ವ್ಯೆವಿಧ್ಯತೆ

ಭಗವಂತನನ್ನು ಮರೆಯುವುದೇ ವಿಪತ್ತು; ಸ್ಮರಿಸುವುದೇ ಸಂಪತ್ತು !

ನಾನು ಎಂಬುದು ಬದುಕಿನ ಅಹಂಕಾರ, ನಾವು ಎಂಬುದು ಬದುಕಿನ ಅಲಂಕಾರ. ಜೀವನದಲ್ಲಿ ಸಾಧನೆ ಮಾಡಿ ಕೊನೆಯುಸಿರೆಳೆಯಬೇಕು ಇಲ್ಲದಿದ್ದರೆ ಈ ಹೆಸರಿಗೂ ಈ ಉಸಿರಿಗೂ ಬೆಲೆ ಇಲ್ಲ. ಧೈರ್ಯವಿದ್ದಲ್ಲಿ ನಂಬಿಕೆ ಇದ್ದೇ ಇರುತ್ತದೆ. ನಂಬಿಕೆ ಇದ್ದಲ್ಲಿ ಧೈರ್ಯ ತಾನೇ ತಾನಾಗಿ ಬರುತ್ತದೆ. ತಿಳಿದು ಬರುವುದು ಜನನ, ತಿಳಿಯದೇ ಬರುವುದು ಮರಣ, ತಿಳಿದು ಬದುಕುವುದೇ ಜೀವನ. ಒಬ್ಬರ ಮನಸ್ಸನ್ನು ಮುರಿದು ಗೆದ್ದು ಬೀಗುವ ಬದಲು, ಒಬ್ಬರ ಮನಸ್ಸನ್ನರಿತು ಬದುಕಲು ಪ್ರಯತ್ನ ಪಡೋಣ. ಆಗ ಜೀವನವೇ ಗೆಲುವಾಗುವುದು.

ಸಾಧನೆಯ ಗೆಲುವು ದುಡಿಯುವ ಕೈಗಳಿಂದ ಬರುತ್ತದೆಯೇ ಹೊರತು ಅಂಗೈಯಲ್ಲಿರುವ ಅದೃಷ್ಟ ರೇಖೆಗಳಿಂದಲ್ಲ. ಹೀಗೆ ಹತ್ತು ಹಲವು ಮಾತುಗಳನ್ನು ಅನುಭವಕ್ಕೆ ತಂದುಕೊಂಡಾಗ ಮನುಷ್ಯನಲ್ಲಿರುವ ಆಸ್ತಿ, ಅಂತಸ್ತು ತೃಣ ಮಾತ್ರವೆನಿಸುತ್ತದೆ. ಬಡವ ಸಿರಿವಂತನಾಗುವುದು, ಸಿರಿವಂತ ಬಡವನಾಗುವುದು ನಮ್ಮೆಲ್ಲರ ಸಾಧನೆಯಾಗಿದ್ದರೂ ಕೂಡ ಆ ಸಿರಿತನ ಬಡತನವೆಂಬದು ಹೇಗೆ ನಾವು ಸಂಪಾದಿಸಿದೆವು ಎಂಬುದು ಮುಖ್ಯ.

ಸಂಪಾದಿಸಿದ ಮಾರ್ಗ ಮಾತ್ರ ನಮಗೆ ಆನಂದ ಕೊಡುವಂತಿರಬೇಕು. ಅದು ನಿರಹಂಕಾರದಿಂದ, ಸದ್ಗುಣಗಳಿಂದ ಬೆಳೆದು ದೊಡ್ಡದಾಗಿದ್ದರೆ ಪ್ರಕೃತಿದತ್ತವಾಗಿ ನಮ್ಮನ್ನು ಸುಖಿಯಾಗಿಡಬಲ್ಲದು. ಏಕೆಂದರೆ ನಮ್ಮ ಸಾಧನೆಗಿಂತಲೂ ಪ್ರಕೃತಿಯ ಶಕ್ತಿ ಅಗಮ್ಯವಾದುದು. ನಮ್ಮ ಸಾಧನೆಯ ಶಕ್ತಿಯನ್ನೇ ಬುಡಮೇಲು ಮಾಡುವ ಸಾಮರ್ಥ್ಯ ಈ ಪ್ರಕೃತಿಗಿದೆ. ಆಗ ಪ್ರಕೃತಿಯ ಮುನಿಸನ್ನು ಸಹಿಸಿಕೊಂಡು, ಒಪ್ಪಿಕೊಂಡು ಮತ್ತೆ ಸಾಧನೆಗೆ ನಿರಹಂಕಾರ ಪ್ರವೃತ್ತಿಯಿಂದ ಸಾಧನೆಗೆ ಮುನ್ನುಡಿ ಬರೆಯುವ ಸಾಧಕನು ಮಾತ್ರ ಗೆಲುವು ಸೋಲುಗಳನ್ನು ಸಮಷ್ಟಿ ಭಾವದಿಂದ ನೋಡುತ್ತಾನೆ.

ದುರ್ಯೋಧನನು ಎಷ್ಟೇ ಬಲಿಷ್ಠಶಾಲಿಯಾಗಿದ್ದರೂ ಸಹಾಯ ಕೇಳಲು ಹೋಗಿ ಶ್ರೀಕೃಷ್ಣ ಪರಮಾತ್ಮನ ಪಾದದ ಬಳಿ ಏಕೆ ಕುಳಿತುಕೊಳ್ಳಬೇಕು? ಶ್ರೀಕೃಷ್ಣ ಪರಮಾತ್ಮನ ಸಮಸ್ತ ಸೈನ್ಯವೇ ತನಗೆ ಸಹಾಯಕ್ಕಾಗಿ ನಿಂತರೂ ತನ್ನೊಳಗಿರುವ ಅಹಂಕಾರದಿಂದ ಸೋಲು ಮತ್ತು ಸಾವನ್ನು ತಂದುಕೊಳ್ಳುತ್ತಾನೆ. ಹಾಗೆ ಅಹಂಕಾರ ನಿರ್ಮೂಲನೆ ಯಾಗಬೇಕಾದರೆ ಸಜ್ಜನರ ಸಹವಾಸ ಶ್ರೇಷ್ಠವಾದುದು. ಅದು ಮನಸ್ಸಿನ ಬೇಜಾರನ್ನು ಹೋಗಲಾಡಿಸಿ ಸತ್ಯ ಗುಣವನ್ನು ಕಲಿಸುತ್ತದೆ. ಅಪಾರ ಮರ್ಯಾದೆ ಗಳಿಸಿಕೊಡುವುದು, ಪಾಪವನ್ನು ಪುಣ್ಯವನ್ನಾಗಿ ಮಾರ್ಪಾಡಿಸುವುದು, ಮನಸ್ಸಿಗೆ ಆಹ್ಲಾದ ಉಂಟು ಮಾಡುವುದು, ಕೀರ್ತಿಯನ್ನು ಎಲ್ಲೆಡೆ ಹರಡುವುದು, ನಿರಹಂಕಾರದಿಂದ ಸಜ್ಜನರ ಸಹವಾಸದಿಂದ ಸಾಧಿಸದೇ ಇರುವುದು ಯಾವುದು ಇಲ್ಲ. ಅಹಂಕಾರಿಗಳಾಗಿ ಅಳಿದರಲ್ಲದೇ ಉಳಿದವರಿಲ್ಲ. ಜಗತ್ತನ್ನೇ ಗೆಲ್ಲಬೇಕೆಂದು ಹೋದ ಹಿಟ್ಲರ್ ಮರಳಿ ತನ್ನ ತಾಯ್ನಾಡಿಗೆ ಬಾರದೇ ಮಣ್ಣಲ್ಲಿ ಮಣ್ಣಾಗಿ ಹೋದ ಎಂಬ ಇತಿಹಾಸ ನಮ್ಮ ಕಣ್ಮುಂದೆ ಇದೆ. ಇಂಥವರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಇಂದು ಅನೇಕ ರಾಷ್ಟ್ರಗಳು ತಾವು ಬಲಿಷ್ಠವೆಂದು ಭಾವಿಸಿ ಬೀಗಲು ಹೋಗಿ ತಮ್ಮ   ಅಹಂಕಾರಕ್ಕೆ ಕೊರೊನಾ ವೈರಸ್ ದಾಳಿಯೆಂಬ ಹೆಮ್ಮಾರಿಯ ಹೊಡೆತಕ್ಕೆ ಬೀಗ ಹಾಕಿಕೊಂಡಿವೆ. ನಮ್ಮನ್ನು ನಾವು ಗೆಲ್ಲದೇ ಇತರರನ್ನು ಗೆಲ್ಲುತ್ತೇವೆ ಎಂದುಕೊಂಡರೆ ಅದು ನಮ್ಮ ಮೂರ್ಖತನವಾದೀತು! ಮೂರ್ಖನು ಸಜ್ಜನರಂತೆ ವೇಷಭೂಷಣ ಮಾಡಿಕೊಂಡರೂ ದೂರ ಇರುವಾಗಷ್ಟೇ ಶೋಭಿಸುವನು, ಸಮೀಪಕ್ಕೆ ಬಂದು ಮಾತನಾಡ ತೊಡಗಿದರೆ ಅವನ ಮೂರ್ಖತನ ಹೊರಬೀಳುವುದು. ಇಂದು ಬಹುತೇಕ ರಾಷ್ಟ್ರಗಳು ಆ ಸಾಹಸಕ್ಕೆ ಕೈ ಹಾಕಿ, ಸಮೀಪದಿಂದ ತಮ್ಮನ್ನು ತೋರಿಸಿಕೊಂಡು ತಮ್ಮ ಮೂರ್ಖತ್ವವನ್ನು ಪ್ರದರ್ಶಿಸಿವೆ.
ದುರಾಸೆಯನ್ನು ಕಡಿದೊಗೆ, ಕ್ಷಮೆಯನ್ನು ತಾಳು, ಸೊಕ್ಕನ್ನು ಬಿಡು, ಪಾಪ ಕಾರ್ಯದಲ್ಲಿ ಮನಸ್ಸು ಹಾಕಬೇಡ, ಸತ್ಯವನ್ನು ನುಡಿ, ಸಜ್ಜನರ ದಾರಿಯಲ್ಲಿ ಕ್ರಮಿಸು, ಹಿರಿಯರನ್ನು ಗೌರವಿಸು, ಶತೃಗಳನ್ನು ಮರ್ಯಾದಿಸು, ನಿನ್ನ ಹೀನ ಗುಣಗಳನ್ನು ಬಚ್ಚಿಡು, ಕೀರ್ತಿಯನ್ನು ಕಾಯ್ದಿಕೋ, ದುಃಖಿತರಲ್ಲಿ ದಯೆ ತೋರು ಈ ಮಾತುಗಳು ಹಿಂದೆಂದಿಗಿಂತಲೂ ಇಂದು ಅವಶ್ಯಕವಾಗಿವೆ. ಜಗತ್ತಿಗೆ ಬಂದೊದಗಿದ ಇಂತಹ ಆಪತ್ಕಾಲದಲ್ಲಿ ಯಾರು ನಿರಹಂಕಾರಿಗಳು, ಯಾರು ಸಜ್ಜನರು, ಯಾರು ದುರ್ಜನರು ಎಂಬುದು ಸ್ಪಷ್ಟವಾಗುತ್ತಿದೆ.

ಮನುಷ್ಯ ಹಣಕ್ಕಾಗಿ ಮಾಡಬಾರದ್ದನೆಲ್ಲವನ್ನು ಮಾಡಿದ, ಆದರೆ ಅದೇ ಹಣ ಇವತ್ತು ತಾನು ಹೋಗುವ ರಸ್ತೆಯಲ್ಲಿ ಬಿದ್ದಿದ್ದರೂ ಅದನ್ನು ಮುಟ್ಟಲು ಭಯ ಪಡುವಂತಾಗಿದೆ. ಮನುಷ್ಯನ ಜೀವನ ಕಾಲಚಕ್ರದಡಿಯಲ್ಲಿ ಸಿಲುಕಿದೆ. ಸಮುದ್ರದಲ್ಲಿ ಮಳೆಯಾದರೆ ಹೇಗೆ ವ್ಯರ್ಥವೋ ಹಾಗೆ ಅವಶ್ಯಕತೆಗಿಂತಲೂ ಹೆಚ್ಚು ಗಳಿಸಿದ ಸಂಪತ್ತು ವ್ಯರ್ಥ ಏನೆಂಬುದನ್ನು ಜಗತ್ತಿನಾದ್ಯಂತ ಹರಡಿರುವ ಕೊರೊನಾ ವೈರಸ್ ಮನುಷ್ಯನಿಗೆ ಅರ್ಥ ಮಾಡಿಸಿದೆ. ಪ್ರಕೃತಿ ಉಳಿವಿಗಾಗಿ ಹಾಗೂ ಧರ್ಮದ ಮಾರ್ಗದಲ್ಲಿ ಸಾಗುವಂತೆ ಸಾಧು ಸಂತರ ಉಪದೇಶ ಕೇಳಿ ಅವುಗಳನ್ನು ನಿರ್ಲಕ್ಷಿಸಿದ ಪ್ರತಿಫಲಕ್ಕಾಗಿ ಪ್ರಕೃತಿ ಸೇಡು ತೀರಿಸಿಕೊಳ್ಳಲು ಕೊರೊನಾ ರೂಪದಲ್ಲಿ ಬಂದಿದೆ.

ವಿಪದೋ ನೈವ ವಿಪದಃ ಸಂಪದೋ ನೈವ ಸಂಪದಃ ವಿಪತ್ ವಿಸ್ಮರಣಮ್ ವಿಷ್ಣೋಃಸಂಪನ್ನಾರಯಣಃಸ್ಮೃತಿಃ ಎಂದು ಹೇಳುವ ಸುಭಾಷಿತವು ವಿಪತ್ತು ನಿಜವಾದ ವಿಪತ್ತಲ್ಲ, ಸಂಪತ್ತು ನಿಜವಾದ ಸಂಪತ್ತಲ್ಲ, ಭಗವಂತನನ್ನು ಮರೆಯುವುದೇ ವಿಪತ್ತು, ಅವನನ್ನು ಸ್ಮರಿಸುವುದೇ ಸಂಪತ್ತು. ಭಗವಂತನನ್ನು ಸ್ಮರಿಸುವುದೆಂದರೆ ಸಜ್ಜನರ ಹಿತೋಪದೇಶಗಳನ್ನು ಕೇಳಿ ಅವುಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡಲ್ಲಿ ವಿಪತ್ತುಗಳು ನಮ್ಮ ಸನಿಹ ಸುಳಿಯಲಾರವು ಇದೇ ಬದುಕಿನ ಚಾಣಕ್ಯ ನೀತಿಯಾಗಿದೆ. ನಮ್ಮ ನಡೆನುಡಿಗಳು ಹತೋಟಿಯಲ್ಲಿದ್ದರೆ ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ, ಅವು ಕೇವಲ ನಮ್ಮ ಸನ್ನಡತೆಯಲ್ಲಿಯೇ ಕರಗಿ ಹೋಗುತ್ತವೆ. ದೇವರ ರೂಪದಲ್ಲಿ ನಮಗೆ ಒಳಿತು ಹೇಳುವವರನ್ನು ನಾವು ಅಪಹಾಸ್ಯ ಮಾಡಿದ್ದಲ್ಲಿ ಬಾಳು ನರಕದ ಗೂಡಾಗುತ್ತದೆ. ನರಕದ ಗೂಡಿನ ಬದಲಾಗಿ ಸದ್ಭಾವ ಅರಮನೆಯ ವಾಸ ನಮ್ಮದಾಗಲಿ. ಅದು ಭಗವಂತನ ನಿವಾಸವಾಗಲಿ.
ಅರ್ಥವಿಲ್ಲದ ಬದುಕನ್ನು ರೂಪಿಸಿಕೊಳ್ಳುವುದಕ್ಕಿಂತ ಸಮರ್ಥವಾದ ಬದುಕನ್ನು ರೂಢಿಸಿಕೊಳ್ಳೋಣ, ರೂಢಿಯೊಳಗೆ ಆರೂಢರಂತೆ ಬದುಕೋಣ, ಜಗವನ್ನೇ ಸಂತಸವಾಗಿಡೋಣ, ಬರುವ ಸಮಸ್ಯೆಗಳನ್ನು ಒಟ್ಟಾಗಿ ಎದುರಿಸೋಣ. ಒಗ್ಗಟ್ಟಿನ ಬಾಳಿನಲ್ಲಿ ಅಹಂಕಾರ ಇಲ್ಲ ಎಂದು ಹೇಳೋಣ. ನಮ್ಮೆಲ್ಲರಲ್ಲಿ ಇರುವುದು ಸದ್ಭಾವ ಎಂದು ತಿಳಿಯೋಣ, ಭಾರತ ಮಾತೆಯ ಮಡಿಲಲ್ಲಿ ಜನ್ಮ ತಾಳುವುದು ಕೋಟಿ ಪುಣ್ಯದ ಫಲವೆಂಬುದನ್ನು ಅರಿಯೋಣ.. ಆಕಸ್ಮಿಕವಾಗಿ ಸಿಕ್ಕಿರುವ ಮಾನವ ಜನ್ಮ ಸಾರ್ಥಕ ಎನ್ನೋಣ.. ಭಾರತಾಂಬೆಯ ಮಡಿಲಿಗೆ ನಮಿಸೋಣ.

ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ
ತೆಗ್ಗಿನಮಠ ಸಂಸ್ಥಾನ, ಹರಪನಹಳ್ಳಿ.

[email protected]

“ಮನುಷ್ಯ ಹಣಕ್ಕಾಗಿ ಮಾಡಬಾರದ್ದನೆಲ್ಲವನ್ನು ಮಾಡಿದ ಆದರೆ ಅದೇ ಹಣ ಇವತ್ತು ತಾನು ಹೋಗುವ ರಸ್ತೆಯಲ್ಲಿ ಬಿದ್ದಿದ್ದರೂ ಅದನ್ನು ಮುಟ್ಟಲು ಭಯ ಪಡುವಂತಾಗಿದೆ. ಮನುಷ್ಯನ ಜೀವನ ಕಾಲಚಕ್ರದಡಿಯಲ್ಲಿ ಸಿಲುಕಿದೆ. ಸಮುದ್ರದಲ್ಲಿ ಮಳೆಯಾದರೆ ಹೇಗೆ ವ್ಯರ್ಥವೋ ಹಾಗೆ ಅವಶ್ಯಕತೆಗಿಂತಲೂ ಹೆಚ್ಚು ಗಳಿಸಿದ ಸಂಪತ್ತು ವ್ಯರ್ಥ ಏನೆಂಬುದನ್ನು ಜಗತ್ತಿನಾದ್ಯಂತ ಹರಡಿರುವ ಕೊರೊನಾ ವೈರಸ್ ಮನುಷ್ಯನಿಗೆ ಅರ್ಥ ಮಾಡಿಸಿದೆ”.

Show More

Related Articles

Leave a Reply

Your email address will not be published. Required fields are marked *

Back to top button
Close