ಹಾವೇರಿ: ಗುಂಪು ವಿಮಾ ಪರಿಹಾರ ಪಾವತಿಗೆ ನ್ಯಾಶನಲ್ ಇನ್ಸೂರೆನ್ಸ್ ಕಂಪನಿಗೆ ಆದೇಶ
ಹಾವೇರಿ: ವಿದ್ಯುತ್ ಅಪಘಾತದಲ್ಲಿ ಮೃತಪಟ್ಟ ಹೆಸ್ಕಾಂ ನೌಕರಿಗೆ ಗುಂಪು ವಿಮಾ ಪರಿಹಾರ ಪಾವತಿಸಲು ನಿರಾಕರಿಸಿದ ನ್ಯಾಶನಲ್ ಇನ್ಸೂರೆನ್ಸ್ ಕಂಪನಿಗೆ ಪರಿಹಾರ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿ ಆದೇಶಿಸಿದೆ.
ರಾಣೇಬೆನ್ನೂರ ಹೆಸ್ಕಾಂ ವಿಭಾಗದಲ್ಲಿ ಮಾರ್ಗದಾಳಾಗಿ ಕಾರ್ಯನಿರ್ವಹಿಸುತ್ತಿದ್ದ ಕಾಕೋಳ ಗ್ರಾಮದ ನಿವಾಸಿ ನಾಗಪ್ಪ ಹಡಪದ ಅವರು ಕಳೆದ ಫೆಬ್ರುವರಿ ೨೦೧೪ ರಂದು ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಮರಣಹೊಂದಿದ್ದರು. ನಿಯಮಾನುಸಾರ ಮೃತನೌಕರರ ಕುಟುಂಬಕ್ಕೆ ನಾಲ್ಕು ಲಕ್ಷ ರೂ. ಪರಿಹಾರ ಸಿಗಬೇಕಾಗಿತ್ತು. ಮೃತರ ಪತ್ನಿ ಶ್ರೀಮತಿ ಶೋಭಾ ನಾಗಪ್ಪ ಹಡಪದ ಅವರು ದಾಖಲೆಯೊಂದಿಗೆ ಸಕ್ಷಮಪ್ರಾಧಿಕಾರ ಹಾಗೂ ವಿಮಾ ಕಂಪನಿಗೆ ಅರ್ಜಿ ಸಲ್ಲಿಸಿದ್ದಾಗ್ಯೂ ವಿಮೆ ಪರಿಹಾರ ನೀಡಿದ ಕಾರಣ ಗ್ರಾಹಕರ ವೇದಿಕೆಗೆ ದೂರು ದಾಖಲು ಮಾಡಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷರಾದ ಶ್ರೀಮತಿ ಸುನಂದಾ ಹಾಗೂ ಸದಸ್ಯರಾದ ಶ್ರೀಮತಿ ಮಹೇಶ್ವರಿ ಬಿ.ಎಸ್.ಅವರು ಈ ಸಂಬಂಧ ತೀರ್ಪು ಪ್ರಕಟಿಸಿ ಪಾಲಿಸಿದಾರರ ಮೃತ ಕುಟುಂಬಕ್ಕೆ ಗುಂಪು ವಿಮಾ ಪರಿಹಾರ ಮೊತ್ತ ನಾಲ್ಕು ಲಕ್ಷ ರೂ. ಹಾಗೂ ಈ ಮೊತ್ತಕ್ಕೆ ಶೇ.೮ರ ಬಡ್ಡಿದರದಂತೆ ಪಾವತಿಸಬೇಕು. ಇದರೊಂದಿಗೆ ಪಿರ್ಯಾದುದಾರರ ಮಾನಸಿಕ ವ್ಯಥೆಗೆ ೩ ಸಾವಿರ ಹಾಗೂ ದಾವೆ ಖರ್ಚು ೨ ಸಾವಿರ ರೂ.ಗಳನ್ನು ಒಂದು ತಿಂಗಳೊಳಗೆ ಪಾವತಿಸಲು ನ್ಯಾಶನಲ್ ಇನ್ಸೂರೆನ್ಸ್ ಕಂಪನಿಗೆ ಆದೇಶ ನೀಡಿದೆ.
ನಿಗಧಿತ ಅವಧಿಯಲ್ಲಿ ಪರಿಹಾರ ಪಾವತಿಸಲು ವಿಫಲವಾದರೆ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ.೧೨ರ ಬಡ್ಡಿ ಸಮೇತ ಪಾವತಿಸಬೇಕು ಎಂದು ಆದೇಶಿಸಲಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರಿ ಸಹಾಯಕ ರಿಜಿಸ್ಟಾರ್ ಹಾಗೂ ಸಹಾಯಕ ಆಡಳಿತಧಿಕಾರಿ ಕರಿಯಪ್ಪ ಬಡಪ್ಪಳವರ ಅವರು ತಿಳಿಸಿದ್ದಾರೆ.