ವಚನಗಳ ಪ್ರಚಾರ – ಪ್ರಸಾರ ಅತ್ಯವಶ್ಯ: ಸದಾಶಿವಸ್ವಾಮಿಜಿ
ಹಾವೇರಿ : ಶರಣರ ಆಶಯದ ಸಾತ್ವಿಕ ಸಮಾಜ ನಿರ್ಮಾಣದ ಪುನರುತ್ಥಾನ ಈಗಿನ ಅವಶ್ಯಕತೆಯಾಗಿದೆ. ವಚನಗಳು ಸದಾಚಾರದ ಸಂದೇಶಗಳನ್ನು ಸಾರುತ್ತಿವೆ ಎಂದು ಹುಕ್ಕೇರಿಮಠದ ಸದಾಶಿವಮಹಾಸ್ವಾಮಿಗಳು ಹೇಳಿದರು.
ಇಲ್ಲಿನ ಬಸವೇಶ್ವರನದಲ್ಲಿನ ನಿವೃತ್ತ ಅಧ್ಯಾಪಕಿ ಮಧುಮತಿ ಚಿಕ್ಕಗೌಡರ ಅವರ ಮನೆಯಂಗಳದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಕದಳಿ ಮಹಿಳಾ ವೇದಿಕೆ ಆಯೋಜಿಸಿದ್ದ ಹುಕ್ಕೇರಿಮಠದ ಲಿಂ.ಶಿವಲಿಂಗಮಹಾಸ್ವಾಮಿಗಳು ಹಾಗೂ ದಿ.ಸಿದ್ದಪ್ಪ ಚನ್ನಪ್ಪ ಚೌಶೆಟ್ಟಿ ಅವರ ದತ್ತಿ ಉಪನ್ಯಾಸದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಹುಕ್ಕೇರಿಮಠದ ಪೂಜ್ಯ ಶಿವಲಿಂಗಮಹಾಸ್ವಾಮಿಗಳು ವಾಕ್ಸಿದ್ಧಿಯುಳ್ಳ, ಪವಾಡ ಸದೃಶ್ಯ ಸಾರ್ಥಕ ಜೀವನವನ್ನು ಉಳ್ಳವರಾಗಿದ್ದರು. ಸರಳ ಸಜ್ಜನಿಕೆಯ ಜೊತೆಗೆ ಸಮಯಕ್ಕೆ ಮಹತ್ವ ನೀಡಿ, ಶಿಷ್ಚಾಚಾರಕ್ಕೆ ವ್ಯತ್ಯಾಸವಾಗದಂತೆ ಬದುಕಿದ್ದರು. ಅದರಂತೆ ಶ್ರೀಮಠದ ಸದ್ಭಕ್ತರಾಗಿದ್ದ ದಿ.ಸಿದ್ದಪ್ಪ ಚೌಶೆಟ್ಟಿ ನೇರ, ನಿಷ್ಠುರತೆ ಉಳ್ಳವರಾಗಿದ್ದರೂ ಕೂಡ ಸತ್ಯ ಪ್ರತಿಪಾದಕರಾಗಿ ಸೇವಾನಿಷ್ಠ ಬದುಕನ್ನು ನಡೆಸಿದರು. ಶರಣ ಸಾಹಿತ್ಯ ಪರಿಷತ್ತು ಶರಣರ ಸಂದೇಶಗಳನ್ನು ಸಮರ್ಥವಾಗಿ ಜನಮಾನಸಕ್ಕೆ ಮುಟ್ಟುವ ಕಾರ್ಯ ಕೈಗೊಂಡಿದ್ದು ಇಂದು ವಚನಗಳ ಪ್ರಚಾರ ಹಾಗೂ ಪ್ರಸಾರ ಅತ್ಯವಶ್ಯವಾಗಿ ಬೇಕಾಗಿದೆ ಎಂದು ಸದಾಶಿವಮಹಾಸ್ವಾಮಿಜಿ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪೂರ, ವಚನ ಚಳುವಳಿ ಜನತಾ ಆಂದೋಲನವಾಗಿ ಜಾಗೃತಿ ಮೂಡಿಸಿದ್ದು, ವಚನಗಳು ಕನ್ನಡದ ಭಾಗ್ಯ ವಿಶೇಷಗಳಾಗಿವೆ. ಸಾರ್ಥಕ ಜೀವನ ಸಿದ್ದಂತವನ್ನು ಪ್ರತಿಪಾದಿಸಿದ ವಚನಗಳು ಸಾರ್ವಕಾಲಿಕ ಸತ್ಯಗಳು. ಮಕ್ಕಳಿಗೆ ವಚನ ಸಂಸ್ಕಾರ ನೀಡುವ ಅಗತ್ಯವಿದೆ ಎಂದರು.
ಶಿಕ್ಷಕಿ ರೂಪಾ ಸಜ್ಜರ ಲಿಂ.ಶಿವಲಿಂಗಮಹಾಸ್ವಾಮಿಗಳವರ ಜೀವನ ಸಾಧನೆ ಕುರಿತು ಮಾತನಾಡಿ, ಶ್ರೀಗಳ ಶೈಕ್ಷಣಿಕ ಚಿಂತನೆ, ಸಮಾಜಕಾಗಿದ್ದ ತುಡಿತ, ವಿಶಾಲ ವಿಚಾರ ಧಾರೆಗಳು ಜನ ಮಾನಸದಲ್ಲಿ ಅಚ್ಚೊತ್ತಿವೆ ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ಸಿ.ಎಸ್.ಮರಳಿಹಳ್ಳಿ ಮಾತನಾಡಿ, ದಿ.ಸಿದ್ದಪ್ಪ ಚೌಶೆಟ್ಟಿ ಧಾರ್ಮಿಕ, ಸಾಮಾಜಿಕ, ರಾಜಕೀಯ ಶಕ್ತಿ ಹೊಂದಿದ್ದರು. ದೈವ ಭಕ್ತರಾಗಿಯೂ ಹುಕ್ಕೇರಿಮಠದ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಎಂದರು.
ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ದಾಕ್ಷಾಯಣಿ ಗಾಣಿಗೇರ ಅಧ್ಯಕ್ಷತೆವಹಿಸಿದ್ದರು. ಹುಕ್ಕೇರಿಮಠದ ಅಕ್ಕನಬಳಗದ ಅಧ್ಯಕ್ಷೆ ಲಲಿತಾ ಹೊರಡಿ ಆಶಯ ನುಡಿ ನುಡಿದರು. ಉಪಾಧ್ಯಕ್ಷೆ ಅಮೃತಮ್ಮ ಶೀಲವಂತರ ವಚನ ಚಿಂತನೆ ನಡೆಸಿಕೊಟ್ಟರು. ಇನ್ನರವ್ಹೀಲ ಕ್ಲಬ್ ಅಧ್ಯಕ್ಷೆ ಶಿಲ್ಪಾ ಚುರ್ಚಿಹಾಳ, ನಿವೃತ್ತ ಡಿವಾಯ್ಎಸ್ಪಿ ಮಾಳಗೇರ, ತಮ್ಮನಗೌಡ ತಿಮ್ಮನಗೌಡರ, ಮಹೇಶ್ವರಿ ತಿಮ್ಮನಗೌಡ್ರ ಅತಿಥಿಗಳಾಗಿದ್ದರು.
ನಿವೃತ್ತ ಅಧ್ಯಾಪಕಿ ಮಧುಮತಿ ಚಿಕ್ಕಗೌಡರ ಸ್ವಾಗತಿಸಿದರು. ಕದಳಿ ವೇದಿಕೆಯ ಅಮೃತಮ್ಮ ಶೀಲವಂತರ, ಅಕ್ಕಮಹಾದೇವಿ ಹಾನಗಲ್ಲ ವಚನಗಳನ್ನು ಹಾಡಿದರು. ಉಷಾ ಕರಬಸನಗೌಡ್ರ ಕಾರ್ಯಕ್ರಮ ನಿರೂಪಿಸಿದರು. ಸೌಭಾಗ್ಯ ಹಿರೇಮಠ ವಂದಿಸಿದರು.