ಕಾವ್ಯಕ್ಕೆ ಕಾರಣ ಬೇಕಿಲ್ಲ
********************
ದಿಲ್ಲಿಯ ಚಳಿಗೆ
ಮರಗಟ್ಟಿ ರಕ್ತ,
ಚಳುವಳಿಗಿದು ಸಕಾಲ
ಅಂತೆನಿಸಿದರೂ…
ಮಣ್ಣಿಗೆ…
ಹೊಸಿಲಾಚೆ ಕುಂತ ಮಗನ ಕಂಗಳಿಗೆ
ಸಂತಾಪದ ಕಾಲ
ಹೌದು,ಕಾವ್ಯಕ್ಕೀಗ ಕೆಲಸವಿಲ್ಲ
ಕೋಟಿ ಕೋಟಿಗಳ ಗೋರಿಯೊಳಗೆ
ಬಸವಣ್ಣ,ಅಲ್ಲಮರಂಥ ಶರಣರು !
ಪ್ರಭುತ್ವಕ್ಕಿದು ಸಂತಾನದ ಕಾಲ
ಇಂಥಾ ಹೊತ್ತಿನಲ್ಲಿ
ಕಾವ್ಯಕ್ಕೇನು ಕೆಲಸ ?
ಕೇಳುವಿರಿ ನೀವು
ಮುಂಜಾನೆಯ ಇಬ್ಬನಿಗೆ
ಸೂತಕದ ಬಡರೈತನ ಮನೆಯಂಗಳದಲ್ಲಿ
ಕಿಸಾನ್ ಪರೇಡಿನ ಮೌನದಲಿ
ಕಾವ್ಯ….
ಕಂಬನಿಯಾಗುತ್ತದೆ
ಒಮ್ಮೆ ರಕ್ತವಾಗುತ್ತದೆ
ಮಗದೊಮ್ಮೆ ಉಸಿರಾಗುತ್ತದೆ
……..
ಕಳೇಬರಗಳ ಮುಂದೆ
ಕುಂತವರ ಮೌನಕ್ಕೆ,
ಕಣ್ಣೀರಿಗೆ
ಕಾರಣಗಳನು ಕೇಳಬಾರದು
ಕಾವ್ಯಕ್ಕೂ …..ಕೂಡ.
ಬಿ.ಶ್ರೀನಿವಾಸ. ಸಾಹಿತಿಗಳು