ವ್ಯೆವಿಧ್ಯತೆ

ಉಡದ ಪಟ್ಟೆಂದರೇ ಪಟ್ಟು.

ಸಂತತಿ ನಾಶದ ಆತಂಕ ಎದುರಿಸುತ್ತಿರುವ ಸರಿಸೃಪ....

ಲಾಕ್ ಡೌನ್ ಗೊಷಣೆಯಾಗುವಾಗಿನ ಒಂದು ವಾರದ ಹಿಂದೆ ಕ್ಯಾಮರಾ ಹೆಗಲೇರಿಸಿಕೊಂಡು ಬೈಕನ್ನೇರಿ ರಾಣೆಬೆನ್ನೂರಿನಿಂದ ತಾಲೂಕಿನ ಚೌಡಯ್ಯದಾನಪೂರ ಗ್ರಾಮಕ್ಕೆ ಹೊರಟಿದ್ದೆ. ಪಕ್ಷಿಗಳನ್ನು ನೋಡುವುದು, ಫೋಟೋ ತೆಗೆಯುವ ಹುಚ್ಚು. ಮಾರ್ಗಮಧ್ಯ ಎಡಕ್ಕೆ ಗುಡುಗೂರು ಅರಣ್ಯ ಪ್ರದೇಶ. ದೂರದಲ್ಲಿ ಏನೋ ಅಲುಗಾಡಿದಂತಾಗಿ ಸವಾರಿ ಮಾಡುತ್ತಿದ್ದ ನನ್ನ ಬೈಕ್ ಗಕ್ಕನೇ ನಿಂತಿತು. ರಸ್ತೆಯಿಂದ ಸ್ವಲ್ಪ ದೂರದಲ್ಲಿ ಅಲ್ಲಿ ಮಣ್ಣಿನ ದಿಬ್ಬದ ಮೇಲೆ ಹಾವು ಮಲಗಿದಂತೆ ಕಂಡಿತು. ಸ್ವಲ್ಪ ಹತ್ತಿರ ಹೋಗಿ ನೋಡಿದೆ. ಆದರೆ ಅದು ಹಾವಾಗಿರದೇ ಉಡವಾಗಿತ್ತು.
ಸೀಳಿದಂತಿದ್ದ ಕೆಂಗುಲಾಬಿ ಬಣ್ಣದ ನಾಲಿಗೆಯನ್ನು ಹೊರಚಾಚುತ್ತಾ ಕಲ್ಲಿನ ಮೇಲೆ ಕುಳಿತು ಅತ್ತಿತ್ತ ಕಣ್ಣಾಡಿಸುತ್ತಿತ್ತು. ತಕ್ಷಣ ಪೊದೆಯ ಮರೆಯಲ್ಲಿ ಅವಿತು ಕುಳಿತು ಹೆಗಲಿಗೇರಿಸಿದ ಕ್ಯಾಮರಾದಿಂದ ಆ ಕ್ಷಣದ ಕೆಲ ಫೋಟೋ ಕ್ಲಿಕ್ಕಿಸಿದೆ. ದಪ್ಪದಾದ ಆನೆಯ ಚರ್ಮದಂತೆ ಕಾಣುತ್ತಿತ್ತು. ತಿನ್ನಲಿಕ್ಕೆ ಏನನ್ನೋ ಹುಡುಕುತ್ತಿತ್ತು. ಕಲ್ಲು ಬಂಡೆ ಏರಿ. ಆಗಾಗ ತನ್ನ ನಾಲಿಗೆಯನ್ನು ಹೊರಚಾಚುತ್ತಿತ್ತು. ನೋಡಲು ಮೈ ಜುಮ್ಮೆನ್ನುತ್ತಿತ್ತು. ನನ್ನ ಸಹಪಾಠಿ ಕ್ಯಾಮರಾ ತನ್ನ ಕೆಲಸ ತಾನು ಶ್ರದ್ಧೆಯಿಂದ ಮಾಡುತ್ತಿತ್ತು. ಒಮ್ಮೆಲೆ ಉಡವು ನನ್ನ ಇರುವಿಕೆಯನ್ನು ಗಮನಿಸಿದಂತೆ ಕಂಡಿತು. ಸರಕ್ಕನೆ ಅಲ್ಲಿಂದ ಕಾಲ್ಕಿತ್ತು ಹಿಂದುರುಗಿ ನೋಡುತ್ತಾ ಓಡಿಹೋಯಿತು.

ಉಡವನ್ನು ನಾನು ಚಿಕ್ಕವನಿದ್ದಾಗ ಮೂವತ್ತು ವರ್ಷಗಳ ಹಿಂದೆ ೬ನೇ ತರಗತಿಯಲ್ಲಿದ್ದಾಗ ನೋಡಿದ್ದೆ. ನಮ್ಮ ಊರಲ್ಲಿ ಒಬ್ಬ ದನಗಾಹಿ ಹಿಡಿದುಕೊಂಡು ಬಂದಿದ್ದ. ದನ ಮೇಯಿಸುವಾಗ ಸಿಕ್ಕಿದ್ದ ಉಡದ ಸೊಂಟಕ್ಕೆ ಹಗ್ಗ ಕಟ್ಟಿ ಊರೆಲ್ಲಾ ಸುತ್ತಾಡಿಸಿದ್ದು, ಅವನ ಹಿಂದೆ ನಾವೆಲ್ಲಾ ಕೇಕೇ ಹಾಕುತ್ತಾ ಸಾಗಿದ್ದ ನೆನಪು ಹಾಗೆ ಸುಳಿದು ಹೋಯಿತು. ಊರೆಲ್ಲಾ ಸುತ್ತಾಡುವಾಗ ಆಗಾಗ ಉಡವು ನೆಲವನ್ನು ಬಿಗಿಯಾಗಿ ಪಟ್ಟು ಹಿಡಿಯುತ್ತಿತ್ತು. ಅವನು ಅದನ್ನು ಎಳೆದೆಳೆದು ಹಾಕುತ್ತಿದ್ದ. ಪಟ್ಟು ಬಿಡದೇ ಇದ್ದಾಗ ಹಗ್ಗ ಹರಿದು ಹೋಗಿ ಉಡವು ತಪ್ಪಿಸಿಕೊಳ್ಳಲು ಪ್ರಯತ್ನಿಸಿತ್ತು. ಅದನ್ನು ಅಟ್ಟಾಡಿಸಿ ಮತ್ತೆ ಮತ್ತೆ ಹಿಡಿದುಕೊಂಡು ಬಂದ ನೆನಪು ಅಚ್ಚಳಿಯದೇ ಉಳಿದಿದೆ. ಹೀಗೆಯೇ ಸುತ್ತಾಡುತ್ತಾ ಆಹಾ ಇಂದು ನಮ್ಮ ಮನೆಯಲ್ಲಿ ಹಬ್ಬದೂಟ ಎಂದು ಅವರ ಮನೆಗೆ ಹಿಡಿದೋಯ್ದಿದ್ದು ಕಣ್ಣುಮುಂದೆ ಕಟ್ಟಿದಂತಿದೆ..
ಉಡಗಳನ್ನು ಜನರು ಅದರ ಚರ್ಮ ಹಾಗೂ ಮಾಂಸಕ್ಕಾಗಿ ಬೇಟೆಯಾಡುತ್ತಾರೆ. ಇದರ ಚರ್ಮವನ್ನು ತಮಟೆಗಳಂತಹ ಚರ್ಮವಾಧ್ಯಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಹೀಗಾಗಿ ಸಂತತಿ ನಾಶದ ಆತಂಕ ಎದುರಿಸುತ್ತಿರುವ ಜೀವಿಗಳಲ್ಲಿ ಉಡವು ಒಂದಾಗಿದೆ. ಅಂದು ನೋಡಿದ ಉಡವನ್ನು ಮೂವತ್ತು ವರ್ಷಗಳ ನಂತರ ನೋಡಿದ್ದು. ಆ ಉಡುವು ಅನುಭವಿಸುತ್ತಿರುವ ಹಿಂಸೆಯನ್ನು ನೋಡಿ ಆನಂದ ಪಡುತ್ತಿದ್ದ ಆಗಿನ ಪ್ರಸಂಗ ಈಗ ನೆನಪಾದ್ರೆ ನನಗೆ ಈಗಲೂ ಅಸಹ್ಯವೆನಿಸುತ್ತಿದೆ. ಇಗ ಕಾನೂನಿನ ಕಟ್ಟುನಿಟ್ಟಿದೆ. ಉಡಗಳನ್ನು ಕೊಲ್ಲುವುದಿರಲಿ, ಹಿಡಿಯುವಂತೆಯೂ ಇಲ್ಲ.

ಹಿಂದೆ ರಾಜ ಮಹಾರಾಜರು ಯುದ್ಧ ಸಮಯದಲ್ಲಿ ಶತ್ರುಗಳ ಮೇಲೆ ದಾಳಿಮಾಡಲು ಉಡ ವನ್ನು ಬಳಸುತ್ತಿದ್ದರಂತೆ. ಉಡದ ಪಟ್ಟೆಂದರೇ ಪಟ್ಟು. ಕುಸ್ತಿ ಅಖಾಡದಲ್ಲಿ ಎದುರಾಳಿಯ ಪಟ್ಟು ಉಡದ ಪಟ್ಟಿನಂತಿತ್ತು ಎಂದು ನೆರೆದಿದ್ದ ಜನ ಉಡದ ಉದಾಹರಣೆ ಕೊಡುವುದು ಸಾಮಾನ್ಯವಾಗಿರುತ್ತದೆ.

ಉಡವು ಒಮ್ಮೆ ಮರ ಅಥವಾ ಬಂಡೆಯನ್ನೋ ಗಟ್ಟಿಯಾಗಿ ಹಿಡಿಯಿತೆಂದರೆ ಅದನ್ನು ಸಡಿಲಿಸುವುದೇ ಕಷ್ಟ ! ಇದನ್ನರಿತೇ ಹಿಂದೆ ಅರಸರು ಉಡಗಳನ್ನು ಸಾಕುತ್ತಿದ್ದರು. ನಂತರ ಉಡದ ಸೊಂಟಕ್ಕೆ ಹಗ್ಗ ಕಟ್ಟಿ ಶತ್ರುಗಳ ಕೋಟೆಯ ಮೇಲೆ ಹತ್ತಿಸಿ, ಆ ಹಗ್ಗವನ್ನು ಹಿಡಿದು ತಾವೂ ಕೋಟೆಯನ್ನೇರುತ್ತಿದ್ದರು. ಕೋಟೆ ಏರಲು ಉಡಗಳೇ ಏಣಿ. ನಮ್ಮ ದೇಶದಲ್ಲಿ ಹಲವು ರಾಜವಂಶಗಳು ಈ ತಂತ್ರವನ್ನು ಬಳಸಿದ್ದರು ಎನ್ನುವುದಕ್ಕೆ ನಾವು ಇತಿಹಾಸದಲ್ಲಿ ಓದ್ದಿದ್ದ ನೆನಪಿದೆ.

ಇದೊಂದು ಸರಿಸೃಪ ಜಾತಿಗೆ ಸೇರಿದ ಸಸ್ತನಿ.. ಮರ ಹತ್ತಬಲ್ಲದು. ನೀರಿನಲ್ಲಿ ಈಜಬಲ್ಲದು. ತಮ್ಮ ಕಾಲಿನ ಮೇಲೆ ನಿಂತುಕೊಂಡು ಸುತ್ತಲ ಪರಿಸರ ಅವಲೋಕನ ಮಾಡುವ ಸಾಮರ್ಥ್ಯ ಇದಕ್ಕಿದೆ. ಭಾರತದ ಎಲ್ಲ ಕಾಡು ಮತ್ತು ಮರುಭೂಮಿಗಳಲ್ಲಿ ಉಡಗಳು ಕಂಡುಬರುತ್ತವೆ. ಅಲ್ಲದೇ ಹಳೆಯ ಕೋಟೆ ಕೊತ್ತಲಗಳು, ಹಾಳು ಮನೆಗಳಲ್ಲಿ ಇವುಗಳ ವಾಸ ಕಂಡುಬರುತ್ತದೆ.
ಹಿಂದಿನ ಕಾಲದಲ್ಲಿ ಮಣ್ಣಿನಿಂದ ಗೋಡೆಗಳನ್ನು ನಿರ್ಮಿಸುತ್ತಿದ್ದರು. ಹಳೆಯದಾದ ಮನೆಗೋಡೆಗಳಲ್ಲಿ ಗೆದ್ದಿಲು ಮನೆ ಮಾಡಿರುತ್ತಿದ್ದವು. ಉಡ ಅವುಗಳನ್ನು ಹೆಕ್ಕಲು ಬರುತ್ತಿತ್ತು ಉಡ ಹೊಕ್ಕ ಮನೆಯನ್ನು ಕೆಡವಬೇಕು ಎಂಬುದಾಗಿ ಹೇಳುತ್ತಿದ್ದರು. ಹೀಗೆ ಉಡವು ಮನೆಯನ್ನು ಹೊಕ್ಕರೆ ಅಪಶಕುನ ಎಂಬ ನಂಬಿಕೆ ನಮ್ಮ ಜನಪದರಲ್ಲಿದೆ. ಕಾರಣ ಹೆಕ್ಕಿದಾಗ ಉಡ ಹೊಕ್ಕಿದ ಮನೆ ಎಂದರೆ ಅದು ಹಳೆಯ ಮನೆ. ಹಳೆಯ ಮನೆಗೆ ಗೆದ್ದಿಲು ಹಿಡಿಯುವುದು ಸಾಮಾನ್ಯ. ಕುಸಿಯಲು ಪ್ರಾರಂಭಿಸುವ ಮನೆಯಾಗಿರುತ್ತದೆ. ಇಂತಹ ಮನೆಯಲ್ಲಿ ವಾಸಿಸಬಾರದು. ಕಾರಣ ಈ ನಂಬಿಕೆ ಹುಟ್ಟಿರಬಹುದು.

ಉಡ ಮಾಂಸಹಾರಿ.ಉದ್ದವಾದ ಸಿಳು ನಾಲಿಗೆಯನ್ನು ಹೊಂದಿದೆ. ತನಗೆ ಹಿಡಿಯಲು ಸಾಧ್ಯವಾಗಬಲ್ಲ ಎಲ್ಲ ಸಣ್ಣಪುಟ್ಟ ಪ್ರಾಣಿಗಳನ್ನು ಬೇಟೆಯಾಡುತ್ತದೆ. ಗೆದ್ದಿಲು, ಕಪ್ಪೆ, ಒತಿಕ್ಯಾತ, ಸಣ್ಣ ಹಾವು,ನೆಲವಾಸಿ ಪಕ್ಷಿಗಳು ಹಾಗೂ ಮೊಟ್ಟೆಗಳು, ಏಡಿ, ಚೇಳು, ಕೀಟಗಳು ಇದರ ಮುಖ್ಯ ಆಹಾರ.

ಇಂಗ್ಲೀಷನಲ್ಲಿ ಮೊನೊಟರ್ ಲಿಜರ್ಡ ಎಂದು ಕರೆಸಿಕೊಳ್ಳುವ ಇದು ವರಾನೆಡೇ ಕುಟುಂಬಕ್ಕೆ ಸೇರಿದೆ. ಪ್ರಮುಖವಾಗಿ ವರಾನಸ್ ಬೆಂಗಾಲೆನ್ನಿಸ್, ವರಾನಸ್ ಫ್ಲಾವೆಸ್ಕನ್ಸ್ ಮತ್ತು ವರಾನಸ್ ಸಾಲ್ವೇಟರ್ ಮೂರು ಪ್ರಭೇಧಗಳಿವೆ.

ಇವು ಸಾಮಾನ್ಯವಾಗಿ ಐದು ಅಡಿ ಉದ್ದ ಬೆಳೆಯಬಲ್ಲವು. ಅದರ ಬಾಲವೇ ಮೂರು ಅಡಿ ಉದ್ದ ಬೆಳೆಯುತ್ತದೆ. ಕಂದು ಬಣ್ಣದ ಉಡ ಅಲ್ಲಲ್ಲಿ ಕಪ್ಪು ಚುಕ್ಕೆಗಳನ್ನು ಹೊಂದಿರುತ್ತದೆ. ಏಪ್ರೀಲ್ ನಿಂದ ಅಕ್ಟೋಬರ್ ತಿಂಗಳು ಅದರ ಸಂತಾನೋತ್ಪತ್ತಿ ಕಾಲ. ಹೆಣ್ಣು ಉಡವು ಕಲ್ಲು ಬಂಡೆಗಳ ಜಾಗೆಗಳಲ್ಲಿ, ಹುತ್ತ ಇಲ್ಲವೇ ಗದ್ದೆಗಳಲ್ಲಿ ಗುಳಿ ತೋಡಿ ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳಿಂದ ಮರಿಗಳು ಹೊರಬರಲು ಎಂಟರಿಂದ ಒಂಬತ್ತು ತಿಂಗಳು ಬೇಕು.

ವರಾನಸ್ ಗ್ರೀಸಿಯಸ್ ಎಂಬ ದುಂಡು ಬಾಲದ ಉಡ ಭಾರತದ ಮರುಭೂಮಿಯಲ್ಲಿ ಕಂಡುಬರುತ್ತದೆ. ಇದು ಕಂದು ಮಿಶ್ರಿತ ಬೂದು ಬಣ್ಣದಾಗಿರುತ್ತದೆ.ವರಾನಸ್ ಫ್ಲಾವೆಸ್ಕನ್ ಫ್ರಬೇಧವು ಪಂಜಾಬ್, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಕಂಡು ಬರುತ್ತದೆ. ಹಳದಿ ಮಿಶ್ರಿತ ಕಂದು ಬಣ್ಣ ಹೊಂದಿದ್ದು ಬಹಳಷ್ಟು ವಿಷಕಾರಿಯಾಗಿರುತ್ತದೆ.

ಅಸ್ಸಾಂ ಮತ್ತು ಅಂಡಮಾನ್ ದ್ವೀಪಗಳಲ್ಲಿ ಹೆಚ್ಚಾಗಿ ಕಾಣಸಿಗುವ ವರಾನಸ್ ಸಾಲ್ವೇಟರ್ ಉಡಗಳಲ್ಲೇ ಅತ್ಯಂತ ದೊಡ್ಡದು. ಇದು ೨.೫ ಮೀ ಉದ್ದವಾಗಿದೆ. ಇದಕ್ಕೆ ನೀರಿನ ಉಡವೆನ್ನುವರು. ಜೊತೆಗೆ ಮರವನ್ನು ಏರಬಲ್ಲದು.
ಹೀಗೇಯೇ ಉಡದ ಬಗ್ಗೆ ಹೇಳುತ್ತಾ ಹೊರಟರೇ ಉಡದ ಪಟ್ಟುವಿಗಿಂತ ನನ್ನ ಬರಹದ ಕೊರೆತದ ಪಟ್ಟು ನಿಮಗೆ ಇಷ್ಟವಾಗದೇ ಇರಬಹುದು. ಅಷ್ಟರ ಮಟ್ಟಿಗೆ ಒಂದು ಪುಸ್ಕ ಬರೆಯುವಷ್ಟು ವಿವರಣೆ ಕೊಡಬಹುದು.

-ಚಿತ್ರ ಲೇಖನ: ನಾಮದೇವ ಕಾಗದಗಾರ

Show More

Related Articles

Leave a Reply

Your email address will not be published. Required fields are marked *

Back to top button
Close