ಕಲೆ ಸಾಹಿತ್ಯ

 ‘ದೇವರಿಗೂ ಬೀಗ’ ಬಿಗುಮಾನವಿಲ್ಲದೆ ಓದಿ ಬೇಗ…

ಕೃತಿ ಪರಿಚಯ

 ‘ದೇವರಿಗೂ ಬೀಗ’ ಬಿಗುಮಾನವಿಲ್ಲದೆ ಓದಿ ಬೇಗ.
ಖ್ಯಾತ ಚಿತ್ರಕಲಾವಿದ , ಛಾಯಾಗ್ರಾಹಕ ಮತ್ತು ಸಂಘಟಕ ನಾಮದೇವ ಕಾಗದಗಾರ ನಾಡಿನೆಲ್ಲಡೆ ಪರಿಚಿತರು. ರಾಷ್ಟ್ರ, ಅಂತರಾಷ್ಟ್ರೀಯಮಟ್ಟದಲ್ಲೂ
ಅನೇಕ ದಾಖಲೆಗಳನ್ನು ನಿರ್ಮಿಸಿ ಪ್ರಶಸ್ತಿಗಳನ್ನು ಪಡೆದುಕೊಂಡವರು.
ಸಧ್ಯ ಈಗ ‘ದೇವರಿಗೂ ಬೀಗ’ ಎಂಬ ಲೇಖನಗಳ ಕೃತಿ ಮೂಲಕ ಲೇಖಕರಾಗಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಈ ಮೂಲಕ ನಾಮದೇವ ಅವರು ಒಬ್ಬ ಶಸಕ್ತ ಬರಹಗಾರ ಎಂದು ತೋರ್ಪಡಿಸಿದ್ದಾರೆ. ತಮ್ಮ ಸುತ್ತಲ
ಬದುಕನ್ನು ಪ್ರೀತಿಸುವ, ಸೂಕ್ಷ್ಮ ದೃಷ್ಟಿಯಿಂದ ನೋಡುವ ನಾಮದೇವರಿಗೆ
ಸಾಮಾನ್ಯರಿಗೆ ಕಾಣದ್ದು ಇವರಿಗೆ ಕಾಣುತ್ತದೆ. ಅವರು ಕಂಡಿದ್ದು ಕ್ಯಾಮರಾದಲ್ಲಿ
ಸೆರೆಯಾಗಿ, ಕುಂಚದಲ್ಲಿ ನಯವಾಗಿ, ಹೂವಾಗಿ ಅಕ್ಷರ ರೂಪದಲ್ಲೂ ಅರಳುತ್ತದೆ. ನಾಮದೇವರು ಈ ಮೂರು ಪ್ರತಿಭೆಗಳ ಸಂಗವಾಗಿರುವ
ಅಪರೂಪದ ವ್ಯಕ್ತಿಗಳಾಗಿದ್ದಾರೆ.
ಇಲ್ಲಿಯ ಲೇಖನಗಳು ವರ್ತಮಾನ, ಚರಿತ್ರೆ, ಸೌಂದರ್ಯವನ್ನು ಸವಿಯುವ, ನೋವಿಗೆ ಮಿಡಿಯುವ ತಮ್ಮ ಸ್ವ ಅನುಭವಗಳನ್ನು
ಅಕ್ಷರಕ್ಕಿಳಿಸಿ ಪತ್ರಿಕೆಗಳಲ್ಲಿ ಬೆಳಕಾಗಿಸಿದ್ದಾರೆ. ಅವರು ಹದಭರಿತವಭಾಷೆಯನ್ನು ಬಳಸಿರೋದರಿಂದ ಮೆರಗು ಹೆಚ್ಚಿದೆ.
ನಾಮದೇವರ ಲೇಖನಗಳಲ್ಲಿ ಸಮಾಜದಲ್ಲಿ ನಿರ್ಲಕ್ಷಿತ ,ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತುವ , ಮೌಢ್ಯವನ್ನು ನಯವಾಗಿ
ತಿರಸ್ಕರಿಸುವ ಮತ್ತು ನಮ್ಮ ಪರಂಪರೆಯನ್ನು ಗೌರವಿಸುವಂತಹ ಅಂಶಗಳಿರುವುದರಿಂದ ನಮಗೆ ಹೆಮ್ಮೆ ಮೂಡಿಸುತ್ತದೆ. ಈ ಕೃತಿಯಲ್ಲಿ ಆರು ವಿಭಾಗಗಳಲ್ಲಿ ಒಟ್ಟು ಮೂವತ್ತೊಂಬತ್ತು ಲೇಖನಗಳಿವೆ. ಎಲ್ಲವೂ ವಿಭಿನ್ನ,
ವಿಶಿಷ್ಟತೆಯನ್ನು ಹೊಂದಿವೆ. ಅಲೆಮಾರಿ ಕಮ್ಮಾರರ ಬದುಕು ಬೆವರು ಶ್ರಮದ
ಮೇಲೆಯೇ ನಿಂತಿದೆ ಎಂಬುದನ್ನು ತೋರಿಸುತ್ತದೆ. ಕೌಶಲವೂ ಇದೆ ಆದರೆ
ಭದ್ರ ನೆಲೆಯಿಲ್ಲ. ಅವರ ದುಡಿಮೆಗೆ ಅಡಿಪಾಯವಿಲ್ಲದೆ ಅಲೆಮಾರಿಗಳಾಗಿ ಮತ್ತು
ಮಕ್ಕಳಿಗೆ ಶಿಕ್ಷಣವೂ ಇಲ್ಲದೆ ಅತಂತ್ರ ಜೀವನ ನಡೆಸುತ್ತಿರುವುದು
ಮನಕಲಕುವಂತಿದೆ. ಸಮಾಜದ ಬಗ್ಗೆ ಕಾಳಜಿಯಿರುವವರಿಗೆ, ಆಡಳಿತಗಾರರ
ಕಣ್ಣುತೆರೆಸುವಂತಹ ಲೇಖನವಿದು. ಕಂಬಳಿ ನೇಯುವವರ ಬದುಕು,
ಬಾತುಕೋಳಿ ಬೆನ್ನತ್ತಿ, ನಾರು ತಯಾರಿಸುವವರು, ಜಾನುವಾರು ಪಾದರಕ್ಷೆ
ತಯಾರಿಸುವವರ ಕುರಿತಾದ ಲೇಖನಗಳು ಬೆವರು ಸಂಸ್ಕೃತಿಯನ್ನು
ತಿಳಿಸುತ್ತವೆ. ಸಮಾಜದಲ್ಲಿ ಇವರ ಬಗ್ಗೆ ನಾವು ನಿರ್ಲಕ್ಷ್ಯ ತೋರಿಸದೇ ಅವರ
ಬಾಳೂ ಹಸನಾಗಬೇಕೆಂಬುದು ಲೇಖಕರ ಉದ್ದೇಶವಾಗಿದೆ.
‘ನೆಲ ನಕ್ಷತ್ರ’ ದಲ್ಲಿರುವ ಲೇಖನಗಳು ವೈಜ್ಞಾನಿಕವಾಗಿರುವುದರ
ಜೊತೆಗೆ ಪರಿಸರದಲ್ಲಿಯೂ ನಾವು ನಿರ್ಲಕ್ಷಿಸಿದ ಹಲವಾರು ವಸ್ತುಗಳಲ್ಲಿಯೂ
ಉಪಯೋಗಕಾರಿ ಅಂಶಗಳಿರುವುದನ್ನು ನಾಮದೇವ ಅವರು ತೋರಿಸಿದ್ದಾರೆ.
ಸೌಂದರ್ಯ ಅನ್ನೊದು ಯಾರೊಬ್ಬರ ಪೆಟೆಂಟ್ ಅಲ್ಲ, ನಾವು ನೋಡುವ
ದೃಷ್ಟಿಯಲ್ಲಿದೆ. ಹಾಗಾಗಿಯೇ ನಾಮದೇವ ಅವರು ಯಾರ ಪೋಷಣೆಯೂ
ಇಲ್ಲದೆ ಬೆಳೆದಿರುವ ಬೇಲಿಯ ಹೂಗಳ ಬಗ್ಗೆ, ನೀರಿನಲ್ಲಿ ಬೆಳೆಯುವ
ಅಂತರಗಂಗೆ ಮತ್ತು ಅದರ ಬೆಳವಣಿಗೆ, ಉಪಯೋಗ ಕುರಿತು
ಸವಿವರವಾದ ಮಾಹಿತಿ ನೀಡಿದ್ದಾರೆ. ಇಲ್ಲಿ ಗುಲ್ ಮೊಹರ್, ನೀರುಕಾಯಿ ಮರ ಕುರಿತಾದ
ಲೇಖನಗಳು ನಮ್ಮ ಜ್ಞಾನವನ್ನು ವರ್ಧಿಸಬಲ್ಲವು.
‘ವಿಶಿಷ್ಟ ವಿಭಿನ್ನ’ ವಿಭಾಗದಲ್ಲಿ ನಮ್ಮ ಹಬ್ಬಗಳ ಆಚರಣೆ, ಮಹತ್ವ, ಅವುಗಳ
ಹಿನ್ನೆಲೆಯನ್ನು ತಿಳಿಸಿದ್ದಾರೆ. ಜೊತೆಗೆ ಮೌಢ್ಯಾಚರಣೆಯನ್ನು ನಯವಾಗಿ
ತಿರಸ್ಕರಿಸಿದ್ದಾರೆ. ಕೃತಿಯ ಶಿರ್ಷಿಕೆಯನ್ನು ಹೊತ್ತ ‘ದೇವರಿಗೂ ಬೀಗ’ ಎಂಬ
ಲೇಖನವೂ ಇದೆ ವಿಭಾಗದಲ್ಲಿದೆ. ನಾವು ಮಾಡುವ ಆಚರಣೆಯ ಅರ್ಥವನ್ನರಿತು
ಮಾಡಬೇಕೆಂಬುದೂ ಲೇಖಕರ ಆಶಯವಾಗಿದೆ.
ನಾಗರಾಜ ಎಂ ಹುಡೇದ ಸಾಹಿತಿಗಳು, ಕಿರವತ್ತಿ, ತಾ. ಯಲ್ಲಾಪುರ, ಜಿಲ್ಲೆ, ಉತ್ತರ ಕನ್ನಡ
Show More

Related Articles

Leave a Reply

Your email address will not be published. Required fields are marked *

Back to top button
Close