಥೆ ಮಾಡಿದ್ದಾರೆ.